ADVERTISEMENT

ಯಾದಗಿರಿ: ಮಕ್ಕಳ ಮನಸೆಳೆಯುವ ಅಂಗನವಾಡಿಗಳು

ಮಹಾತ್ವಕಾಂಕ್ಷಿ ಜಿಲ್ಲೆ ಯೋಜನೆ: 4 ಕೇಂದ್ರಗಳ ಆಯ್ಕೆ, 2 ಪೂರ್ಣ

ಬಿ.ಜಿ.ಪ್ರವೀಣಕುಮಾರ
Published 27 ಏಪ್ರಿಲ್ 2022, 20:30 IST
Last Updated 27 ಏಪ್ರಿಲ್ 2022, 20:30 IST
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ–3ರಲ್ಲಿ ಶುದ್ಧ ಕುಡಿವ ನೀರಿನ ಘಟಕ
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ–3ರಲ್ಲಿ ಶುದ್ಧ ಕುಡಿವ ನೀರಿನ ಘಟಕ   

ಯಾದಗಿರಿ: ಸರ್ಕಾರಿ ಅಂಗನವಾಡಿ ಕೇಂದ್ರಗಳೆಂದರೆ ಮೂಗುಮುರಿಯುವವರೆ ಹೆಚ್ಚು. ಆದರೆ, ಮಹಾತ್ವಕಾಂಕ್ಷಿ ಜಿಲ್ಲೆಯ ಯೋಜನೆಯಡಿ ಜಿಲ್ಲೆಯ ನಾಲ್ಕು ಕೇಂದ್ರಗಳನ್ನು ಅಂದವಾಗಿಸಲಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ, ಬಾಲ ಸ್ನೇಹಿ ಚಿತ್ರಗಳು, ಗೋಡೆ ಬರಹ, ಪೂರ್ವ ಪ್ರಾಥಮಿಕ ಸಾಮಗ್ರಿಗಳು ಸೇರಿದಂತೆ ಮಕ್ಕಳ ಮನಸ್ಸು ಆಕರ್ಷಿಸುವಂತೆ ಈ ಕೇಂದ್ರಗಳನ್ನು ರೂಪಿಸಲಾಗಿದೆ.

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಿಲ್ಲೆಯ ಯೋಜನೆಯಡಿ 2019 ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಜಿಲ್ಲೆಯ 4 ಶಿಶು ಅಭಿವೃದ್ಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸುವುದಕ್ಕಾಗಿ ನೀತಿ ಆಯೋಗದಿಂದ ಅನುದಾನ ಬಿಡುಗಡೆಗೊಳಿಸಲಾಗಿದೆ.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೀತಿ ಆಯೋಗದ ಸೂಚನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ತಲಾ ₹2 ಲಕ್ಷ ಸೇರಿ ಒಟ್ಟು ₹ 8 ಲಕ್ಷ ಮೊತ್ತದ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಅನುದಾನದಲ್ಲಿ 4 ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಬಾಲಸ್ನೇಹಿ ಪೇಂಟಿಂಗ್, ಪೂರ್ವ ಪ್ರಾಥಮಿಕ ಸಾಮಗ್ರಿ ಮತ್ತಿತರ ಸಾಮಗ್ರಿಗಳನ್ನು ಖರೀದಿಸಲಾಗಿದೆ.

ಈ ನಾಲ್ಕು ಅಂಗನವಾಡಿ ಕೇಂದ್ರಗಳು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ. ಈ ಕೇಂದ್ರಗಳ ಮಕ್ಕಳಲ್ಲಿ ಆರೋಗ್ಯ ಮತ್ತು ಪೌಷ್ಟಿಕತೆಯೊಂದಿಗೆ ಮನರಂಜನೆ, ಆತ್ಮಸ್ಥೈರ್ಯ, ಕ್ರಿಯಾಶೀಲತೆ, ದೃಢವಾದ ವ್ಯಕ್ತಿತ್ವ ಹೆಚ್ಚಿಸಲು ಹಾಗೂ ಮಕ್ಕಳನ್ನು ಬೌದ್ಧಿಕವಾಗಿ ಸಧೃಡವಾಗಿಸಲು ಅರ್ಹ ಫಲಾನುಭವಿಗಳ ಉತ್ತಮ ಆರೋಗ್ಯಕ್ಕಾಗಿ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಈ ಕೇಂದ್ರಗಳಲ್ಲಿ ಸೌಲಭ್ಯ ಒದಗಿಸಲಾಗಿದೆ.

ಉತ್ತಮ ರ್‍ಯಾಂಕಿಂಗ್‌ ಗಳಿಸಿದ 4 ಕೇಂದ್ರಗಳು:

ಜಿಲ್ಲೆಯ ಶಹಾಪುರ, ಸುರಪುರ, ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನ ನಾಲ್ಕು ಅಂಗನವಾಡಿ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಶಹಾಪುರ ತಾಲ್ಲೂಕಿನ ದೋರನಹಳ್ಳಿ ಮೂರನೇ ಅಂಗನವಾಡಿ ಕೇಂದ್ರ, ಸುರಪುರ ತಾಲ್ಲೂಕಿನ ರಾಜನಕೋಳೂರು 5ನೇ ಅಂಗನವಾಡಿ ಕೇಂದ್ರ, ಯಾದಗಿರಿ ತಾಲ್ಲೂಕಿನ ಮಾಧ್ವಾರ ಮೂರನೇಯ ಅಂಗನವಾಡಿ ಕೇಂದ್ರ, ಗುರುಮಠಕಲ್‌ ತಾಲ್ಲೂಕಿನ ಅನಪುರ ಅಂಗನವಾಡಿ ಕೇಂದ್ರಗಳಿಗೆ ತಲಾ ₹2 ಲಕ್ಷದಂತೆ ಒಟ್ಟು ₹8 ಲಕ್ಷ ಬಿಡುಗಡೆ ಮಾಡಲಾಗಿದೆ.

