ADVERTISEMENT

ಕೂಡಿಸುವುದು ಅಂಬೇಡ್ಕರ್‌ವಾದ, ಒಡೆಯುವುದು ಮನುವಾದ: ಜ್ಞಾನಪ್ರಕಾಶ ಸ್ವಾಮೀಜಿ

ಪ್ರತಿಭಾ ಪುರಸ್ಕಾರ; ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 9:16 IST
Last Updated 28 ಫೆಬ್ರುವರಿ 2026, 9:16 IST
ಯಾದಗಿರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಸ್ಮರಣ ಸಂಚಿಕೆಯನ್ನು ಜ್ಞಾನಪ್ರಕಾಶ ಸ್ವಾಮೀಜಿ, ಕೆ. ಚಿರಂಜೀವಿ, ಡಿ. ಶಿವಶಂಕರ್ ಸೇರಿ ಇತರರು ಬಿಡುಗಡೆ ಮಾಡಿದರು 
ಯಾದಗಿರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಸ್ಮರಣ ಸಂಚಿಕೆಯನ್ನು ಜ್ಞಾನಪ್ರಕಾಶ ಸ್ವಾಮೀಜಿ, ಕೆ. ಚಿರಂಜೀವಿ, ಡಿ. ಶಿವಶಂಕರ್ ಸೇರಿ ಇತರರು ಬಿಡುಗಡೆ ಮಾಡಿದರು    

ಯಾದಗಿರಿ: ‘ಸಮುದಾಯವನ್ನು ಕೂಡಿಸುವುದು ಅಂಬೇಡ್ಕರ್ ವಾದ, ಸಮುದಾಯವನ್ನು ಒಡೆಯುವುದು ಮನುವಾದ. ಅಂಬೇಡ್ಕರ್ ವಾದಿಗಳಾಗಿ ಸಮುದಾಯವನ್ನು ಕಟ್ಟುವಂತಹ ಕೆಲಸ ಮಾಡಬೇಕಿದೆ’ ಎಂದು ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಇಲ್ಲಿನ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಶಾಖೆ ಆಯೋಜಿಸಿದ್ದ ಸ್ಮರ್ಣ ಸಂಚಿಕೆ, ಕ್ಯಾಲೆಂಡರ್ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ವಾದದಲ್ಲಿ ಮಾನವೀಯ ಮೌಲ್ಯಗಳಿದ್ದು, ಮನುಷ್ಯ ಮನುಷ್ಯರನ್ನು ಗೌರವಿಸಬೇಕು ಎಂಬ ಆಸೆಯೂ ಇದೆ. ಇಂತಹ ವಾದವನ್ನು ಸಮುದಾಯದವರು ಚಾಚೂ ತಪ್ಪದೆ ಪಾಲಿಸಬೇಕಿದೆ’ ಎಂದರು.

ADVERTISEMENT

‘ಸಮುದಾಯದ ನೌಕರರ ಮೇಲೆ ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಅತೀವ ವಿಶ್ವಾಸವಿತ್ತು. ನನ್ನ ಸಮುದಾಯದಲ್ಲಿ ಜನಿಸಿ ನೌಕರಿ ಹಿಡಿದವರು ಸಮುದಾಯದ ರಕ್ಷಣೆ ಮಾಡುತ್ತಾರೆ ಎಂಬ ಭರವಸೆಯೂ ಇರಿಸಿಕೊಂಡಿದ್ದರು. ನೌಕರರಾದವರು ಅಂತಹ ವಿಶ್ವಾಸವನ್ನು ಉಳಿಸಿಕೊಳ್ಳದೆ ಇದ್ದರೆ ಅಂಬೇಡ್ಕರ್ ಅವರಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಹೀಗಾಗಿ, ಸಮುದಾಯದ ನೌಕರರು ತಮ್ಮ ಸುತ್ತಲಿನವರಿಗೆ ನೆರವಾಗಬೇಕು’ ಎಂದರು.

ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಕೆ. ಚಿರಂಜೀವಿ ಮಾತನಾಡಿ, ‘ಆಳುವಂತಹ ಸರ್ಕಾರಗಳು ಬಣ್ಣ– ಬಣ್ಣದ ಐಡಿಯಾಲಾಜಿಗಳನ್ನು ತರುತ್ತವೆ. ಅವುಗಳ ನಡುವೆ ಸಿಲುಕ ಬಾರದು. ನಮ್ಮ ಸುತ್ತಲು ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು.   

