ಶಹಾಪುರ: 22 ವರ್ಷದ ಹಿಂದೆ ಗುರುಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾರಣಾಂತರಿಂದ ಕೆಲಸ ಸ್ಥಗಿತಗೊಂಡಿತ್ತು. ಈಗ ಗುರುಭವನಕ್ಕೆ ಮರು ಜೀವ ನೀಡಿದ್ದು ₹1.20ಕೋಟಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಿರ್ಮಾಣ ಮಾಡಲಾಗುವುದು. ಇದಕ್ಕೆ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ನಗರದಲ್ಲಿ ನೂತನವಾಗಿ ನಿರ್ಮಿಸಿದ ಬಿಇಒ ಕಚೇರಿ ಕಟ್ಟಡ ಉದ್ಘಾಟನೆ, ₹1.20ಕೋಟಿ ವೆಚ್ಚದಲ್ಲಿ ಗುರುಭವನ ಕಟ್ಟಡ ಕಾಮಗಾರಿಗೆ ಅಡಿಗಲ್ಲು ಹಾಗೂ ತಾಲ್ಲೂಕು ಶಾಲಾ ಸುಧಾರಣಾ ಸಮಿತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗ ಇಲಾಖೆಯ ಅಡಿಯಲ್ಲಿ ₹65ಲಕ್ಷ, ₹15 ಸಂಸದರ ನಿಧಿ ಹಾಗೂ ₹50ಲಕ್ಷ ಶಿಕ್ಷಕ ನಿಧಿಯ ಹಣವನ್ನು ಸದ್ಭಳಕೆ ಮಾಡಿಕೊಂಡು ಸಕಲ ವ್ಯವಸ್ಥೆಯನ್ನು ಒಳಗೊಂಡ ಗುರುಭವನ ಕಟ್ಟಡ ಪೂರ್ಣಗೊಳ್ಳಲಿದೆ. ಅಲ್ಲದೆ 10 ವರ್ಷದ ಹಿಂದೆ ₹40ಲಕ್ಷ ವೆಚ್ಚದಲ್ಲಿ ಬಿಇಒ ಕಚೇರಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಅದು ಈಗ ಕಾರ್ಯಗತವಾಗಿದೆ ಎಂದರು.
ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ನನ್ನ ಜವಾಬ್ದಾರಿಯಾಗಿದೆ. ಪಾಲಕರು ಸಹ ತಮ್ಮ ಮಕ್ಕಳ ಬಗ್ಗೆ ಕಾಳಜಿವಹಿಸಿ ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಶಾಲಾ ಸುಧಾರಣಾ ಸಮಿತಿಯು ಹೆಚ್ಚಿನ ಜವಾಬ್ದಾರಿವಹಿಸಿಕೊಂಡು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆ ತರುವ ಯತ್ನ ನಿರಂತರವಾಗಿ ಸಾಗಬೇಕು ಎಂದರು.
ಶೈಕ್ಷಣಿಕ ಬಲವರ್ಧನೆಗಾಗಿ ಸರ್ಕಾರದ ಆದೇಶದಂತೆ, ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ರಚನೆಯಾಗಿದ್ದು, ಸಮಿತಿ ಸದಸ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಡಿಡಿಪಿಐ ಚೆನ್ನಬಸಪ್ಪ ಮುಧೊಳ, ತಾಲ್ಲೂಕು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಶಾಂತಗೌಡ ಪಾಟೀಲ, ಬಿಇಒ ವಾಯ್.ಎಸ್,ಹರಗಿ ಏಕದಂಡಗಿ ಮಠದ ಅಜೇಂದ್ರ ಸ್ವಾಮೀಜಿ, ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಯಪ್ಪ ಹುಡೇದ, ವಿಶ್ವನಾಥರೆಡ್ಡಿ ದರ್ಶನಾಪುರ, ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ, ಮಲ್ಲಣ್ಣಗೌಡ ಬಿರೆದಾರ, ಶಿವಲಿಂಗಣ್ಣ, ಚಂದಪ್ಪ.ಎಸ್, ಬಸವರಾಜ ಯಾಳಗಿ, ಲಕ್ಷ್ಮಣ ಲಾಳಸೇರಿ, ಭೀಮನಗೌಡ ತಳೇವಾಡ, ಗುರುಲಿಂಗಪ್ಪ ಸಗರ, ಭೀಮಪ್ಪ ಪೀರಾಪುರ, ಸಂಗಪ್ಪ ಭಾಗವಹಿಸಿದ್ದರು.
ಪಾಜಾ ಮುಟ್ಟಿ ಬರಬೇಡಿ: ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಕಬಡ್ಡಿ ಪಂದ್ಯಾವಳಿಯಲ್ಲಿ ಪಾಜಾ ಮುಟ್ಟಿ ಬರುವಂತೆ ಶಾಲೆಗೆ ತೆರಳಿ ಬರುವುದನ್ನು ನಿಲ್ಲಿಸಿ. ಮನಸಾರೆ ಮಕ್ಕಳಿಗೆ ಗುಣಮಟ್ಟದ ಪಾಠ ಮಾಡಿ ಅವರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
’ನೀವು ಎಲ್ಲಿಯೇ ಇರಿ. ಕಡ್ಡಾಯವಾಗಿ ಶಾಲೆಗೆ ತೆರಳಿ. ಆದರೆ, ಶಾಲೆಗೆ ತೆರಳಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಬರುವ ಕೆಟ್ಟ ಪದ್ಧತಿ ಕೈಬಿಡಿ’ ಎಂದು ಅವರು ಶಿಕ್ಷಕರನ್ನು ಉದ್ದೇಶಿಸಿ ಖಾರವಾಗಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.