ಯಾದಗಿರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಡಿ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಗದಿಯಾಗಿರುವ ಗಡುವು ಮಂಗಳವಾರಕ್ಕೆ (ಅಕ್ಟೋಬರ್ 7ಕ್ಕೆ) ಮುಕ್ತಾಯವಾಗಲಿದೆ. ಇದುವರೆಗೂ ಜಿಲ್ಲೆಯಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ 81.18ರಷ್ಟು ಪ್ರಗತಿ ಕಂಡಿದ್ದು, 2.16 ಲಕ್ಷ ಮನೆಗಳು ಪೂರ್ಣಗೊಂಡಿವೆ.
ಆರಂಭಿಕ ದಿನಗಳಲ್ಲಿ ಗಣತಿದಾರರಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ವರ್, ಆ್ಯಪ್ ಇನ್‌ಸ್ಟಾಲ್, ಸಮೀಕ್ಷೆಯ ಕಾಲಂ ಓಪನ್ ಆಗದೇ ಇರುವುದು, ಮ್ಯಾಪಿಂಗ್, ದೃಢೀಕರಣ ಸರ್ಟಿಫಿಕೇಟ್ ಅಪ್‌ಲೋಡ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಸಾಕಷ್ಟು ಅಡೆತಡೆಗಳ ನಡುವೆಯೂ ಸಮೀಕ್ಷೆಯು ಮುಕ್ತಾಯದ ಕೊನೆಯ ಹಂತಕ್ಕೆ ಬಂದು ತಲುಪಿದೆ.
ಜಿಲ್ಲೆಯಲ್ಲಿ 2,45,506 ಕುಟುಂಬಗಳನ್ನು ಸಮೀಕ್ಷೆಗೆ ಗುರುತಿಸಿದ್ದು, 2,191 ಬ್ಲಾಕ್ ಗಣತಿದಾರರನ್ನು ಸಮೀಕ್ಷೆಗೆ ನಿಯೋಜನೆಗೊಂಡಿದ್ದರು. ಅವರಲ್ಲಿ ಕೆಲವು ಶಿಕ್ಷಕರು ತಮ್ಮ ಟಾರ್ಗೆಟ್ ಅನ್ನು ಪೂರ್ಣಗೊಳಿಸಿ, ಸನ್ಮಾನಿಸಿಕೊಂಡು ನಿರಾಳರಾಗಿದ್ದಾರೆ.
ಹಲವರು ಮನೆ– ಮನೆಗಳಿಗೆ ಅಲೆದು ಮಾಹಿತಿ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕ ಮಕ್ಕಳೊಂದಿಗೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಶಿಕ್ಷಕಿಯರೊಂದಿಗೆ ಅವರ ಪತಿಯಂದಿರೂ ಓಡಾಡುತ್ತಿದ್ದಾರೆ. ಮಗವನ್ನು ಎತ್ತಿಕೊಂಡು ಸಮೀಕ್ಷಾ ಕಾರ್ಯಕ್ಕೆ ಪತ್ನಿಗೆ ಸಹಕಾರ ಕೊಟ್ಟಿದ್ದಾರೆ.
ದಸರಾ ರಜೆ ಅವಧಿಯಲ್ಲಿ ಸೆಪ್ಟೆಂಬರ್ 22ರಿಂದ ಸಮೀಕ್ಷಾ ಕಾರ್ಯ ಶುರುವಾಗಿತ್ತು. ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಮೀಟರ್‌ಗಳಿಗೆ ಅಂಟಿಸಿದ್ದ ಸ್ಟಿಕ್ಕರ್‌ನ ಕ್ಯೂಆರ್ ಕೋಡ್ ಮನೆಗಳನ್ನು ಗುರುತಿಸಿದ್ದ ಶಿಕ್ಷಕರು, ಅಕ್ಟೋಬರ್ 6ರ ಸಂಜೆ 4ರವರೆಗೆ ಜಿಲ್ಲೆಯ 2,16,417 ಕುಟುಂಬಗಳನ್ನು ಸಂಪರ್ಕಿಸಿದ್ದಾರೆ. ಸಮೀಕ್ಷೆಯ ನಿಗದಿತ 60 ಪ್ರಶ್ನೆಗಳಿಗೂ ಉತ್ತರಗಳನ್ನು ಪಡೆದು ಆ್ಯಪ್‌ನಲ್ಲಿ ದಾಖಲಿಸಿದ್ದಾರೆ. 29,089 ಕುಟುಂಬಗಳು ಸಮೀಕ್ಷೆ ವ್ಯಾಪ್ತಿಗೆ ಸೇರ್ಪಡೆ ಆಗಬೇಕಿದೆ.
