
ಯಾದಗಿರಿ: 2025ರ ವರ್ಷದ ತುದಿಯಲ್ಲಿ ನಿಂತು ಹಿಂದಣ ಹೆಜ್ಜೆಯತ್ತ ದೃಷ್ಟಿ ಹಾಯಿಸಿದರೆ ಜಿಲ್ಲೆಯ ಜನರಿಗೆ ಸಿಹಿಗಿಂತ ಕಹಿಯನ್ನೇ ಉಣಿಸಿದ ಘಟನೆಗಳ ಹೂರಣವೆ ಹೆಚ್ಚಿದೆ. ಮಹಾರಾಷ್ಟ್ರದ ಭೀಮಾ ಕಣಿವೆಯ ಜಲಾಶಯಗಳಿಂದ ಸೃಷ್ಟಿಯಾದ ನೆರೆ, ಬೆಂಬಿಡದೆ ಕಾಡಿದ ಮಳೆಯ ಕರಿನೆರಳು, ಬಾಲಕಿಯರ ಮೇಲಿನ ದೌರ್ಜನ್ಯ, ಕೊಲೆ, ತಿನ್ನುವ ಅಕ್ಕಿಯಲ್ಲಿನ ಅಕ್ರಮದಂತಹ ಅಪರಾಧ ಪ್ರಕರಣಗಳು ನೋವಿನ ಬರೆಯನ್ನೇ ಎಳೆದವು.
ಪೂರ್ವ ಮುಂಗಾರು ಮಳೆಯ ಉತ್ತಮ ಆರಂಭ, ಕಾಲುವೆಗಳಿಗೆ ಒಂದು ತಿಂಗಳು ಮುಂಚಿತವಾಗಿ ನೀರು ಹರಿಸಿದ್ದರಿಂದ ಕೃಷಿಕರು ಭರದಿಂದ ಬಿತ್ತನೆ ಮಾಡಿದರು. ಕೆರೆ–ಕಟ್ಟೆ, ಜಲಾಶಯಗಳು ಈ ವರ್ಷದ ಸತತ ಮಳೆಗೆ ತುಂಬಿ ಹರಿದವು.
ವರ್ಷದ ನೆರೆ ಮತ್ತು ಮಳೆಯ ಹೊಡೆತಕ್ಕೆ 523 ಮನೆಗಳಿಗೆ ಹಾನಿಯಾಯಿತು. ಇಬ್ಬರು ಸಾವನ್ನಪ್ಪಿದರು. 242 ಪ್ರಾಣಿಗಳು ಉಸಿರು ಚಲ್ಲಿದವು. 150 ಪಕ್ಷಗಳು ಅಸುನೀಗಿದವು. 1.61 ಲಕ್ಷ ರೈತರ 1.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳಿಗೆ ನಷ್ಟವಾಯಿತು. ಫಸಲು ಕೊಡಬೇಕಿದ್ದ ಹತ್ತಿ, ತೊಗರಿ ಗಿಡಗಳು ಅಸ್ಥಿ ಪಂಜರದಂತೆ ಒಣಗಿ ನಿಂತವು. ಇದರಿಂದ ಸಾವಿರಾರು ರೈತರ ಬದುಕು ಬೀದಿಗೆ ಬಂತು. ನದಿ ತೀರದ ಗ್ರಾಮಗಳು ಪ್ರವಾಹಕ್ಕೆ ತುತ್ತಾದವು.
