ADVERTISEMENT

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸಿಗೆ ಸೂಕ್ತ ಮಾರ್ಗದರ್ಶನ, ದಣಿವಾಗದ ಓದು ಅಗತ್ಯ

ಕೆ.ಎಸ್.ಗಿರೀಶ್
Published 6 ಜುಲೈ 2022, 19:30 IST
Last Updated 6 ಜುಲೈ 2022, 19:30 IST
ರಾಜೇಶ್‌ ಪೊನ್ನಪ್ಪ
ರಾಜೇಶ್‌ ಪೊನ್ನಪ್ಪ   

ಮೆಕಾನಿಕಲ್‌ ಎಂಜಿನಿಯರಿಂಗ್ ಹಾಗೂ ಕಾನೂನು ಪದವಿಗಳನ್ನು ಪಡೆದಿರುವ ಕೊಡಗು ಜಿಲ್ಲೆಯ ರಾಜೇಶ್‌ ಪೊನ್ನಪ್ಪ ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಪರೀಕ್ಷೆಯಲ್ಲಿ 222 ರ‍್ಯಾಂಕ್‌ ಪಡೆದಿದ್ದಾರೆ. ಮೂರನೇ ಪ್ರಯತ್ನದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರು, ಪರೀಕ್ಷೆ ತಯಾರಿಯ ಸಿದ್ಧತೆಗಳ ಕುರಿತು ‘ಸ್ಪರ್ಧಾವಾಣಿ‘ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

1. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದೀರಿ, ನಿಮ್ಮ ಮುಂದಿನ ಹೆಜ್ಜೆ?

ಮುಂದಿನ ತರಬೇತಿಯ ದಿನಾಂಕಕ್ಕಾಗಿ ಕಾಯುತ್ತಿದ್ದೇನೆ. ಯಾವುದೇ ಹುದ್ದೆ ಕೊಟ್ಟರೂ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಮಾಡುವುದು ನನ್ನ ಗುರಿ.

ADVERTISEMENT

2. ಯುಪಿಎಸ್ಸಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳನ್ನು ಎಷ್ಟನೇ ಪ್ರಯತ್ನದಲ್ಲಿ ಪೂರ್ಣಗೊಳಿಸಿದಿರಿ? ಹಿಂದಿನ ಪ್ರಯತ್ನಗಳು ಫಲಿಸದಿರಲು ಕಾರಣವೇನು? ಆ ನ್ಯೂನತೆಗಳನ್ನು ಈ ಪ್ರಯತ್ನದಲ್ಲಿ ಹೇಗೆ ಸರಿಪಡಿಸಿಕೊಂಡಿರಿ ?

ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪೂರ್ಣಗೊಳಿಸಿದೆ. ಸರಿಯಾದ ಮಾರ್ಗದರ್ಶನದ ಕೊರತೆ ಕಾರಣ ಎರಡು ಬಾರಿಯೂ ಪರೀಕ್ಷೆ ಪಾಸಾಗಿರಲಿಲ್ಲ. ನಂತರ ಐಎಎಸ್‌ ಬಾಬ ಕೋಚಿಂಗ್ ಇನ್‌ಸ್ಟಿಟ್ಯೂಟ್‌ ಸೆಂಟರ್‌ಗೆ ಸೇರಿದೆ. ‘ನಮ್ಮ ಕೆಪಿಎಸ್‌ಸಿ ಅಕಾಡೆಮಿ’ ನಿರ್ದೇಶಕರಾದ ಡಾ.ಅರ್ಜುನ್‌ ಬೋಪಣ್ಣ ಅವರ ಸಲಹೆ ಪಡೆದೆ. ಅವರು ಆಂಥ್ರೊಪಾಲಜಿ (ಮಾನವಶಾಸ್ತ್ರ) ವಿಷಯದ ಪ್ರಾಧ್ಯಾಪಕರು. ನನ್ನ ಯುಪಿಎಸ್‌ಸಿ ವಿಷಯವೂ ಅದೇ ಆಗಿತ್ತು. ಇವೆಲ್ಲವೂ ನನ್ನ ಯಶಸ್ಸಿಗೆ ಕಾರಣಗಳಾದವು.

