
ಸುರಪುರ: ವೇಗವಾಗಿ ಬೆಳೆಯುತ್ತಿರುವ ಸುರಪುರ ನಗರದಲ್ಲಿ ಟ್ರಾಫಿಕ್ ಕೂಡಾ ದಟ್ಟವಾಗುತ್ತಿದೆ. ಇದರ ಜೊತೆಗೆ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಬೆಳೆಯುತ್ತಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
ನಗರದ ಜನನಿಬಿಡ ಪ್ರದೇಶಗಳಾದ ಬಸ್‍ನಿಲ್ದಾಣ, ಗಾಂಧಿವೃತ್ತ, ಮುಖ್ಯ ಮಾರುಕಟ್ಟೆ, ವಲ್ಲಭಭಾಯಿ ವೃತ್ತ, ವೇಣುಗೋಪಾಲಸ್ವಾಮಿ ರಸ್ತೆ, ಹನುಮಾನ ಟಾಕೀಜ್ ರಸ್ತೆ, ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತ, ತಿಮ್ಮಾಪುರ ಬಸ್‍ನಿಲ್ದಾಣ, ಕುಂಬಾರಪೇಟ ಇತರೆಡೆ ರಸ್ತೆ ಬದಿ ವ್ಯಾಪಾರ ನಡೆಯುತ್ತಿದೆ.
ಹೂವು, ಹಣ್ಣು, ತರಕಾರಿ, ತೆಂಗಿನಕಾಯಿ, ಸಿದ್ಧ ಉಡುಪು, ಹಾಂಡೆಭಾಂಡೆ, ಭಜ್ಜಿ, ಪಾನಿಪೂರಿ ಇತರ ವ್ಯಾಪಾರಿಗಳು ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡುತ್ತಾರೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಆಟೊಗಳ ಸಂಖ್ಯೆಯೂ ಅಧಿಕವಾಗಿದ್ದು ಎಲ್ಲೆಂದರಲ್ಲಿ ನಿಲ್ಲುತ್ತವೆ. ಪ್ರತಿ ಅರ್ಧ ಗಂಟೆಗೆ ಒಮ್ಮೆ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ. ಜೊತೆಗೆ ಬಿಡಾಡಿ ದನಗಳ ಹಾವಳಿ ಬೇರೆ.
ಸ್ವನಿಧಿ ಯೋಜನೆಯಡಿ ಒಟ್ಟು 1,073 ಬೀದಿ ಬದಿ ವ್ಯಾಪಾರಿಗಳು ನಗರಸಭೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಲವರು ಸಾಲಸೌಲಭ್ಯ ಪಡೆದುಕೊಂಡಿದ್ದಾರೆ. ನಗರದಲ್ಲಿ ಬೀದಿ ಬದಿ ವ್ಯಾಪಾರ ಭರ್ಜರಿಯಾಗಿಯೇ ಇದೆ. ಆದರೆ ಜನರಿಗೆ ತೊಂದರೆ ತಪ್ಪುತ್ತಿಲ್ಲ. ತರಕಾರಿ ಮಾರುಕಟ್ಟೆಯಲ್ಲಿ ಹೊಸ ಮಳಿಗೆಗಳನ್ನು ನಿರ್ಮಿಸಿ ತರಕಾರಿ ವ್ಯಾಪಾರಿಗಳಿಗೆ ಬಾಡಿಗೆ ಕೊಡಲಾಗಿದೆ. ಪ್ರವೇಶದ್ವಾರಕ್ಕೆ ದೂರದಲ್ಲಿರುವ ಅಂಗಡಿಗಳಿಗೆ ಗ್ರಾಹಕರು ಬರುತ್ತಿಲ್ಲ ಎಂದು ಆ ಅಂಗಡಿಗಳ ವ್ಯಾಪಾರಿಗಳು ಬೀದಿ ಬದಿಗೆ ಬಂದಿದ್ದಾರೆ.
ಹಂದಿ, ನಾಯಿ, ದನಗಳು ಆಗಾಗ ತರಕಾರಿ, ಹಣ್ಣುಗಳಿಗೆ ಬಾಯಿ ಹಾಕುತ್ತವೆ. ಆವುಗಳನ್ನು ಓಡಿಸುತ್ತಾ ವ್ಯಾಪಾರ ಮಾಡುತ್ತಾರೆ. ಗ್ರಾಹಕರಿಗೆ ಖರೀದಿ ಮಾಡಲು ತೊಂದರೆಯಾಗುತ್ತಿದೆ. ವರ್ತಕರು ತಮ್ಮ ಜಾಗವೆಂದು ಕಾಯಂ ಮಾಡಿಕೊಂಡಿದ್ದಾರೆ. ಬೇರೆಯವರು ಆ ಜಾಗದಲ್ಲಿ ಕುಳಿತರೆ ಜಗಳ ಆರಂಭವಾಗುತ್ತದೆ.
