ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜೀವನದಿಯಾದ ಕೃಷ್ಣಾ ನದಿಯ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಜೀವಕಳೆ ಬೇಕಾಗಿದೆ.
ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಬೃಹತ್ ನೀರಾವರಿ ಯೋಜನೆ ಉದ್ದೇಶಕ್ಕಾಗಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಸವಸಾಗರವು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಲಾಶಯವಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ನೀರಾವರಿ ಕ್ಷೇತ್ರವನ್ನು ಹೊಂದಿರುವ ನಾರಾಯಣಪುರ ಬಸವಸಾಗರ ಜಲಾಶಯವು ಜಿಲ್ಲೆಯ ಇನ್ನೂ ಸಾಕಷ್ಟು ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಕಾಲುವೆ ಅಂಚಿನ ಭಾಗದ ರೈತರಿಗೆ ಇನ್ನೂ ನೀರು ತಲುಪಿಲ್ಲ ಎಂಬ ಮಾತುಗಳು ರೈತ ವಲಯದಲ್ಲಿ ಕೇಳಿ ಬರುತ್ತದೆ.
ನಾರಾಯಣಪುರ ಎಡದಂಡೆ ಕಾಲುವೆಯ ಮೂಲಕ 76 ಕಿಮೀ ಉದ್ದವಿರುವ ಕಾಲುವೆಯಲ್ಲಿ ನಿತ್ಯವೂ ಗರಿಷ್ಠ 10,000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಫಲಾನುಭವಿ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ವಿಜಯಪುರ, ಕಲಬುರಗಿ ಜಿಲ್ಲೆಯ ಅಂದಾಜು 6.22 ಲಕ್ಷ ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಪ್ರಮುಖವಾಗಿ ಎಡ ಹಾಗೂ ಬಲದಂಡೆ ಮುಖ್ಯ ಕಾಲುವೆಗಳು ಹಾಗೂ ಇತರೆ ಏತ ನೀರಾವರಿ ಯೋಜನೆಗಳ ಕಾಲುವೆ ಜಾಲಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುತ್ತದೆ. ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಮುಂಭಾಗದ ಕೃಷ್ಣಾ ನದಿ ತೀರದಲ್ಲಿನ ನಗರ, ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಗೆ ಪ್ರಮುಖ ಜಲಮೂಲವಾಗಿದೆ.
ವಿವಿಧ ಉದ್ದೇಶಗಳಿಗೆ ಕೃಷ್ಣಾ ನದಿ ನೀರು ಸದ್ಬಳಕೆಯಾಗಲಿ ಎಂದು ಆಗಿನ ಕೇಂದ್ರ ಸಚಿವರಾಗಿದ್ದ ಲಾಲ್ ಬಹೂದ್ದೂರ್ ಶಾಸ್ತ್ರಿ ಅವರು ಮತ್ತು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು 1964ರ ಮೇ 22ರಂದು ಜಲಾಶಯಕ್ಕೆ ಅಡಿಗಲ್ಲು ಹಾಕಿದರು.
1982ರ ಸೆಪ್ಟೆಂಬರ್ 22ರಂದು ಕರ್ನಾಟಕದ ಆಗಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಜಲಸಂಪನ್ಮೂಲ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಜಲಾಶಯವನ್ನು ಲೋಕಾರ್ಪಣೆ ಮಾಡಿದ್ದರು.
ಜಲಾಶಯವು ಒಟ್ಟು 10 ಕಿ.ಮೀ ಉದ್ದವಿದ್ದು, 30 ಮುಖ್ಯ ಕ್ರಸ್ಟ್‌ಗೇಟ್‌ಗಳನ್ನು ಹೊಂದಿದೆ. ಗರಿಷ್ಠ 492.25 ಮೀಟರ್ ಎತ್ತರದಲ್ಲಿ 33.313 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ.
