ADVERTISEMENT

ಯಾದಗಿರಿ | ₹33.08 ಲಕ್ಷ ಕೊರತೆ ಬಜೆಟ್ ಮಂಡನೆ

2023-–24ನೇ ಸಾಲಿನಲ್ಲಿ ₹7.47 ಕೋಟಿ ಆದಾಯ ನಿರೀಕ್ಷೆ, ಕೊರತೆ ಸರಿದೂಗಿಸಲು ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:46 IST
Last Updated 28 ಮಾರ್ಚ್ 2023, 6:46 IST
ಯಾದಗಿರಿಯ ನಗರಸಭೆ ಕಚೇರಿ ಸಭಾಂಗಣದಲ್ಲಿ ಜರುಗಿದ 2023-24 ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಉಪಾಧ್ಯಕ್ಷೆ ಚಂದ್ರಕಲಾ ಮಡ್ಡಿ, ಪೌರಾಯುಕ್ತ ಸಂಗಮಮೇಶ ಉಪಾಸೆ ಇದ್ದರು
ಯಾದಗಿರಿಯ ನಗರಸಭೆ ಕಚೇರಿ ಸಭಾಂಗಣದಲ್ಲಿ ಜರುಗಿದ 2023-24 ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಉಪಾಧ್ಯಕ್ಷೆ ಚಂದ್ರಕಲಾ ಮಡ್ಡಿ, ಪೌರಾಯುಕ್ತ ಸಂಗಮಮೇಶ ಉಪಾಸೆ ಇದ್ದರು   

ಯಾದಗಿರಿ: ನಗರಸಭೆಯ 2023-24ನೇ ಸಾಲಿನ ₹ 33.08 ಲಕ್ಷ ಕೊರತೆ ಬಜೆಟ್ ಮಂಡಿಸಲಾಯಿತು.

ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಅಧ್ಯಕ್ಷತೆಯಲ್ಲಿ ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಅನುಮತಿ ಪಡೆದ ಪೌರಾಯುಕ್ತ ಸಂಗಮೇಶ ಉಪಾಸೆ ಅವರು ಬಜೆಟ್ ಓದಿದರು.

ಬಜೆಟ್‌ನಲ್ಲಿ ನಗರಸಭೆ ನಿಧಿ ಮತ್ತು ಸರ್ಕಾರದ ಅನುದಾನಗಳೆರಡು ಎಂದು ವಿಭಾಗಗೊಳಿಸಲಾಗಿದೆ. 2023-24ನೇ ಸಾಲಿನಲ್ಲಿ ನಗರಸಭೆ ನಿಧಿಯಲ್ಲಿ ಆಸ್ತಿ ತೆರಿಗೆಯಿಂದ ₹3.09 ಕೋಟಿ, ಮಳಿಗೆ ಬಾಡಿಗೆಯಿಂದ ₹ 18 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ ₹ 39.73 ಲಕ್ಷ, ಪರವಾನಗಿಯಿಂದ ₹5 ಲಕ್ಷ, ಅಭಿವೃದ್ಧಿ ಕರದಿಂದ ₹3.67 ಲಕ್ಷ, ನೀರಿನ ತೆರಿಗೆಯಿಂದ ₹15 ಲಕ್ಷ, ಖಾತಾ ನಕಲು ಶುಲ್ಕದಿಂದ ₹26.31 ಲಕ್ಷ, ಆಸ್ತಿ ತೆರಿಗೆ ದಂಡ ₹45.72 ಲಕ್ಷ, ವರ್ಗಾವಣೆ ಶುಲ್ಕದಿಂದ ₹19 ಲಕ್ಷ, ಜಾಹೀರಾತು ತೆರಿಗೆಯಿಂದ ₹3 ಲಕ್ಷ ಸೇರಿದಂತೆ ಇನ್ನಿತರ ಆದಾಯಗಳ ಸೇರಿ ಒಟ್ಟಾರೆಯಾಗಿ ₹7.47 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ADVERTISEMENT

