ADVERTISEMENT

ಯಾದಗಿರಿ| ಚಿರತೆಗಳ ಭಯ: ವಿಶೇಷ ತರಗತಿಗಳ ವಿನಾಯಿತಿಗಾಗಿ 10ನೇ ವಿದ್ಯಾರ್ಥಿಗಳ ಪತ್ರ

ಮಲ್ಲಿಕಾರ್ಜುನ ನಾಲವಾರ
Published 9 ಜನವರಿ 2026, 5:55 IST
Last Updated 9 ಜನವರಿ 2026, 5:55 IST
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಿಂದ ಕಟಗಿ ಶಹಾಪುರಕ್ಕೆ ನಡೆದುಕೊಂಡು ಹೋಗುತ್ತಿರುವ ಶಾಲಾ ಮಕ್ಕಳು
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಿಂದ ಕಟಗಿ ಶಹಾಪುರಕ್ಕೆ ನಡೆದುಕೊಂಡು ಹೋಗುತ್ತಿರುವ ಶಾಲಾ ಮಕ್ಕಳು   

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪಿಯು ಕಾಲೇಜಿನ ನೂರಾರು ಮಕ್ಕಳು ತಮ್ಮ ಗ್ರಾಮಗಳಿಂದ ಸರಿಯಾದ ಬಸ್‌ ಸಂಪರ್ಕವಿಲ್ಲದೆ ಕಲಿಕೆಗಾಗಿ ನಿತ್ಯ ‘ಕಾಲ್ನಡಿಗೆಯ ಶಿಕ್ಷೆ’ ಅನುಭವಿಸುತ್ತಿದ್ದಾರೆ.

ಕಟಗಿ ಶಹಾಪುರ, ಸಮ್ನಾಪುರ, ಸೌದಗಾರ ತಾಂಡಾ, ಎಕ್ಕಳ್ಳಿ, ಬಾಚವಾರ, ಬಾಚವಾರ ತಾಂಡಾ, ದುದನೂರು (ಕೆ), ದುದನೂರು ಕ್ಯಾಂಪ್ ಒಳಗೊಂಡ ಮತ್ತಿತರ ಗ್ರಾಮಗಳ 360ಕ್ಕೂ ಹೆಚ್ಚು ಮಕ್ಕಳು ಪ್ರೌಢಶಾಲೆಯಲ್ಲಿ ಹಾಗೂ ಸುಮಾರು 80 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ.

ವರ್ಷಗಳಿಂದ ಬ್ಯಾಗ್‌ ಸಹಿತ ಬಸ್‌ಗಳನ್ನು ಹತ್ತದ ಮಕ್ಕಳು, ನಿತ್ಯ ಎರಡೂ ಮಾರ್ಗದಲ್ಲಿ 10ರಿಂದ 14 ಕಿ.ಮೀ. ನಡೆಯುತ್ತಿದ್ದಾರೆ. ಮಕ್ಕಳ ಪೋಷಕರು, ಗ್ರಾಮದ ಮುಖಂಡರು ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಹಾಗೂ ಶಾಲಾ ಶಿಕ್ಷಕರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಪತ್ರಗಳು ಬರೆದು ಮನವಿ ಮಾಡಿದರೂ ಬಸ್‌ಗಳು ಬಂದಿಲ್ಲ.

