ADVERTISEMENT

ಯಾದಗಿರಿ: ಹಬ್ಬದ ನಂತರವೂ ತರಕಾರಿ ದುಬಾರಿ

ಬೇರೆ ಜಿಲ್ಲೆಗಳಿಂದ ಆಮದು, ಇಳಿಕೆಯಾಗದ ಬೀನ್ಸ್‌ ಬೆಲೆ

ಬಿ.ಜಿ.ಪ್ರವೀಣಕುಮಾರ
Published 10 ಅಕ್ಟೋಬರ್ 2019, 20:00 IST
Last Updated 10 ಅಕ್ಟೋಬರ್ 2019, 20:00 IST
ಯಾದಗಿರಿಯ ಮಹಾತ್ಮ ಗಾಂಧಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಕ್ಕೆ ಇಟ್ಟಿರುವುದು
ಯಾದಗಿರಿಯ ಮಹಾತ್ಮ ಗಾಂಧಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಕ್ಕೆ ಇಟ್ಟಿರುವುದು   

ಯಾದಗಿರಿ: ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳಿಂದ ತರಕಾರಿ ಆಮದು ಮಾಡಿಕೊಳ್ಳುತ್ತಿದ್ದು, ದಸರಾ ಹಬ್ಬದ ನಂತರವೂ ದರ ಇಳಿಕೆಯಾಗದೆ ದುಬಾರಿಯಾಗಿದೆ.

ನಗರದ ಮಹಾತ್ಮ ಗಾಂಧಿ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಏರುಗತಿಯಲ್ಲಿದೆ. ಇಂದಿಗೂ ಬೀನ್ಸ್‌ ಆಗ್ರಸ್ಥಾನ ಕಾಯ್ದುಕೊಂಡಿದೆ. ಬೇಸಿಗೆಯಿಂದ ದರ ಇಳಿಕೆಯಾಗದ ಏಕೈಕ ತರಕಾರಿಯಾಗಿದೆ.

ಅಹ್ಮದ್‌ ನಗರ, ಹೈದರಾಬಾದ್, ಬೆಂಗಳೂರು, ಚಿಂತಾಮಣಿ, ಬೆಳಗಾವಿ, ರಾಯಚೂರು, ಕಲಬುರ್ಗಿ ಕಡೆಯಿಂದ ಜಿಲ್ಲೆಗೆ ತರಕಾರಿ ಆಗಮಿಸುತ್ತದೆ. ಬೇರೆ ಕಡೆಯಿಂದ ತರಿಸಿಕೊಳ್ಳುವುದರಿಂದ ಇಲ್ಲಿ ಯಾವಾಗಲೂ ತರಕಾರಿ ದುಬಾರಿಯಾಗಿಯೇಇರುತ್ತದೆ.

ADVERTISEMENT

ನೆರ ಹಾವಳಿ ಪರಿಣಾಮದಿಂದ ಮಹಾರಾಷ್ಟ್ರದಲ್ಲಿ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದೆ. ಇಲ್ಲಿಯೂ ಕೆಜಿಗೆ ₹50, 60 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಈರುಳ್ಳಿಯೂ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.

‘ಜಿಲ್ಲೆಯಲ್ಲಿ ಬದನೆಕಾಯಿ, ಹೀರೆಕಾಯಿ, ಚವಳೆಕಾಯಿ, ಪುಂಡೆ, ಮೆಂತೆ, ಈರುಳ್ಳಿ, ಸೌತೆಕಾಯಿ, ಪಾಲಕ್, ಕೊತಂಬರಿ ಸೊಪ್ಪು ಬೆಳೆಯುತ್ತಿದ್ದು, ಇನ್ನುಳಿದ ತರಕಾರಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

‘ದೂರದಿಂದ ಹೆಚ್ಚಿನ ಬೆಲೆ ಕೊಟ್ಟು ಲಾರಿಗಳ ಮೂಲಕ ತರಕಾರಿ ಜಿಲ್ಲೆಗೆ ತರಿಸುತ್ತೇವೆ. ಆದರೆ, ಇದರಲ್ಲಿ ನಮಗೆ ಉಳಿಯುವುದು ಅಲ್ಪ ಸ್ವಲ್ಪ ಮಾತ್ರ. ಆದರೆ, ಗ್ರಾಹಕರು ಬೆಲೆ ಜಾಸ್ತಿ ಆಯ್ತು ಎಂದು ಹೇಳುತ್ತಾರೆ. ಬೆಲೆ ಏರಿಕೆ ಅನಿವಾರ್ಯ’ ಎಂದು ವ್ಯಾಪಾರಿ ಮಹ್ಮದ್ ರಫಿ ಹೇಳಿದರು.

