ADVERTISEMENT

ಸುರಪುರ: ರಸ್ತೆ ಅಪಘಾತದಿಂದ ನಾಲ್ವರು ಯುವಕರು ಸಾವು, ರಾಜೂಗೌಡ ದಿಗ್ಭ್ರಮೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:55 IST
Last Updated 15 ಜನವರಿ 2022, 8:55 IST
ರಾಜೂಗೌಡ
ರಾಜೂಗೌಡ   

ಸುರಪುರ:ಬೆಂಗಳೂರಿಗೆ ದುಡಿಯಲು ಹೋಗಿದ್ದ ತಾಲ್ಲೂಕಿನ ನಾಲ್ವರು ಯುವಕರು ಜಗಳೂರು ಹತ್ತಿರ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವುದಕ್ಕೆ ಶಾಸಕ ರಾಜೂಗೌಡ ದಿಗ್ಭ್ರಮೆ ವ್ಯಕ್ತ ಪಡಿಸಿದರು.

‘ದಾವಣಗೆರೆ ಎಸ್ಪಿಯವರಿಗೆ ಮಾತನಾಡಿ ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಮೃತ ದೇಹಗಳನ್ನು ಆಂಬುಲೆನ್ಸ್‌ ಮೂಲಕ ಕಳುಹಿಸಿಕೊಡಲು ಸೂಚಿಸಿದ್ದೇನೆ. ಶುಕ್ರವಾರ ತಡ ರಾತ್ರಿ ವೇಳೆಗೆ ಕಳೆಬರಗಳು ತಾಲ್ಲೂಕಿಗೆ ತಲುಪಲಿವೆ’ ಎಂದು ತಿಳಿಸಿದರು. ‘ಮೂವರು ಯುವಕರು ನಮ್ಮ ತಾಲ್ಲೂಕಿನವರಾಗಿದ್ದು, ಒಂದು ಮೃತದೇಹದ ಗುರುತು ಸಿಕ್ಕಿಲ್ಲ. ವಿಜಯನಗರ ಜಿಲ್ಲೆ ಕೂಡಲಗಿ ಎನ್ನಲಾಗುತ್ತಿದ್ದು, ಈ ಬಗ್ಗೆ ಖಚಿತವಾಗಿಲ್ಲ. ಮೃತ ಯುವಕರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ’ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

‘ಗುಳೆ ಹೋಗುತ್ತಿರುವ ಯುವಕರು ರಸ್ತೆ ಅವಘಡಗಳಲ್ಲಿ ಸಾವನ್ನಪ್ಪುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ನನ್ನನ್ನು ವಿಚಲಿತನನ್ನಾಗಿ ಮಾಡಿದೆ. ಗುಳೆ ತಪ್ಪಿಸುವ ಉದ್ದೇಶದಿಂದಲೇ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಪ್ರತಿ ದಿನದ ಕೂಲಿ ₹289 ಇದೆ. ಕಾರ್ಮಿಕರು ಗುಳೆ ಹೋಗುವುದನ್ನು ಬಿಟ್ಟು ಗ್ರಾಮದಲ್ಲಿಯೇ ಕೆಲಸ ಮಾಡಿ ಕುಟುಂಬದೊಂದಿಗೆ ಸುಖ ಸಂಸಾರ ಸಾಗಿಸಬೇಕು’ ಎಂದು ಅವರು ಕೋರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.