*ಶಹಾಪುರದ ದೋರನಹಳ್ಳಿ ಕ್ಯಾಂಪ್ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟದಿಂದ ಮೃತಪಟ್ಟ, ಗಾಯಾಳು ಕುಟುಂಬಗಳಿಗೆ ₹ 2 ಕೋಟಿ ಪರಿಹಾರಕ್ಕೆ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿತ್ತು
*ರಕ್ತನಿಧಿ ಕೇಂದ್ರ, ಲಾಂಡ್ರಿ ಬ್ಲಾಕ್ ಉದ್ಘಾಟನೆ, ಜಿಲ್ಲಾಸ್ಪತ್ರೆಗೆ ₹10 ಕೋಟಿ ವೆಚ್ಚದ ಎಂಆರ್‌ಐ, ರಕ್ತ ನಿಧಿ ಕೇಂದ್ರಕ್ಕೆ ಹೆಚ್ಚುವರಿ ಯಂತ್ರ, ಆವರಣಗೋಡೆ ಸೌಲಭ್ಯ
*ಯಾದಗಿರಿ ನಗರಸಭೆಗೆ ನೂತನ ಕಟ್ಟಡ ಭಾಗ್ಯ, ಪ್ರಥಮ ಬಾರಿಗೆ ಹಿಂದುಳಿದ ಕುರುಬ ಸಮುದಾಯದ ಬಸವರಾಜ ವಿಭೂತಿಹಳ್ಳಿ ಅವರಿಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನ
*ಸುರಪುರ ತಾಲ್ಲೂಕಿನ ತಿಂಥಣಿ ಬಳಿ ಕೆಕೆಆರ್‌ಟಿಸಿ ಬಸ್– ಬೈಕ್ ನಡುವೆ ಸಂಭವಿಸಿ ಮೂವರು ಮಕ್ಕಳು, ದಂಪತಿ ಸೇರಿ ಐವರ ಸಾವು
*ಗುರುಮಠಕಲ್ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಜಯಶ್ರೀ ಪಾಟೀಲ 2ನೇ ಅವಧಿಗೆ ಆಯ್ಕೆಯಾದರು. ಕಾಂಗ್ರೆಸ್‌ನ ರೇಣುಕಾ ಪಡಿಗೆ ಉಪಾಧ್ಯಕ್ಷರಾದರು
*ಕೆಂಭಾವಿ ಸಮೀಪ ಯಾಳಗಿಯ ರಾಮಪ್ಪಯ್ಯ ಸಂಸ್ಥಾನ ಮಠದಲ್ಲಿ 1,008 ಲಿಂಗಗಳ ಪ್ರತಿಷ್ಠಾಪನೆ ಮಾಡಲಾಯಿತು
*ವಡಗೇರಾ ತಾಲ್ಲೂಕಿನ ಕಂಠಿ ತಾಂಡಾದಲ್ಲಿ ನೀಲಾಬಾಯಿ ಶಂಕರ್ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ
*ನಾರಾಯಣಪುರ ಜಲಾಶಯದ ಎಡ ಮತ್ತು ಬಲದಂಡೆಯ ಕಾಲುವೆಗಳಿಗೆ ಏ.15ರವರೆಗೆ ನೀರು ಹರಿಸಿ ಒತ್ತಾಯಿಸಿ ‘ಯಾದಗಿರಿ ಜಿಲ್ಲೆ’ ಬಂದ್‌ಗೆ ಕರೆ. ಆಡಳಿತ– ಪ್ರತಿಪಕ್ಷಗಳ ನಡುವೆ ವಾಗ್ವಾದ, ಕೋರ್ಟ್ ಮೊರೆ
*ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಜನಾಕ್ರೋಶ ಯಾತ್ರೆಯ ಪ್ರತಿಭಟನೆ
*ಸುರಪುರದ ದೇವಗುರು ಬಳಿ ಕ್ರೂಷರ್–ಆಟೊ ನಡುವೆ ಡಿಕ್ಕಿ ಸಂಭವಿಸಿ ಆಟೊದಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
*ಶಹಾಪುರ ದೋರನಹಳ್ಳಿ ಗ್ರಾ.ಪಂ. ಪಿಡಿಒ ಮೇಲೆ ಪಂಚಾಯಿತಿ ಸದಸ್ಯೆ ಹಾಗೂ ಇನ್ನೊಬ್ಬರು ಸೇರಿ ಕಣ್ಣಿಗೆ ಖಾರದ ಪುಡಿ ಎರಚಿ, ಚಪ್ಪಲಿಯಿಂದ ಹೊಡೆದ ಆರೋಪ
