ADVERTISEMENT

ಎಸ್‌ಬಿಐನಲ್ಲಿ ಅಧಿಕಾರಿ ಹುದ್ದೆಗಳಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 15 ಮೇ 2025, 2:40 IST
Last Updated 15 ಮೇ 2025, 2:40 IST
ಎಸ್‌ಬಿಐ
ಎಸ್‌ಬಿಐ   

ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ʻಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾʼ (ಎಸ್‌ಬಿಐ) ಸರ್ಕಲ್ ಬೇಸ್ಡ್ ಆಫೀಸರ್ (ಸಿಬಿಒ) ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಒಟ್ಟು2,964 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಇದರಲ್ಲಿ 364 ಹುದ್ದೆಗಳು ಬ್ಯಾಕ್‌ಲಾಗ್ ಹುದ್ದೆಗಳಾಗಿದೆ.

ಎಸ್‌ಬಿಐನ ಬೆಂಗಳೂರು ವೃತ್ತದಲ್ಲಿ 250 ರೆಗ್ಯೂಲರ್ ಹಾಗೂ 39 ಬ್ಯಾಕ್‌ಲಾಗ್ ಹುದ್ದೆಗಳಿದ್ದು, ಈ ಹುದ್ದೆಗಳಿಗೆ ಕನ್ನಡ ಬಲ್ಲ ಅಭ್ಯರ್ಥಿಗಳನ್ನೇ ನೇಮಕ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಭಾಷಾ ಪರೀಕ್ಷೆಯನ್ನು ಕೂಡ ನೇಮಕದ ಸಂದರ್ಭದಲ್ಲಿ ನಡೆಸಲಾಗುತ್ತದೆ. ನಮ್ಮ ರಾಜ್ಯದ ಕೊಂಕಣಿ ಬಲ್ಲ ಅಭ್ಯರ್ಥಿಗಳು ಮುಂಬೈ ಮೆಟ್ರೋ ವೃತ್ತದಲ್ಲಿನ 100 ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಬೆಂಗಳೂರು ವೃತ್ತದಲ್ಲಿನ ರೆಗ್ಯೂಲರ್ 250 ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳಿಗೆ 37 ಎಸ್‌ಟಿ ಅಭ್ಯರ್ಥಿಗಳಿಗೆ 18, ಒಬಿಸಿ 67, ಇಡಬ್ಲ್ಯೂಎಸ್ 25 ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 103 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಇದೇ ಪ್ರಕಾರವಾಗಿ ಬ್ಲಾಕ್‌ಲಾಗ್ 39 ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳಿಗೆ 20 ಎಸ್‌ಟಿ ಅಭ್ಯರ್ಥಿಗಳಿಗೆ 9, ಒಬಿಸಿ ಅಭ್ಯರ್ಥಿಗಳಿಗೆ 10 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ADVERTISEMENT

ಅರ್ಹತೆಗಳೇನು?


ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ವೈದ್ಯಕೀಯ, ಎಂಜಿನಿಯರಿಂಗ್, ಸಿಎ ಮಾಡಿದವರು ಕೂಡ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪದವಿಯ ಜತೆಯಲ್ಲಿ ಸ್ಥಳೀಯ ಭಾಷಾ ಜ್ಞಾನವನ್ನು (ಬರೆಯುವ, ಓದುವ ಮತ್ತು ಅರ್ಥಮಾಡಿಕೊಳ್ಳುವ) ಅಭ್ಯರ್ಥಿಯು ಹೊಂದಿರಬೇಕಾದದು ಅಗತ್ಯ.
ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ. ಗರಿಷ್ಠ ವಯೋಮಿತಿ 30 ವರ್ಷ ಎಂದು ನಿಗದಿಪಡಿಸಲಾಗಿದೆ. ವಯಸ್ಸನ್ನು ದಿನಾಂಕ 30-04-2025 ಕ್ಕೆ ಲೆಕ್ಕಾಚಾರ ಹಾಕಲಾಗುತ್ತದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿರುತ್ತದೆ.
ಅಭ್ಯರ್ಥಿಯು ಎರಡು ವರ್ಷ ಯಾವುದೇ ವಾಣಿಜ್ಯ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಅಥವಾ ಆರ್‌ಬಿಐನಿಂದ ಅಂಗೀಕೃತವಾಗಿರುವ ಯಾವುದೇ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕಿರುತ್ತದೆ. ಅಲ್ಲದೆ, ಉತ್ತಮ ಸಿಬಿಲ್  ಸ್ಕೋರ್ ಹೊಂದಿರಬೇಕಾದದೂ ಅಗತ್ಯ.

ನೇಮಕ ಹೇಗೆ?

