ADVERTISEMENT

ದುಬಾರಿ ವೈದ್ಯಕೀಯ ಸೇವೆ | ಬಡವರಿಗೆ ಸಂಕಷ್ಟ:ನ್ಯಾಯಾಧೀಶ ಮರುಳಸಿದ್ದಾರಾಧ್ಯ ಕಳವಳ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 7:08 IST
Last Updated 13 ಡಿಸೆಂಬರ್ 2025, 7:08 IST
ಯಾದಗಿರಿಯಲ್ಲಿ ಶುಕ್ರವಾರ ನಡೆದ ಸಾರ್ವತ್ರಿಕಾ ಆರೋಗ್ಯ ರಕ್ಷಣಾ ದಿನದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ  ಮರುಳಸಿದ್ದಾರಾಧ್ಯ ಎಚ್.ಜೆ., ಮರಿಯಪ್ಪ, ಡಿಎಚ್‌ಒ ಡಾ. ಮಹೇಶ ಬಿರಾದಾರ ಸೇರಿ ಇುತತರು ಹಾಜರಿದ್ದರು
ಯಾದಗಿರಿಯಲ್ಲಿ ಶುಕ್ರವಾರ ನಡೆದ ಸಾರ್ವತ್ರಿಕಾ ಆರೋಗ್ಯ ರಕ್ಷಣಾ ದಿನದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ  ಮರುಳಸಿದ್ದಾರಾಧ್ಯ ಎಚ್.ಜೆ., ಮರಿಯಪ್ಪ, ಡಿಎಚ್‌ಒ ಡಾ. ಮಹೇಶ ಬಿರಾದಾರ ಸೇರಿ ಇುತತರು ಹಾಜರಿದ್ದರು   

ಯಾದಗಿರಿ: ‘ಆರೋಗ್ಯ ಸೇವೆಯು ದುಬಾರಿಯಾದರೆ ಬಡವರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಾರೆ. ಬಡವರು ಆದಾಯದ ಹೆಚ್ಚಿನ ಪಾಲು ತಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಖರ್ಚು ಮಾಡಿದರೆ ಜೀವನಶೈಲಿಯೂ ಕುಗ್ಗುತ್ತದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಾರ್ವತ್ರಿಕಾ ಆರೋಗ್ಯ ರಕ್ಷಣಾ ದಿನದ ಜಾಗೃತಿ ಜಾಥಾ, ಆರೋಗ್ಯದ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬಡವರನ್ನು ಸಾಲದಲ್ಲಿ ಇರಿಸುವುದರ ಮೂಲಕ ಜೀವನಪೂರ್ತಿ ಕೊಡಿಟ್ಟ ಹಣ ಮತ್ತು ಮಾಡಿಟ್ಟ ಅಲ್ಪಸ್ವಲ್ಪ ಸ್ವತ್ತುಗಳನ್ನು ಸಹ ಮಾರಬೇಕಾಗುತ್ತದೆ. ಇದು ಇಡೀ ಕಟುಂಬ ಸದಸ್ಯರ ಜೀವನವನ್ನು ಸಂಕಷ್ಟಕ್ಕೆ ದೂಡುತ್ತದೆ. ಜೊತೆಗೆ ದೇಶದ ಪ್ರಗತಿಗೂ ಅಡ್ಡಿಯಾಗುತ್ತದೆ’ ಎಂದರು.

ADVERTISEMENT

‘ಆರೋಗ್ಯದ ಮೇಲೆ ಮಾಡುವ ದುಬಾರಿ ಖರ್ಚನ್ನು ದುಂದುವೆಚ್ಚ ಎನ್ನುತ್ತಾರೆ. ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಅಳತೆ ಮಾಡದ ಹೊರತು ಪ್ರಗತಿಯನ್ನು ತಿಳಿಯಲು ಸಾಧ್ಯವಿಲ್ಲ. ಆರೋಗ್ಯ ಮಾನವನ ಹಕ್ಕು. ಯಾರೊಬ್ಬರೂ ಅವಶ್ಯಕ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗದಕ್ಕೆ ಕಾಯಿಲೆಗೆ ಒಳಗಾಗಬಾರದು, ಸಾಯಲೂ ಬಾರದು’ ಎಂದು ಹೇಳಿದರು.

ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಅವರು ಮಾತನಾಡಿ, ‘ವಿಶ್ವ ಆರೋಗ್ಯ ಸಂಸ್ಥೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಎಂದರೆ ಉಚಿತ ಆರೋಗ್ಯ ಸೇವೆ ಎಂದು ಭಾವಿಸಬಾರದು. ಯಾವುದೇ ದೇಶವು ಉಚಿತ ಆರೋಗ್ಯ ಸೇವೆಯನ್ನು ನಿರಂತರವಾಗಿ ನೀಡಲು ಸಾಧ್ಯವಿಲ್ಲ’ ಎಂದರು.

‘ಸಾರ್ವತ್ರಿಕ ಆರೋಗ್ಯ ರಕ್ಷಣೆಯು ವಿಶಾಲವಾಗಿದ್ದು, ಅದು ಆರ್ಥಿಕ ತೊಂದರೆಗಳ ರಕ್ಷಣೆ, ಅಗತ್ಯ ಆರೋಗ್ಯ ಸೇವೆಗಳ ಲಭ್ಯತೆ, ಸುರಕ್ಷತೆ, ಪರಿಣಾಮಕಾರಿ ಮತ್ತು ಗುಣಮಟ್ಟದ ಸೇವೆಗಳು ಹಾಗೂ ಕೈಗೆಟುಕುವ ದರದಲ್ಲಿ ಅಗತ್ಯ ಔಷಧಗಳು, ಲಸಿಕೆಗಳು ಹಾಗೂ ರೋಗಗಳನ್ನು ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ’ ಎಂದು ಹೇಳಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸಂಜೀವ್ ಕುಮಾರ ರಾಯಚೂರಕರ್ ಮಾತನಾಡಿ, ‘ಆರೋಗ್ಯದ ಬಗ್ಗೆ ಕಾಳಜಿ, ಜಾಗೃತಿ ಮೂಡಿಸಲು ಪ್ರತಿವರ್ಷ ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತದೆ. ‘ಕೈಗೆಟುಕಲಾಗದ ಆರೋಗ್ಯ ಚಿಕಿತ್ಸೆ ವೆಚ್ಚದಿಂದ ನಮಗೆ ಬೇಸರ’ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷ ಆಚರಿಸಲಾಗುತ್ತಿದೆ’ ಎಂದರು.

ಇದೇ ವೇಳೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

ಡಿಎಚ್‌ಒ ಡಾ.ಮಹೇಶ ಬಿರಾದಾರ, ಜಿಲ್ಲಾ ಆರ್‌ಸಿಚ್ಒ ಅಧಿಕಾರಿ ಡಾ.ಮಲ್ಲಪ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಪದ್ಮಾನಂದ ಗಾಯಕ್ವಾಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಎಸ್.ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೊತಿ ಕಟ್ಟಿಮನಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹನುಮಂತ ರೆಡ್ಡಿ, ಡಾ.ವಿನುತ, ಡಾ.ಯಶವಂತ, ಡಾ.ಜ್ಞಾನೇಶ್ವರ, ಬಾಗಣ್ಣ, ಶಾಂತಿಲಾಲ್, ಸಾಹೇಬಗೌಡ ಉಪಸ್ಥಿತರಿದ್ದರು.

ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚು ಅವಲಂಬಿತವಾಗದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಉತ್ತಮ ಗುಣಮಟ್ಟದ ಸೇವೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು
ಮರಿಯಪ್ಪ ಜಿಲ್ಲಾ ಸಿವಿಲ್ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.