
ಅವಧಿ ಮುಗಿದ ತಾಲ್ಲೂಕುವಾರು ಗ್ರಾಮ ಪಂಚಾಯಿತಿಗಳು ತಾಲ್ಲೂಕು;ಗ್ರಾ.ಪಂ. ಶಹಾಪುರ;22 ಗುರುಮಠಕಲ್;17 ಹುಣಸಗಿ;18 ವಡಗೇರಾ;17 ಯಾದಗಿರಿ;22 ಸುರಪುರ;21
ಯಾದಗಿರಿ: ಜಿಲ್ಲೆಯಲ್ಲಿರುವ 117 ಗ್ರಾಮ ಪಂಚಾಯಿತಿಗಳ ಸದಸ್ಯರ ಅಧಿಕಾರ ಅವಧಿ ಇದೇ ಫೆಬ್ರುವರಿ 4ಕ್ಕೆ ಮುಗಿದಿರುವ ಹಿನ್ನೆಲೆಯಲ್ಲಿ ಆ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್ ಹಾಗೂ ವಡಗೇರಾ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳು ನೇಮಕವಾಗಿದ್ದಾರೆ. ಆಡಳಿತಾಧಿಕಾರಿ ನೇಮಕವಾದ ಗ್ರಾಮ ಪಂಚಾಯಿತಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಬಿಡುಗಡೆ ಮಾಡಿ, ಆದೇಶವೂ ಹೊರಡಿಸಿದ್ದಾರೆ.
2020ರಲ್ಲಿ ನಡೆದ ಗ್ರಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ ನಡೆದ ಬಳಿಕ 2021ರ ಫೆಬ್ರುವರಿ 5ರಂದು ಮೊದಲ ಸಭೆ ನಡೆಯಿತು. ಆ ಗ್ರಾ.ಪಂ.ಗಳ ಅವಧಿ ಇದೇ ಫೆ.4ಕ್ಕೆ ಮುಕ್ತಯವಾಗಿದ್ದು, ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಅನ್ವಯ ಈಗ ಆಡಳಿತಾಧಿಕಾರಿ ನೇಮಕವಾಗಿದೆ.
ಸರ್ಕಾರದ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನೇ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಕೆಲವರಿಗೆ ಒಂದು ಹಾಗೂ ಎರಡು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಯ ಜವಾಬ್ದಾರಿ ವಹಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆ, ಪಶು ಸಂಗೋಪನಾ ಇಲಾಖೆ, ನೀರಾವರಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಆರ್‌ಡಿಪಿಆರ್ ಸೇರಿ ಇತರೆ ಇಲಾಖೆ ಅಧಿಕಾರಿಗಳಿದ್ದಾರೆ.
ದೋರನಹಳ್ಳಿ ಗ್ರಾ.ಪಂ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿ, ನೋಟಿಫಿಕೇಷನ್ ಸಹ ಹೊರಡಿಸಲಾಗಿದೆ. ಪ.ಪಂ.ಯಾಗಿ ಘೋಷಣೆಯಾಗಿರುವ ವಡಗೇರಾ ನೋಟಿಫಿಕೇಷನ್ ಆಗದೆ ಗ್ರಾಮ ಪಂಚಾಯಿತಿಯಾಗಿಯೇ ಉಳಿದಿದ್ದು, ಆಡಳಿತ ಅಧಿಕಾರಿಯನ್ನೂ ನೇಮಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 8(3) ಹಾಗೂ ಗ್ರಾ.ಪಂ. ಆಯವ್ಯಯ ಮತ್ತು ಲೆಕ್ಕಪತ್ರಗಳು ನಿಯಮ 2006ರ ಅನ್ವಯ ಆಡಳಿತ ಅಧಿಕಾರಿಗಳು ಗ್ರಾ.ಪಂ. ಎಲ್ಲ ಅಧಿಕಾರಿ ಮತ್ತು ಕರ್ತವ್ಯಗಳನ್ನು ಚಲಾಯಿಸತಕ್ಕದ್ದು ಹಾಗೂ ಹಣಕಾಸಿನ ವ್ಯವಹಾರವನ್ನು ಪಿಡಿಒಯೊಂದಿಗೆ ಜಂಟಿಯಾಗಿ ನಿರ್ವಹಿಸತಕ್ಕದು ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ಹೇಳಿದ್ದಾರೆ.
‘ಹಳಿಸಗರ ವಡಗೇರಾಗೆ ಆಕ್ಷೇಪ’
‘ಉಕ್ಕಿನಾಳ ಗ್ರಾಮ ಪಂಚಾಯಿತಿ ಅವಧಿಯು ಆಗಸ್ಟ್ ತಿಂಗಳಿಗೆ ಮುಕ್ತಾಯ ಆಗಲಿದೆ. ಕರಡಕಲ್ ಕಿರಿದಾಳ ಹಾಗೂ ಅನಪುರ ಗ್ರಾ.ಪಂ.ಅವಧಿಯು 2028ಕ್ಕೆ ಕೊನೆಯಾಗಲಿದೆ. ಪಟ್ಟಣ ಪಂಚಾಯಿತಿಯಾಗಿರುವ ಹಳಿಸಗರ ಹಾಗೂ ವಡಗೇರಾ ಗ್ರಾ.ಪಂ.ಗಳಿಗೆ ಆಕ್ಷೇಪ ಬಂದಿದ್ದು ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಶೀಘ್ರವೇ ಈ ಎರಡೂ ಪ.ಪಂ. ನೋಟಿಫಿಕೇಶನ್ ಹೊರಡಿಸಲಾಗುವುದು’ ಎಂದು ಚುನಾವಣೆ ಶಾಖೆ ಅಧಿಕಾರಿ ಸಿದರಾಮ ನಾಚಾವರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.