ADVERTISEMENT

ಯಾದಗಿರಿ: ಜನವರಿ 8ಕ್ಕೆ ಶಾಲಾ–ಕಾಲೇಜುಗಳಿಗೆ ರಜೆ

ವಾರಾಂತ್ಯದ ಕರ್ಫ್ಯೂನಲ್ಲಿ ಕಟ್ಟುನಿಟ್ಟಿನ ಕ್ರಮ, ಅಗತ್ಯ ಸೇವೆ ಅಬಾಧಿತ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 3:34 IST
Last Updated 7 ಜನವರಿ 2022, 3:34 IST
ಯಾದಗಿರಿಯ ಗಾಂಧಿವೃತ್ತದಲ್ಲಿ ಮಾಸ್ಕ್ ಧರಿಸದ ವಾಹನ ಸವಾರರು ಮತ್ತು ತರಕಾರಿ ವ್ಯಾಪಾರಿಗಳಿಗೆ ಮಾಸ್ಕ್‌ ಧರಿಸುವಂತೆ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ ಜಾಗೃತಿ ಮೂಡಿಸಿದರು
ಯಾದಗಿರಿಯ ಗಾಂಧಿವೃತ್ತದಲ್ಲಿ ಮಾಸ್ಕ್ ಧರಿಸದ ವಾಹನ ಸವಾರರು ಮತ್ತು ತರಕಾರಿ ವ್ಯಾಪಾರಿಗಳಿಗೆ ಮಾಸ್ಕ್‌ ಧರಿಸುವಂತೆ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ ಜಾಗೃತಿ ಮೂಡಿಸಿದರು   

ಯಾದಗಿರಿ: ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಅದಕ್ಕೆ ಅನುಗುಣವಾಗಿ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸಲು ಸಿದ್ಧತೆ ನಡೆದಿದೆ.

ಶನಿವಾರ ಶಾಲಾ–ಕಾಲೇಜುಗಳಿಗೆ ಸಂಬಂಧಿಸಿ ಯಾವುದೇ ಮಾರ್ಗಸೂಚಿ ಇಲ್ಲದ ಕಾರಣ ಗೊಂದಲ ಉಂಟಾಗಿತ್ತು. ಗುರುವಾರ ಸಂಜೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ಶನಿವಾರ ರಜೆ ಘೋಷಣೆ ಮಾಡಲಾಗಿದೆ.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಅವರು, ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ಶನಿವಾರ ಶಾಲೆ ನಡೆಸಬೇಕಾ ಬೇಡವಾ ಎನ್ನುವ ಗೊಂದಲ ಇತ್ತು. ಆದರೆ, ಶಿಕ್ಷಣ ಇಲಾಖೆಯ ಆಯುಕ್ತರೇ ರಜೆ ಘೋಷಿಸಿದ್ದರಿಂದ ಸರ್ಕಾರಿ, ಅನುದಾನಿತ ಅನುದಾನ ರಹಿತ ಶಾಲೆಗಳನ್ನು ನಡೆಸುವುದಿಲ್ಲ ಎಂದರು.

ADVERTISEMENT

ಡಿಡಿಪಿಯು ಚಂದ್ರಕಾಂತ ಹಿಳ್ಳಿ ಅವರು ಶನಿವಾರ ಕಾಲೇಜುಗಳಿಗೆ ರಜೆ ಇರಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರ್ಕಾರ ಶನಿವಾರ–ಭಾನುವಾರ ವಾರಾಂತ್ಯದ ಕರ್ಫ್ಯೂ ಇರಲಿದೆ ಎಂದು ಆದೇಶ ಹೊರಡಿಸಿತ್ತು.