ಬಸ್ ನಿಲ್ದಾಣದ ಪ್ರವೇಶದ್ವಾರದಲ್ಲಿ, ರಸ್ತೆಯ ಎರಡೂ ಬದಿ ಬೀದಿಬದಿ ವ್ಯಾಪಾರಿಗಳು ತಮ್ಮ ಜೀವಕ್ಕೆ ಅಂಜದೆ ವ್ಯಾಪಾರ ಮಾಡುತ್ತಾರೆ. ಬಸ್ ಸ್ವಲ್ಪ ಆಯ ತಪ್ಪಿದರೂ ಅನಾಹುತ ಅಗುವ ಸಾಧ್ಯತೆ ಇದೆ. ಬಸ್ ಚಾಲಕರು ಹಿಡಿಶಾಪ ಹಾಕುತ್ತಾ ಚಾಲನೆ ಮಾಡುವಂತಾಗಿದೆ.
ಕಳೆದ ಹಲವಾರು ವರ್ಷಗಳಿಂದ ನಗರಸಭೆ ಮಾರುಕಟ್ಟೆ ಕರ ಲೀಲಾವು ಮಾಡುತ್ತಿಲ್ಲ. ಇದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಕರ ಕೊಡುವ ಅವಶ್ಯಕತೆ ಬೀಳುತ್ತಿಲ್ಲ. ಕೆಲವರು ಅಂಗಡಿಗಳು ಮುಂದೆಯೇ ವ್ಯಾಪಾರ ಮಾಡುತ್ತಾರೆ. ಇದರಿಂದ ಅಂಗಡಿಗಳ ಮಾಲೀಕರು ಕಿರಿಕಿರಿ ಅನುಭವಿಸುವಂತಾಗಿದೆ.
ಯಾರು ಏನಂತಾರೆ?
ಟ್ರಾಫಿಕ್ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದೆ. ನಗರಸಭೆ ಬೀದಿ ಬದಿ ವ್ಯಾಪಾರ ತೆರವುಗೊಳಿಸಿದರೆ ಬಂದೋಬಸ್ತ್ ನೀಡುತ್ತೇವೆ
–ಕೃಷ್ಣ ಸುಬೇದಾರ್ ಪಿಎಸ್‍ಐ
ಆಟೊ ನಿಲ್ದಾಣ ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ನಿಲ್ಲಿಸುವಂತಾಗಿದೆ. ಇದೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣವಾಗಿದೆ ವೆಂಕಟೇಶನಾಯಕ ಭೈರಿಮರಡಿ ಕರವೇ ಅಧ್ಯಕ್ಷ ತಮಗೆ ಮಂಜೂರಾದ ಮಳಿಗೆಗಳಲ್ಲಿ ವ್ಯಾಪಾರ ಮಾಡುವಂತೆ ತರಕಾರಿ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗುವುದು
–ವೆಂಕಟೇಶ ಕಲಬುರಗಿ ಕಂದಾಯ ಅಧಿಕಾರಿ
ಟ್ರಾಫಿಕ್ ನಿಯಂತ್ರಿಸಲು ಇಲ್ಲಿನ ಪೊಲೀಸರಿಂದ ಸಾಧ್ಯವಾಗುತ್ತಿಲ್ಲ. ಇಲ್ಲಿ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಬೇಕು
–ರಾಜಾ ಪಿಡ್ಡನಾಯಕ ಪ್ಯಾಪ್ಲಿ ವನವಾಸಿ ಕಲ್ಯಾಣ ಜಿಲ್ಲಾಧ್ಯಕ್ಷ
ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆಯಡಿಯಲ್ಲಿ ಬಹಳಷ್ಟು ನೆರವು ನೀಡಲಾಗಿದೆ. ಅವರು ಜನರಿಗೆ ತೊಂದರೆ ಆಗದ ಹಾಗೇ ವ್ಯಾಪಾರ ಮಾಡಬೇಕು ತಿಪ್ಪಮ್ಮ ಸಮುದಾಯ ಸಂಘಟಕಿ ನಗರಸಭೆ ಪ್ರತಿ ಅರ್ಧ ಗಂಟೆಗೊಮ್ಮೆ ಟ್ರಾಫಿಕ್ ಜಾಮ್ ಆಗುತ್ತಿರುವುದರಿಂದ ವಕೀಲರು ವಿದ್ಯಾರ್ಥಿಗಳು ನೌಕರರು ಇತರರಿಗೆ ಸರಿಯಾದ ಸಮಯಕ್ಕೆ ತಮ್ಮ ಸ್ಥಳಕ್ಕೆ ತಲುಪಲು ತೊಂದರೆ ಆಗುತ್ತಿದೆ
–ಆದಪ್ಪ ಹೊಸಮನಿ, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.