ADVERTISEMENT

ಬೆಳೆ ಪರಿಹಾರ | ನಗದು ವಿತರಣೆ ಚುರುಕುಗೊಳಿಸಿ: ಸಿಇಒ ಲವೀಶ್ ಒರಡಿಯಾ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 7:10 IST
Last Updated 13 ಡಿಸೆಂಬರ್ 2025, 7:10 IST
ಯಾದಗಿರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಿಮ್ಮ ಹಣ ನಿಮ್ಮ ಹಕ್ಕು ಕಾರ್ಯಕ್ರಮದ ಪೋಸ್ಟರ್‌ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಬಿಡುಗಡೆ ಮಾಡಿದರು 
ಯಾದಗಿರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಿಮ್ಮ ಹಣ ನಿಮ್ಮ ಹಕ್ಕು ಕಾರ್ಯಕ್ರಮದ ಪೋಸ್ಟರ್‌ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಬಿಡುಗಡೆ ಮಾಡಿದರು    

ಯಾದಗಿರಿ: ‘ಬೆಳೆ ಕಳೆದುಕೊಂಡ ರೈತರ ಖಾತೆಗಳಿಗೆ ಸರ್ಕಾರದಿಂದ ಬೆಳೆ ಪರಿಹಾರಧನ ಜಮೆಯಾಗಿದ್ದು, ಎಲ್ಲ ಬ್ಯಾಂಕ್‌ಗಳಲ್ಲಿ ನಗದು ವಿತರಣೆಯನ್ನು ತ್ವರಿತಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಹಾಗೂ ಲೀಡ್ ಬ್ಯಾಂಕ್ ಆಯೋಜಿಸಿದ್ದ ಹಣಕಾಸು ವಲಯದಲ್ಲಿ ಕ್ಲೇಮು ಪಡೆಯದ ಸ್ವತ್ತುಗಳ ದಕ್ಷ ಮತ್ತು ತ್ವರಿತ ಇತ್ಯರ್ಥಕ್ಕಾಗಿ ಅಭಿಯಾನದ ಅಂಗವಾಗಿ ‘ನಿಮ್ಮ ಹಣ, ನಿಮ್ಮ ಹಕ್ಕು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳೆಹಾನಿ ಪರಿಹಾರ ಬಿಡುಗಡೆಯಾಗಿದ್ದು, ಬ್ಯಾಂಕ್‌ಗಳಿಗೆ ತೆರಳುತ್ತಿರುವ ಗ್ರಾಹಕರಿಗೆ ನಗದು ಸಿಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಪ್ರತಿಯೊಂದು ಬ್ಯಾಂಕ್‌ ಶಾಖೆಗಳಲ್ಲಿ ನಗದು ಕ್ಯಾಶ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳಬೇಕು. ಬ್ಯಾಂಕ್‌ಗೆ ಬೇಗನೆ ಹಣ ವಿತ್ ಡ್ರಾ ಮಾಡಿಕೊಟ್ಟರೆ ಜನರಿಗೆ ಅನುಕೂಲ ಆಗುತ್ತದೆ’ ಎಂದರು.

ADVERTISEMENT

‘ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸಲು ಶಿಬಿರವು ಪ್ರಯೋಜನ ಆಗಲಿದೆ. ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಅನ್ವಯ ಎಲ್ಲಾ ಬ್ಯಾಂಕ್, ವಿಮಾ ಮತ್ತು ಇತರೆ ಇಲಾಖಾ ಶಾಖೆಗಳಲ್ಲಿ ಡಿಸೆಂಬರ್ 31ರವರೆಗೆ ಈ ಶಿಬಿರ ನಡೆಯಲಿದೆ’ ಎಂದು ಹೇಳಿದರು.

‘ದೀರ್ಘಕಾಲದವರೆಗೆ ಹಕ್ಕು ಪಡೆಯದ ಹಣಕಾಸಿನ ಸ್ವತ್ತುಗಳನ್ನು ಕಾನೂನುಬದ್ಧ ವಾರಸುದಾರರು ಮರುಪಡೆಯಬಹುದು. ಬ್ಯಾಂಕ್‌ನಲ್ಲಿ ಹತ್ತು ವರ್ಷ ನಿಷ್ಕ್ರಿಯ ಖಾತೆಗಳಲ್ಲಿರುವ ಹಣ ಮತ್ತು ಹತ್ತು ವರ್ಷಗಳಿಗಿಂತ ಹಳೆಯದಾದ ಕ್ಲೈಮ್ ಮಾಡದ ಠೇವಣಿಗಳನ್ನು ಗ್ರಾಹಕರಿಗೆ ಹಿಂದುರುಗಿಸಲಾಗುತ್ತಿದೆ’ ಎಂದರು.

‘ಬ್ಯಾಂಕಿನ ಯುಡಿಜಿಎಎಂ (https://udgam.rbi.org.in) ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳು ಬ್ಯಾಂಕ್‌ಗಳಿಗೆ ಭೇಟಿ ನೀಡಿ ಕ್ಲೈಮ್ ಮಾಡಿಕೊಳ್ಳಬಹುದು. ಈ ಅಭಿಯಾನದಲ್ಲಿ ಸಾರ್ವಜನಿಕರು ಪಾಲ್ಗೊಂಡು ತಮ್ಮ ಸಂಬಂಧಿತ ಗುರುತಿನ ದಾಖಲೆಗಳು, ಅರ್ಹತಾ ಪತ್ರಗಳೂಂದಿಗೆ ಬ್ಯಾಂಕ್‌ಗಳ ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದು ಹೇಳಿದರು.‌

ಮೃತ ವಾರಸುದಾರರ ಕುಟುಂಬದ ಸದಸ್ಯರಾದ ದ್ಯಾವಮ್ಮ, ಮಾದೇವಪ್ಪ ಫಲಾನುಭವಿಗಳಿಗೆ ಡಿಇಎಎಫ್ ಬ್ಯಾಂಕ್ ಖಾತೆಯಲ್ಲಿ ಉಳಿದಿದ ಬಾಕಿ ಹಣವನ್ನು ಹಸ್ತಾಂತರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಆರ್‌ಬಿಐ ವ್ಯವಸ್ಥಾಪಕ ಸೂರಜ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುನಿಲ್ ಬತ್ತಿನಿ, ಪ್ರಮುಖರಾದ ಜಿ.ಎಸ್ ಕೂಡ್ಲಿಗಿ, ದೀಪಕ್, ಜ್ಯೋತಿ, ಕುಮಾರ್ ಸ್ವಾಮಿ, ಅಮೀರ್ ಪಟೇಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.