‘ಕಾಲುವೆ ಕೊನೆ ಭಾಗದ ರೈತರ ಬೇಡಿಕೆ ಇಟ್ಟುಕೊಂಡು ಹಲವು ಬಾರಿ ಹೋರಾಟ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಾರಾಯಣಪುರದಲ್ಲಿ ಹೋರಾಟ ಮಾಡಲಾಗಿತ್ತು. ಆಗ ಅಧಿಕಾರಿಗಳು ನಿರ್ವಹಣೆ ಕಾಮಗಾರಿಗೆ ಅನುದಾನ ಬಂದಿದೆ ಟೆಂಡರ್ ಕರೆದಿದ್ದೇವೆ ಎಂದು ಹೇಳಿದ್ದರು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸುರಪುರ ತಾಲ್ಲೂಕು ಸಮಿತಿ ಅಧ್ಯಕ್ಷ ಹಣಮಂತ್ರಾಯ ಮಾಡಿವಾಳ ತಿಳಿಸಿದ್ದಾರೆ.
‘ಒಂದೆಡೆ ಟೆಂಡರ್ ಕರೆದು ಇನ್ನೊಂದೆಡೆ ನೀರು ಹರಿಸಿದ್ದೀರಿ ಹೇಗೆ? ಎಂದು ಪ್ರಶ್ನಿಸಿದಾಗ ಅತಿ ಅವಶ್ಯವಿರುವ ಸ್ಥಳಗಳಲ್ಲಿ ರೈತರ ಒಪ್ಪಿಗೆ ಪಡೆದು ನೀರು ಸ್ಥಗಿತಗೊಳಿಸಿ ನಿರ್ವಹಣೆ ಕಾಮಗಾರಿ ಮಾಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರಕ ವರದಿ: ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಶಾಂತಿನಾಥ ಪಿ ವನಕುದರಿ, ನಾಮದೇವ ವಾಟ್ಕರ್.
ಬಸವಸಾಗರವು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಲಾಶಯ ದಶಕಗಳ ಬೇಡಿಕೆಯಂತೆ ಉದ್ಯಾನವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ
ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಭಾಗದ ರೈತರ ಜೀವನಾಡಿಯಾಗಿದೆ. ಸಮಗ್ರ ನೀರಾವರಿಗೆ ಒತ್ತು ನೀಡಬೇಕು. ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪಿದರೆ ರೈತ ಬಾಳು ಹಸನಾಗುತ್ತದೆಎಂ.ಆರ್ ಖಾಜಿ ಕೃಷ್ಣಾ ಕಾಡಾ ನೀರು ಬಳಕೆದಾರರ ಸಂಘದ ಮುಖಂಡ
ನಾರಾಯಣಪುರ ಜಲಾಶಯದ ಮುಂಭಾಗದಲ್ಲಿ ಸುಂದರ ಉದ್ಯಾನವನ ನಿರ್ಮಿಸಿದರೆ ಸಾಕಷ್ಟು ಪ್ರವಾಸಿಗರು ಬರುತ್ತಾರೆವಿರೇಶ ಹಿರೇಮಠ ನಾರಾಯಣಪುರ ನಿವಾಸಿ
ಅಧಿಕಾರಿಗಳು ಜಲಾಶಯದಲ್ಲಿ ಸಾಕಷ್ಟು ನೀರು ಇದ್ದರೂ ಕಾಲುವೆಗೆ ಹರಿಸಲಿಲ್ಲ. ಈಗ ಏಕಾಏಕಿ ಕಾಲುವೆಯ ಜೊತೆಗೆ ನದಿಗೂ ಬಿಡುತ್ತಿರುವುದು ಪ್ರಶ್ನಾರ್ಹವಾಗಿದೆಹಣಮಂತರಾಯ ಮಡಿವಾಳ ರೈತ ಮುಖಂಡ
ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಅತಿದೊಡ್ಡ ಜಲಾಶಯ ಹೊಂದಿದರೂ ಸಮರ್ಪಕ ಬಳಕೆ ಆಗದಿರುವುದು ಚಿಂತನೀಯಉಸ್ತಾದ ವಜಾಹತ್ ಹುಸೇನ್ ಜೆಡಿಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.