*ಆಲಮಟ್ಟಿ-ಹುಣಸಗಿ-ಯಾದಗಿರಿ ರೈಲು ಮಾರ್ಗ ಸಮೀಕ್ಷೆಗೆ ಹಸಿರು ನಿಶಾನೆ
*ಯಾದಗಿರಿ ‘ಕೈ’ ಕಚೇರಿಗೆ ಕಾಂಗ್ರೆಸ್ ಮಹಿಳಾ ಮುಖಂಡರ ಪತಿಯೊಬ್ಬರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು
*ಜಿಲ್ಲಾ ಕ್ರೀಡಾಂಗಣದಲ್ಲಿ ₹440.68 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ
*ಬೆಂಗಳೂರಿನಿಂದ ಸುರಪುರ ತಾಲ್ಲೂಕಿನ ಸ್ವಗ್ರಾಮ ನಾಗರಾಳಕ್ಕೆ ತೆರಳುತ್ತಿದ್ದ ವಕೀಲ ದುರ್ಗಪ್ಪ ಹೊಸಮನಿ ಅವರಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ ಅಮಾನವೀಯ ಕೃತ್ಯ
*ರಾಯಚೂರಿನ ಕೃಷ್ಣಾ ನದಿ ಸೇತುವೆ ಮೇಲೆ ಫೋಟೊ ತೆಗೆಸಿಕೊಳ್ಳುವಾಗ ಹುಣಸಗಿ ಮೂಲದ ತನ್ನ ಪತ್ನಿಯೇ ನದಿಗೆ ತಳ್ಳಿದ್ದಾಳೆ ಎಂದು ಪತಿ (ತಾತಪ್ಪ) ಆರೋಪಿಸಿದರು. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಧಿಕಾರಿಗಳು ತನಿಖೆಯಲ್ಲಿ ತಾತಪ್ಪ ಬಾಲ್ಯ ವಿವಾಹವಾಗಿದ್ದು ಗೊತ್ತಾಗಿ, ಪೋಕ್ಸೊ ಪ್ರಕರಣ ದಾಖಲಾಯಿತು
*ವಡಗೇರಾ ತಾಲ್ಲೂಕಿನ ಕೋನಹಳ್ಳಿಯಲ್ಲಿ ಜಾತಿ ನಿಂದನೆಗೆ ಹೆದರಿ ಮಹೆಬೂಬ್ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಕೇಳಿ ಆತನ ತಂದೆ ಹೃದಯಾಘಾತದದಿಂದ ಸಾವು
*ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು, ಕೃಷ್ಣಾ ನದಿಯ ಶಹಾಪುರ-ದೇವದುರ್ಗ ರಸ್ತೆ ಸಂಚಾರ ಸ್ಥಗಿತ
*ಶಹಾಪುರ ನಗರದ ವಸತಿ ಶಾಲೆಯೊಂದರ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ. ಐವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿ, ಶಾಲೆಯ ನಾಲ್ವರು ನೌಕರರು ಅಮಾನತು
*ಬಸವ ಸಂಸ್ಕೃತಿ ಅಭಿಯಾನ, ವಿದ್ಯಾರ್ಥಿಗಳೊಂದಿಗೆ ಸಂವಾದ
*ಗುರುಮಠಕಲ್‌ನಲ್ಲಿ ಪ್ರಜಾಸೌಧದ ಅಡಿಗಲ್ಲು ಕಾರ್ಯಕ್ರಮದ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಿದ್ದಾ–ಜಿದ್ದಿನ ಘೋಷಣೆ, ವಾಗ್ವಾದ
*ಜಿಲ್ಲಾ ನ್ಯಾಯಾಲಯದ ನೂತನ ಸಂಕೀರ್ಣ ಹಾಗೂ ಬಾರ್ ಅಸೋಸಿಯೇಷನ್ ಕಟ್ಟಡದ ಉದ್ಘಾಟನೆ