‘ಅಂಬೇಡ್ಕರ್ ಅವರು ನೀಡಿದ ಅವಕಾಶಗಳನ್ನು ವಿದ್ಯಾರ್ಥಿ ದೆಸೆಯಿಂದ ಅನುಭವಿಸುತ್ತಾ ಇಲ್ಲಿಯವರೆಗೆ ಬಂದಿದ್ದೇವೆ. ನಾವು, ನಮ್ಮವರೂ ಅನುಭವಿಸಿದ್ದ ಶತಮಾನಗಗಳ ಶೋಷಣೆಯೂ ನಮಗೆ ಗೊತ್ತಿದೆ. ಹೀಗಾಗಿ, ಪ್ರತಿಯೊಬ್ಬರು ನಮ್ಮ ಸುತ್ತಲಿನ ಕನಿಷ್ಠ 10 ಮಂದಿಗೆ ಓದಲು ಉತ್ತೇಜನ ನೀಡಿ, ಮಾರ್ಗದರ್ಶನ ಮಾಡಿ, ಬೇರೆ– ಬೇರೆ ರೀತಿಯಲ್ಲಿ ನೆರವಾಗುವ ಸಂಕಲ್ಪ ಮಾಡಬೇಕು’ ಎಂದರು.

ಸಮಿತಿಯ ರಾಜ್ಯ ಅಧ್ಯಕ್ಷ ಡಿ.ಶಿವಶಂಕರ್ ಮಾತನಾಡಿ, ‘ತುಮಕೂರಿನಲ್ಲಿ ಮದುವೆಯಾಗಿ ದೇವಸ್ಥಾನಕ್ಕೆ ಹೋದ ದಂಪತಿಯನ್ನು ಓಡಿಸಿಕೊಂಡು ಹೋಗಿ ಹೊಡೆಯುವಂತಹ ದೇಶದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದುಡಿಯುವವರನ್ನು ಮನುಷ್ಯರನ್ನಾಗಿ ಕಾಣುತ್ತಿಲ್ಲ. ಜೀವ ಸಂಸ್ಕೃತಿ ಬರಬೇಕಾದ ಕಡೆಗಳಲ್ಲಿ ಶವ ಸಂಸ್ಕೃತಿಯನ್ನು ಹಬ್ಬಿಸಲಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.‌ 

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ, ಜಿಲ್ಲಾ ಅಧ್ಯಕ್ಷ ಆರ್.ಎಂ. ನಾಟೇಕಾರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ವಡೇಯರ್, ಮಹಿಳಾ ಘಟಕದ ಪ್ರಧಾನ ಸಂಚಾಲಕಿ ಸರಸ್ವತಿ, ಪ್ರಮುಖರಾದ ಮಂಜುನಾಥ ಸಂಗಾವಿ, ಕೈಲಾಸ ಸಹಾಯಕ, ಸಂತೋಷ ನಂದಿನಿ, ಶರಣಬಸಪ್ಪ ಪರಮೇಶ್ವರ ಸೇರಿ ಹಲವರು ಉಪಸ್ಥಿತರಿದ್ದರು.

‘ಗಾಂಧಿ ಎದುರು ಹಾಕಿಕೊಂಡು ಸಂವಿಧಾನ ಕೊಟ್ಟರು’ 

‘ಅಂಬೇಡ್ಕರ್ ಅವರು ಸಾಕಷ್ಟು ಓದಿ ಹಲವು ದೇಶಗಳನ್ನು ಸುತ್ತಾಡಿ ದೇಶಕ್ಕೆ ಸಮಾನತೆ ಕೊಡುವ ಸಂವಿಧಾನ ಬರಬೇಕೆಂದು ಹಠ ಮಾಡಿ ಮಹಾತ್ಮ ಗಾಂಧಿ ಅವರಂತಹರನ್ನು ಎದುರು ಹಾಕಿಕೊಂಡು ಸಂವಿಧಾನವನ್ನು ತಂದುಕೊಟ್ಟಿದ್ದಾರೆ’ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಕೆ. ಚಿರಂಜೀವಿ ಹೇಳಿದರು. ‘ಸಂವಿಧಾನ ನಮಗೆ ಎಷ್ಟು ಮುಖ್ಯ ಎಂಬುದನ್ನು ನಾವು ಊಹಿಸಿಕೊಳ್ಳಲು ಆಗುವುದಿಲ್ಲ. ಸಂವಿಧಾನ ಇಲ್ಲದಿದ್ದರೆ ನಾವ್ಯಾರೂ ಇಲ್ಲ. ಅಂಬೇಡ್ಕರ್ ಅವರು ಆ ಕಾಲದಲ್ಲಿನ ದೌರ್ಜನ್ಯವನ್ನು ಎದುರಿಸಿ ನಮಗೆ ಇಷ್ಟು ದೊಡ್ಡ ಸಮಾನತೆಯ ಸಂವಿಧಾನ ಕೊಟ್ಟಿದ್ದಾರೆ. ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆದು ಅವರ ನಡೆ– ನುಡಿ ಕರಗತ ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.