ADVERTISEMENT

ಯಾದಗಿರಿ | ಯುವ ‘ಉತ್ಸವ’ ಸಂಪನ್ನ; ‘ಪಕ್ಷಪಾತ’ದ ಕಪ್ಪು ಚುಕ್ಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:11 IST
Last Updated 5 ಡಿಸೆಂಬರ್ 2025, 7:11 IST
ಯಾದಗಿರಿಯಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಚಾಮರಾಜನಗರದ ತಂಡದ ಪೂಜಾ ಕುಣಿತದ ದೃಶ್ಯ
ಯಾದಗಿರಿಯಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಚಾಮರಾಜನಗರದ ತಂಡದ ಪೂಜಾ ಕುಣಿತದ ದೃಶ್ಯ   

ಯಾದಗಿರಿ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ವೈವಿದ್ಯಮಯವಾದ ಜನಪದ ಮತ್ತು ಜಾನಪದ ಕಲೆಗಳ ಅನಾವರಣದ ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವ ಗುರುವಾರ ಸಂಪನ್ನಗೊಂಡಿತು. ಪ್ರಥಮ ಬಾರಿಗೆ ಉತ್ಸವದ ಆತಿಥ್ಯ ವಹಿಸಿಕೊಂಡ ಯಾದಗಿರಿಯು ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಉಳಿದರೂ ಜನಪದ ನೃತ್ಯದ ತೀರ್ಪಿನಲ್ಲಿ ಅನ್ಯ ಜಿಲ್ಲೆಗಳ ಸ್ಪರ್ಧಿಗಳಿಂದ ‘ಪಕ್ಷಪಾತದ’ ಕಪ್ಪು ಚುಕ್ಕೆ ಅಂಟಿಸಿಕೊಂಡಿತು.

ಜಿಲ್ಲಾ ಕ್ರೀಡಾಂಗಣದ ಪ್ರಧಾನ ವೇದಿಕೆ, ಕನ್ನಡ ಭವನ, ಕನ್ನಡ ಸಾಹಿತ್ಯ ಪರಿಷತ್ ಭವನ, ಸರ್ಕಾರಿ ಪದವಿ ಮಹಾವಿದ್ಯಾಲಯ ಹಾಗೂ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಏಳು ವಿಭಾಗಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದ ಜಿಲ್ಲಾಡಳಿತವು ಗೆಲುವಿನ ನಗೆ ಬೀರಿತು. 

ವೈಯಕ್ತಿಯ ಸ್ಪರ್ಧೆಗಳಲ್ಲಿ ಪ್ರಥಮ ₹ 15 ಸಾವಿರ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ₹ 25 ಸಾವಿರ ನಗದು ಬಹುಮಾನ ಪಡೆದ ವಿಜೇತರು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾದರು. ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡವರು ಕ್ರಮವಾಗಿ ₹ 10 ಸಾವಿರ ಮತ್ತು ₹ 5 ಸಾವಿರ (ವೈಯಕ್ತಿಕ) ಹಾಗೂ ₹ 15 ಸಾವಿರ ಮತ್ತು ₹ 10 ಸಾವಿರ (ಗುಂಪು) ಪಡೆದರು.

ADVERTISEMENT

ಬುಧವಾರದಿಂದ ಆರಂಭವಾದ ಯುವಜನೋತ್ಸವದಲ್ಲಿ ರಾಜ್ಯದ ನಾನಾ ಜಿಲ್ಲೆಗಳ 690ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು. ತಮ್ಮಲ್ಲಿನ ಕಲೆಯನ್ನು ಪ್ರದರ್ಶಿಸಿದರು. ಪ್ರಧಾನ ವೇದಿಕೆಯಲ್ಲಿ 21 ಜಿಲ್ಲೆಗಳ ಜನಪದ ನೃತ್ಯ ಅನಾವರಣಗೊಂಡಿತು. ಡೊಳ್ಳು ಕುಣಿತ, ಮಹಿಷಾಸುರ ಮರ್ದಿನಿ ನೃತ್ಯ ರೂಪಕ, ರೈತರ ಸುಗ್ಗಿ ಹಾಡಿನಂತಹ ಹಲವು ನೃತ್ಯಗಳಿಗೆ ನೋಡುಗರು ಮೆಚ್ಚುಗೆಯ ಚಪ್ಪಾಳೆ ತಟ್ಟಿದರು.

