ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

ಕೆಎಸ್‌ಆರ್‌ಪಿ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ

ಪ್ರಜಾವಾಣಿ ವಿಶೇಷ
Published 16 ಫೆಬ್ರುವರಿ 2022, 19:30 IST
Last Updated 16 ಫೆಬ್ರುವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭಾಗ9

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್-ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ದೆಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಶೀಘ್ರದಲ್ಲೇ ನಡೆಯಲಿವೆ. ಎರಡೂ ‍ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ಕೆಳಗಿನ ಹೇಳಿಕೆಗಳನ್ನು ಗಮನಿಸಿ

ADVERTISEMENT

1) ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರಾದ ರಾಮಾನುಜಾಚಾರ್ಯರು, 1017ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಜನಿಸಿದರು. ತಂದೆ ಅಸುರಿ ಕೇಶವ ಸೋಮಯಾಜಿ, ತಾಯಿ ಕಾಂತಿಮತಿ. 120 ವರ್ಷ ಜೀವಿಸಿದ್ದ ಈ ಯತಿವರ್ಯರು 1137ರಲ್ಲಿ ಶ್ರೀರಂಗಂನಲ್ಲಿ ಅಂತಿಮ ದಿನ ಕಳೆದು ಮರಣ ಹೊಂದಿದರು.

2) ರಾಮಾನುಜಾಚಾರ್ಯರ 1,000ನೇ ಜನ್ಮದಿನದ ಸಂಭ್ರಮಾಚರಣೆ ಭಾಗವಾಗಿ 216 ಅಡಿ ಎತ್ತರದ ರಾಮಾನುಜಾಚಾರ್ಯರ(ಸಮಾನತೆ ಪ್ರತಿಮೆ) ಪ್ರತಿಮೆಯನ್ನು ಹೈದರಾಬಾದಿನ ಷಂಶಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.

3) ರಾಮಾನುಜಾಚಾರ್ಯರ ಪಂಚ ಲೋಹದ ಮೂರ್ತಿಯನ್ನು ಚೀನಾದ ಏರೊಸನ್ ಕಾರ್ಪೊರೇಷನ್ ನಿರ್ಮಿಸಿದೆ.

4) ರಾಮಾನುಜಾಚಾರ್ಯರ ಕುಳಿತ ಭಂಗಿಯಲ್ಲಿರುವ ಸಮಾನತೆಯ ಪ್ರತಿಮೆ ವಿಶ್ವದ ಎರಡನೆಯ ಅತಿ ಎತ್ತರದ ಲೋಹದ ಪ್ರತಿಮೆಯಾಗಿದೆ

ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?
ಎ) ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ
ಬಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಸಿ) ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ
ಡಿ) 1 ಮತ್ತು 4 ನೇ ಹೇಳಿಕೆ ಮಾತ್ರ ಸರಿಯಾಗಿದೆ

ಉತ್ತರ: ಎ

2) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಲತಾ ಮಂಗೇಶ್ಕರ್‌ ಸಾವಿರಾರು ಹಾಡುಗಳ ಗಾಯಕಿ ಅಲ್ಲದೇ ಎಂಟು ಚಿತ್ರಗಳ ನಾಯಕಿ ನಟಿ, ಐದು ಚಿತ್ರಗಳ ಸಂಗೀತ ನಿರ್ದೇಶಕಿ, ನಾಲ್ಕು ಚಿತ್ರಗಳ ನಿರ್ಮಾಪಕಿ , ಅತ್ಯುತ್ತಮ ಆಭರಣ ವಿನ್ಯಾಸಕಿ ಕೂಡ ಆಗಿದ್ದರು
2) ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಏಳು ಫಿಲ್ಮ್‌ಫೇರ್‌ ಪ್ರಶಸ್ತಿಗಳು, 1989ರಲ್ಲಿ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ದೊರೆತಿತ್ತು. 2001ರಲ್ಲಿ ಲತಾ ಅವರಿಗೆ ‘ಭಾರತ ರತ್ನ‘ ಪುರಸ್ಕಾರ ನೀಡಿ ಗೌರವಿಸಲಾಯಿತು. ಗಾಯಕಿ ಎಂ.ಎಸ್‌. ಸುಬ್ಬಲಕ್ಷ್ಮಿ ನಂತರ ‘ಭಾರತ ರತ್ನ‘ ಗೌರವಕ್ಕೆ ಪಾತ್ರರಾದ ಎರಡನೇ ಗಾಯಕಿ ಲತಾ ಮಂಗೇಶ್ಕರ್‌.‌

