ADVERTISEMENT

ಯಾದಗಿರಿ | ಉನ್ನತ ಗುರಿ ಸಾಧನೆಗೆ ಬೇಕು ಸಮಯ ನಿರ್ವಹಣೆ: ಎಸ್‌ಪಿ ಪೃಥ್ವಿಕ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:39 IST
Last Updated 16 ಫೆಬ್ರುವರಿ 2026, 4:39 IST
ಯಾದಗಿರಿಯಲ್ಲಿ ಭಾನುವಾರ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಗಣ್ಯರು ಸಸಿಗೆ ನೀರು ಹಾಕಿ ಉದ್ಘಾಟಿಸಿದರು
ಯಾದಗಿರಿಯಲ್ಲಿ ಭಾನುವಾರ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಗಣ್ಯರು ಸಸಿಗೆ ನೀರು ಹಾಕಿ ಉದ್ಘಾಟಿಸಿದರು   

ಯಾದಗಿರಿ: ‘ಸಾಮಾಜಿಕ ಜಾಲತಾಣಗಳಂತಹ ಅಡ್ಡಿಗಳ ನಡುವೆ ಸಮಯದ ಸದ್ಬಳಕೆಯೊಂದಿಗೆ ಉನ್ನತ ಗುರಿ ಇರಿಸಿಕೊಂಡು ಅಧ್ಯಯನ ಮಾಡಿದರೆ ಅಂದುಕೊಂಡ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣ ಪಡೆಯಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.

ನಗರದ ಖಾಸಗಿ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕಲ್ಯಾಣ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಕ್ಯಾಲೆಂಡರ್ ಬಿಡುಗಡೆ ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್ ಬಳಿಕ ಆನ್‌ಲೈನ್ ತರಗತಿಗಳು ಶುರುವಾಗಿ ಇಂಟರ್‌ನೆಟ್ ಬಳಕೆ ಹೆಚ್ಚಾಗಿದೆ. ಜ್ಞಾನ ಸಂಪಾದನಗೆ ಮಿತವಾಗಿ ಬಳಸಬೇಕಾದ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಸ್ವಲ್ಪವೇ ಹೆಚ್ಚಿನ ಸಮಯ ಕಳೆದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಗಳು ಮುಂದಿನ ಶೈಕ್ಷಣಿಕ ಭವಿಷ್ಯವನ್ನು ನಿರ್ಧರಿಸುತ್ತವೆ. ಈ ಹಂತದಲ್ಲಿ ಸದಾ ಜಾಗೃಕರಾಗಿ ಅಧ್ಯಯನ ಮಾಡಬೇಕು. ಉತ್ತಮ ಅಂಕಗಳು ಗಳಿಸಿದರೆ ಉತ್ತಮ ಕಾಲೇಜು, ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಸಿಗುತ್ತದೆ’ ಎಂದರು.

‘ಪಿಯುಸಿ ಮತ್ತು ಸಿಇಟಿ ಅಂಕಗಳ ಮೇಲೆ ಎಂಜಿನಿಯರ್ ಮತ್ತು ಮೆಡಿಕಲ್‌ ಸೀಟು ಅವಲಂಭಿತವಾಗಿವೆ. ಹೀಗಾಗಿ, ಆರಂಭದಲ್ಲಿಯೇ ಮೆಡಿಕಲ್, ಎಂಜಿನಿಯರ್‌ ಸೀಟುಗಾಗಿ ಓದಬೇಕು. ಒಂದು ವೇಳೆ ಆ ಕೋರ್ಸ್‌ಗಳು ಸಿಗದೆ ಇದ್ದಾಗ ಬಿಎಸ್‌ಸಿ, ಅಗ್ರಿಕಲ್ಚರ್‌ನಂತಹ ಕೋರ್ಸ್‌ಗಳನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಮಾತನಾಡಿ, ‘ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋಚಿಂಗ್ ಕೇಂದ್ರ, ಕಾಲೇಜುಗಳು ಸಹ ಇಲ್ಲ. ವೃತ್ತಿ ಮಾರ್ಗದರ್ಶನಕ್ಕೆ ಇಂತಹ ಕಾರ್ಯಕ್ರಮಗಳು ಅವಶ್ಯವಿದೆ’ ಎಂದರು.

'ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 100 ಪರ್ಸೆಂಟ್‌ ನಿರೀಕ್ಷೆ ಇರಿಸಿಕೊಂಡಿದ್ದೇವೆ. ಪರೀಕ್ಷೆ ಶುರುವಾಗಲು ಒಂದು ತಿಂಗಳಿದ್ದು, ನಿತ್ಯ  ಅಧ್ಯಯನ ಮಾಡಿದರೆ ಉತ್ತಮ ಅಂಕಗಳು ಗಳಿಸಬಹುದು’ ಎಂದು ಹೇಳಿದರು.

ಜಿಲ್ಲಾ ಸರ್ಜನ್ ಡಾ.ಆಫ್ರಿನ್ ರಿಜ್ವಾನ್ ಮಾತನಾಡಿ, ‘ಶಾಲಾ ದಿನಗಳಲ್ಲಿ ಕಲಿಕೆಯನ್ನೇ ಮುಖ್ಯ ಗುರಿಯಾಗಿ ಇರಿಸಿಕೊಂಡು ಅಧ್ಯಯನ ಮಾಡಿದರೆ ಸಾಧಕರಾಗಿ ಹೊರಹೊಮ್ಮಲು ಸಾಧ್ಯ’ ಎಂದರು.

ಸಂಘದ ಅಧ್ಯಕ್ಷ ಮೊಹಮ್ಮದ್ ಅಸಾದ್, ಉಪನ್ಯಾಸಕಿ ಕನೀಜ್ ಫಾತಿಮಾ ಮಾತನಾಡಿದರು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ, ಪದಾಧಿಕಾರಿಗಳಾದ ಅಹಮದ್ ಖಾನ್, ಸೈಯದ್ ಅಲಿ, ಮಾಜಿ ಪದಾಧಿಕಾರಿ ವಾಹಿದ್ ಮಿಯ್ಯಾ ಸೇರಿ ಇತರರು ಉಪಸ್ಥಿತರಿದ್ದರು. ಪಿಡಿಒ ಮೌಲಾಲಿ ಐಕೂರ ನಿರೂಪಿಸಿದರು.

‘ಓದು ಜೀವನದ ಮೊದಲ ಗುರಿ’

‘ನಿರಂತರ ಓದು ಜ್ಞಾನ ಸಂಪಾದನೆ ಜೀವನದ ಗುರಿಯಾದರೆ ಪರೀಕ್ಷೆಗಳು ಸುಲಿದ ಬಾಳೆಹಣ್ಣನಂತೆ ಆಗುತ್ತವೆ’ ಎಂದು ಮುಖ್ಯ ಭಾಷಣಕಾರ ಸೀಗ್ಮಾ ಸಂಸ್ಥೆ ಸಂಸ್ಥಾಪಕ‌ ಸಿಇಒ ಅಮೀನ್ ಮುದಸಾರ್ ಹೇಳಿದರು.  ‘ಆತ್ಮವಿಶ್ವಾಸ ದೃಢತೆ ಮತ್ತು ಸಮಯ ಪಾಲನೆಯೊಂದಿಗೆ ಅಭ್ಯಾಸ ಮಾಡಿದರೆ ಜೀವನದ ಗುರಿ‌ಯನ್ನು ಸುಲಲಿತವಾಗಿ ಮುಟ್ಟಬಹುದು. ಸಾಕಷ್ಟು ತಯಾರಿ ಮಾಡಿಕೊಂಡು ಶಾಂತಚಿತ್ತದಿಂದ ಯಾವುದೇ ಭಯವಿಲ್ಲದೆ ಪರೀಕ್ಷೆಗಳನ್ನು ಎದುರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.