ADVERTISEMENT

ಉಸಿರಾಟ ತೊಂದರೆಯಿಂದ ಮಹಿಳೆ ಸಾವು: ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 15:46 IST
Last Updated 21 ಮೇ 2020, 15:46 IST

ಯಾದಗಿರಿ: ತಾಲ್ಲೂಕಿನ ಅರಕೇರಾ (ಕೆ) ತಾಂಡಾದ 50 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಬುಧವಾರ ಸಾವನ್ನಪ್ಪಿದ್ದು,ಗಂಟಲು ದ್ರವದ ಮಾದರಿಯನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಬೋರಬಂಡ ತಾಂಡಾ, ಪಸಪುಲ್ ತಾಂಡಾ ಹಾಗೂ ಇನ್ನಿತರ ತಾಂಡಾಗಳ 24 ಜನರು ಮೇ 20ರಂದು ಮುಂಬೈನ ಚಂಬುರ್ ಭರತನಗರದಿಂದ ತಾಲ್ಲೂಕಿನ ಯರಗೋಳ ಚೆಕ್‌ಪೋಸ್ಟ್‌ಗೆ ವಾಹನದ ಮೂಲಕ ಬಂದಿದ್ದಾರೆ. ಇವರನ್ನು ಚೆಕ್‌ಪೋಸ್ಟ್‌ನಲ್ಲಿ ಸ್ಕ್ರೀನಿಂಗ್ ಮಾಡುವಾಗ ಅರಕೇರಾ (ಕೆ) ತಾಂಡಾದ ಮಹಿಳೆ ತೀವ್ರ ಉಸಿರಾಟದಿಂದ ಬಳಲುತ್ತಿರುವುದನ್ನು ಕಂಡ ಕರ್ತವ್ಯನಿರತ ಯಾದಗಿರಿ ಎಸಿಎಫ್ ಆಂಬುಲೆನ್ಸ್ ಬರುವುದನ್ನು ಕಾಯದೇ ತುರ್ತಾಗಿ ತಮ್ಮ ವಾಹನದ ಮೂಲಕ ಹೊಸ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

ಮಹಿಳೆಯ ಗಂಟಲಿನ ದ್ರವದ ಮಾದರಿಯನ್ನು (ಸ್ವಾಬ್ ಸ್ಯಾಂಪಲ್) ಕೋವಿಡ್-19 ಪರೀಕ್ಷೆಗಾಗಿ ರವಾನಿಸಲಾಗಿದೆ. ಉಳಿದವರನ್ನು ಜ್ವರ ತಪಾಸಣಾ ಕೇಂದ್ರದಲ್ಲಿ ಸ್ಕ್ರೀನಿಂಗ್ ಮಾಡಿ ಕೆಎಸ್‌ಆರ್‌ಟಿಸಿ ಬಸ್ ಮೂಲಕ ನಿಗದಿತ ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್‍ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.