ಸೋಮವಾರರಿಂದ ಶುಕ್ರವಾರವರೆಗೆ ಸರ್ಕಾರಿ ಕಚೇರಿಗಳಿಗೆ ಐದು ದಿನ ಕೆಲಸ ಇದ್ದು, ವಾರಾಂತ್ಯದ ರಜೆ ಇರಲಿದೆ. ಆದರೆ, ಶನಿವಾರ ಶಾಲಾ–ಕಾಲೇಜು ನಡೆಸುವ ಬಗ್ಗೆ ಯಾವುದೇ ಮಾರ್ಗಸೂಚಿ ಹೊರಡಿಸಿರಲಿಲ್ಲ. ಇದರಿಂದ ಶಿಕ್ಷಕರು, ಪಾಲಕರು ಗೊಂದಲಕ್ಕೆ ಒಳಗಾಗಿದ್ದರು. ಈಗ ಗೊಂದಲ ನಿವಾರಣೆಯಾಗಿ ವಾರದ ಐದು ದಿನ ಮಾತ್ರ ಶಾಲೆಗಳು ಕಾರ್ಯನಿರ್ವಹಿಸಲಿವೆ.

******

ದಂಡ ಹಾಕಿ ಜಾಗೃತಿ ಮೂಡಿಸಿದ ನಗರಸಭೆ ಅಧ್ಯಕ್ಷ

ಯಾದಗಿರಿ: ರಾಜ್ಯದ ವಿವಿಧ ಕಡೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಜಿಲ್ಲೆಯಲ್ಲಿ ಕೋವಿಡ್‌ ಕುರಿತು ಜಾಗೃತಿ ವಹಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ ಮುಂದಾಗಿದ್ದಾರೆ.

ಗುರುವಾರ ಬೆಳಿಗ್ಗೆ ನಗರದ ಗಾಂಧಿವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರದಕ್ಷಿಣೆ ಹಾಕಿದ ನಗರಸಭೆ ಅಧ್ಯಕ್ಷರು ವಾಹನ ಸವಾರರು, ಅಂಗಡಿ ಮುಂಗಟ್ಟು ಸಿಬ್ಬಂದಿ ತರಕಾರಿ ಮಾರಾಟಗಾರರಿಗೆ ಮಾಸ್ಕ್‌ ಧರಿಸುವಂತೆ ಸೂಚನೆ ನೀಡಿದರು. ಅಲ್ಲದೇ ಮಾಸ್ಕ್‌ ಧರಿಸದೇ ಇದ್ದವರಿಗೆ ಅಧಿಕಾರಿಗಳ ಮೂಲಕ ಸ್ಥಳದಲ್ಲೇ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಿದರು.

ಇದೇ ವೇಳೆ ಮಾಸ್ಕ್‌ಧರಿಸಿದವರಿಗೆಹೂ ನೀಡಿ ಅವರಿಗೆ ಅಭಿನಂದಿಸಿದರು. ಮಾಸ್ಕ್ ಹಾಕದವರಿಗೆ ಅಂಗಡಿಗಳ ಪರವಾನಗಿ ರದ್ದು ಮಾಡುವುದಾಗಿ ಹೇಳಿದ ಅಧ್ಯಕ್ಷ ಪಾಟೀಲ, ಕೋವಿಡ್ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಎಲ್ಲರೂ ಮಾಸ್ಕ್‌ಹಾಕಬೇಕು. ಅಂಗಡಿಗಳಿಗೆ ಬಂದವರಿಗೂ ಮಾಸ್ಕ್‌ಧರಿಸುವಂತೆ ಸೂಚನೆ ನೀಡಬೇಕು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಂಗಡಿ ಮಾಲಿಕರಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದರು.

ಈ ವೇಳೆನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ನಗರಸಭೆ ಪ್ರಭಾರಿ ಪೌರಾಯುಕ್ತ ಬಕ್ಕಪ್ಪ ಹೊಸಮನಿ, ನಗರಸಭೆ ಸಿಬ್ಬಂದಿ ಇದ್ದರು.

****

ವಾರಾಂತ್ಯದ ಕರ್ಫ್ಯೂಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿಯೂ ಬಿಗಿ ಕ್ರಮಕೈಗೊಳ್ಳಲಾಗಿದೆ
ಶಂಕರಗೌಡ ಸೋಮನಾಳ, ಹೆಚ್ಚುವರಿ ಜಿಲ್ಲಾಧಿಕಾರಿ

***

ವಾರಾಂತ್ಯದ ಕರ್ಫ್ಯೂ ವೇಳೆ ಅಗತ್ಯ ವಸ್ತುಗಳ ಸೇವೆಗೆ ಸಮಸ್ಯೆ ಇಲ್ಲ. ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶವಿದೆ.
–ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.