*ಭೀಮಾ ನದಿ ಪ್ರವಾಹ; ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಂಡ ಪ್ರವಾಹ, ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ
ಅಕ್ಟೋಬರ್: ರಾಜ್ಯೋತ್ಸವ ಪ್ರಶಸ್ತಿಯ ಗರಿ
*ಮಲ್ಲಿಕಾರ್ಜುನ ನಿಂಗಪ್ಪ, ಬಸಣ್ಣ ಮೋನಪ್ಪ ಬಡಿಗೇರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
*ಸಚಿವ ಸಂತೋಷ್ ಲಾಡ್ ಅವರಿಂದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಣೆ
*ಸಗರ, ದೋರನಹಳ್ಳಿ ಹಾಗೂ ವಡಗೇರಾ ಗ್ರಾ. ಪಂ.ಗಳು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟದಲ್ಲಿ ನಿರ್ಣಯ
*ಥಾಯ್ಲೆಂಡ್‌ನಲ್ಲಿ ನಡೆದ ವಿಶ್ವ ಅಂಗವಿಕಲರ ಕ್ರೀಡಾಕೂಟದ ಡಿಸ್ಕಸ್ ಥ್ರೊನಲ್ಲಿ ಕುಮಾರ್ ರಾಠೋಡ್‌ಗೆ ಚಿನ್ನದ ಪದಕ
*ಇಂಧನ ಸಚಿವ ಕೆ.ಜೆ. ಜಾರ್ಜ್ ಜಿಲ್ಲಾ ಪ್ರವಾಸ, ಜೆಸ್ಕಾಂ ಪ್ರಗತಿ ಪರಿಶೀಲನಾ ಸಭೆ
*ಪ್ರಥಮ ಬಾರಿಗೆ ರಾಜ್ಯಮಟ್ಟದ ಯುವಜನೋತ್ಸವದ ಆತಿಥ್ಯ; ಜನಪದ ನೃತ್ಯದಲ್ಲಿ ಮುದ್ನಾಳ ದೊಡ್ಡ ತಾಂಡಾದ ಬಂಜಾರ ಕಲಾವಿದರು ರಾಷ್ಟ್ರ ಮಟ್ಟಕ್ಕೆ ಆಯ್ಕೆ
*ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳು: ಎರಡು ಪ್ರಕರಣಗಳಿಂದ ₹4.97 ಕೋಟಿ ಮೌಲ್ಯದ ಮರಳು ಜಪ್ತಿ
*ಮೂರು ದಿನಗಳು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಆಯೋಜನೆ
ಸದ್ದು ಮಾಡಿದ ಕೊಲೆ, ಅಪರಾಧ ಪ್ರಕರಣಗಳು
ಶಹಾಪುರದಲ್ಲಿ ರೌಡಿ ಶೀಟರ್ ಸಣ್ಣ ಮಾಪಣ್ಣ ಭೀಮಪ್ಪ ಕೊಲೆಯಿಂದ ರೊಚ್ಚಿಗೆದ್ದು ಆತನ ಮಕ್ಕಳು ಅಲಿಸಾಬ್‌ನನ್ನು ಕೊಲೆ ಮಾಡಿ ಸೇಡು ತೀರಿಸಿಕೊಂಡರು. ಆಸ್ತಿ ವಿಚಾರಕ್ಕೆ ಹತ್ತಿಕುಣಿಯಲ್ಲಿ ಕಾಂಗ್ರೆಸ್ ಮುಖಂಡ ಶರಣಪ್ಪ ಗಡ್ಡಿಮೇಲ್ ಮತ್ತು ಪುತ್ರ ಸಣ್ಣ ಸಾಬಣ್ಣ ಅವರನ್ನು ಕೊಲ್ಲಲಾಯಿತು. ಹಳೆಯ ವೈಷಮ್ಯಕ್ಕೆ ದುಷ್ಕರ್ಮಿಗಳ ದಾಳಿಗೆ ಸಮಾಜ ಕಲ್ಯಾಣ ಇಲಾಖೆಯ ಎಸ್‌ಡಿಎ ಅಂಜಲಿ ಗಿರೀಶ ಅವರು ಬಲಿಯಾದರು. ಗುರುಮಠಕಲ್‌ನಲ್ಲಿ ₹ 1.21 ಕೋಟಿ ಮೌಲ್ಯದ 3985 ಕ್ವಿಂಟಲ್ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿ ನರೇಂದ್ರ ರಾಠೋಡ ಹಾಗೂ ಅಯ್ಯಪ್ಪ ರಾಠೋಡ ವಿರುದ್ಧ ಪ್ರಕರಣ ದಾಖಲಾದವು. ಸಿಐಡಿ ತನಿಖೆ ವೇಳೆಯಲ್ಲಿಯೂ ₹ 43.79 ಲಕ್ಷ ಮೌಲ್ಯದ ಪಡಿತರ ಧಾನ್ಯ ಕ್ಷೀರ ಭಾಗ್ಯದ 222 ಕೆ.