3) ಪುಣೆ ವಿವಿ, ಹೈದರಾಬಾದ್‌ ವಿವಿ, ನ್ಯೂಯಾರ್ಕ್‌ ವಿವಿ ಸೇರಿದಂತೆ 10ಕ್ಕೂ ಹೆಚ್ಚು ವಿವಿ ಗಳಿಂದ ಗೌರವ ಡಿ.ಲಿಟ್‌ ಪದವಿ ಪಡೆದಿದ್ದರು ಲತಾ ಮಂಗೇಶ್ಕರ್‌.

4) ತಮ್ಮ ಎಂಟು ದಶಕಗಳ ವೃತ್ತಿ ಜೀವನದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಕನ್ನಡ ಸಿನಿಮಾದ ಎರಡು ಹಾಡುಗಳಿಗೆ ಮಾತ್ರ ದನಿಯಾಗಿದ್ದರು. 1967ರಲ್ಲಿ ತೆರೆಕಂಡ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾದ ‘ಬೆಳ್ಳನೆ ಬೆಳಗಾಯಿತು’ ಮತ್ತು ‘ಎಲ್ಲಾರೆ ಇರತೀರೋ ಎಂದಾರೆ ಬರತೀರೋ’ – ಇವು ಆ ಹಾಡುಗಳು.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
ಎ) ಹೇಳಿಕೆ 1ರಿಂದ 4ರ ತನಕ ಎಲ್ಲವೂ ಸರಿಯಾಗಿದೆ
ಬಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಸಿ) ಹೇಳಿಕೆ 1, 2 ಮತ್ತು 3 ಮಾತ್ರ ಸರಿಯಾಗಿದೆ
ಡಿ) 1 ಮತ್ತು 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಉತ್ತರ: ಎ

3) ಇತ್ತೀಚೆಗೆ ನಿಧನರಾದ ಕನ್ನಡದ ಕಬೀರ ಎಂದೇ ಪ್ರಸಿದ್ಧರಾದ `ಇಬ್ರಾಹಿಂ ಸುತಾರ’ ಅವರು ಯಾವ ಜಿಲ್ಲೆಯದವರು?

ಎ) ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದವರು ಬಿ) ಬೀದರ್ ಔರಾದ್
ಸಿ) ಉತ್ತರ ಕನ್ನಡದ ಹಳಿಯಾಳದವರು ಡಿ) ಚಿಕ್ಕಮಗಳೂರಿನ ಮೂಡಿಗೆರೆಯವರು.

ಉತ್ತರ: ಎ

4) ಕೇಂದ್ರ ಸರ್ಕಾರದ ನ್ಯಾಷನಲ್ ವಾಟರ್ ಮಿಷನ್‌ ಯೋಜನೆಯ ‘ಕ್ಯಾಚ್ ದಿ ರೈನ್’ ಅಡಿಯಲ್ಲಿ ದೇಶದಲ್ಲಿ ಅತಿಹೆಚ್ಚು ಕಾಮಗಾರಿಗಳನ್ನು ನಡೆಸಿರುವ ರಾಜ್ಯ ಯಾವುದು?

ಎ) ಉತ್ತರ ಪ್ರದೇಶ ಬಿ) ತೆಲಂಗಾಣ
ಸಿ) ಮಹಾರಾಷ್ಟ್ರ ಡಿ) ಕರ್ನಾಟಕ

ಉತ್ತರ: ಡಿ

5) ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳ ವಿಜೇತರ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನ ಪಡೆದರೆ, ದ್ವಿತೀಯ ಸ್ಥಾನ ಪಡೆದ ರಾಜ್ಯ ಯಾವುದು?

ಎ) ಪಶ್ಚಿಮ ಬಂಗಾಲ ಬಿ) ಕರ್ನಾಟಕ
ಸಿ) ಪಂಜಾಬ್ ಡಿ) ಕೇರಳ

ಉತ್ತರ: ಬಿ

6) ಈ ಕೆಳಗೆ ತಿಳಿಸಿರುವ ಯಾವ ಸಂಗೀತಗಾರರಿಗೆ ಪ್ರತಿಷ್ಠಿತ ಕಾಳಿದಾಸ ಸಮ್ಮಾನ್ ಪುರಸ್ಕಾರ ನೀಡಿ ಗೌರವಿಸಲಾಗಿದೆ?

