
ಯಾದಗಿರಿ: ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರರ ಮಕರ ಸಂಕ್ರಾಂತಿಯ ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ಗಂಗಾಸ್ನಾನ ಬುಧವಾರ ಮಧ್ಯಾಹ್ನ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಮಲ್ಲಯ್ಯನ ಮೂರ್ತಿಗಳನ್ನು ಹೊತ್ತು ವಿವಿಧ ಜಿಲ್ಲೆಗಳು, ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಹೊನ್ನಕೆರೆಯಲ್ಲಿ ಸಂಕ್ರಾಂತಿಯ ಪುಣ್ಯಸ್ನಾನ ಮಾಡಿದರು. ಆಯಾ ರಾಜ್ಯದವರು ತಮ್ಮ ಸಂಪ್ರದಾಯದಂತೆ ಮಡಕೆ, ಪಾತ್ರೆಗಳಲ್ಲಿ ನೈವೇದ್ಯ ತಯಾರಿಸಿ, ಅದನ್ನು ದೇವರಿಗೆ ಸಮರ್ಪಿಸಿದರು.
ಪಲ್ಲಕ್ಕಿ ಮೆರವಣಿಗೆಯ ವೇಳೆ ಉತ್ಸವ ಮೂರ್ತಿಗಳ ಮೇಲೆ ಹರಕೆ ಹೊತ್ತವರು ಕ್ವಿಂಟಲ್‌ಗಟ್ಟಲೆ ಭಂಡಾರ ಎರೆಚಿ, ಬಾಳೆಹಣ್ಣು, ಶೇಂಗಾ ಸಸಿಗಳು, ಜೋಳದ ತೆನೆಯ ದಂಟುಗಳನ್ನು ಎಸೆದರು. ದೇವರ ಸೇವಕರು, ಸುತ್ತಲೂ ನೆರೆದಿದ್ದ ಭಕ್ತ ಗಣ ಭಂಡಾರದಲ್ಲಿ ಮಿಂದೆದ್ದರು. ಗುಡ್ಡದ ಸುತ್ತಲೂ ಭಂಡಾರವೇ ಕಾಣಿಸಿತು. ಬೆಟ್ಟದ ಪಾದಗಟ್ಟೆಯಲ್ಲಿ ದೇವಸ್ಥಾನದ ಪೂಜಾರಿ ಸರಪಳಿ ಹರಿಯುತ್ತಿದ್ದಂತೆ ಏಳು ಕೋಟಿ... ಏಳು ಕೋಟಿಘೆ... ಘೋಷಣೆ ಮೊಳಗಿತು.
ನಿಷೇಧಾಜ್ಞೆ ಉಲ್ಲಂಘಿಸಿ ಪಲ್ಲಕ್ಕಿ ಹಾಗೂ ಉತ್ಸವ ಮೂರ್ತಿಯ ಮೇಲೆ ಕುರಿ ಮರಿ, ಬಣ್ಣ–ಬಣ್ಣದ ಛತ್ರಿಗಳನ್ನು ಹರಕೆ ಹೊತ್ತ ಕೆಲ ಭಕ್ತರು ಎಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.