
ಯಾದಗಿರಿಯಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಚಾಲನೆ ನೀಡಿದರು.
ಯಾದಗಿರಿ: ‘ಸದೃಢ ಭಾರತದ ನಿರ್ಮಾತೃಗಳಾದ ಯುವಜನಾಂಗ; ಗ್ರಾಮೀಣ ಕಲೆಗಳು ಹಾಗೂ ಸಾಂಸ್ಕೃತಿಕ ಸೊಗಡನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಸಾಂಸ್ಕೃತಿ ರಾಯಭಾರಿಗಳು’ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಯುವಜನೋತ್ಸವ ಕೇವಲ ಮನೋರಂಜನೆಯಲ್ಲ. ಯುವಜನಾಂಗದ ಒಳಗಿರುವ ಕಲಾತ್ಮಕ ಮತ್ತು ಸೃಜನಶೀಲತೆ, ಕಲೆ ಸಾಹಿತ್ಯ ಪ್ರತಿಭೆಯನ್ನು ಹೊರಹಾಕುವುದು. ನಾಟಕ, ನೃತ್ಯ ಸಂಗೀತ, ಚಿತ್ರ ಕಲೆ, ಕಥೆ, ಕವನ ರಚನೆಯಲ್ಲಿ ಪ್ರತಿಭೆಗೆ ಮನ್ನಣೆ ಕೊಡುವುದು. ಅದಕ್ಕೊಂದು ವೇದಿಕೆಯೂ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ’ ಎಂದು ಹೇಳಿದರು.
‘ಯುವಕರು ಕಲೆ, ಸಂಗೀತ, ನಾಟಕ, ಹಾಡು, ಕುಣಿತಗಳ ಸಾಂಸ್ಕೃತಿಕ ಸೊಗಡನ್ನು ಉಳಿಸಿ ಬೆಳೆಸುವ ಮುಂದಾಳುಗಳಾಗಬೇಕು. ನಮ್ಮ ಗ್ರಾಮೀಣ ಕಲೆಗಳು, ಜಾನಪದ, ಜೋಗುಳ ಪದ, ಬೀಸುವ ಪದಗಳು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದರು.
‘ಯುವಜನೋತ್ಸವದಲ್ಲಿ ಸ್ಪರ್ಧಾಳುಗಳು ತಮ್ಮ ಸುಪ್ತ ಪ್ರತಿಭೆ ಪ್ರದರ್ಶಿಸಿ ರಾಷ್ಟ್ರ ಮಟ್ಟದಲ್ಲಿಯೂ ವಿಜೇತರಾಗುವ ಮೂಲಕ ನಾಡಿನ ಕೀರ್ತಿ ಹೆಚ್ಚಿಸಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆಗೈಯ್ಯಬೇಕು. ಪಾಲಕರು ಸಹ ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು’ ಎಂದರು.
‘ಐತಿಹಾಸಿಕ ಯಾದವನಗರಿ ಖ್ಯಾತಿಯ ಯಾದಗಿರಿಯಲ್ಲಿ ಮೊದಲಬಾರಿಗೆ ರಾಜ್ಯಮಟ್ಟದ ಯುವಜನೋತ್ಸವ ನಡೆಯುತ್ತಿದೆ. ಯುವ ಎಂದರೆ ಉತ್ಸಾಹ, ಸಾಹಸ, ಹುಮ್ಮಸ್ಸು, ಚೈತನ್ಯ, ಮಹಾತ್ವಕಾಂಕ್ಷೆಯ ಪ್ರತೀಕ. ಈ ಉತ್ಸವ ಯುವಪ್ರತಿಭೆಗಳಲ್ಲಿನ ಶಕ್ತಿಯನ್ನು ಗುರುತಿಸಲು ವೇದಿಕೆಯಾಗಲಿದೆ’ ಎಂದು ಹೇಳಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ‘ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾಗಿ ಒಳ್ಳೆಯ ಆಧ್ಯಾತ್ಮಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ಗೀಳಿನಿಂದ ದೂರ ಉಳಿದು ಜೀವನದಲ್ಲಿ ಸಾಧನೆ ಮಾಡುವ ಛಲ ಹೊಂದಬೇಕು’ ಎಂದರು.