ADVERTISEMENT

‘ಕಟಗಿ ಶಹಾಪುರದಿಂದ ಪ್ರೌಢಶಾಲೆಗೆ 40ಕ್ಕೂ ಹೆಚ್ಚು ಮಕ್ಕಳು ಹಾಗೂ ಪಿಯು ಕಾಲೇಜಿಗೆ 20ಕ್ಕೂ ಅಧಿಕ ವಿದ್ಯಾರ್ಥಿಗಳು 5 ಕಿ.ಮೀ. ದೂರದ ಹತ್ತಿಕುಣಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಕೊನೆಯದಾಗಿ ಬಸ್ ಬಂದಿದ್ದು 2013ರಲ್ಲಿ. ಕೆಲವು ದಿನ ಓಡಿಸಿದಂತೆ ಮಾಡಿ ಬಂದ್ ಮಾಡಿದ್ದು, ಇಂದಿಗೂ ನಮ್ಮೂರ ಕಡೆ ಮುಖಮಾಡಿಲ್ಲ. 8ನೇ ತರಗತಿ ಮುಗಿದ ಬಳಿಕ ನಮ್ಮೂರ ಮಕ್ಕಳು ನಡೆದುಕೊಂಡು ಹೋಗಿ ಅಕ್ಷರ ಕಲಿಯುವ ದುಸ್ಥಿತಿ ಬಂದಿದೆ. ಶಾಸಕರು, ಕೆಕೆಆರ್‌ಟಿಸಿಗೆ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ಮಹಿಪಾಲರೆಡ್ಡಿ ಪೊಲೀಸ್ ಪಾಟೀಲ.

4 ವರ್ಷ ನಿತ್ಯ 10 ಕಿ.ಮೀ. ನಡಿಗೆ: ‘ಬಸ್‌ಗಳ ಓಡಾಟ ಇಲ್ಲದೆ ನಾವು, ನಮ್ಮ ಸಹಪಾಠಿಗಳು 8ನೇ ತರಗತಿಯಿಂದ ಪಿಯುವರೆಗಿನ ನಾಲ್ಕು ವರ್ಷಗಳು ನಿತ್ಯ 10 ಕಿ.ಮೀ. ನಡೆದಿದ್ದೇವೆ. ನಡೆದು– ನಡೆದು ಮೊಳಕಾಲು ನೋವಾಗಿ, ಸಂಜೆ ಮನೆಗೆ ಹೋದರೆ ಸುಸ್ತಾಗಿ ನಿದ್ರೆ ಬರುತ್ತದೆ. ಸರಿಯಾಗಿ ಓದಲೂ ಆಗುವುದಿಲ್ಲ’ ಎನ್ನುತ್ತಾರೆ ಪಿಯು ವಿದ್ಯಾರ್ಥಿಗಳಾದ ನಾಗೇಶ ಭೀಮಣ್ಣ, ಹಣಮಂತ ಈಶಪ್ಪ.‌

‘ಹತ್ತಿಕುಣಿ ಸುತ್ತಲೂ ಬೆಟ್ಟ ಗುಡ್ಡಗಳ ಆವರಿಸಿದ ಅರಣ್ಯ ಪ್ರದೇಶವಿದು, ಚಿರತೆ, ಕಾಡು ಹಂದಿಯಂತಹ ಪ್ರಾಣಿಗಳಿವೆ. ಬಸ್ ಇಲ್ಲದೆ ಸಂಜೆ ಮನೆಗೆ ತೆರಳಲು ವಿದ್ಯಾರ್ಥಿಗಳು ಹೆದರುತ್ತಾರೆ. ದುದನೂರು ಕ್ಯಾಂಪ್‌, ಬಾಚವಾರ, ಸಮ್ನಾಪುರ ಮಕ್ಕಳು ಸಹ ನಡೆದುಕೊಂಡೇ ತರಗತಿಗೆ ಬಂದು ಹೋಗುತ್ತಿದ್ದಾರೆ. ಆರಂಭದಲ್ಲಿ ತಡವಾಗಿ ಬಂದ ಮಕ್ಕಳನ್ನು ಬೆದರಿಸುತ್ತಿದ್ದೆವು. ವಾಸ್ತವ ಸ್ಥಿತಿ ಗೊತ್ತಾದ ಬಳಿಕ ನಮಗೂ ಬೇಸರವಾಗಿದೆ’ ಎನ್ನುತ್ತಾರೆ ಶಿಕ್ಷಕ ಮಹೇಶ ಕುಮಾರ.

