ADVERTISEMENT

ಯಾದಗಿರಿ। ನಮ್ಮ ಜನ ನಮ್ಮ ಧ್ವನಿ–ನಿರಾಶ್ರಿತರಿಗೆ ಬೇಕಿದೆ ಆಸರೆ

ಬಸ್‌, ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುವ ಮಾನಸಿಕ ಅಸ್ವಸ್ಥರು, ಆಸರೆಯೂ ಇಲ್ಲ, ಆರೈಕೆಯೂ ಇಲ್ಲ

ಬಿ.ಜಿ.ಪ್ರವೀಣಕುಮಾರ
Published 12 ಫೆಬ್ರುವರಿ 2023, 19:30 IST
Last Updated 12 ಫೆಬ್ರುವರಿ 2023, 19:30 IST
ಯಾದಗಿರಿ ನಗರದ ರೈಲ್ವೆ ನಿಲ್ದಾಣದಲ್ಲಿ ವೃದ್ಧರೊಬ್ಬರು ಭೀಕ್ಷೆ ಬೇಡುತ್ತಿರುವುದು
ಯಾದಗಿರಿ ನಗರದ ರೈಲ್ವೆ ನಿಲ್ದಾಣದಲ್ಲಿ ವೃದ್ಧರೊಬ್ಬರು ಭೀಕ್ಷೆ ಬೇಡುತ್ತಿರುವುದು   

ಯಾದಗಿರಿ: ಜಿಲ್ಲೆಯಲ್ಲಿ ಆರು ತಾಲ್ಲೂಕು ಕೇಂದ್ರಗಳಿದ್ದು, ವಡಗೇರಾ ಹೊರತು ಪಡಿಸಿ ಉಳಿದೆಡೆ ದೊಡ್ಡ ಬಸ್ ನಿಲ್ದಾಣಗಳಿವೆ. ಆಯಾ ಬಸ್‌ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಾಶ್ರಿತರು ಭಿಕ್ಷೆ ಬೇಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ನಗರ ಪ್ರದೇಶದಲ್ಲಿ ಹಳೆ ಮತ್ತು ಹೊಸ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಿದ್ದು ಇಲ್ಲೇ ಮಾನಸಿಕ ಅಸ್ವಸ್ಥರು ಆಶ್ರಯ ಪಡೆದು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ.

ಕೆಲವರು ವೃದ್ಧರಾದರೆ, ಇನ್ನು ಕೆಲವರು ಯುವಕರು. ಕೆಲ ಮಹಿಳೆಯರೂ ಇದ್ದಾರೆ. ಎಲ್ಲರೂ ಬಹುತೇಕ ಆರೋಗ್ಯದಿಂದ ಇದ್ದಾರೆ. ಕೆಲವರು ಭಿಕ್ಷೆ ಬೇಡುತ್ತಾರೆ. ಇನ್ನೂ ಕೆಲವರು ಸೋಮಾರಿತನದಿಂದ ಒಂದೇ ಜಾಗದಲ್ಲಿ ಕುಳಿತಿರುತ್ತಾರೆ. ಮಾನಸಿಕ ಅಸ್ವಸ್ಥರು ಮತ್ತು ಇತರ ನಿರಾಶ್ರಿತರು ಸಾರ್ವಜನಿಕರಿಗೆ ಯಾವುದೇ ತೊಂದರೆ ಕೊಡುವುದಿಲ್ಲ.

ADVERTISEMENT

ಗಂಜ್‌ ವೃತ್ತ, ಸುಭಾಷ ವೃತ್ತದಲ್ಲಿ ವೃದ್ಧೆಯೊಬ್ಬರು ಭಿಕ್ಷೆ ಬೇಡಿ ಲೋಕೋಪಯೋಗಿ ಕಚೇರಿ ಬಳಿ ಆಶ್ರಯ ಪಡೆದಿದ್ದಾರೆ. ಸಣ್ಣಪುಟ್ಟ ಹೋಟೆಲ್‌, ಬೇಕರಿಗಳಿಂದ ನೀಡುವ ಆಹಾರ ಸೇವಿಸುತ್ತಾರೆ.

