
ಯಾದಗಿರಿ: ‘ಮದ್ಯ ಸೇವನೆ ಮಾಡುವುವರ ಕುಟುಂಬದಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಹಲವು ಸಂಕಷ್ಟ ಎದುರಿಸುತ್ತಿದ್ದಾರೆ. ಜತೆಗೆ ಕುಟುಂಬಗಳು ಆರ್ಥಿಕ ಸಮಸ್ಯೆಗೆ ನೂಕಲ್ಪಡುತ್ತಿರುವುದು ಖೇದಕರ’ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ಶಹಾಪುರ ತಾಲ್ಲೂಕಿನ ಅಣಿಬಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜರುಗಿದ ಅಕ್ರಮ ಮದ್ಯ ಮಾರಾಟ ಮತ್ತು ಮದ್ಯದ ದುಷ್ಪರಿಣಾಮಗಳ ಕುರಿತ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಅಕ್ರಮ ಮದ್ಯ ಗ್ರಾಮಗಳ ಆರ್ಥಿಕ ಮತ್ತು ಸಾಮಾಜಿಕ ರಚನೆಗೆ ತಂದಿರುವ ಅನಾಹುತಗಳ ಕುರಿತು ವಿವರಿಸಿದರು.
‘ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ. ಮದ್ಯ ಸೇವನೆಯಿಂದಾಗುವ ಆರೋಗ್ಯ ತೊಂದರೆಗಳು, ಆರ್ಥಿಕ ಹಾನಿ, ಗೃಹ ಕಲಹ, ಅಪರಾಧ ಪ್ರಮಾಣದ ಏರಿಕೆಗಳನ್ನು ತಡೆಗಟ್ಟಲು ಮದ್ಯ ನಿಷೇಧ ಮಾಡುವುದು ಸಹಾಯಕ’ ಎಂದರು.
ಕಾರ್ಯಕ್ರಮದಲ್ಲಿ ಮದ್ಯ ಸೇವನೆ ಬಿಡುವುದು ಮತ್ತು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸುವ ಪ್ರತಿಜ್ಞೆ ಬೋಧಿಸಲಾಯಿತು.
ಇಒ ಬಸವರಾಜ ಶರಭೈ, ಪಿಡಿಒ ರಮೇಶ ನಾಯಕ್, ರಾಜು ಅಣಿಬಿ, ಬಾಪುಗೌಡ ಅಣಿಬಿ ಸೇರಿದಂತೆ ವೈದ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.