ಹುಣಸಗಿ ಪ್ರಥಮ, ವಡಗೇರಾ ದ್ವಿತೀಯ: ಸಮೀಕ್ಷಾ ಪಟ್ಟಿಯಲ್ಲಿ 28,068 ಕುಟುಂಬಗಳನ್ನು ಹೊಂದಿರುವ ಹುಣಸಗಿ ತಾಲ್ಲೂಕಿನ ಗಣತಿದಾರರು ಶೇ 97.67ರಷ್ಟು ಪ್ರಗತಿ ಸಾಧಿಸಿದ್ದಾರೆ. ಇದುವರೆಗೂ 27,414 ಕುಟುಂಬಗಳ ದಾಖಲಾತಿಯನ್ನು ಪೂರ್ಣಗೊಳಿಸಿದ್ದಾರೆ. ಶೇ 93.71ರಷ್ಟರೊಂದಿಗೆ ವಡಿಗೇರಾ ತಾಲ್ಲೂಕು ದ್ವಿತೀಯ ಸ್ಥಾನದಲ್ಲಿದೆ. 19,411 ಕುಟುಂಬಗಳ ಪೈಕಿ 18,190 ಮಾಹಿತಿ ಆ್ಯಪ್‌ನಲ್ಲಿ ಭದ್ರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
942 ಶಿಕ್ಷಕರಿಂದ ಟಾರ್ಗೆಟ್ ಪೂರ್ಣ: ಕೆಲವು ಶಿಕ್ಷಕರು ತಮಗೆ ನೀಡಲಾಗಿದ್ದ ಸಮೀಕ್ಷೆಯ ಟಾರ್ಗೆಟ್ ಅನ್ನು ಬೇಗನೆ ಪೂರ್ಣಗೊಳಿಸಿದ್ದಾರೆ. ತ್ವರಿತವಾಗಿ ಸಮೀಕ್ಷೆ ಮುಗಿಸಿದವರನ್ನು ಸನ್ಮಾನಿಸಿದ್ದು, ಇದುವರೆಗೂ 942 ಶಿಕ್ಷಕರು ಶೇ 100ರಷ್ಟು ಸಮೀಕ್ಷೆಯನ್ನು ಪೂರ್ತಿಗೊಳಿಸಿದ್ದಾರೆ. ಇಡೀ ರಾಜ್ಯದಲ್ಲಿ ಯಾದಗಿರಿ ಜಿಲ್ಲೆ 6ನೇ ಸ್ಥಾನದಲ್ಲಿದೆ’ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 2.45 ಲಕ್ಷ ಕುಟುಂಬಗಳನ್ನು ಸಮೀಕ್ಷೆಗೆ ಗುರುತಿಸಲಾಗಿದೆ. ಈಗಾಗಲೇ ಶೇ 90 ಆಸುಪಾಸಿನಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆಹರ್ಷಲ್ ಭೋಯರ್ ಜಿಲ್ಲಾಧಿಕಾರಿ
ವಾಣಿಜ್ಯ ವಲಸೆಯಿಂದಾಗಿ ಶಹಾಪುರ ತಾಲ್ಲೂಕಿನಲ್ಲಿ ಕಡಿಮೆ ಸಾಧನೆಯಾಗಿದ್ದು ಸೂಪರ್ ವೈಸರ್‌ಗಳಿಗೆ ಲಾಗ್‌ಇನ್ ಕೊಟ್ಟಿದ್ದು ಮಂಗಳವಾರದ ಒಳಗೆ ಮುಕ್ತಾಯವಾಗಲಿದೆಸದಾಶಿವ ನಾರಾಯಣಕರ ಹಿಂದುಳಿದ ವರ್ಗಗಳ ಇಲಾಖೆಯ ಉಪ ನಿರ್ದೇಶಕ
ಸ್ಟಿಕ್ಕರ್ ಅಂಟಿಸುವಲ್ಲಿ ಎಡವಟ್ಟು!
ಕೆಲವು ಗ್ರಾಮಗಳಲ್ಲಿ ವಿದ್ಯುತ್ ಮೀಟರ್ ರೀಡರ್‌ಗಳು ಸ್ಟಿಕ್ಕರ್ ಅಂಟಿಸುವಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಮ್ಯಾಪ್ ಅನ್ವಯ ಮನೆಗಳನ್ನು ಗುರುತಿಸಲು ಗಣತಿದಾರರಿಗೆ ತೊಂದರೆ ಆಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಕೆಲವು ಮೀಟರ್ ರೀಡರ್‌ಗಳು ದೇವಸ್ಥಾನದಲ್ಲಿ ಕುಳಿತು ಮಕ್ಕಳ ಕೈಗೆ ಸ್ಟಿಕ್ಕರ್‌ಗಳನ್ನು ಕೊಟ್ಟು ಮನೆ– ಮನೆಗೆ ಹೋಗಿ ಅಂಟಿಸಿದ್ದರು. ಮ್ಯಾಪ್ ಜಾಡು ಹಿಡಿದು ಹೋದ ಶಿಕ್ಷಕರಿಗೆ ದೇವಸ್ಥಾನಕ್ಕೆ ಕರೆದೊಯುತ್ತಿತ್ತು. ಈ ಬಗ್ಗೆ ಸ್ಥಳೀಯರನ್ನು ಕೇಳಿದಾಗ ಮಕ್ಕಳು ಸ್ಟಿಕ್ಕರ್ ಅಂಟಿಸಿದ್ದಾಗಿ ಗಮನಕ್ಕೆ ತಂದರು. ಬಳಿಕ ಕುಟುಂಬಗಳ ವಿಳಾಸವನ್ನು ಸ್ಥಳೀಯರಿಂದ ಪಡೆದು ಸಮೀಕ್ಷೆಯನ್ನು ಯಶಸ್ವಿಗೊಳಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.