‘ಜಿಲ್ಲಾ ಕ್ರೀಡಾಂಗಣದ ಸುಧಾರಣೆಗೆ ₹ 6 ಕೋಟಿ ಒದಗಿಸುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದ್ದು, ಸಕರಾತ್ಮವಾಗಿ ಸ್ಪಂದಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಾನು ಸಹ ತಲಾ ₹ 1 ಕೋಟಿ ಅನುದಾನ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇದೊಂದು ಅತ್ಯುತ್ತಮ ಕ್ರೀಡಾಂಗಣವಾಗಲಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ‘ಹೊಸ ಜಿಲ್ಲೆಯಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಯುವಜನೋತ್ಸವ ಹಮ್ಮಿಕೊಂಡಿರುವುದು ಅಭಿಮಾನದ ಸಂಗತಿಯಾಗಿದೆ. ರಾಕ್ ಕ್ಲೈಂಬಿಂಗ್, ಸ್ಕೂಬಾ ಡೈವಿಂಗ್, ಕರಾಟೆ ಪ್ರದರ್ಶನ, ಮಲ್ಲಕಂಬ ಪ್ರದರ್ಶನದಂತಹ ಕಸರತ್ತಿನ ಸ್ಪರ್ಧೆಗಳು ನಡೆಯುತ್ತಿವೆ’ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೇಣುಗೋಪಾಲ್ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಉಪಸ್ಥಿತರಿದ್ದರು.
‘ಕಲ್ಯಾಣ ಕರ್ನಾಟಕ ಮೂರು ಸಾಮ್ರಾಜ್ಯಗಳ ತವರು’
‘ಕನ್ನಡ ನಾಡನ್ನು ವೈಭವದಿಂದ ಆಳಿದ ವಿಜಯನಗರ ಸಾಮ್ರಾಜ್ಯ ಚಾಲುಕ್ಯರು ಹಾಗೂ ರಾಷ್ಟ್ರಕೂಟರು ಕಲ್ಯಾಣ ಕರ್ನಾಟಕದ ಭಾಗದವರು ಎಂಬುದು ಈ ಭಾಗದ ಹೆಮ್ಮೆಯ ಸಂಗತಿ. ಮೂರು ಸಾಮ್ರಾಜ್ಯಗಳ ತವರಾಗಿದ್ದು ಹೊರ ಜಿಲ್ಲೆಗಳ ಸ್ಪರ್ಧಾಗಳಿಗೆ ಯುವಜನೋತ್ಸವದ ಮೂಲಕ ಇಲ್ಲಿನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅರಿಕೊಳ್ಳಲು ಇದೊಂದು ವೇದಿಕೆ’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್. ಹೇಳಿದರು. ‘ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಯುವಕ ಯುವತಿಯರು ಈ ಭಾಗಕ್ಕೆ ರಾಯಭಾರಿಗಳು ಇದ್ದಂತೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಈ ಭಾಗದ ಚಾರಿತ್ರಿಕ ಮಹತ್ವವನ್ನು ತಿಳಿದುಕೊಂಡು ನಾಡಿನಾದ್ಯಂತ ತಿಳಿಸಬೇಕು’ ಎಂದರು.
ವಸ್ತು ಪ್ರದರ್ಶನ ಮಳಿಗೆಗಳಿಗೆ ಚಾಲನೆ
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಮಹಾವಿದ್ಯಾಲಯ ಕೃಷಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ತೋಟಗಾರಿಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಗಳ ವಸ್ತು ಪ್ರದರ್ಶನದ ಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು. ಕೃಷಿಯಲ್ಲಿ ಡ್ರೋನ್ ಬಳಿಕೆ ಕೃಷಿ ಮಹಾವಿದ್ಯಾಲಯ ಸಿದ್ಧಪಡಿಸಿದ ಸಾಂಪ‍್ರದಾಯಿಕ ಔಷಧಿ ತಳಿಗಳು ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಮಳಿಗೆಯ ಪ್ರತಿನಿಧಿಗಳು ಮಾಹಿತಿ ನೀಡಿದರು. ಡ್ರೋನ್ ಬಳಕೆಯ ಪ್ರಾತ್ಯಕ್ಷಿಕೆಯೂ ಮಾಡಲಾಯಿತು.