ಕಳೆದ ಎರಡು ವರ್ಷಗಳ ಹಿಂದೆ ಹಳೆ ಬಸ್‌ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥ ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ ಎಸೆಗಿದ್ದ. ಚಳಿ, ಗಾಳಿ, ಮಳೆ ಎನ್ನದೇ ರಸ್ತೆ ಅಕ್ಕಪಕ್ಕವೇ ಇವರ ವಾಸಸ್ಥಾನವಾಗಿದೆ. ನಮ್ಮವರು ಯಾರು ಇಲ್ಲ ಎಂದು ಕೆಲವರು ಹೇಳಿದರೆ, ಕೆಲವರಿಗೆ ತಾವು ಯಾಕೆ ಇಲ್ಲಿದ್ದೇವೆ ಎಂಬುದು ಗೊತ್ತಿಲ್ಲ.

ಹೊಸ ಬಸ್‌ ನಿಲ್ದಾಣ ಪಕ್ಕದಲ್ಲಿ ಬಾರ್‌ ಇದ್ದು, ಭಿಕ್ಷೆ ಬೇಡಿದ ಹಣವನ್ನು ಕೆಲವರು ಕುಡಿತಕ್ಕೆ ಉಪಯೋಗಿಸುತ್ತಾರೆ. ರಸ್ತೆ ಪಕ್ಕದಲ್ಲೇ ಒರಗಿಕೊಳುತ್ತಾರೆ. ಬಸ್‌ ನಿಲ್ದಾಣ ಮುಂದೆ ಕೆಲ ತಿಂಗಳ ಹಿಂದೆ ಭಿಕ್ಷೆಗಾರೊಬ್ಬರು ಮಲಗಿದ ಸ್ಥಿತಿಯಲ್ಲಿ ನಿಧನರಾಗಿದ್ದರು.

ಜಿಲ್ಲೆಯ ಐದು ಕಡೆ ನಿರಾಶ್ರಿತರ ಕೇಂದ್ರಗಳಿವೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಇಲ್ಲ. ಇದರಿಂದ ತಮಗ್ಯಾಕೆ ಉಸಾಬಾರಿ ಎಂದು ನಿರ್ಲಕ್ಷ್ಯ ಮಾಡುವುದೇ ಹೆಚ್ಚಾಗಿದೆ.

ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಇಲಾಖೆ, ಸಮಾಜ ಕಲ್ಯಾಣ, ಆರೋಗ್ಯ ಇಲಾಖೆ ನಿರಾಶ್ರಿತರನ್ನು ಗುರುತಿಸಿ ಆಶ್ರಯ ತಾಣಗಳಲ್ಲಿ ಸೇರಿಸಬೇಕು. ಆದರೆ, ಜಿಲ್ಲೆಯಾದ್ಯಂತ ಬಸ್‌, ರೈಲ್ವೆ ನಿಲ್ದಾಣ ಪಕ್ಕದಲ್ಲಿ ಆಶ್ರಯ ಪಡೆದವರನ್ನು ಈ ಇಲಾಖೆಗಳು ನಿರ್ಲಕ್ಷ್ಯಿಸಿವೆ.

‘ಭಿಕ್ಷೆ ಬೇಡುವವರನ್ನು ನಿರಾಶ್ರಿತ ಕೇಂದ್ರಕ್ಕೆ ತಂದರೆ ಒಂದೇರಡು ದಿನ ಇದ್ದು, ಅಲ್ಲಿಂದ ಮತ್ತೆ ಭಿಕ್ಷಾಟನೆ ಇಳಿಯುತ್ತಾರೆ. ನೀವು ಊಟ ಹಾಕುತ್ತಿದ್ದೀರಿ. ನಮಗೆ ಹಣ ಬೇಕು ಎಂದು ಹಲವರು ಜಗಳವಾಡಿದ್ದಾರೆ. ಹೀಗಾಗಿ ಭಿಕ್ಷಾಟನೆ ನಿರ್ಮೂಲನೆ ಆಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