ಕೇಂದ್ರದಲ್ಲಿ ಏನೇನು ಇರಲಿವೆ?:

ಅಂಗನವಾಡಿ ಕೇಂದ್ರದ ಒಳಾಂಗಣ ಕ್ರೀಡೆಗೆ ಸಂಬಂಧಪಟ್ಟಂತೆ ಸಾಮಗ್ರಿಗಳು ಮತ್ತು ಕಲಿಕೆ ಸಾಮಗ್ರಿಗಳು ಇವೆ. ರ್‍ಯಾಕ್‌, ಮಕ್ಕಳ ಕುರ್ಚಿ, ಅಲ್ಮಾರ್‌, ಟೇಬಲ್, ಕುರ್ಚಿ, ಬೆಡ್‌ಶಿಟ್‌, ಶೂ ಮತ್ತು ಚಪ್ಪಲ್‌ ಸ್ಟ್ಯಾಂಡ್‌, ಜಮಖಾನ ಇರಲಿವೆ.

ಇದರ ಜೊತೆಗೆ ಸೂಪರ್ ಜಿರಾಫೆ ಸ್ಲೈಡ್, ವರ್ಣಮಾಲೆಯ ಬೋರ್ಡ್‌, ರಾಕರ್, ಕಟ್ಟಡ ನಿರ್ಮಾಣ ಸೆಟ್, ಹಣ್ಣಿನ ಸೆಟ್, ತರಕಾರಿ ಸೆಟ್‌, ಮರದ ಗಡಿಯಾರ, ರೋಲಿಂಗ್ ಮ್ಯಾಟ್, ಸಂಖ್ಯೆ ಮ್ಯಾಟ್, ಜೂಮ್ ಟ್ರೈಸಿಕಲ್, ಅಬ್ಯಾಕಸ್, ಬಹುವರ್ಣ ಮರದ ಶೈಕ್ಷಣಿಕ ಆಟಿಕೆ, ಆರಂಭಿಕ ಕೌಶಲ್ಯಗಳು, ಪೂರ್ವ ಪ್ರಾಥಮಿಕ ಶಾಲೆ ಆಟಿಕೆಗಳು, ಬಹುವರ್ಣ ಶೈಕ್ಷಣಿಕ ಆಟಿಕೆ, ಇಂಗ್ಲಿಷ್ ವರ್ಣಮಾಲೆಯ ಬರವಣಿಗೆ, 3 ರಿಂದ 5 ವರ್ಷ ವಯಸ್ಸಿನ ಮಕ್ಕಳಿಗಾಗಿ ಪುಸ್ತಕ, ಎಬಿಸಿಡಿ ಕ್ಯಾಪಿಟಲ್ ಮತ್ತು ಸ್ಮಾಲ್ ಲೆಟರ್, ನರ್ಸರಿಗಾಗಿ ಅಭ್ಯಾಸ ಮತ್ತು ಚಟುವಟಿಕೆಗಳು ಇತ್ಯಾದಿ ಸಾಮಗ್ರಿ ಇರಲಿವೆ.

***

₹8 ಲಕ್ಷ ಅನುದಾನ ಪಡೆದ ಕೇಂದ್ರಗಳು

ತಾಲ್ಲೂಕು; ಅಂಗನವಾಡಿ ಕೇಂದ್ರ

ಯಾದಗಿರಿ; ಮಧ್ವಾರ
ಗುರುಮಠಕಲ್‌; ಅನಪುರ
ಶಹಾಪುರ; ದೋರನಹಳ್ಳಿ
ಸುರಪುರ; ರಾಜನಕೋಳೂರು

(ಆಧಾರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ)

***

ಮಹಾತ್ವಕಾಂಕ್ಷಿ ಜಿಲ್ಲೆಯ ಯೋಜನೆಯಡಿ ಉತ್ತಮ ರ್‍ಯಾಂಕಿಂಗ್‌ ಗಳಿಸಿದ ಅಂಗನವಾಡಿ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದೆ 10 ಕೇಂದ್ರಗಳನ್ನು ಮಾದರಿಯಾಗಿ ನಿರ್ಮಿಸಲಾಗುವುದು
–ಡಾ.ರಾಗಪ್ರಿಯಾ ಆರ್‌, ಜಿಲ್ಲಾಧಿಕಾರಿ

***

ಜಿಲ್ಲೆಯ ನಾಲ್ಕು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಆಕರ್ಷಿಸುವ ಬಣ್ಣದ ಚಿತ್ರಗಳು, ಅಂಕಿ ಸಂಖ್ಯೆಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಒದಗಿಸಲಾಗಿದೆ
–ಪ್ರಭಾಕರ್ ಕವಿತಾಳ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.