ಮೊದಲಿಗೆ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಯ ದಾಖಲೆಗಳನ್ನು ಬ್ಯಾಂಕಿನ ʻಪರಿಶೀಲನಾ ಸಮಿತಿʼ (Screening Committee ) ಪರಿಶೀಲಿಸಿ, ವೃತ್ತವಾರು ಮೆರಿಟ್ ಪಟ್ಟಿಯನ್ನು ಪ್ರಕಟಿಸಲಿದೆ. ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಸಂದರ್ಶನ ನಡೆಸಿ, ಆನ್‌ಲೈನ್ ಪರೀಕ್ಷೆಯಲ್ಲಿ ಪಡೆದ ಅಂಕ ಮತ್ತು ಸಂದರ್ಶನದಲ್ಲಿ ಪಡೆದ ಅಂಕವನ್ನು 75:25 ಅನುಪಾತದಲ್ಲಿ ಲೆಕ್ಕಾಚಾರ ಹಾಕಿ ಹೆಚ್ಚು ಅಂಕಪಡೆದ ಅಭ್ಯರ್ಥಿಗಳ (ಮೀಸಲಾತಿ ಅನ್ವಯಿಸಿ) ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಈ ಅಭ್ಯರ್ಥಿಗಳಲ್ಲಿ ಅಗತ್ಯ ಇರುವ ಅಭ್ಯರ್ಥಿಗಳಿಗೆ ಭಾಷಾ ಪರೀಕ್ಷೆ ನಡೆಸಿ, ಇದರಲ್ಲಿ ಅರ್ಹತೆ ಪಡೆದವರನ್ನು ನೇಮಕಮಾಡಿಕೊಳ್ಳಲಾಗುತ್ತದೆ. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಿ, ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಈ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿರುತ್ತದೆ.
ಆನ್‌ಲೈನ್ ಪರೀಕ್ಷೆಯು 120 ಅಂಕಗಳಿಗೆ ನಡೆಯಲಿದ್ದು, ನಾಲ್ಕು ವಿಭಾಗಗಳನ್ನು ಹೊಂದಿರುತ್ತದೆ. ಅವುಗಳೆಂದರೆ;


1. ಇಂಗ್ಲಿಷ್ ಭಾಷೆ (English Language)
2.ಬ್ಯಾಂಕಿಂಗ್ ಕ್ಷೇತ್ರದ ಜ್ಞಾನ (Banking Knowledge)
3.ಸಾಮಾನ್ಯ ಜ್ಞಾನ/ಆರ್ಥಿಕತೆ (General Awareness/ Economy)
4.ಕಂಪ್ಯೂಟರ್ ಆಪ್ಟಿಡ್ಯೂಡ್ (Computer Aptitude)
ಒಟ್ಟು 120 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆ ಬರೆಯಲು 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ವಸ್ತುನಿಷ್ಠ ಮಾದರಿಯಲ್ಲಿ ನಡೆಯುವ ಈ ಪರೀಕ್ಷೆಯ ಪ್ರತಿ ವಿಭಾಗದಲ್ಲಿಯೇ ಇಂತಿಷ್ಟೇ ಅಂಕ ಪಡೆದಿರಲೇಬೇಕೆಂಬ ನಿಯಮವೇನೂ ಇರುವುದಿಲ್ಲ. ಅಂತೆಯೇ ಋಣಾತ್ಮಕ ಮೌಲ್ಯಮಾಪನ ಕೂಡ ಇರುವುದಿಲ್ಲ.

ಈ ಪರೀಕ್ಷೆಯ ಜತೆಯಲ್ಲಿಯೇ ಇಂಗ್ಲಿಷ್ ಭಾಷೆಗೆ ಸಂಬAಧಿಸಿದ ವಿವರಣಾತ್ಮಕ ಪರೀಕ್ಷೆ (Descriptive Test)ನಡೆಯಲಿದೆ.

ಪತ್ರ ಮತ್ತು ಪ್ರಬಂಧ ಬರೆಯುವುದಕ್ಕೆ ಸಂಬಂಧಿಸಿದಂತೆ ತಲಾ ಒಂದೊಂದು ಪ್ರಶ್ನೆ ಕೇಳಲಾಗಿರುತ್ತದೆ. ಇದಕ್ಕೆ ಉತ್ತರ ಬರೆಯಲು 30 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. 50 ಅಂಕಗಳಿಗೆ ಈ ಪರೀಕ್ಷೆ ನಡೆಯಲಿದೆ.

ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ಮೈಸೂರಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಮ್ಮ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಂದರ್ಶನಕ್ಕೆ 50 ಅಂಕ ನಿಗದಿಪಡಿಸಲಾಗಿರುತ್ತದೆ. ಇದರಲ್ಲಿ ಬ್ಯಾಂಕ್ ನಿಗದಿಪಡಿಸಿರುವಷ್ಟು ಕನಿಷ್ಠ ಅಂಕ ಪಡೆದ ಅಭ್ಯರ್ಥಿಗಳನ್ನು ಮಾತ್ರ ನೇಮಕಕ್ಕೆ ಪರಿಗಣಿಸಲಾಗುತ್ತದೆ.