3. ನೀವು ಬಳಸುತ್ತಿದ್ದ ಅಧ್ಯಯನ ಪರಿಕರಗಳ ಬಗ್ಗೆ ತಿಳಿಸಿ

15 ರಿಂದ 16 ಗಂಟೆ ಓದುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ಸಮತೋಲಿತ ಓದು ಇರಬೇಕು. ದಣಿವಾಗದ ಹಾಗೆ ಓದಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮಾರ್ಗದರ್ಶನ ಸಿಕ್ಕಿದರೆ ಇದು ಇನ್ನೂ ಸುಲಭ. ಪುನರಾವರ್ತನೆ, ಅಣಕು ಪರೀಕ್ಷೆಗಳು ತೀರಾ ಅಗತ್ಯ. ನನಗೆ ಕೋಚಿಂಗ್ ಸೆಂಟರ್‌ ಮಾರ್ಗದರ್ಶನ ನೆರವಿಗೆ ಬಂತು. ‘ಡೆಕನ್ ಹೆರಾಲ್ಡ್‌’ನ ಸಂಪಾದಕೀಯವನ್ನು ನಿತ್ಯವೂ ಓದುತ್ತಿದ್ದೆ. ‘ಪ್ರಜಾವಾಣಿ’ ಸೇರಿದಂತೆ ಇನ್ನಿತರ ಪತ್ರಿಕೆಗಳನ್ನೂ ಓದುತ್ತಿದ್ದೆ. ಕೋಚಿಂಗ್ ಸೆಂಟರ್‌ನ ಮಾಸಿಕ ಪತ್ರಿಕೆಗಳು, ಸಿಬಿಎಸ್‌ಸಿ ಬೋರ್ಡ್‌ನ ಎನ್‌ಸಿಇಆರ್‌ಟಿ 6 ನೇ ತರಗತಿ 12ನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ಓದಿದ್ದೆ.

4. ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚುವರಿ ಕೋಚಿಂಗ್‌ ಅಗತ್ಯವಿದೆಯೇ ? ನೀವು ಕೋಚಿಂಗ್‌ಗೆ ಹೋಗಿ‌ದ್ದಿರಾ? ಯಾವ ರೀತಿ ತರಬೇತಿ ನೆರವಾಗುತ್ತದೆ?

ಕೋಚಿಂಗ್‌ ತೆಗೆದುಕೊಂಡರೆ ಯಶಸ್ಸುಗಳಿಸಲು ನಿಜಕ್ಕೂ ಸಹಕಾರಿಯಾಗುತ್ತದೆ. ಏಕೆಂದರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನದ ಅಗತ್ಯ ಇದೆ. ಅದು ಉತ್ತಮ ರೀತಿಯ ಮಾರ್ಗದರ್ಶನವಾಗಿರಬೇಕು.ಏನನ್ನು ಓದಬೇಕು ಎನ್ನುವುದು ಎಷ್ಟು ಮುಖ್ಯವೋ ಏನನ್ನು ಓದಬಾರದು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಕೋಚಿಂಗ್‌ ಬೇಕಾಗುತ್ತದೆ.

5. ಎಷ್ಟು ಸಮಯದಿಂದ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೀರಿ? ಸಿದ್ಧತೆಗೆ ಸಮಯ ಹೊಂದಾಣಿಕೆ ಹೇಗೆ ಮಾಡಿಕೊಂಡಿರಿ?

ಎಂಜಿನಿಯರಿಂಗ್ ಮುಗಿದ ಮೇಲೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಆರಂಭಿಸಿದೆ. ಎರಡು ಪ್ರಯತ್ನಗಳುವಿಫಲವಾದ ಮೇಲೆ, ನಡುವೆ ಎಲ್‌ಎಲ್‌ಬಿ ಪದವಿ ಮುಗಿಸಿದೆ. 2020ರಿಂದ ಗಂಭೀರವಾಗಿ ಪರೀಕ್ಷೆಗೆ ಸಿದ್ಧತೆ ಶುರು ಮಾಡಿದೆ.

6. ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ನಿಮ್ಮ ಸಲಹೆ?

ಶಾಲೆ ಅಥವಾ ಕಾಲೇಜು ದಿನಗಳಿಂದಲೇ ನಿತ್ಯ ದಿನಪತ್ರಿಕೆ ಓದಬೇಕು. 6ರಿಂದ 12ರವರೆಗಿನ ಸಿಬಿಎಸ್‌ಸಿ ಬೋರ್ಡ್‌ನ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಕಡ್ಡಾಯ ಓದಲೇಬೇಕು. ಕೋಚಿಂಗ್‌ ಸೆಂಟರ್‌ ಸೇರುವುದಕ್ಕೂ ಮುನ್ನ ಯುಪಿಎಸ್‌ಸಿ ಪರೀಕ್ಷೆ ಪಾಸಾದವರ ಸಲಹೆ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.