*****

ನಿರಾಶ್ರಿತರ ತಾಣವಾದ ಬಸ್ ನಿಲ್ದಾಣ

ಹುಣಸಗಿ: ‘ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮೂರು ನಾಲ್ಕು ಜನ ವೃದ್ದ ನಿರಾಶ್ರಿತರು ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಾರೆ‌. ಆದರೆ, ಸರ್ಕಾರ, ಅಧಿಕಾರಿಗಳು ಅವರ ಸಮಸ್ಯೆ ಪರಿಹರಿಸಿ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ ಇದು ಕಳವಳಕಾರಿಯಾಗಿದೆ’ ಎಂದು ಮುಖಂಡ ಬಸವರಾಜ ಹಗರಟಗಿ ಹೇಳುತ್ತಾರೆ.

‘ಅಶಕ್ತರು, ವೃದ್ಧರೂ ನಮ್ಮವರೇ ಆಗಿದ್ದು, ಅವರನ್ನು ಕಾಪಾಡುವ, ಆರೋಗ್ಯ ಕಾಳಜಿ ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸುವುದು ಅಗತ್ಯವಿದೆ’ ಎಂದು ಬಲಶೆಟ್ಟಿಹಾಳ ಗ್ರಾಮದ ಜುಮ್ಮಣ್ಣ ಗುಡಿಮನಿ ಹೇಳಿದರು.

*********

ನಿರಾಶ್ರಿತರಿಗೆ ಬಸ್‌ ನಿಲ್ದಾಣವೇ ಆಶ್ರಯ ತಾಣ

ಸುರಪುರ: ನಗರದ ಬಸ್‌ನಿಲ್ದಾಣ ಮತ್ತು ಸುತ್ತಮುತ್ತಲಿನ ಆಯಕಟ್ಟಿನ ಸ್ಥಳಗಳಲ್ಲಿ 15ಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ.

ಪ್ರಕಾಶ ಎಂಬ ಅಂಗವಿಕಲ ನಗರ ಪ್ರದೇಶದವ. ಮನೆಯವರು ಹೊರದೂಡಿದ್ದಾರೆ. ಮನೆಗೆ ಹೋಗುವುದಿಲ್ಲ ಎಂದು ಹೇಳುತ್ತಾನೆ. ಬಿಹಾರ ಮೂಲದವನೆಂದು ಹೇಳುವ ಪ್ರಕಾಶ ಅಲ್ಲಲ್ಲಿ ತಿರುಗಾಡುತ್ತಾ ಜನರು ಕೊಡುವ ಆಹಾರ ಸೇವಿಸುತ್ತಾನೆ. ಆಂಧ್ರ ಮೂಲದ ಪಾಗಲಬಾಬಾ ಎಂಬ ವ್ಯಕ್ತಿಗೆ ಇಂಗ್ಲಿಷ್ ಸೇರಿ ಐದಾರು ಭಾಷೆ ಮಾತನಾಡಲು ಬರುತ್ತದೆ.

ಬಸ್ ನಿಲ್ದಾಣದವರು ನಿರಾಶ್ರಿತರಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ಯಾವ ಇಲಾಖೆಯೂ ಅವರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ.

ದಯಾನಂದ ಜಮಾದಾರ ಎಂಬ ಪೊಲೀಸ್ ಕಾನ್‌ಸ್ಟೇಬಲ್ ಹಲವು ವರ್ಷಗಳಿಂದ ನಿರಾಶ್ರಿತರಿಗೆ ಒಂದು ಹೊತ್ತು ಊಟ ನೀರು ಪೂರೈಸುತ್ತಾರೆ. ದಯಾನಂದ ಅವರ ಪ್ರೇರಣೆಯಿಂದ ಸಮೀರ್ ಶೇಖ ಜಂಡಾದಕೇರಿ, ಅನೀಲ ಬಿಳ್ಹಾರ, ಮಿಯಾಸಾಬ ಜಂಡಾದಕೇರಿ ಎಂಬ ಯುವಕರು ಕಳೆದ ಒಂದು ವರ್ಷದಿಂದ ಆಹಾರ ಪೂರೈಸುತ್ತಿದ್ದಾರೆ.

