ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ‘ಗೌರವಧನ’ ಸಿಗದೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ, ಈಗ ಏಪ್ರಿಲ್, ಮೇ ಮತ್ತು ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇರುವ ಅಲ್ಪ ಗೌರವಧನಕ್ಕೂ ಸರ್ಕಾರ ಕೊಕ್ಕೆ ಹಾಕಿದೆ.
ಜಿಲ್ಲೆಯಲ್ಲಿ 1,024 ಆಶಾ ಕಾರ್ಯಕರ್ತೆಯರ ಹುದ್ದೆಗಳು ಮಂಜೂರಾಗಿದ್ದು, 1,009 ಕಾರ್ಯನಿರ್ವಹಿಸುತ್ತಿದ್ದಾರೆ. ಬೆಲೆ ಏರಿಕೆ ದಿನಗಳಲ್ಲಿ ದುಡಿದ ಹಣ ಸಮಯಕ್ಕೆ ಸರಿಯಾಗಿ ಕಾರ್ಯಕರ್ತೆಯರ ಕೈಗೆ ಸಿಗದೆ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎನ್ನುವುದು ಕಾರ್ಯಕರ್ತೆಯರ ಮಾತಾಗಿದೆ.
ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ₹5,000, ನಿಗದಿತ ಚಟುವಟಿಕೆಗಳ ನಿಶ್ಚಿತ ಗೌರವಧನ ₹2,000 ಮತ್ತು ಆಶಾ ನಿಧಿಯ ಮೂಲಕ ಪಡೆಯುವ ವಿವಿಧ ಚಟುವಟಿಕೆಗಳ ಪ್ರೋತ್ಸಾಹಧನ ಸರಾಸರಿ ₹5,000 ಗಳನ್ನು ಒಟ್ಟು ಗೂಡಿಸಿ ಮಾಸಿಕ ₹12,000 ಒಂದೇ ಗೌರವಧನ ನಿಗದಿ ಮಾಡಿ ಪ್ರತಿ ತಿಂಗಳು ಪಾವತಿಸಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಾಗಿದೆ. ಆದರೆ, ಇದು ಇಲ್ಲಿಯವರೆಗೆ ಈಡೇರಿಲ್ಲ.
‘ಕಳೆದ 3 ತಿಂಗಳಿನಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಬಂದಿಲ್ಲ. ಕೆಲ ತಿಂಗಳ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಒಕ್ಕೂಟದ ವತಿಯಿಂದ ಸಾವಿರಾರು ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸಿದ್ದರು. ಬಳಿಕ ಸರ್ಕಾರ ಎಚ್ಚೆತ್ತು ಆಶಾ ಕಾರ್ಯಕರ್ತೆಯರಿಗೆ ₹10,000 ಸಾವಿರ ಗೌರವ ಧನ ಹೆಚ್ಚಿಸುವುದಾಗಿ ಸಚಿವರು ಮುಷ್ಕರ ನಿರತ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದ್ದರು. ಆದರೆ, ಇದು ಈಡೇರಿಲ್ಲ.
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಬಾರದಿರುವುದು ಕುಟುಂಬ ನಿರ್ವಹಣೆಗೆ ಕಷ್ಟಕರವಾಗಿದೆ. ಕೂಡಲೇ ಸರ್ಕಾರ ಜಿಲ್ಲಾಡಳಿತ ಬಜೆಟ್ ಬಿಡುಗಡೆಗೆ ಕ್ರಮ ವಹಿಸಬೇಕುಡಿ.ಉಮಾದೇವಿ ರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷೆ
ಈಗಾಗಲೇ ಬಜೆಟ್ ಬಂದಿದ್ದು ಆಶಾ ಕಾರ್ಯಕರ್ತೆಯರಿಗೆ ಮುಂದಿನ ವಾರ ಗೌರವಧನ ಬಿಡುಗಡೆ ಮಾಡಲಾಗುವುದುಡಾ.ಮಲ್ಲಪ್ಪ ಕಣಜಿಕರ್ ಜಿಲ್ಲಾ ಆರ್‌ಸಿಎಚ್ ಅಧಿಕಾರಿ
ಆಶಾ ಕಾರ್ಯಕರ್ತೆಯರ ವಿವರ ತಾಲ್ಲೂಕು: ಮಂಜೂರು ಹುದ್ದೆ; ಭರ್ತಿ ಹುದ್ದೆ
ಶಹಾಪುರ;302;301
ಸುರಪುರ;385;379
ಯಾದಗಿರಿ;337;329
ಒಟ್ಟು;1024;1009
ಆಧಾರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಆರ್‌ಸಿಎಚ್ ಪೋರ್ಟಲ್ ಸಮಸ್ಯೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸಿದ್ದು ಆರ್‌ಸಿಎಚ್ ಪೋರ್ಟ್‌ಲ್ ಸಮಸ್ಯೆ ಎದುರಾಗಿದೆ. ಸರಿಯಾಗಿ ಗೌರವ ಧನ ಬಾರದಿರುವುದು ಕಾರ್ಯಕರ್ತೆಯರಿಗೆ ತಲೆನೋವಾಗಿ ಪರಿಮಿಣಿಸಿದೆ.ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕೆಲಸ ಮಾಡಿದರೂ ಪೋರ್ಟಲ್‌ನಲ್ಲಿ ಸರಿಯಾಗಿ ನಮೂದಾಗುತ್ತಿಲ್ಲ ಎಂದು ಕಾರ್ಯಕರ್ತೆಯರ ಆರೋಪವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.