18 ಸಾವಿರ ಹುದ್ದೆಗಳಿಗೆ ನೇಮಕ

ಎಸ್‌ಬಿಐ ಬ್ಯಾಂಕ್ ಮುಂದಿನ ಆರ್ಥಿಕ ಸಾಲಿನ ಒಳಗೆ 18 ಸಾವಿರ ಹೊಸ ಉದ್ಯೋಗಿಗಳನ್ನು ಬ್ಯಾಂಕಿಗೆ ಸೇರ್ಪಡೆ ಮಾಡಿಕೊಳ್ಳಲು ಉದ್ದೇಶಿಸಿದೆ. ಈ ವಿಷಯವನ್ನು ಬ್ಯಾಂಕಿನ ಅಧ್ಯಕ್ಷ ಸಿ.ಎಸ್. ಶೆಟ್ಟಿ ಮೊದಲ ತ್ರೈಮಾಸಿಕದ ವರದಿ ಪ್ರಕಟಿಸುವ ಸಂದರ್ಭದಲ್ಲಿ ತಿಳಿಸಿದ್ದಾರೆ. ಹೀಗಾಗಿ ಸದ್ಯವೇ ಬ್ಯಾಂಕಿನಿAದ ಬೃಹತ್ ನೇಮಕ ಪ್ರಕ್ರಿಯೆ ಅರಂಭವಾಗಬಹುದು ಎಂದು ಅಂದಾಜಿಸಲಾಗುತ್ತಿದೆ.


ಐಬಿಪಿಎಸ್‌ನಿಂದ ಸದ್ಯವೇ ಅಧಿಸೂಚನೆ


ದೇಶದ ರಾಷ್ಟ್ರೀಯಕೃತ ಬ್ಯಾಂಕುಗಳಲ್ಲಿನ ವಿವಿಧ ಹುದ್ದೆಗಳಿಗೆ ನೇಮಕ ಮಾಡುವ ʻಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆʼ (ಐಬಿಪಿಎಸ್) ಸದ್ಯವೇ ಈ ಸಾಲಿನ ನೇಮಕಾತಿ ಪರೀಕ್ಷೆಗಳನ್ನು ಆರಂಭಿಸಲಿದೆ. ಈಗಾಗಲೇ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೊದಲಿಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿನ (ಆರ್‌ಆರ್‌ಬಿ) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಲಿದ್ದು, ಮೇ ಅಂತ್ಯದೊಳಗೆ ಈ ಸಂಬAಧ ಅಧಿಸೂಚನೆ ಪ್ರಕಟಿಸುವ ನಿರೀಕ್ಷೆಇದೆ. ಪೂರ್ವಭಾವಿ ಪರೀಕ್ಷೆಗಳು ಜುಲೈ ಕೊನೆಯ ವಾರದಿಂದ ಆರಂಭಗೊAಡು ಸೆಪ್ಟೆಂಬರ್ ಮೊದಲ ವಾರದ ವರೆಗೆ ನಡೆಯಲಿವೆ.
ಆನಂತರ ಪ್ರೊಬೆಷನರಿ ಆಫೀಸರ್/ ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳಿಗೆ, ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಹಾಗೂ ಕ್ಲರಿಕಲ್ ಕೇಡರ್‌ನ ʻಕಸ್ಟಮರ್ ಸರ್ವೀಸ್ ಅಸೋಸಿಯೇಟ್ಸ್ʼ (ಸಿಎಸ್‌ಎ) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಲಾಗುತ್ತದೆ.

ಇನ್ನಷ್ಟು ಉದ್ಯೋಗಾವಕಾಶ

ಬ್ಯಾಂಕ್ ಆಫ್ ಬರೋಡ (ಬಿಒಬಿ) 500 ಕಚೇರಿ ಸಹಾಯಕ (ಆಫೀಸ್ ಅಸಿಸ್ಟೆಂಟ್) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ನಮ್ಮ ರಾಜ್ಯದಲ್ಲಿ 31 ಹುದ್ದೆಗಳಿದ್ದು, ಕನ್ನಡ ಬಲ್ಲವರಿಗೇ ಈ ಹುದ್ದೆಗಳನ್ನು ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ದಿನಾಂಕ: 23-05-2025 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://www.bankofbaroda.in

ಐಡಿಬಿಐ ಬ್ಯಾಂಕ್ 676 ಜ್ಯೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಜೆಎಎಂ) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಯಾವುದೇ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ನಾಂಕ: 20-05-2025 ಕೊನೆಯ ದಿನವಾಗಿರುತ್ತದೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://www.idbibank.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.