ಬಹುತೇಕ ನಿರಾಶ್ರಿತರು ಎಲ್ಲಿಂದ ಬಂದವರು ಎಂಬ ಬಗ್ಗೆ ಗೊತ್ತಿಲ್ಲ. ಮನೆಗೆ ಬಿಡುತ್ತೇವೆ ಎಂದು ಹೇಳಿದರೆ ಹೋಗುವುದಿಲ್ಲ ಎನ್ನುತ್ತಾರೆ. ಕೆಲವರು ಅಳುತ್ತಾ ಕೂಡುತ್ತಾರೆ.

******

ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್‌ ತಾಲ್ಲೂಕಿನಲ್ಲಿ ನಿರಾಶ್ರಿತ ಕೇಂದದ್ರಗಳಿವೆ. ಕೆಲವಕ್ಕೆ ಸರ್ಕಾರದಿಂದ ಅನುದಾನವಿದೆ. ಉಳಿದವಕ್ಕೆ ಇಲ್ಲ. ಆಯಾ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ

- ಸಾಧಿಕ್‌ ಹುಸೇನ್‌ ಖಾನ್‌, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ

******

ಕಳೆದ 6 ವರ್ಷಗಳಿಂದ ನಿರಾಶ್ರಿತರಿಗೆ ಊಟ, ನೀರು ಕೊಡುತ್ತಿದ್ದೇನೆ. ನನ್ನ ಪತ್ನಿಯ ಸಹಕಾರ ಇದೆ. ಈ ಕೆಲಸ ನನಗೆ ತೃಪ್ತಿ ನೀಡುತ್ತದೆ

- ದಯಾನಂದ ಜಮಾದಾರ, ಪೊಲೀಸ್ ಕಾನ್‌ಸ್ಟೇಬಲ್, ಸುರಪುರ

****

ಸರ್ಕಾರ ನಿರಾಶ್ರಿತರಿಗೆ ಆರೋಗ್ಯ, ಅನ್ನ ಇತರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಅವರ ಕುಟುಂಬದ ಹಿನ್ನೆಲೆ ತಿಳಿದು ಅವರನ್ನು ಅವರ ಮನೆಗೆ ಸೇರಿಸುವ ಕೆಲಸವಾಗಬೇಕು

-ಉಸ್ತಾದ ವಜಾಹತ್ ಹುಸೇನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜೆಡಿಎಸ್

****

ನಗರದಲ್ಲಿ ನಿರಾಶ್ರಿತರ ಕೇಂದ್ರವಿದೆ ಎನ್ನುವುದು ಜನತೆಗೆ ಗೊತ್ತಿಲ್ಲ. ನಗರಸಭೆಯು ಕಾಳಜಿವಹಿಸಿ ಕೇಂದ್ರದ ಮಾಹಿತಿ ಒದಗಿಸಬೇಕು. ಅದನ್ನು ಸಮರ್ಕವಾಗಿ ಅನುಷ್ಠಾನಗೊಳಿಸಬೇಕು

-ಯಲ್ಲಯ್ಯ ನಾಯಕ ವನದುರ್ಗ, ಸಾಮಾಜಿಕ ಕಾರ್ಯಕರ್ತ

***

ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ವಿವಿಧ ಇಲಾಖೆಗಳ ನಿರ್ಲಕ್ಷ್ಯದಿಂದ ಬಸ್‌, ರೈಲು ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದಾರೆ. ನಿರಾಶ್ರಿತರಿಗೆ ಅಧಿಕಾರಿಗಳು ಸೌಲಭ್ಯ ಕಲ್ಪಿಸಬೇಕು

- ಹಣಮಂತ ಬಂದಳ್ಳಿ, ಯುವ ಮುಖಂಡ

***

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.