ಯಾದಗಿರಿ: ಜಿಲ್ಲೆಯ ಕನ್ನಡ ಮತ್ತು ಉರ್ದು ಮಾಧ್ಯಮದ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದು, ಈ ಬಾರಿಯೂ 12 ಸರ್ಕಾರಿ ಕಿರಿಯ/ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾತಿ ಶೂನ್ಯವಾಗಿವೆ. ಕಳೆದ ವರ್ಷ ಐದು ಶಾಲೆಗಳಲ್ಲಿ ಮಾತ್ರವೇ ಶೂನ್ಯ ದಾಖಲಾತಿ ಇತ್ತು.
ಶಹಾಪುರ ಮತ್ತು ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳ ವ್ಯಾಪ್ತಿಯಲ್ಲಿ ತಲಾ ಮೂರು ಹಾಗೂ ಯಾದಗಿರಿ ಬಿಇಒ ವ್ಯಾಪ್ತಿಯಲ್ಲಿ ಆರು ಕಿರಿಯ ಪ್ರಾಥಮಿಕ ಶಾಲೆಗಳು ಶೂನ್ಯ ಪಟ್ಟಿಯಲ್ಲಿವೆ.
ಜಿಲ್ಲೆಯಲ್ಲಿ 920 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಅವುಗಳ ಪೈಕಿ 366 ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ ಒಂದಂಕಿಯೂ ದಾಟಿಲ್ಲ. 38 ಶಾಲೆಗಳಲ್ಲಿ ತಲಾ 10 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ವರ್ಷ ಕಂಚಗಾರಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಲ್ಲಿ 35 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ವರ್ಷ ಕೇವಲ 9 ವಿದ್ಯಾರ್ಥಿಗಳು ಪ್ರವೇಶ ಮಾಡಿದ್ದಾರೆ.
ಯಾದಗಿರಿಯ ರಾಜೀವ ಗಾಂಧಿ ನಗರದ ಎಂಪಿಎಸ್ ಶಾಲೆಯಲ್ಲಿಯೂ ಕಳೆದ ವರ್ಷ 20 ಮಕ್ಕಳ ದಾಖಲಾತಿ ಇತ್ತು. ಈಗ ಅದು 3ಕ್ಕೆ ಇಳಿಕೆಯಾಗಿದೆ. ಬೆರಳೆಣಿಕೆಯಷ್ಟು ಶಾಲೆಗಳಲ್ಲಿ ಮಾತ್ರವೇ ಹಿಂದಿನ ವರ್ಷಕ್ಕಿಂತ ಪ್ರವೇಶಾತಿಯಲ್ಲಿ ಏರಿಕೆ ಕಂಡಿವೆ. ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಈ ಹಿಂದಿನ ವರ್ಷಕ್ಕಿಂತ ಕಡಿಮೆಯೇ ಇದೆ.
12 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದ್ದರೆ 17ಕ್ಕೂ ಹೆಚ್ಚು ಶಾಲೆಗಳಲ್ಲಿ ಒಬ್ಬೊಬ್ಬ ವಿದ್ಯಾರ್ಥಿ ಮಾತ್ರವೇ ಪ್ರವೇಶ ಪಡೆದಿದ್ದಾರೆ. 40ಕ್ಕೂ ಹೆಚ್ಚು ಶಾಲೆಗಳಲ್ಲಿ ತಲಾ ಇಬ್ಬರು, 35ಕ್ಕೂ ಹೆಚ್ಚು ಶಾಲೆಗಳಲ್ಲಿ ತಲಾ ಮೂವರು ಮಕ್ಕಳು ದಾಖಲಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಪ್ರವೇಶ ಪಡೆಯುವವರ ಸಂಖ್ಯೆ ಕುಸಿಯುತ್ತಿದ್ದು, ಕನ್ನಡ ಮತ್ತು ಉರ್ದು ಮಾಧ್ಯಮ ಶಾಲೆಗಳಿಗೆ ಆಪತ್ತು ಎದುರಾಗಿದೆ.
ಆರ್ಥಿಕವಾಗಿ ತೀರಾ ಕೆಳಮಟ್ಟದಲ್ಲಿ ಇರುವ ಕುಟುಂಬದವರು, ಕೂಲಿಕಾರರು, ವಲಸಿಗರು, ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಿ ಅಲ್ಲಿನ ಶುಲ್ಕವನ್ನು ಭರಿಸಲು ಆಗದವರು ಮಾತ್ರ ಸರ್ಕಾರಿ ಶಾಲೆಗಳಿಗೆ ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಬಟ್ಟೆ, ಶೂ, ಸಾಕ್ಸ್, ಬಿಸಿಯೂಟ, ಹಾಲು, ಮೊಟ್ಟೆ, ಉಚಿತ ಪಠ್ಯ ಪುಸ್ತಕ ಯೋಜನೆಗಳು ಇದ್ದರೂ ಸರ್ಕಾರಿ ಶಾಲೆಗಳು ಪೋಷಕರನ್ನು ಸೆಳೆಯುವಲ್ಲಿ ವಿಫಲವಾಗಿವೆ ಎನ್ನುತ್ತಾರೆ ಮಕ್ಕಳ ಪೋಷಕರು.