1) ಪಂಡಿತ್ ಮಲ್ಲಿಕಾರ್ಜುನ ಮನಸೂರ 2) ಪಂಡಿತ್ ಕುಮಾರ ಗಂಧರ್ವ
3) ಪ್ರೊ. ಎಂ. ವೆಂಕಟೇಶ ಕುಮಾರ್ 4) ಪಂಡಿತ್ ಪುಟ್ಟರಾಜ ಗವಾಯಿ

ಉತ್ತರ ಸಂಕೇತಗಳು

ಎ) 1, 2 ಮತ್ತು 4 ಬಿ) 1, 2 ಮತ್ತು 3
ಸಿ) 1, 2.3 ಮತ್ತು 4 ಡಿ) 2, 3, ಮತ್ತು 4

ಉತ್ತರ:ಸಿ

7) ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 6ನೇ ಶತಮಾನದಲ್ಲಿ ಸ್ಥಾಪಿತವಾರುವ ಸರ್ವಜ್ಞ ಪೀಠವೆಂದೂ ಕರೆಯುವ ಶಾರದಾ ದೇವಸ್ಥಾನವನ್ನು ಹಾಳುಗೆಡವಲಾಗಿದೆ. ಅದೇ ಮಾದರಿಯ ನೂತನ ಶಾರದಾ ಪೀಠವನ್ನು ಎಲ್ಲಿ ಪುನರ್ ನಿರ್ಮಿಸಲಾಗುತ್ತಿದೆ?

ಎ) ಕಾಶ್ಮೀರದಲ್ಲಿರುವ ಕುಪ್ವಾರ ಜಿಲ್ಲೆಯ ತೀತ್ವಾಲ್ ಗ್ರಾಮದ ಬಳಿಯ ಕಿಶನ್‌ಗಂಗಾ ನದಿ ತೀರದಲ್ಲಿ
ಬಿ) ಕರ್ನಾಟಕದ ಚಿಕ್ಕಮಗಳೂರಿನ ಶೃಗೇರಿಯಲ್ಲಿ
ಸಿ) ಪಂಜಾಬ್‌ನ ಭಿಟಿಂಡಾದ ಜಲ್ವಾರ್ ಗ್ರಾಮದಲ್ಲಿ
ಡಿ) ಮೇಲಿನ ಎಲ್ಲಿಯೂ ಅಲ್ಲ

ಉತ್ತರ: ಎ

8) ಹರಿಸಿಂಗ್ ನಲ್ವಾ ಪ್ರತಿಮೆ ತೆರವು ಈ ಕೆಳಗಿನ ಯಾವ ದೇಶದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಯ್ತು?

ಎ) ನೇಪಾಳ ಬಿ) ಪಾಕಿಸ್ತಾನ
ಸಿ) ಶ್ರೀಲಂಕಾ ಡಿ) ಬಾಂಗ್ಲಾದೇಶ

ಉತ್ತರ:ಬಿ

9) ಬೀಜಿಂಗ್‌ನಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಏಕೈಕ ಭಾರತೀಯ ಯಾರು?
ಎ) ಆರಿಫ್ ಮೊಹಮ್ಮದ್ ಖಾನ್ ಬಿ) ಸಂಗೀತಾ ಸಿಂಗ್ ಬೋಪಟ್
ಸಿ) ಹರೀಶ ಬಿ ಜಿ ಡಿ) ಜಗ್‌ಜೀತ್ ಸಿಂಗ್ ಮಾನ್

ಉತ್ತರ: ಎ

10) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು 2031ರಲ್ಲಿ ನಿವೃತ್ತಿ ಆಗಲಿದೆ. ಇದನ್ನು ಈ ಕೆಳಗಿನ ಯಾವ ಸ್ಥಳದಲ್ಲಿ ಮುಳುಗಿಸಲಾಗುತ್ತದೆ?

ಎ) ಇಂದಿರಾ ಪಾಯಿಂಟ್ ಬಿ) ಪಾಯಿಂಟ್ ನೆಮೊ

ಸಿ) ಮರಿನಾ ಖಾರಿ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಬಿ

ನಿಮಗಿದು ಗೊತ್ತೆ?

ಆಸ್ಟ್ರೇಲಿಯಾವನ್ನು ಯಾರು ಕಂಡುಹಿಡಿದರು?