ಬಾಗಲಕೋಟೆಯ ದೇವಿಯ ಮೆರವಣಿಗೆಯ ಕೀಲು ಕುದುರೆ, ಮರಗಾಲು ಕುಣಿತ, ಕರಗ ಕುಣಿತ, ಪಟ ಕುಣಿತ ಪ್ರದರ್ಶನ ಕಳೆಗಟ್ಟಿತು. ಕಲಬುರಗಿ ತಂಡದ ಮಹಿಷಾಸುರ ಮರ್ದಿನಿ ನೃತ್ಯದ ಅಂತ್ಯದಲ್ಲಿ ನೆರೆದಿದ್ದವರು ಎದ್ದುನಿಂತು ಚಪ್ಪಾಳೆ ತಟ್ಟಿದರು. ಮಹಿಷಾಸುರದ ಸಂಹಾರದ ವೇಳೆಯಲ್ಲಿ ತಮಟೆಯ ನಾದಕ್ಕೆ ಪ್ರೇಕ್ಷರ ಸಾಲಿನಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬರು ದೇವರು ಬಂದಂತೆ ವರ್ತನೆ ಮಾಡಿದರು. ವಾದನ ನಿಲ್ಲಿಸಿ ಕೆಲ ಹೊತ್ತಿನ ಬಳಿಕ ಮತ್ತೆ ಮುಂದುವರಿಸಲಾಯಿತು.

ರಾಕ್‌ ಕ್ಲೈಂಬಿಂಗ್, ಹಗ್ಗದ ಮಲ್ಲಕಂಬದ ಯೋಗಾಸನ, ಮಲ್ಲಕಂಬ ಪ್ರದರ್ಶನ ಹಾಗೂ ಸ್ಕೂಬಾ ಡೈವಿಂಗ್‌ ಸಾಹಸ ಜಲಕ್ರೀಡೆಯು ಯುವಕರನ್ನು ಪುಳಕಗೊಳಿಸಿದವು. ಕೃಷಿ, ತೋಟಗಾರಿಕೆ, ಯುವಜನ, ಜಿಲ್ಲಾ ಪಂಚಾಯಿತಿ, ಪಶುವೈದ್ಯಕೀಯ ಇಲಾಖೆಗಳ ಮಳಿಗೆಗಳು ತಮ್ಮ ಯೋಜನೆಗಳ ಬಗ್ಗೆ  ಬಂದವರಲ್ಲಿ ಅರಿವು ಮೂಡಿಸಿದವು.

ಯಾದಗಿರಿಯಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಕಲಬುರಗಿ ತಂಡ ಮಹಿಷಾಸುರ ಮರ್ದಿನಿ ನೃತ್ಯದ ಪ್ರದರ್ಶನ ನೀಡಿದರು
ಯಾದಗಿರಿಯಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಜನಪದ ನೃತ್ಯ ಪ್ರದರ್ಶನ ನೀಡಿದ ಬೀದರ್ ತಂಡ
ಯಾದಗಿರಿಯಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಜನಪದ ನೃತ್ಯ ಪ್ರದರ್ಶನ ನೀಡಿದ ರಾಯಚೂರಿನ ತಂಡ
ಯಾದಗಿರಿಯಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ ರಾಯಚೂರಿನ ತಂಡ
ಯಾದಗಿರಿಯಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಯುವಜನೋತ್ಸವದ ಜನಪದ ನೃತ್ಯ ಸ್ಪರ್ಧೆಯ ಪ್ರಥಮ ಸ್ಥಾನ ಸಂಬಂಧ ಪೊಲೀಸರೊಂದಿಗೆ ನಡೆದ ವಾಗ್ವಾದ 
‘ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ’
‘ವಿವಿಧ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಸೋಲು– ಗೆಲುವು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರ ಮಟ್ಟದಲ್ಲಿಯೂ ಸಾಧನೆ ಮಾಡಬೇಕು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ರಾಜ್ಯ ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ‘ಸೋಲು- ಗೆಲುವು ಒಂದೇ ನಾಣ್ಯದ ಎರಡು ಮುಖಗಳಂತೆ. ಎರಡೂ ಸಮಾನವಾಗಿ ಸ್ವೀಕರಿಸಿ ಭವಿಷ್ಯದ ಸ್ಪರ್ಧೆಗಳತ್ತ ದೃಷ್ಟಿ ಹಾಯಿಸಬೇಕು’ ಎಂದರು. ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ ‘ಯಾದಗಿರಿ ಜಿಲ್ಲೆ ಮೊದಲ ಬಾರಿಗೆ ರಾಜ್ಯಮಟ್ಟದ ಯುವಜನೋತ್ಸವವನ್ನು ಯಶಸ್ವಿಯಾಗಿ ನಡೆಸಿದೆ. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ ಊಟ ಉಪಹಾರದ ವ್ಯವಸ್ಥೆಯನ್ನು ಅಧಿಕಾರಿಗಳು ಸಮನ್ವಯದಿಂದ ಮಾಡಲಾಗಿದೆ. ಸ್ಪರ್ಧಾಳುಗಳು ಸಹ ಉತ್ಸಾಹದಿಂದ ಭಾಗವಹಿಸಿದ್ದಾರೆ’ ಎಂದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಸುಭಾಷ್ ಚಂದ್ರ ಉಪನಿರ್ದೇಶಕ ಶ್ರೀನಿವಾಸ ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾಷಣ ಸ್ಪರ್ಧೆ:
 ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನ ಉಲ್ಲಂಘನೆಯ ಚರ್ಚೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣದಲ್ಲಿ ಯುವಜನೋತ್ಸವದ ಅಂಗವಾಗಿ ನಡೆದ ಘೋಷಣೆ (ಭಾಷಣ) ಸ್ಪರ್ಧೆಗೆ ‘ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಭಾರತದಲ್ಲಿ ಸಂವಿಧಾನದ ಉಲ್ಲಂಘನೆ ಮತ್ತು ಪ್ರಜಾಪ್ರಭುತ್ವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ’ ಕುರಿತ ವಿಷಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯವು ಭಾಷಣ ಸ್ಪರ್ಧೆಗೆ ವಿಷಯವನ್ನು ಆಯ್ಕೆ ಮಾಡಿದೆ. ಸ್ಪರ್ಧೆ ಶುರುವಾಗುವ ಒಂದು ಗಂಟೆ ಮುಂಚಿತವಾಗಿ ಬಹಿರಂಗ ಪಡಿಸಲಾಯಿತು. 21 ಜಿಲ್ಲೆಗಳ ವಿದ್ಯಾರ್ಥಿಗಳು ಸ್ಪರ್ಧಿಸಿ ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನದ ಉಲ್ಲಂಘನೆ ಅದರ ರಕ್ಷಣೆ ಹಾಗೂ ಮಹತ್ವದ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು. ಚಿಕ್ಕಮಗಳೂರಿನ ವರುಣ ಆರ್ಯ ಪ್ರಥಮ ಮೈಸೂರಿನ ಪಾಷಾ ದ್ವಿತೀಯ ಹಾಗೂ ಉಡುಪಿಯ ಶರಣಯ್ಯ ನಾಯ್ಕ ತೃತೀಯ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.