ಸಾಂದರ್ಭಿಕ ಚಿತ್ರ
ದೇಶದ ಆರ್ಥಿಕತೆಯ ಮೂಲ ಎಂದೇ ಹೇಳಬಹುದಾದ ಬ್ಯಾಂಕುಗಳು ಪ್ರತಿವರ್ಷ ಸಾವಿರಾರು ಹೊಸ ಹುದ್ದೆಗಳನ್ನು ಘೋಷಿಸುತ್ತಿವೆ. ಇದನ್ನು ಒಂದು ರೀತಿಯ ‘ಉದ್ಯೋಗ ಸುಗ್ಗಿ’ ಎಂದು ಕರೆಯಬಹುದು. ಈ ದಿಸೆಯಲ್ಲಿ, ಬ್ಯಾಂಕಿಂಗ್ ಉದ್ಯೋಗಗಳ ಪ್ರಸ್ತುತ ಸ್ಥಿತಿ, ಅವುಗಳ ಮಹತ್ವ, ಸವಾಲುಗಳು, ಸಿದ್ಧತಾ ವಿಧಾನಗಳು ಮತ್ತು ಭವಿಷ್ಯದ ಬೆಳವಣಿಗೆಗಳ ಕುರಿತು ಅರಿಯುವುದು ಇದಕ್ಕೆ ಪೂರಕವಾಗಿರುತ್ತದೆ.
ಬ್ಯಾಂಕುಗಳು ಬರೀ ಹಣಕಾಸು ವ್ಯವಹಾರ ನಡೆಸುವ ಕೇಂದ್ರಗಳಲ್ಲ, ಅವು ಸಮಾಜದ ಪ್ರತಿ ಹಂತವನ್ನೂ ತಲುಪುತ್ತವೆ. ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಕೃಷಿ ಸಾಲ ವಿತರಣೆ, ಸ್ಟಾರ್ಟ್–ಅಪ್ ಬೆಂಬಲ ಎಲ್ಲವೂ ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ ‘ಡಿಜಿಟಲ್ ಇಂಡಿಯಾ’ ಮತ್ತು ‘ಜನಧನ್ ಯೋಜನೆ’ಗಳಂತಹ ಕಾರ್ಯಕ್ರಮಗಳಿಂದ ಬ್ಯಾಂಕಿಂಗ್ ಸೇವೆಗಳು ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿವೆ. ಇದರಿಂದಾಗಿ, ಕೌಶಲ ಹೊಂದಿರುವ ಮಾನವ ಸಂಪನ್ಮೂಲಕ್ಕೆ ನಿರಂತರ ಬೇಡಿಕೆ ಸೃಷ್ಟಿಯಾಗಿದೆ. ಪ್ರತಿ ಶಾಖೆಯಲ್ಲೂ ನಡೆಯುವ ಸಾಲ ಮಂಜೂರಾತಿ, ಹೂಡಿಕೆ ನಿರ್ವಹಣೆ ಅಥವಾ ಆನ್‌ಲೈನ್ ಪಾವತಿಯಂತಹ ಎಲ್ಲ ಸೇವೆಗಳಿಗೂ ನುರಿತ ಅಧಿಕಾರಿಗಳು ಮತ್ತು ಕ್ಲರ್ಕ್‌ಗಳ ಅವಶ್ಯಕತೆ ಇರುತ್ತದೆ.
ಬ್ಯಾಂಕಿಂಗ್ ಉದ್ಯೋಗಗಳನ್ನು ಮುಖ್ಯವಾಗಿ ನಾಲ್ಕು ವರ್ಗಗಳಲ್ಲಿ ವಿಂಗಡಿಸಬಹುದು. ಅವುಗಳೆಂದರೆ: ಪ್ರೊಬೇಷನರಿ ಅಧಿಕಾರಿ (ಪಿಒ), ಕ್ಲರ್ಕ್ ಹುದ್ದೆ, ಸ್ಪೆಷಲಿಸ್ಟ್ ಆಫೀಸರ್ ಹುದ್ದೆ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿನ (ಆರ್‌ಆರ್‌ಬಿ) ಉದ್ಯೋಗ.