‘ಈರುಳ್ಳಿ ಕ್ವಿಂಟಲ್‌ಗೆ ₹3ರಿಂದ 4 ಸಾವಿರ ತನಕ ಇದೆ. ಜಿಲ್ಲೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುತ್ತಿದ್ದಾರೆ. ಆದರೆ, ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಬೆಲೆ ಯಥಾಸ್ಥಿತಿಯಲ್ಲಿದೆ’ ಎಂದು ನರಸಮ್ಮ ಹೇಳುತ್ತಾರೆ.

ದಸರಾ ಹಬ್ಬದಲ್ಲಿ ತರಕಾರಿ ಬೆಲೆಯಲ್ಲಿ ಹೆಚ್ಚು ಕಡಿಮೆ ಮಾಡಲಾಗಿತ್ತು. ಅಲ್ಲದೆ ಹಬ್ಬಕ್ಕೆ ಬೆಳಗಾವಿ, ಚಿಂತಾಮಣಿಯಿಂದ ಬೂದುಕುಂಬಳಕಾಯಿ ಬಂದಿದೆ. ಆದರೆ, ಅರ್ಧಕ್ಕರ್ಧ ಮಾರಾಟವಾಗದೆ ಉಳಿದಿದೆ. ಇದರಿಂದ ನಮಗೆ ನಷ್ಟವಾಗುತ್ತಿದೆ ಎಂದು ವ್ಯಾ‍ಪಾರಿ ಇಫ್ತಾಕರ್ ರೆಹಮನ್ ಹೇಳುತ್ತಾರೆ.

ಹಬ್ಬದ ನಂತರವಾದರೂ ತರಕಾರಿ ದರದಲ್ಲಿ ವ್ಯತ್ಯಾಸವಾಗುತ್ತದೆ ಎಂದು ಗ್ರಾಹಕರು ಕಾಯುತ್ತಿದ್ದರು. ಆದರೆ, ಹಬ್ಬದ ನಂತರವೂ ಬೆಲೆ ಸ್ಥಿರವಾಗಿದ್ದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಸೊಪ್ಪುಗಳಲ್ಲಿಯೂ ದರ ಕಡಿಮೆಯಾಗಿಲ್ಲ. ಕೊತ್ತಂಬರಿ ಸೊಪ್ಪು ಮಾತ್ರ ಒಂದು ಕಟ್‌ಗೆ ₹20 ಗೆ ಸಿಗುತ್ತಿದೆ. ಮಿಕ್ಕಿದ ಎಲ್ಲ ಸೊಪ್ಪುಗಳು ₹20, 30, 40 ಇದೆ.

***

ಹಬ್ಬದ ಸೀಜನ್ ಮುಗಿದಿದ್ದರಿಂದ ತರಕಾರಿ ಬೆಲೆ ಹೆಚ್ಚು ಕಡಿಮೆ ಇದೆ. ಇಲ್ಲಿ ಬೆಳೆಯದ ತರಕಾರಿಗೆ ಸಹಜವಾಗಿ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ.

ಇಫ್ತಾಕರ್ ರೆಹಮನ್, ವ್ಯಾ‍ಪಾರಿ

***

‌ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಖರೀದಿಸಲು ಹಿಂದು ಮುಂದೆ ನೋಡಬೇಕಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಮುಂದೆ ಬೆಲೆ ಕಡಿಮೆಯಾಗಬಹುದು.

ಕಾಶಮ್ಮ ಗುಂಜಲೋರ, ಗ್ರಾಹಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.