ADVERTISEMENT

ಇಮೇಜ್‌ ಕನ್ಸಲ್ಟೆಂಟ್‌

ಪ್ರಜಾವಾಣಿ ವಿಶೇಷ
Published 12 ಮಾರ್ಚ್ 2020, 19:30 IST
Last Updated 12 ಮಾರ್ಚ್ 2020, 19:30 IST
   

ಪ್ರತಿಯೊಬ್ಬ ವ್ಯಕ್ತಿಗೂ ಒಂದು ‘ಇಮೇಜ್‌’ ಇರುತ್ತದೆ; ನೀವು ಬೇರೆಯವರ ಎದುರು ಹೇಗೆ ಕಾಣಿಸಿಕೊಳ್ಳುತ್ತೀರಿ ಅಥವಾ ಇತರರು ನಿಮ್ಮನ್ನು ಹೇಗೆ ಅಳೆಯುತ್ತಾರೆ ಅಥವಾ ನಿಮ್ಮ ಬಗ್ಗೆ ಯಾವ ರೀತಿಯ ಅಭಿಪ್ರಾಯಗಳಿವೆ ಎಂಬುದರ ಮೇಲೆ ನಿಮ್ಮ ಕುರಿತು ಒಂದು ಸ್ಪಷ್ಟವಾದ ಚಿತ್ರಣ ರೂಪುಗೊಳ್ಳುತ್ತದೆ. ಹಾಗಂತ ಇದು ವ್ಯಕ್ತಿಯ ಬಾಹ್ಯ ಚರ್ಯೆ ಒಂದಕ್ಕೇ ಸಂಬಂಧಪಟ್ಟಿಲ್ಲ. ಬೇರೆಯವರ ಜೊತೆ ಹೇಗೆ ಮಾತನಾಡುವುದು, ನಡೆದುಕೊಳ್ಳುವುದು ಇವೆಲ್ಲವುಗಳಿಂದ ಈ ಇಮೇಜ್‌ ಸೃಷ್ಟಿಯಾಗುತ್ತದೆ. ಇದನ್ನೆಲ್ಲ ಇಮೇಜ್‌ ನಿರ್ವಹಣೆ ಮಾಡುವವರು ನಿಯಂತ್ರಿಸುತ್ತಾರೆ. ಒಬ್ಬ ಸೆಲೆಬ್ರಿಟಿಯೇ ಇರಲಿ ಅಥವಾ ಸಾಮಾನ್ಯ ವ್ಯಕ್ತಿಯಿರಲಿ, ಅವರ ವೈಯಕ್ತಿಕ, ಸಾಮಾಜಿಕ ಹಾಗೂ ವೃತ್ತಿಪರ ವಲಯದಲ್ಲಿ ಈ ಇಮೇಜ್‌ ಬಹಳಷ್ಟು ಪ್ರಭಾವ ಬೀರಬಲ್ಲದು.

ಈ ಇಮೇಜ್‌ ಕನ್ಸಲ್ಟೆಂಟ್‌ ಎನ್ನುವ ವೃತ್ತಿ ಈಗ ಬಹಳ ಬೇಡಿಕೆ ಇರುವ ಉದ್ಯೋಗ. ಫ್ಯಾಷನ್‌ ಸ್ಟೈಲಿಸ್ಟ್‌, ವಾರ್ಡ್‌ರೋಬ್‌ ಕನ್ಸಲ್ಟೆಂಟ್‌ ಮೊದಲಾದ ಹೆಸರಿನಿಂದಲೂ ಇದು ಜನಪ್ರಿಯ. ಒಬ್ಬ ವ್ಯಕ್ತಿಯ ಬಾಹ್ಯ ನೋಟದ ಸುಧಾರಣೆಗೂ ಈ ಕನ್ಸಲ್ಟೆಂಟ್‌ ಸಲಹೆ ನೀಡುತ್ತಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ, ಮಾತನಾಡುವಾಗ ಹೇಗಿರಬೇಕು ಎಂಬುದು ಮಾತ್ರವಲ್ಲ, ಬೇರೆಯವರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಹೇಗೆ ನಡೆದುಕೊಳ್ಳಬೇಕು ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ.

