ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ
ಯಾದಗಿರಿ: ಹವಾಮಾನ ವೈಪರೀತ್ಯ, ವಾತಾವರಣದಲ್ಲಿ ಕಾಣಿಸಿಕೊಂಡಿರುವ ನಿರಂತರ ಬದಲಾವಣೆಯಿಂದಾಗಿ ಚಿಕ್ಕ ಮಕ್ಕಳು ವೈರಾಣು ಜ್ವರದಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೀತ ಗಾಳಿ, ದೂಳು, ಆಗಾಗ ಬರುವ ಮಳೆಯಿಂದಾಗಿಯೂ ಆಯಾಸಗೊಳ್ಳುತ್ತಿದ್ದಾರೆ.
ಬೆಳಿಗ್ಗೆ ತಂಪಾದ ವಾತಾವರಣ ಇದ್ದರೆ, ಮಧ್ಯಾಹ್ನ ನೆತ್ತಿ ಸುಡುವ ಬಿಸಿಲು ಹಾಗೂ ಸಂಜೆಯಾದರೆ ಮಳೆಯೊಂದಿಗೆ ತಣ್ಣನೆ ಗಾಳಿ ಬೀಸುತ್ತದೆ. ಇದರಿಂದಾಗಿ ದೇಹದ ಉಷ್ಣಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಬದಲಾಗುತ್ತಿರುವ ವಾತಾವರಣಕ್ಕೆ ಮಕ್ಕಳಿಗೆ ಹೊಂದಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ವೈರಲ್ ಜ್ವರ ಪೀಡಿತರಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗುತ್ತಿದೆ. ವಯಸ್ಕರು ಸಹ ಇದರಿಂದ ಹೊರತಾಗಿಲ್ಲ.
ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಾಗಿದ್ದರಿಂದ ಸರ್ಕಾರಿ ಅಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಕೊಠಡಿಗಳ ಮುಂದೆ ಮಕ್ಕಳೊಂದಿಗೆ ಪೋಷಕರು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಕೆಲವರು ಜ್ವರ ಪೀಡಿತ ಮಕ್ಕಳನ್ನು ವಾರ ಗಟ್ಟಲೆ ಶಾಲೆಗೆ ಕಳುಹಿಸದೆ ಮನೆಯಲ್ಲೇ ಇರಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಗ್ರಾಮೀಣ ಭಾಗದಿಂದ ನೂರಾರು ಪೋಷಕರು ತಮ್ಮ ಮಕ್ಕಳನ್ನು ಕರೆ ತರುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಒಪಿಡಿ ರಸೀದಿ ಪಡೆದು ಮಕ್ಕಳ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವೈದ್ಯರು ಸಹ ತಮ್ಮ ಒಪಿಡಿ ಸಂಖ್ಯೆಗಳನ್ನು ಹೆಚ್ಚಿಸಿಕೊಂಡು ಚಿಕಿತ್ಸೆ ಕೊಡುವಲ್ಲಿ ನಿರತವಾಗಿದ್ದಾರೆ. ಗಂಭೀರವಾದ ಜ್ವರ ಕಂಡುಬಂದಲ್ಲಿ ರಕ್ತ ತಪಾಸಣೆಗೆ ಶಿಫಾರಸು ಮಾಡುತ್ತಿದ್ದಾರೆ.
‘ವೈರಲ್ ಜ್ವರ ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಬರುತ್ತದೆ. ಇಂತಹಹುದ್ದೇ ಕಾರಣಕ್ಕೆ ಬರುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಸಾಮಾನ್ಯವಾಗಿ ಮಕ್ಕಳಲ್ಲಿನ ವೈರಾಣು ಜ್ವರವು 6ರಿಂದ 7 ದಿನಗಳ ಬಳಿಕ ವಾಸಿ ಆಗುತ್ತದೆ. ಆದರೆ, ಈ ಬಾರಿ ಬಂದಿರುವ ವೈರಾಣು ಜ್ವರ ವಾಸಿಯಾಗಲು 10ರಿಂದ 12 ದಿನಗಳು ತಗುಲುತ್ತಿದೆ. ಇದರಿಂದ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಗಂಭೀರವಾದ ಸೋಂಕು ಇಲ್ಲ. ಪೋಷಕರೂ ಆತಂಕಪಡುವ ಅಗತ್ಯ ಇಲ್ಲ’ ಎನ್ನುತ್ತಾರೆ ಮಕ್ಕಳ ತಜ್ಞರು.
ವೈರಾಣು ಜ್ವರ ಬಂದ ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲಿ ಇರಿಸಿಕೊಂಡು ಚಿಕಿತ್ಸೆ ಕೊಡಿಸಬೇಕು. ಶಾಲೆಗೆ ಕಳುಹಿಸಿದರೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಜ್ವರ ಪೀಡಿತ ಮಕ್ಕಳಿಗೆ ಮಾಸ್ಕ್ ಹಾಕಬೇಕು. ಮಾಸ್ಕ್ ಧರಿಸಲು ಆಗದವರು ಕರ್ಚೀಫ್ ಕಟ್ಟಿಕೊಂಡು ಜ್ವರ ಹರಡುವುದನ್ನು ನಿಯಂತ್ರಿಸಬಹುದು’ ಎಂಬುದು ಪೋಷಕರಿಗೆ ವೈದ್ಯರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.