ADVERTISEMENT

ಎಂಡೊಸಲ್ಫಾನ್ ಬಾಧಿತರಿಗೆ ಆರೈಕೆ ಕೇಂದ್ರ: ರಾಜ್ಯದಿಂದ ಮೊದಲ ವಿಶೇಷ ಪ್ರಯತ್ನ

ಗಣಪತಿ ಹೆಗಡೆ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
ಎಂಡೋಸಲ್ಫಾನ್ ಬಾಧಿತ ಮಕ್ಕಳಿಗೆ ಚಿಕಿತ್ಸಾ ನೀಡಲು ಬೆಳಕೆಯಲ್ಲಿ ಸ್ಥಾಪಿಸಿರುವ ಕೇಂದ್ರದ ನೋಟ
ಎಂಡೋಸಲ್ಫಾನ್ ಬಾಧಿತ ಮಕ್ಕಳಿಗೆ ಚಿಕಿತ್ಸಾ ನೀಡಲು ಬೆಳಕೆಯಲ್ಲಿ ಸ್ಥಾಪಿಸಿರುವ ಕೇಂದ್ರದ ನೋಟ   

ಕಾರವಾರ: ಎಂಡೊಸಲ್ಫಾನ್ ಕೀಟನಾಶಕದ ಪರಿಣಾಮ 4ನೇ ತಲೆಮಾರಿನವರ ಮೇಲೂ ಬೀರಿದೆ ಎಂಬುದು ಉತ್ತರಕನ್ನಡ ಜಿಲ್ಲೆಯಲ್ಲಿ ಈಚೆಗೆ ನಡೆದ ಬಾಧಿತರ ಮರುಸಮೀಕ್ಷೆಯಿಂದ ದೃಢಪಟ್ಟಿದೆ. ಬಾಧಿತರ ಪೈಕಿ 18 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮೂಲಕ ಸಹಜಸ್ಥಿತಿಗೆ ತರಲು ‘ಆರೈಕೆ ಕೇಂದ್ರ’ ಆರಂಭವಾಗಿದೆ.

ಭಟ್ಕಳ ತಾಲ್ಲೂಕಿನ ಬೆಳಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿ ಎಂಡೊಸಲ್ಫಾನ್ ಬಾಧಿತ ಮಕ್ಕಳ ಆರೈಕೆ ಕೇಂದ್ರ ಸ್ಥಾಪನೆ ಆಗಿದೆ. ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆಯು ಬೆಂಗಳೂರಿನ  ಸಹಾಯ ಹಸ್ತ ಟ್ರಸ್ಟ್ ಆರ್ಥಿಕ ನೆರವಿನೊಂದಿಗೆ ಬಾಧಿತ ಮಕ್ಕಳಿಗೆ ಫಿಸಿಯೊಥೆರಪಿ ಚಿಕಿತ್ಸೆ ನೀಡುತ್ತಿದೆ. ಜೊತೆಗೆ ಪೌಷ್ಟಿಕ ಆಹಾರಗಳನ್ನು ಒದಗಿಸಿ, ಅವರ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿದೆ.

‘ಸಂಸ್ಥೆಯು ‘ಆಶಾಕಿರಣ’ ಯೋಜನೆ ಮೂಲಕ ಬಾಧಿತ ಮಕ್ಕಳಿಗೆ ಆರೈಕೆ ನೀಡುತ್ತಿದೆ. ಸದ್ಯ ಎರಡು ಪ್ರತ್ಯೇಕ ವಿಭಾಗಗಳಲ್ಲಿ ತಲಾ 15 ಮಂದಿಗೆ 2 ತಿಂಗಳವರೆಗೆ ಶಿಬಿರ ಆಯೋಜಿಸಿ, ಆರೈಕೆ ನೀಡುತ್ತೇವೆ. ಈಗಾಗಲೇ 15 ಮಂದಿ ಚಿಕಿತ್ಸೆ ಪಡೆದಿದ್ದು, ಬಹುತೇಕರ ಆರೋಗ್ಯ ಕೊಂಚ ಸುಧಾರಿಸಿದೆ’ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ತಿಳಿಸಿದರು.