ಯಾವಾಗಲೂ ಒಬ್ಬ ವ್ಯಕ್ತಿಯ ಕುರಿತ ಮೊದಲ ಅಭಿಪ್ರಾಯವೇ ಶಾಶ್ವತವಾಗಿ ಮನಸ್ಸಿನಲ್ಲಿ ಇರುತ್ತದಂತೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಈ ಮೊದಲ ಹಾಗೂ ಅತ್ಯುತ್ತಮವಾದ ಅಭಿಪ್ರಾಯವನ್ನು ಬೇರೆಯವರ ಮನಸ್ಸಿನಲ್ಲಿ ಮೂಡಿಸಲು ಯತ್ನಿಸುವುದು ಸಹಜ. ಅದು ಉದ್ಯೋಗಕ್ಕಾಗಿ ಸಂದರ್ಶನವಿರಲಿ, ಗ್ರಾಹಕರನ್ನು ಭೇಟಿ ಮಾಡುವುದಿರಲಿ, ಈ ಇಮೇಜ್‌ ಎನ್ನುವುದು ಪ್ರಮುಖವಾದ ಅಂಶ. ಹೀಗಾಗಿ ಆಕರ್ಷಕವಾದ, ಯೋಗ್ಯವಾದ ಹಾಗೂ ವಿಶಿಷ್ಟವಾದ ಇಮೇಜ್‌ ರೂಪಿಸುವುದು ಕನ್ಸಲ್ಟೆಂಟ್‌ ಕೆಲಸ. ಹೀಗಾಗಿ ಗ್ರಾಹಕರಿಗೆ ಈ ಕುರಿತು ಉಪಯುಕ್ತ ಸಲಹೆ ನೀಡಬೇಕಾಗುತ್ತದೆ. ಎಷ್ಟೆಂದರೂ ಒಬ್ಬ ವ್ಯಕ್ತಿಯ ಬಾಹ್ಯ ಚರ್ಯೆಯು ನಿಮ್ಮ ಆಲೋಚನೆ, ಭಾವನೆ ಹಾಗೂ ಬೇರೆಯವರ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ADVERTISEMENT

ಈ ಇಮೇಜ್‌ ಕನ್ಸಲ್ಟೆಂಟ್‌ ಗ್ರಾಹಕ ಧರಿಸುವ ಉಡುಪು, ಹಾವಭಾವ, ಸಂವಹನದ ರೀತಿ, ಧ್ವನಿಯ ಏರಿಳಿತ ಎಲ್ಲವನ್ನೂ ಗಮನಿಸಿ ಸುಧಾರಿಸಬೇಕಾಗುತ್ತದೆ. ಅದೂ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ಈ ಇಮೇಜ್‌ ಸೃಷ್ಟಿಸುವ ಕೆಲಸವನ್ನು ಮಾಡಬೇಕಾಗುತ್ತದೆ.

ಸರ್ಟಿಫಿಕೇಶನ್‌ ಕೋರ್ಸ್‌
ಈ ವೃತ್ತಿಗೆ ಪ್ರತ್ಯೇಕವಾದ ಶೈಕ್ಷಣಿಕ ಅರ್ಹತೆಗಳೇನಿಲ್ಲ. ಹಾಗೆಯೇ ಅನುಭವದ ಅವಶ್ಯಕತೆಯೂ ಇಲ್ಲ. ಆದರೆ, ಸಾರ್ವಜನಿಕ ಸಂಪರ್ಕ, ಫ್ಯಾಷನ್‌, ಸೌಂದರ್ಯ, ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಅನುಭವವಿದ್ದರೆ ಒಳ್ಳೆಯದು. ಅಷ್ಟಕ್ಕೂ ನಿಮಗೆ ತರಬೇತಿ ಬೇಕೆಂದರೆ ಸರ್ಟಿಫಿಕೇಶನ್‌ ಕೋರ್ಸ್‌ಗಳಿವೆ. ಇಮೇಜ್‌ ಕನ್ಸಲ್ಟಿಂಗ್‌, ಉಡುಪು ವಿನ್ಯಾಸ, ಉಡುಪಿನ ಪೋರ್ಟ್‌ಫೋಲಿಯೊ ಸೇರಿ ಕೆಲವು ಕೋರ್ಸ್‌ಗಳು ಲಭ್ಯ.

ಇಮೇಜ್‌ ಕನ್ಸಲ್ಟೆಂಟ್‌ ಉದ್ಯೋಗಕ್ಕೆ ಜನರ ಜೊತೆ ಬೆರೆಯುವ ಕೌಶಲವಿರಬೇಕು. ಗ್ರಾಹಕರ ವಿಶ್ವಾಸ ಗಳಿಸುವ ಚಾಕಚಕ್ಯತೆ ಇರಬೇಕು. ಉತ್ತಮ ಸಂವಹನ ಕೌಶಲ, ಸ್ಟೈಲ್‌ ಟ್ರೆಂಡ್‌ ಬಗ್ಗೆ ಮಾಹಿತಿ ಇದ್ದರೆ ಒಳ್ಳೆಯದು.

ಉದ್ಯೋಗಾಕಾಂಕ್ಷಿಗಳು, ಸೆಲೆಬ್ರಿಟಿಗಳು, ಕಾರ್ಪೊರೇಟ್‌ ಎಕ್ಸಿಕ್ಯುಟಿವ್‌, ಫ್ಯಾಷನ್‌ ಸ್ಪರ್ಧೆಯಲ್ಲಿ ಭಾಗವಹಿಸುವವರು, ರಾಜಕಾರಣಿಗಳು, ಸರ್ವೀಸ್‌ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರು ಇಮೇಜ್‌ ಕನ್ಸಲ್ಟೆಂಟ್‌ಗಳ ಮೊರೆ ಹೋಗುತ್ತಾರೆ. ಅನುಭವಿಗಳು ವರ್ಷಕ್ಕೆ ಆರಾಮವಾಗಿ 8–10 ಲಕ್ಷ ಸಂಪಾದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.