ಬ್ಯಾಂಕುಗಳಲ್ಲಿ ಹಿಂದಿನ 10 ವರ್ಷಗಳಲ್ಲಿ ಪ್ರತಿವರ್ಷ ಸರಾಸರಿ 35,000ಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗಿವೆ. ಆದರೆ ಈ ವರ್ಷ 60,000ಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗುವ ನಿರೀಕ್ಷೆ ಇದೆ. ಐಬಿಪಿಎಸ್ ಮೂಲಕ ಬಹುತೇಕ ಎಲ್ಲ ಸರ್ಕಾರಿ ಬ್ಯಾಂಕುಗಳು ಪ್ರತಿವರ್ಷ ನೇಮಕಾತಿ ನಡೆಸುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಾವಿರಾರು ಹುದ್ದೆಗಳನ್ನು ಸ್ವತಂತ್ರವಾಗಿ ಪ್ರಕಟಿಸುತ್ತದೆ. ಆರ್‌ಆರ್‌ಬಿಗಳಲ್ಲಿ ವರ್ಷಕ್ಕೆ 10,000ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗುತ್ತಿವೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ
ಬ್ಯಾಂಕಿಂಗ್ ಹುದ್ದೆಗಳಿಗೆ ಪ್ರವೇಶ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳೇ ಮುಖ್ಯ ದಾರಿ. ಇದರಲ್ಲಿ ಸಾಮಾನ್ಯವಾಗಿ ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆ (ಮೇನ್ಸ್) ಎಂಬ ಎರಡು ಹಂತಗಳಿರುತ್ತವೆ. ಪೂರ್ವಭಾವಿ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಹಾಗೂ ಮುಖ್ಯ ಪರೀಕ್ಷೆಯಲ್ಲಿ ಆಳವಾದ ಜ್ಞಾನ ಮತ್ತು ವಿಶ್ಲೇಷಣಾ ಸಾಮರ್ಥ್ಯದ ಪರೀಕ್ಷೆ ನಡೆಯುತ್ತದೆ.
ಅಭ್ಯರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತು, ನಿರಂತರ ಅಭ್ಯಾಸ ಮಾಡಿದರೆ ಬ್ಯಾಂಕಿಂಗ್ ಉದ್ಯೋಗ ಪಡೆಯುವುದು ಕಷ್ಟವಲ್ಲ.
ಯುಪಿಐ, ಇ-ಪಾವತಿ, ಆಧಾರ್ ಆಧಾರಿತ ಸೇವೆಗಳಂತಹ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ವಿಸ್ತರಣೆ, ಜನಧನ್, ಮಹಿಳಾ ಖಾತೆಗಳು, ಗ್ರಾಮೀಣ ಶಾಖೆಗಳಂತಹ ಹಣಕಾಸು ಒಳಗೊಳ್ಳುವಿಕೆ ಯೋಜನೆಗಳು, ಗ್ರೀನ್ ಬ್ಯಾಂಕಿಂಗ್, ಇಎಸ್‌ಜಿ ಯೋಜನೆಗಳು ಹಾಗೂ ಫಿನ್‌ಟೆಕ್ ಕಂಪನಿಗಳ ಸಹಯೋಗದಂತಹ ಕಾರಣಗಳಿಂದ ಮುಂದಿನ ದಶಕದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಇನ್ನೂ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಯುವಜನ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಈ ಮೂಲಕ ವೈಯಕ್ತಿಕ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುವುದಷ್ಟೇ ಅಲ್ಲ, ದೇಶದ ಆರ್ಥಿಕತೆಯ ಕಟ್ಟಡಕ್ಕೂ ಬಲ ತುಂಬುವ ಕೆಲಸ ಆಗಬೇಕಾಗಿದೆ.
ಲೇಖಕ: ನಿವೃತ್ತ ಪ್ರಧಾನ ವ್ಯವಸ್ಥಾಪಕ, ಕೆನರಾ ಬ್ಯಾಂಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.