
ಯಾದಗಿರಿ: ಸುರಪುರ, ಶಹಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅನಧಿಕೃತ ಹಾಗೂ ಅಧಿಕ ಭಾರದ ಮರಳು ಸಾಗಣಿ ಮಾಡುತ್ತಿದ್ದ 7 ವಾಹನಗಳನ್ನು ವಶಕ್ಕೆ ಪಡೆದ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ವೀರೇಶ ಶಾಂತಪ್ಪ ತಿಳಿಸಿದ್ದಾರೆ.
ಜಿಲ್ಲಾ ಮರಳು ನಿಯಂತ್ರಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸೂಚನೆಯಂತೆ ದಾಳಿ ಮಾಡಲಾಗುತ್ತಿದೆ. ಸುರಪುರ, ಶಹಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಅನಧಿಕೃತ, ಅಧಿಕ ಭಾರದ ಮರಳು ಸಾಗಣೆ ಬಗ್ಗೆ ಸಾಕಷ್ಟು ದೂರು ಬಂದಿದ್ದವು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಅನಧಿಕೃತ, ಅಧಿಕ ಭಾರದ ಮರಳು ಸಾಗಾಣಿಕೆ ವಾಹನಗಳನ್ನು ಪರಿಶೀಲಿಸಲು, ರಾತ್ರಿ ಗಸ್ತು ಕಾರ್ಯ ಕೈಗೊಂಡು 7 ಮರಳು ತುಂಬಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ₹ 2.78 ಲಕ್ಷ ದಂಡ ವಿಧಿಸಿ, ಭಾಗಿಯಾಗಿರುವ ವಾಹನಗಳ ನೋಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಲಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಅನಧಿಕೃತ, ಅಧಿಕ ಭಾರದ ಮರಳು, ಇತರೆ ಉಪಖನಿಜಗಳ ಸಾಗಾಣಿಕೆಯನ್ನು ತಡೆಗಟ್ಟಿ ಕ್ರಮ ಕೈಗೊಳ್ಳಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮರಳು ಸಮಿತಿ ಸದಸ್ಯರನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ. ವಾಹನಗಳನ್ನು ಪರಿಶೀಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.