ಆಸ್ಟ್ರೇಲಿಯಾ ವಿಶ್ವದ ಅತಿಚಿಕ್ಕ ಖಂಡ. ಆದರೆ ಅದು ಅತ್ಯಂತ ದೊಡ್ಡ ದ್ವೀಪ. ಅದರ ಒಟ್ಟು ವಿಸ್ತೀರ್ಣ ಸುಮಾರು 8 ಸಾವಿರ ಚ.ಕಿ.ಮೀ.

ದಕ್ಷಿಣ ಗೋಳಾರ್ಧದಲ್ಲಿ ಒಂದು ದೊಡ್ಡ ಖಂಡವಿದೆಯೆಂದು ಮಧ್ಯ ಯುಗದಲ್ಲಿ ಜನರು ಮಾತನಾಡಿಕೊಳ್ಳುತ್ತಿ ದ್ದರು. ಆದರೆ ಯಾರು ಅದನ್ನು ಕಂಡುಹಿಡದಿರಲಿಲ್ಲ. ಹಾಗಾಗಿ ಅದನ್ನು ಅಪರಿಚಿತ ಖಂಡವೆಂದು ಕರೆಯುತ್ತಿದ್ದರು. ಜನರಲ್ಲಿ ಆ ಖಂಡ ಹೇಗಿರಬಹುದು, ಅಲ್ಲಿ ಜನವಸತಿ ಇರಬಹುದೇ ಎಂಬುದನ್ನು ತಿಳಿಯುವ ಕುತೂಹಲವಿತ್ತು.

16ನೇಶತಮಾನದಲ್ಲಿ ಐರೋಪ್ಯ ದೇಶಗಳು ತಮ್ಮ ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸಿಕೊಳ್ಳಲು ಹೊಸ ಪ್ರದೇಶಗಳನ್ನು ಹುಡುಕುತ್ತಿದ್ದವು. 1606ರಲ್ಲಿ ಡಚ್ಚರು, ಆಸ್ಟ್ರೇಲಿಯಾಕ್ಕೆ ಹೋದರು. ಆ ಖಂಡಕ್ಕೆ ಭೇಟಿ ಕೊಟ್ಟವರಲ್ಲಿ ಅವರೇ ಮೊದಲಿಗರು. ಅವರು ಡೈಫ್ ಕೆನ್ ಎಂಬ ಹಡಗಿನಲ್ಲಿ ಪ್ರಯಾಣಿಸಿದ್ದರು. ಉತ್ತರ ಆಸ್ಟ್ರೇಲಿಯಾ ತೀರದಾಚೆ. ಈ ಹಡಗನ್ನು ಲಂಗರು ಹಾಕಲಾಗಿತ್ತು. ಈ ಹಡಗಿನ ಚಾಲಕ ವರ್ಗದಲ್ಲಿ ಕೆಲವರು ನೀರನ್ನು ಹುಡುಕುತ್ತಾ ತೀರ ಪ್ರದೇಶಕ್ಕೆ ಹೋದರು. ಆದರೆ ಅಲ್ಲಿದ್ದ ಕ್ರೂರ ಸ್ಥಳೀಯರು, ಅವರನ್ನು ಅಲ್ಲಿಂದ ಓಡಿಸಿದರು. ಅನಂತರ ಈ ಖಂಡದ ಇತರ ಯಾವ ಭಾಗವನ್ನು ಪರಿಶೋಧಿಸದೇ ಡೈಫ್‌ಕೆನ್ ನೌಕೆಯು ಅಲ್ಲಿಂದ ವಾಪಸಾಯಿತು.

1642ರಲ್ಲಿ ಡಚ್ ಆಡಳಿತ, ಕ್ಯಾಪ್ಟನ್ ಎಬೆಲ್ ಟಾಸ್ಮಾನ್ ಎಂಬಾತನನ್ನು ಈ ಖಂಡದ ಮತ್ತಷ್ಟು ಪರಿಶೋಧನೆಗಾಗಿ ಕಳಿಸಿಕೊಟ್ಟಿತು. ಆಸ್ಟ್ರೇಲಿಯಾದ ಉತ್ತರ ಕರಾವಳಿಯ ಬಗ್ಗೆ ಅವರು ಹೆಚ್ಚಿನ ಮಾಹಿತಿ ಸಂಗ್ರಹಿಸಿದರು. ಈಗಲೇ ಟಾಸ್ಮೇನಿಯಾ ಎಂದು ಕರೆಯಲಾಗುವ ದ್ವೀಪವನ್ನೂ ಟಾಸ್ಮಾನ್ ಪತ್ತೆ ಹಚ್ಚಿದರು. ನೂಜಿಲೆಂಡ್ ದೇಶವನ್ನೂ ಇವರೇ ಕಂಡು ಹಿಡಿದಿದ್ದು.