ಆದಾಯದ 2ನೇ ಭಾಗವಾದ ಸರ್ಕಾರದ ಅನುದಾನದಲ್ಲಿ ಎಸ್‌ ಎಫ್‌ಸಿ ವೇತನ, ಎಸ್‌ಎಫ್‌ಸಿ ವಿದ್ಯುತ್, ಎಸ್‌ಎಫ್‌ಸಿ ಮುಖ್ಯ ನಿಧಿ, ಎಸ್‌ಎಫ್‌ಸಿ(ಎಸ್‌ಸಿಪಿ), ಎಸ್‌ಎಫ್‌ಸಿ (ಟಿಎಸ್‌ಪಿ), ಕುಡಿಯುವ ನೀರು ಪರಿಹಾರ ನಿಧಿ, 15ನೇ ಹಣಕಾಸು ಅನುದಾನ, ಅಮೃತ ನಿರ್ಮಲ ನಗರ ಅನುದಾನ ಇನ್ನಿತರ ಅನುದಾನವನ್ನು ಈಗಾಗಲೇ ಸರ್ಕಾರದ ಮುಂಗಡ ಪತ್ರದಲ್ಲಿ ಯಾದಗಿರಿ ನಗರಸಭೆಗೆ ಹಂಚಿಕೆಯಾದ ಮೊತ್ತಕ್ಕೆ ಅನುಸಾರವಾಗಿ ಸರ್ಕಾರದ ಅನುದಾನ ಒಟ್ಟು ₹28.26 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಯವ್ಯಯದಲ್ಲಿ ಯಾದಗಿರಿ ನಗರದ ಸಾರ್ವಜನಿಕರಿಂದ ಹಾಗೂ ನಗರಸಭೆ ಸದಸ್ಯರಿಂದ ಸಲಹೆಗಳನ್ನು ಗಮನಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಹಿಂದಿನ ಎಲ್ಲ ಅಭಿವೃದ್ದಿ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವು ದರ ಜತೆಗೆ ಈ ವರ್ಷ ಹಲವಾರು ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಸಾರ್ವಜನಿಕ ಶೌಚಾಲಯ ಸ್ವಚ್ಛತೆಗೆ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಂಗವಿಕಲರ ಸಮಸ್ಯೆ, ಪೌರಕಾರ್ಮಿಕರ ಶೈಕ್ಷಣಿಕ ಅನುಕೂಲಕ್ಕಾಗಿ ಹಾಗೂ ಮಾಧ್ಯಮದವರಿಗಾಗಿ ಧನಸಹಾಯ ಹಾಗೂ ಉದ್ಯಾನಗಳ ನಿರ್ವಹಣೆ ಮಾಡಲಾಗುವುದು ಎಂದರು.

ಅನುದಾನ ಹಂಚಿಕೆ: ವಿವಿಧ ಕಾರ್ಯಕ್ರ ಮಗಳ ನಿರ್ವಹಿಸುವುದ ಕ್ಕಾಗಿ(ಪೌರ ಪೌರಕಾರ್ಮಿಕರ ದಿನಾಚರಣೆ ಒಳಗೊಂಡಂತೆ) ₹20 ಲಕ್ಷ, ಲೇಖನ ಸಾಮಗ್ರಿ ಖರ್ಚು ₹16.76 ಲಕ್ಷ, ಪ್ರಯಾಣ ಭತ್ಯೆ ₹1 ಲಕ್ಷ, ಸದಸ್ಯರ ಗೌರವಧನ ₹11 ಲಕ್ಷ, ವೃತ್ತಿಪರ ಆಡಿಟ್ ಫೀ ₹20 ಲಕ್ಷ, ಕಚೇರಿ ವೆಚ್ಚ ₹9.08 ಲಕ್ಷ, ಜಾಹೀರಾತು ವೆಚ್ಚ ₹10.68 ಲಕ್ಷ, ಡಾಟಾ ಎಂಟ್ರಿ ಆಪರೇಟರ್ ವೇತನ ₹6.69 ಲಕ್ಷ, ಇತರ ಆಸ್ತಿಗಳ ದುರಸ್ತಿ ಮತ್ತು ನಿರ್ವಹಣೆ ವೆಚ್ಚ ₹35 ಲಕ್ಷ, ರಸ್ತೆ, ಚರಂಡಿ ದುರಸ್ತಿ ವೆಚ್ಚ ₹6.44 ಲಕ್ಷ, ಬೀದಿ ದೀಪಗಳ ನಿರ್ವಹಣೆಯ ವೆಚ್ಚ ₹1.20, ಶಕ್ತಿ ಮತ್ತು ಇಂಧನ ವೆಚ್ಚ ₹96 ಲಕ್ಷ, ವಾಹನ ದುರಸ್ತಿ ವೆಚ್ಚ ₹26.62 ಲಕ್ಷ, ಸಾರ್ವಜನಿಕ ಶೌಚಾಲಯಗಳ ದುರಸ್ತಿಗಾಗಿ ₹48.96 ಲಕ್ಷ, ಇನ್ನಿತರ ಖರ್ಚುಗಳು ಸೇರಿ ₹8.18 ಕೋಟಿ ಖರ್ಚನ್ನು ಅಂದಾಜಿಸಲಾಗಿದೆ ಎಂದರು.