ADVERTISEMENT

‘ಎಂಡೊಸಲ್ಫಾನ್ ಬಾಧಿತ ಮಕ್ಕಳ ಪೈಕಿ ಬಹುತೇಕರಲ್ಲಿ ಬುದ್ಧಿಮಾಂದ್ಯತೆ, ಅಂಗವೈಕಲ್ಯತೆ ಇದೆ. ಅಂತಹ ಮಕ್ಕಳಿಗೆ ಫಿಸಿಯೊಥೆರಪಿ ಚಿಕಿತ್ಸೆ ನೀಡುವುದರಿಂದ ಸುಧಾರಣೆ ಜೊತೆಗೆ ಮಾನಸಿಕ ಸ್ಥಿತಿಯಲ್ಲೂ ಸುಧಾರಣೆ ಕಂಡುಬರುತ್ತಿದೆ. ಆರೈಕೆ ಕೇಂದ್ರಕ್ಕೆ ಬಂದಾಗ ಒಳಗೆ ಬರಲು ಹಿಂದೇಟು ಹಾಕುತ್ತಿದ್ದವರು ಎರಡು ತಿಂಗಳ ಬಳಿಕ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ. ಮೊದಲು ತೊದಲುತ್ತಿದ್ದವರಲ್ಲಿ ಈಗ ಸ್ಪಷ್ಟ ಉಚ್ಛಾರಣೆ ಹೊರಬರುತ್ತಿದೆ’ ಎಂದು ಆರೈಕೆ ಕೇಂದ್ರದ ಸಮನ್ವಯಾಧಿಕಾರಿ ಸೂರ್ಯ ಗುಂಡು ಅವರು ಹೇಳಿದರು.

‘ಬಾಧಿತ ಮಕ್ಕಳನ್ನು ಕೇಂದ್ರಕ್ಕೆ ಕರೆತರಲು ಎರಡು ಆಂಬುಲೆನ್ಸ್‌ಗಳಿವೆ. ಪಾಲಕರಿಗೂ ಫಿಸಿಯೊಥೆರಪಿ ತರಬೇತಿ ಕೊಡಲಾಗುತ್ತದೆ. ಶಿಬಿರದ ಬಳಿಕ ಮನೆಯಲ್ಲೇ ಚಿಕಿತ್ಸೆ ಒದಗಿಸಲು ಸೌಲಭ್ಯ ಒದಗಿಸುತ್ತೇವೆ’ ಎಂದರು.

ಉತ್ತರಕನ್ನಡ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಎಂಡೋಸಲ್ಫಾನ್ ಬಾಧಿತ ಮಕ್ಕಳಿದ್ದು ಪ್ರತಿ ತಾಲ್ಲೂಕುಗಳಲ್ಲಿ ಹಂತ ಹಂತವಾಗಿ ಆರೈಕೆ ಕೇಂದ್ರ ಆರಂಭಿಸಲಾಗುವುದು.
ವೆಂಕಟೇಶ ನಾಯ್ಕ ಕಾರ್ಯನಿರ್ವಾಹಕ ನಿರ್ದೇಶಕ ಸ್ಕೊಡ್‌ವೆಸ್ ಸಂಸ್ಥೆ
ಎಂಡೋಸಲ್ಫಾನ್ ಪರಿಣಾಮ ಅಂಗವೈಕಲ್ಯ ಅನುಭವಿಸುತ್ತಿರುವ ಮಗನಿಗೆ ಆರೈಕೆ ಕೇಂದ್ರ ಕೇಂದ್ರದಲ್ಲಿ ಚಿಕಿತ್ಸೆ ಸಿಕ್ಕ ಬಳಿಕ ಆತನ ವರ್ತನೆಯಲ್ಲಿ ಸುಧಾರಣೆ ಕಂಡುಬಂದಿದೆ.
ರತ್ನಾ ಮೊಗೇರ ಸಂತ್ರಸ್ತ ಬಾಲಕನ ತಾಯಿ

228 ಮಕ್ಕಳ ಗುರುತು

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ನಡೆದಿದ್ದ ಎಂಡೋಸಲ್ಫಾನ್ ಬಾಧಿತರ ಮರು ಸಮೀಕ್ಷೆಯಲ್ಲಿ 96 ಬಾಲಕಿಯರು ಸೇರಿ 228 ಮಕ್ಕಳು ಬಾಧಿತರಾಗಿರುವುದು ಹಾಗೂ 543 ಸಂತ್ರಸ್ತ ಕುಟುಂಬಗಳು ಇಂದಿಗೂ ಸೌಲಭ್ಯ ವಂಚಿತರಾಗಿರುವುದು ಗೊತ್ತಾಗಿದೆ’ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.