1770ರಲ್ಲಿ ಇಂಗ್ಲೆಂಡ್‌ನ ಕ್ಯಾಪ್ಟನ್ ಜೇಮ್ಸ್ ಕುಕ್ ಆಸ್ಟ್ರೇಲಿಯಾದ ಪೂರ್ವ ಕರಾವಳಿಯನ್ನು ಪತ್ತೆ ಹಚ್ಚಿದ. ಈ ಪ್ರದೇಶಕ್ಕೆ ಅವನು ನ್ಯೂ ಸೌತ್ ವೇಲ್ಸ್ ಎಂದು ಹೆಸರಿಟ್ಟ. 1788ರಲ್ಲಿ ಸಿಡ್ನಿಯಲ್ಲಿ, ಇಂಗ್ಲಿಷರು ಮೊಟ್ಟ ಮೊದಲ ವಸಾಹತನ್ನು ಸ್ಥಾಪಿಸಿದರು.

ಹಾಗಾದರೆ ಮೊದಲು ನೆಲೆಸಿದ್ದವರು ಯಾರು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸುಮಾರು 20 ಸಾವಿರ ವರ್ಷಗಳ ಹಿಂದೆ, ಈಗಿನ ಆಸ್ಟ್ರೇಲಿಯಾದ ಎಂದು ಕರೆಯಲಾಗುವ ಖಂಡದಲ್ಲಿ ಟಾಸ್ಮೊನಾಯಿಡ್‌ ಎಂಬ ಜನ ವಾಸವಾಗಿದ್ದರು. ಅವರ ಮೈ ಬಣ್ಣ ಕಪ್ಪಗಿತ್ತು. ತಲೆಯಲ್ಲಿ ಗುಂಗುರು ಕೂದಲಿತು. ಈ ಜನಾಂಗದವರು ನ್ಯೂಗಿನಿಯಿಂದ ಹೋಗಿ, ಆಸ್ಟ್ರೇಲಿಯಾದಲ್ಲಿ‌ ನೆಲೆಸಿದ್ದರು ಅದೇ ಕಾಲದಲ್ಲೇ ದಕ್ಷಿಣ ಭಾರತದಿಂದ ಹೋಗಿದ್ದ ಆಸ್ಟ್ರಲಾಯಿಡ್‌ ಎಂಬ ಮತ್ತೊಂದು ಜನಾಂಗದವರು ಅಲ್ಲಿ ನೆಲೆಸಿದ್ದರು. ಈ ನಾಡಿಗಾಗಿ, ಎರಡೂ ಜನಾಂಗಗಳ ನಡುವೆ ಹೋರಾಟ ಪ್ರಾರಂಭವಾಯಿತು. ಈ ಹೋರಾಟದಲ್ಲಿ ಟಾಸ್ಮೊನಾಯಿಡ್ ಜನಾಂಗದವರನ್ನು ಹೊರಗ ಟ್ಟಲಾಯಿತು. ಅನಂತರ ಮತ್ತೊಂದು ದ್ವೀಪಕ್ಕೆ ಹೋಗಿ ನೆಲೆಸಿದರು. ಅದನ್ನೇ ಈಗ ನಾವು ಟಾಸ್ಮೇನಿಯಾ ಎಂದು ಕರೆಯುತ್ತೇವೆ. ಆಸ್ಟ್ರಲಾಯಿಡ್‌ ಜನಾಂಗದವರು ಅಲ್ಲೇ ಉಳಿದುಕೊಂಡರು. ಅವರೇ ಆಸ್ಟ್ರೇಲಿಯಾದ ಮೂಲ ನಿವಾಸಿಗಳು.‌

ಇಂದು ಆಸ್ಟ್ರೇಲಿಯಾ ಅತ್ಯಂತ ಹೆಚ್ಚು ಅಭಿವೃದ್ಧಿಗೊಂಡಿರುವ ಅತ್ಯಾಧುನಿಕ ಖಂಡಗಳಲ್ಲಿ ಒಂದು. ಆ ಖಂಡದ ನಿವಾಸಿಗಳು ಸ್ವಾವಲಂಬಿಗಳಾಗಿದ್ದಾರೆ.

ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.