ಒಟ್ಟಾರೆಯಾಗಿ 2023-24ನೇ ಸಾಲಿನ ಬಜೆಟ್‌ನಲ್ಲಿ ನಗರಸಭೆ ನಿಧಿ ₹747.63 ಲಕ್ಷ, ಸರ್ಕಾರದ ಅನುದಾನ ₹28.26 ಕೋಟಿ, ಒಟ್ಟು ₹35.73 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ಇದರಲ್ಲಿ ನಗರಸಭೆ ನಿಧಿಯ ₹8.18 ಕೋಟಿ ಖರ್ಚುಗಳನ್ನು ಮತ್ತು ಸರ್ಕಾರದ ಅನುದಾನದಲ್ಲಿ ₹ ₹27.88 ಕೋಟಿ ಖರ್ಚುಗಳನ್ನು ಒಟ್ಟಾರೆಯಾಗಿ ₹36.06 ಕೋಟಿ ಖರ್ಚುಗಳಿಗಾಗಿ ಅಂದಾಜು ಮಾಡಲಾಗಿದೆ.

2023-24 ನೇ ಸಾಲಿನ ಬಜೆಟ್ ₹ 33.08 ಲಕ್ಷ ಆದಾಯ ಕೊರತೆ ಬಜೆಟ್ ಆಗಿದೆ. ಆದ್ದರಿಂದ ಹಿಂದಿನ ವರ್ಷಗಳ ಆಸ್ತಿ ತೆರಿಗೆ ಮತ್ತು ಇನ್ನಿತರ ತೆರಿಗೆಗಳನ್ನು ವಸೂಲಿ ಮಾಡಿ ಈ ಕೊರತೆಯನ್ನು ಸರಿದೂಗಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷೆ ಚಂದ್ರಕಲಾ ಮಡ್ಡಿ, ಸದಸ್ಯರಾದ ಲಲಿತಾ ಅನಪುರ, ವಿಲಾಸ ಪಾಟೀಲ, ಚೆನ್ನಕೇಶವ ಬಾಣತಿಹಾಳ, ಹಣಮಂತ ಇಟಗಿ, ಹಣಮಂತ ನಾಯಕ, ಸ್ವಾಮಿದೇವ ದಾಸನಕೇರಿ, ಪ್ರಭಾವತಿ ಕಲಾಲ, ಮಹಾದೇವಮ್ಮ ಬೀರನೂರ, ವೆಂಕಟರೆಡ್ಡಿ ವನಿಕೇರಿ, ಮಂಜುನಾಥ ದಾಸನಕೇರಿ ಇದ್ದರು.

ಮೂರ್ತಿಗಳ ನಿರ್ಮಾಣಕ್ಕೆ ಆಕ್ಷೇಪ
ನಗರದ ಲುಂಬಿನಿ ವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮೂರ್ತಿಗಳ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಯಿತು. ನಗರಸಭೆ ಸದಸ್ಯೆ ಲಲಿತಾ ಅನ‍ಪುರ ಮಾತನಾಡಿ, ಲುಂಬಿನಿ ವನ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಇದಕ್ಕಾಗಿ ನಗರಸಭೆಯಿಂದ ಯಾಕೆ ₹10 ಲಕ್ಷ ಮೀಸಲೀಡಬೇಕು ಎಂದು ಆಕ್ಷೇಪ‍ಣೆ ಎತ್ತಿದರು. ಇದಕ್ಕೆ ಕೆಲ ಸದಸ್ಯರು ಧ್ವನಿಗೂಡಿಸಿದರು. ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಪೌರಾಯುಕ್ತ ಸಂಗಮೇಶ ಉಪಾಸೆ ಈ ಬಗ್ಗೆ ಪರಿಶೀಲಿಸಿ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ನೀಡಲು ಕೊರಲಾಗುವುದು ಎಂದು ಮಾಹಿತಿ ನೀಡಿದರು.

ಇದೇ ವೇಳೆ ಸದಸ್ಯರು ನಗರದಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಆಯಾ ನಗರವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಪಾಸ್‌ ಮಾಡಲಾಗಿದೆ. ಆದರೂ ಕೆಲವರು ರಾತ್ರೊ ರಾತ್ರಿ ಅನಧಿಕೃತ ನಾಮಫಲಕ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪೌರಾಯುಕ್ತರು ಶೀಘ್ರ ಅನಧಿಕೃತ ನಾಮಫಲಕ ತೆರವುಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

***

ನಗರಸಭೆ ವತಿಯಿಂದ ಬಜೆಟ್‌ನಲ್ಲಿ ಬೀದಿ ದೀಪಗಳ ನಿರ್ವಹಣೆಗಾಗಿ, ನೀರು ಸರಬರಾಜು ನಿರ್ವಹಣೆ ಇನ್ನಿತರ ಕಾರ್ಯಕ್ರಮಗಳಿಗೆ ಹಣ ನಿಗದಿ ಪಡಿಸಲಾಗಿದೆ.
ಸುರೇಶ ಅಂಬಿಗೇರ, ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.