ಗಮನ ಸೆಳೆದ ಮಲ್ಲಕಂಬ
ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ಬಾಲಕರ ಬಾಲ ಮಂದಿರದ ಮಕ್ಕಳು ಒಳಗೊಂಡಿರುವ ಜೈಕರ್ನಾಟಕ ಮಲ್ಲಕಂಬ ಹಾಗೂ ಬಾಗಲಕೋಟೆಯ ತುಳಸಿಗೇರಿಯ ಮಲ್ಲಕಂಬ ತಂಡಗಳ ಪ್ರದರ್ಶನವು ನೆರೆದವರನ್ನು ರಂಜಿಸಿದವು. ಸಾಹಸ ಗೀತೆಗಳು ಹಿನ್ನೆಲೆಯ ಹಾಡುಗಳೊಂದಿಗೆ ಏರಿ ಹ್ಯಾಂಡ್‌ಸ್ಟ್ಯಾಂಡ್ ಪಿರಮಿಡ್ ವಿ–ಷಡಲ್ ಸೂರ್ಯನಮಸ್ಕಾರ ಟಿ–ಬ್ಯಾಲನ್ಸ್ ಮಾಡುತ್ತಿದ್ದರೆ ನೆರೆದವರು ಮೆಚ್ಚುಗೆಯ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್ ಅವರು ವೇದಿಕೆ ಮೇಲೆ ತೆರಳಿ ಜೈಕರ್ನಾಟಕ ಮಲ್ಲಕಂಬ ತಂಡದ ಮಕ್ಕಳನ್ನು ಅಭಿನಂದಿಸಿದರು.
ನೋಂದಣಿಯಲ್ಲಿ ಗೊಂದಲ: ಪಟ್ಟಿಯಲ್ಲಿ ಇಲ್ಲದವರೂ ಭಾಗಿ!
ಜಿಲ್ಲಾ ಮಟ್ಟದಿಂದ ವಿಜೇತರಾದವರ ಪಟ್ಟಿಯನ್ನು ಆಯಾ ಜಿಲ್ಲೆಗಳ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪಟ್ಟಿಯನ್ನು ರಾಜ್ಯಮಟ್ಟಕ್ಕೆ ಕಳುಹಿಸಿತ್ತು. ಕೆಲವು ಜಿಲ್ಲೆಗಳಿಂದ ಬಂದಿರುವ ಪಟ್ಟಿಯಲ್ಲಿ ನಾಲ್ಕೈದು ಅಭ್ಯರ್ಥಿಗಳ ಹೆಸರಿದ್ದವು. ಆದರೆ ಸ್ಪರ್ಧಾಳುಗಳ ನೋಂದಣಿ ವೇಳೆಯಲ್ಲಿ 14ರಿಂದ 16 ಜನರು ಬಂದಿದ್ದರು. ಪಟ್ಟಿಯಲ್ಲಿ ಹೆಸರಿಲ್ಲ ಎನ್ನುತ್ತಿದ್ದಂತೆ ವಾಗ್ವಾದಕ್ಕೆ ಇಳಿದರು ಎಂದು ನೋಂದಣಿ ಉಸ್ತುವಾರಿ ಹೊತ್ತ ಅಧಿಕಾರಿಗಳು ತಿಳಿಸಿದರು. ಕೆಲವು ಜಿಲ್ಲೆಗಳ ಸಹಾಯಕ ನಿರ್ದೇಶಕರು ಸರಿಯಾಗಿ ಪಟ್ಟಿಯನ್ನು ಕಳುಹಿಸಿದೆ ನಿರ್ಲಕ್ಷ್ಯ ತೋರಿದ್ದಾರೆ. ಸ್ಪರ್ಧಾಗಳು ನಮ್ಮೊಂದಿಗೆ ಅನಾಗತ್ಯವಾಗಿ ವಾಗ್ವಾದ ನಡೆಸಿದ್ದು ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿ ಸಮಾಧಾನ ಪಡಿಸಬೇಕಾಯಿತು. ಸ್ಪರ್ಧಾರ್ಥಿಗಳಿಂದ ಪತ್ರ ಬರೆಯಿಸಿಕೊಂಡು ಖಾಲಿ ಇರುವ ಐಡಿ ಕಾರ್ಡ್‌ಗಳನ್ನು ನೀಡಿ ಅವಕಾಶ ಕಲ್ಪಿಸಲಾಗಿದೆ. ನಾನಾ ಜಿಲ್ಲೆಗಳಿಂದ 696 ಸ್ಪರ್ಧಾಳುಗಳು ನೋಂದಣಿ ಮಾಡಿಸಿಕೊಂಡಿದ್ದು ಪಟ್ಟಿಯಲ್ಲಿ ಇದ್ದವರು ಬಾರದೆ ಇರುವುದರಿಂದ ಭಾವಚಿತ್ರ ಇರುವ ಹಲವರ ಐಡಿಗಳು ಹಾಗೆಯೇ ಉಳಿದುಕೊಂಡಿವೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.