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಬಸ್‌ಗಾಗಿ ಕಾದು ಕುಳಿತ ಶಾಲಾ ಮಕ್ಕಳು
ಶಾಲಾ ವಿದ್ಯಾರ್ಥಿಗಳು ಯಾವ ಸಮಯಕ್ಕೆ ಬಸ್‌ಗಳ ಸೇವೆ ಬೇಕು ಎಂಬುದನ್ನು ಮನವಿ ಪತ್ರ ನೀಡಿದರೆ ಶಾಲೆಗೆ ಡಿಟಿಒ ಕಳುಹಿಸಿ ವ್ಯವಸ್ಥೆ ಮಾಡಲಾಗುವುದು 
ಜಿ.ಬಿ.ಮಂಜುನಾಥ ಕೆಕೆಆರ್‌ಟಿಸಿ ಯಾದಗಿರಿ ವಿಭಾಗದ ನಿಯಂತ್ರಣಾಧಿಕಾರಿ
ಕೆಕೆಆರ್‌ಟಿಸಿ ಅಧಿಕಾರಿಗಳು ರಸ್ತೆ ಸರಿಯಿಲ್ಲ ಸಾಕಷ್ಟು ತಿರುವುಗಳಿವೆ ಡೀಸೆಲ್‌ ಖರ್ಚು ಭರಿಸಿದಷ್ಟು ಟಿಕೆಟ್‌ ದುಡ್ಡು ಕಲೆಕ್ಟ್‌ ಆಗುತ್ತಿಲ್ಲ ಎಂದು ನೆಪ ಹೇಳಿ ಹಿಂದೇಟು ಹಾಕುತ್ತಿದ್ದಾರೆ
ಮಹಿಪಾಲರೆಡ್ಡಿ ಪೊಲೀಸ್ ಪಾಟೀಲ ಕಟಗಿ ಶಹಾಪುರ ನಿವಾಸಿ
ವಿಶೇಷ ತರಗತಿಗಳಿಂದ ವಂಚಿತ 
ಫಲಿತಾಂಶ ಸುಧಾರಣೆಗಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಜೆ ಹೆಚ್ಚುವರಿ ವಿಶೇಷ ತರಗತಿಗಳು ನಡೆಸಲಾಗುತ್ತಿದೆ. ಬಸ್‌ ಸಂಪರ್ಕವಿಲ್ಲದ 5.30ರ ಬಳಿಕ ಬಸ್ ಬಾರದ ಗ್ರಾಮಗಳ ವಿದ್ಯಾರ್ಥಿಗಳು ವಿಶೇಷ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ.  ‘ವಿಶೇಷ ತರಗತಿಗಳಿಂದ ವಿನಾಯಿತಿ ನೀಡಿ ಸಂಜೆ 4.30ಕ್ಕೆ ಶಾಲೆಯಿಂದ ಮನೆಗೆ ಹೊರಡಲು ಅನುಮತಿಸಬೇಕು. ನಮ್ಮ ಊರುಗಳು ಬೆಟ್ಟ ಗುಡ್ಡಗಳ ನಡುವೆ ಇವೆ. ಸಂಜೆ ನಡೆದುಕೊಂಡು ಹೋಗಲು ಭಯವಾಗುತ್ತದೆ. ಚಿರತೆಯಂತಹ ಪ್ರಾಣಿಗಳು ಸಹ ಇವೆ ಎಂದು ಸೌದಗಾರ ತಾಂಡಾ ಬಾಚವಾರ ತಾಂಡಾ ಬಾಚವಾರ ಗ್ರಾಮ ಸೇರಿ ಇತರೆ ಗ್ರಾಮಗಳ 30ಕ್ಕೂ ಅಧಿಕ ವಿದ್ಯಾರ್ಥಿಗಳು ಮನವಿ ಪತ್ರ ಬರೆದಿದ್ದಾರೆ’ ಎಂದು ಶಾಲೆಯ ಮುಖ್ಯಶಿಕ್ಷಕ ಬಸಣ್ಣ ಸೋಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.