ಜಿ. ಹಾಲಿನ ಪುಡಿ ಪ್ಯಾಕೇಟ್‌ಗಳು ಸಹ ಪತ್ತೆಯಾದವು. ಈ ಸಂಬಂಧ ಮೂರು ಪ್ರಕರಣಗಳು ಸಿಐಡಿ ತೆಕ್ಕೆಗೆ ಸೇರಿದವು. ಜೆಜೆಎಂನಲ್ಲಿ ಆರ್‌ಡಿಪಿಆರ್ ಎಇ ಸೇರಿ ಐವರು ₹ 1.90 ಕೋಟಿ ಅವ್ಯವಹಾರ ಎಸಗಿದರು. ಆದಾಯ ಮೀರಿ ₹ 9.87 ಕೋಟಿ ಆಸ್ತಿ ಗಳಿಸಿದ ಆರೋಪದಡಿ ಸುರಪುರ ಟಿಎಚ್‌ಒ ಹಾಗೂ ₹ 80 ಸಾವಿರ ಲಂಚ ಪಡೆಯುತ್ತಿದ್ದ ಸಿಡಿಪಿಒ ಲೋಕಾಯುಕ್ತ ಬಲೆಗೆ ಬಿದ್ದರು.
ಪೊಲೀಸ್ ಕಣ್ಗಾವಲಿನಲ್ಲಿ ಪಥಸಂಚಲನ
ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಗುರುಮಠಕಲ್‌ನಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವಲ್ಲಿ ಗೊಂದಲ ಉಂಟಾಯಿತು. ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಬಳಿಕ ಅನುಮತಿ ಸಿಕ್ಕಿತು. ಕೆಂಭಾವಿಯಲ್ಲಿ ದಲಿತ ಸಂಘಟನೆಗಳೂ ಆರ್‌ಎಸ್‌ಸ್ ಪಥಸಂಚಲನಕ್ಕೆ ಅನುಮತಿ ಕೇಳಿದ್ದ ದಿನವೇ ತಾವೂ ಪಥಸಂಚಲನ ನಡೆಸುವುದಾಗಿ ಅರ್ಜಿ ಸಲ್ಲಿಸಿದ್ದವು. ಎಲ್ಲ ಸಂಘಟನೆಗಳೊಂದಿ ಸಭೆ ನಡೆಸಿ ಪೊಲೀಸ್ ಇಲಾಖೆ ವರದಿ ಸಲ್ಲಿಸಿದ ಬಳಿಕ ಡಿ.ಸಿ ಅನುಮತಿ ನೀಡಿದರು. ಆ ನಂತರ ಪೊಲೀಸ್ ಕಣ್ಗಾವಲಿನಲ್ಲಿ ಪಥಸಂಚಲನ ನಡೆಯಿತು.
ಮಾನವೀಯತೆಗೆ ಕಪ್ಪು ಚುಕ್ಕೆಯಾದ ಘಟನೆಗಳು
ಅಕ್ಕನಿಗೆ ಮನೆ ಕೆಲಸದಲ್ಲಿ ನೆರವಾಗಲು ಬಂದಿದ್ದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಕ್ಕನ ಗಂಡ 9ನೇ ತರಗತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ವಸತಿ ಶಾಲೆಯಲ್ಲೇ ಗುಂಡು ಮಗವಿಗೆ ಜನ್ಮ ಮಹಿಳೆಯ ಕೂದಲು ಕತ್ತರಿಸಿ ತಲೆಗೆ ಸುಣ್ಣ ಹಚ್ಚಿ ಖಾರದ ಪುಡಿ ಹಾಕಿ ಹಲ್ಲೆ ನಡೆಸಿದ ಘಟನೆಗಳು ಮಾನವೀಯತೆಗೆ ಕಪ‍್ಪು ಚುಕ್ಕೆಯಾಗಿ ಉಳಿದವು. ಪತ್ನಿಯ ಶೀಲ ಶಂಕಿಸಿದ ತಂದೆ ತನ್ನ ಇಬ್ಬರು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಭೀಭತ್ಸ ಕೃತ್ಯ ಹತ್ತಿಕುಣಿಯಲ್ಲಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.