ಇಂಗ್ಲಿಷ್ ವ್ಯಾಮೋಹ: ‘ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರು ಇಲ್ಲದೆ ಇದ್ದರೂ ಕನ್ನಡ, ಉರ್ದು ಮಾಧ್ಯಮದ ಮಕ್ಕಳ ಟಿಸಿ ಕಿತ್ತುಕೊಂಡು ಹೋಗಿ ದಾಖಲಿಸುತ್ತಿದ್ದಾರೆ. ಈ ಹಿಂದೆ ಪ್ರತಿ ವರ್ಷ 15ರಿಂದ 20 ಮಕ್ಕಳು ಒಂದನೇ ತರಗತಿಗೆ ದಾಖಲಾಗುತ್ತಿದ್ದರು. ಈಗ 3ರಿಂದ 4ಕ್ಕೆ ಕುಸಿದಿದೆ. ಕನ್ನಡ, ಉರ್ದು ಮಾಧ್ಯಮದ ಶಿಕ್ಷಕರನ್ನೇ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ನಿಯೋಜನೆ ಮಾಡುತ್ತಿದ್ದಾರೆ. ಇಂಗ್ಲಿಷ್ ಬಲ್ಲ ಅತಿಥಿ ಶಿಕ್ಷಕರ ನೇಮಕವೂ ಆಗುತ್ತಿಲ್ಲ. ಪೋಷಕರ ಇಂಗ್ಲಿಷ್ ವ್ಯಾಮೋಹ ನಿಲ್ಲುತ್ತಿಲ್ಲ’ ಎನ್ನುತ್ತಾರೆ ನಗರದ ಬಾಲಕರ ಉರ್ದು ಶಾಲೆಯ ಶಿಕ್ಷಕಿ ನಿಖಾಹತ್.
‘ಖಾಸಗಿ ಅನುದಾನಿತ ಶಾಲೆಗಳಲ್ಲೂ ದಾಖಲಾತಿ ಇಳಿಕೆ’:
‘ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿಯೂ ಮಕ್ಕಳ ದಾಖಲಾತಿ ಕಡಿಮೆ ಆಗುತ್ತಿದೆ. ಇದಕ್ಕೆ ಜನನ ಪ್ರಮಾಣ ಕಡಿಮೆ ಎಂದು ಸಹ ಹೇಳಲಾಗುತ್ತಿದೆ’ ಎಂದು ಡಿಡಿಪಿಐ ಚನ್ನಬಸವ ಮುಧೋಳ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಿಕ್ಷಣ ಮತ್ತು ಆರ್‌ಡಿಪಿಆರ್ ಇಲಾಖೆಗಳ ವತಿಯಿಂದ ಗ್ರಾಮ ಮಟ್ಟದಲ್ಲಿ ದಾಖಲಾತಿ ಆಂದೋಲನ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒ ಅಧ್ಯಕ್ಷ ಕಾರ್ಯದರ್ಶಿ ಸದಸ್ಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮುಖ್ಯ ಶಿಕ್ಷಕ ಹಾಗೂ 10ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿ– ವಿದ್ಯಾರ್ಥಿನಿ ಒಳಗೊಂಡು ಶಿಕ್ಷಣ ಸಮಿತಿ ಇರುತ್ತದೆ. ಅದರ ಮೂಲಕ ದಾಖಲಾತಿ ಆಂದೋಲನ ನಡೆಯುತ್ತಿದೆ’ ಎಂದು ಹೇಳಿದರು. ‘ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಕೆಆರ್‌ಡಿಬಿ ಅನುದಾನದಲ್ಲಿ ಮಾದರಿ ಶಾಲೆಯನ್ನು ತೆರೆಯಲಾಗುತ್ತಿದ್ದು ಕಡಿಮೆ ದಾಖಲಾತಿ ಇರುವ ಮಕ್ಕಳನ್ನು ಆ ಶಾಲೆಗೆ ಸೇರಿಸಲಾಗುತ್ತಿದೆ’ ಎಂದರು.
ಇಂಗ್ಲಿಷ್ ಮಾಧ್ಯಮದ 20 ಶಾಲೆಗಳಲೂ ಶೂನ್ಯ:
ಒಂದನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆ ಕಲಿಸುವ ಶಾಲೆಗಳು ಸಹ ಶೂನ್ಯದಿಂದ ಹೊರತಾಗಿಲ್ಲ. ಇಂಗ್ಲಿಷ್ ಮಾಧ್ಯಮದ 120 ಶಾಲೆಗಳಲ್ಲಿ 20 ಶಾಲೆಗಳ ಒಂದನೇ ತರಗತಿಯಲ್ಲಿ ಮಕ್ಕಳ ದಾಖಲಾತಿಯೇ ಇಲ್ಲ. ನಾಲ್ಕು ಶಾಲೆಗಳಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಒಂದೇ ಒಂದು ದಾಖಲಾತಿಯಾಗಿಲ್ಲ. ಈ ಶಾಲೆಗಳನ್ನು ಕನ್ನಡ ಮಾಧ್ಯಮ ಶಾಲೆಗಳೊಂದಿಗೆ ವಿಲೀನ ಮಾಡಿ ಬೋಧಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.