ಯಾದಗಿರಿ: ನಗರದ 31 ವಾರ್ಡ್‌ಗಳಲ್ಲಿ ‘ಕಸ ಕಂಡರೆ ಫೋಟೋ ಕಳ್ಸಿ’ ಎಂಬ ನೂತನ ಪ್ರಯೋಗಕ್ಕೆ ನಗರಸಭೆ ಮುಂದಾಗಿದ್ದು, ಅದರಂತೆ ಗುಂಡಿ ಕಂಡರೆ ಫೋಟೋ ಕಳುಹಿಸಿ ಎನ್ನುವ ಯೋಜನೆ ಜಾರಿಗೆ ತರುವ ಅವಶ್ಯವಿದೆ.
ನಗರದಲ್ಲಿ ಮುಂಗಾರು ಹಂಗಾಮು ಮಳೆ ಆಗಾಗ ಸುರಿಯುತ್ತಿದ್ದು, ರಸ್ತೆ ಗುಂಡಿಗಳು ಬಿದ್ದಿವೆ.
ಮಳೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಗಳು ಗುಂಡಿ ಬಿದ್ದು, ಪ್ರತಿನಿತ್ಯವೂ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಈ ರಸ್ತೆಗಳಲ್ಲಿ ಗುಂಡಿ ಬಿದ್ದು ಸಂಚಾರಕ್ಕೆ ಸಂಚಕಾರ ತಂದಿವೆ.
ನಗರ ವ್ಯಾಪ್ತಿಯಲ್ಲಿ ನಗರಸಭೆಯ ಸುಮಾರು 10 ಕಿಮೀ ರಸ್ತೆ ಇದೆ. ಆದರೆ, ಯಾವ ರಸ್ತೆಯೂ ಗುಂಡಿಯಿಂದ ಮುಕ್ತವಾಗಿಲ್ಲ. ಎಲ್ಲ ಕಡೆ ಗುಂಡಿ ಬಿದ್ದು, ಅಲ್ಲಲ್ಲಿ ತೇಪೆ ಕಾಮಗಾರಿ ಮಾಡಲಾಗಿದ್ದು, ಈಗ ಮತ್ತಷ್ಟು ಆಳುದ್ದ ಗುಂಡಿಗಳು ಬಿದ್ದಿವೆ.
ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆ?:
ನಗರದ ವಿವಿಧೆಡೆ ಮುಖ್ಯರಸ್ತೆಗಳಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಗುಂಡಿಗಳು ಬಿದ್ದರೂ ಸಂಬಂಧಿಸಿದ ಅಧಿಕಾರಿ ಬರಿ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಇನ್ನೂ ಕೆಲವೆಡೆ ಗುಂಡಿಯನ್ನು ಹಾಗೇಯೇ ಬಿಟ್ಟಿದ್ದಾರೆ. ಶಾಶ್ವತ ಕಾಮಗಾರಿ ಮಾಡಿಲ್ಲ ಎನ್ನುವುದು ಸವಾರರ ದೂರಾಗಿದೆ.
ಮಳೆಯಾದರೆ ಬಡಾವಣೆಯ ಒಳರಸ್ತೆಗಳನ್ನು ಕೇಳುವುದೇ ಬೇಡ ಎನ್ನುವ ಸ್ಥಿತಿ ಇದೆ.
ನಗರದಲ್ಲಿ 31 ವಾರ್ಡ್‌ಗಳಿದ್ದು, ಕೆಲವು ಕಡೆ ಮಾತ್ರ ಸಿಸಿ ರಸ್ತೆ ಇದೆ. ಹಲವು ಕಡೆ ಮಣ್ಣಿನ ರಸ್ತೆಗಳಿವೆ. ಮಣ್ಣಿನ ರಸ್ತೆಗಳು, ಸಿಸಿ ರಸ್ತೆಗಳು ಮಳೆಗೆ ಹದಗೆಟ್ಟಿದ್ದು, ಗುಂಡಿಗಳು ಬಿದ್ದು, ಬೈಕ್, ಆಟೋ ಸವಾರರು ಪರದಾಡುತ್ತಿದ್ದಾರೆ.
ಮಳೆಗಾಲ ಇರುವ ಕಾರಣ ನಗರದಲ್ಲಿ ವಿವಿಧೆಡೆ ರಸ್ತೆ ಗುಂಡಿಗಳು ಬಿದ್ದಿವೆ. ಹಂತ ಹಂತವಾಗಿ ಮುಚ್ಚಿಸಲಾಗುವುದು. ಸದ್ಯಕ್ಕೆ ಅನುದಾನದ ಕೊರತೆ ಇದೆಲಲಿತಾ ಅನಪುರ ನಗರಸಭೆ ಅಧ್ಯಕ್ಷೆ ಯಾದಗಿರಿ
ನಗರಸಭೆಯಲ್ಲಿ ಅನುದಾನ ಕೊರತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದು ಅನುದಾನದ ಕೊರತೆ ಎದುರಾಗಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ. ‘ಕಳೆದ ವರ್ಷದಿಂದ ನಗರಸಭೆಯಲ್ಲಿ ಬಿಜೆಪಿಯಿಂದ ಆಡಳಿತ ನಡೆಸುತ್ತಿದ್ದೇವೆ. ಅನುದಾನದ ಕೊರತೆ ಇದೆ. ಸ್ಥಳೀಯವಾಗಿ ಸಂಗ್ರಹವಾಗುವ ಕರದಿಂದಲೇ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇವೆ. ಅದರಲ್ಲೂ ಬಿಜೆಪಿ ಆಡಳಿತ ಇರುವ ಕಾರಣ ಅನುದಾನಕ್ಕೂ ಸಮಸ್ಯೆಯಾಗಿದೆ’ ಎನ್ನುತ್ತಾರೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ. ‘ಈಗಾಗಲೇ ನಗರಸಭೆಯಿಂದ ವಿನೂನತ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ಅದಕ್ಕೆ ಅನುದಾನ ಹೊಂದಿಸಲಾಗುತ್ತಿದೆ. ಆದರೆ ಈಗ ಹೆಚ್ಚುವರಿ ಅನುದಾನ ಇಲ್ಲದ ಕಾರಣ ಸರ್ಕಾರದತ್ತ ಮುಖ ಮಾಡುವಂತಾಗಿದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.