ADVERTISEMENT

ಮರಳಿ ಕಚೇರಿಗೆ: ಜೊತೆಗಿರಲಿ ಸಿದ್ಧತೆ

ಸುಧಾ ಹೆಗಡೆ
Published 13 ಅಕ್ಟೋಬರ್ 2020, 19:30 IST
Last Updated 13 ಅಕ್ಟೋಬರ್ 2020, 19:30 IST
ವರ್ಕ್‌ ಫ್ರಮ್‌ ಹೋಂನ ಪ್ರಾತಿನಿಧಿಕ ಚಿತ್ರ
ವರ್ಕ್‌ ಫ್ರಮ್‌ ಹೋಂನ ಪ್ರಾತಿನಿಧಿಕ ಚಿತ್ರ    

‘ಇಷ್ಟು ದಿನ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದೆ. ಕೊರೊನಾ ಸೋಂಕು ಕಡಿಮೆಯಾದ ಮೇಲೆ ಪುನಃಕಚೇರಿಗೆಹೋದರೆ ಅಲ್ಲಿಯ ಕೆಲಸದ ರೀತಿಗೆ ಹೊಂದಿಕೊಳ್ಳುವುದು ಹೇಗೆ ಎಂದು ಒಮ್ಮೊಮ್ಮೆ ಚಿಂತೆಯಾಗುತ್ತಿದೆ’ ಎನ್ನುವ ಜಾಹೀರಾತು ಕಂಪನಿಯೊಂದರ ಎಕ್ಸಿಕ್ಯುಟಿವ್‌ ರೀನಿ ಉತ್ತಪ್ಪ ಇದಕ್ಕಾಗಿ ತಜ್ಞರ ಸಲಹೆ ಸಿಗಬಹುದೇ ಎಂದು ಆನ್‌ಲೈನ್‌ನಲ್ಲಿ ಹುಡುಕಾಡುತ್ತಿದ್ದಾಳೆ.

ಕೊರೊನಾ ಸೋಂಕು ಶುರುವಾದಾಗ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದವರು ನಿಧಾನವಾಗಿಕಚೇರಿಗೆಮರಳುತ್ತಿದ್ದಾರೆ. ಆದರೆ ಮನೆಯಿಂದಲೇ ಕೆಲಸ ಮಾಡಿದವರಿಗೆ ಕಚೇರಿಯಲ್ಲಿನ ಶಿಸ್ತುಬದ್ಧ ಕೆಲಸಕ್ಕೆ ಹೊಂದಿಕೊಳ್ಳುವುದು ಹೇಗೆ ಎಂಬ ಬಗ್ಗೆ ಇನ್ನಿಲ್ಲದ ಚಿಂತೆ ಕಾಡುತ್ತಿದೆ.

ಸಹೋದ್ಯೋಗಿಗಳ ಸಂಪರ್ಕವಿರಲಿ

ADVERTISEMENT

‘ಇದೇನೂ ಕಷ್ಟವಲ್ಲ, ನಿಮ್ಮ ಮನಸ್ಸಿನ ಹೊಯ್ದಾಟವಷ್ಟೆ. ನಿಮ್ಮ ಸಹೋದ್ಯೋಗಿಗಳ ಜೊತೆ ಆನ್‌ಲೈನ್‌ನಲ್ಲಿ ಭೇಟಿ ಮಾಡಿ. ಇದು ಒಂದು ರೀತಿಯ ವರ್ಚುವಲ್‌ ಕಾಫಿ ಬ್ರೇಕ್‌ ಎಂದುಕೊಳ್ಳಿ. ಅವರೇನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಿ’ ಎನ್ನುತ್ತಾರೆ ವೃತ್ತಿ ಮಾರ್ಗದರ್ಶಕ ಪ್ರೊ.ಎಸ್‌.ಕೆ. ಜಾರ್ಜ್‌. ಜೊತೆಗೆ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಪುನಃ ಬೆಳೆಸಿಕೊಂಡರೆ ಒಳ್ಳೆಯದು ಎಂಬ ಮಾತನ್ನೂ ಅವರು ಸೇರಿಸುತ್ತಾರೆ.

ಗೂಗಲ್‌ ಮೀಟ್‌ ಇದ್ದರೆ ನಿಮ್ಮ ಮೇಲಧಿಕಾರಿಗಳ ಅನುಮತಿ ಪಡೆದುಕೊಂಡು ಪುನಃಕಚೇರಿಗೆಬರುವ ಬಗ್ಗೆ ಸೌಹಾರ್ದವಾಗಿ ಸಹೋದ್ಯೋಗಿಗಳ ಜೊತೆ ಹರಟೆ ಹೊಡೆಯಬಹುದು. ಈ ಸಂದರ್ಭದಲ್ಲಿ ನಿಮ್ಮ ಆತಂಕಗಳನ್ನು ಪರಿಹರಿಸಿಕೊಳ್ಳಬಹುದು.

‘ಕಳೆದ ಕೆಲವು ತಿಂಗಳಿಂದ ನೀವು ಯಾವ ರೀತಿ ಬದುಕನ್ನು ಎದುರಿಸಿದ್ದೀರಿ, ಕಚೇರಿ ಕೆಲಸವನ್ನು ಹೊರತುಪಡಿಸಿ ಕುಟುಂಬದ ಸದಸ್ಯರ ಜೊತೆ, ಅಕ್ಕಪಕ್ಕದ ಮನೆಯವರ ಜೊತೆ ಯಾವ ತರಹದ ಸೌಹಾರ್ದ ಸಂಬಂಧ ಇಟ್ಟುಕೊಂಡಿದ್ದೀರಿ ಎಂಬುದರ ಬಗ್ಗೆಯೂ ಸಕಾರಾತ್ಮಕವಾಗಿ ಯೋಚಿಸಿ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌. ಅವರು. ‘ನೀವು ಹೊರಗಡೆ ಎಷ್ಟು ಸಲ ಹೋಗಿದ್ದೀರಿ, ಪಾರ್ಕ್‌ನಲ್ಲಿ ಸುತ್ತಾಡಿದ್ದೀರಾ ಎಂಬುದನ್ನೆಲ್ಲ ನೆನಪಿಸಿಕೊಳ್ಳಿ’ ಎನ್ನುತ್ತಾರೆ ಅವರು. ಇದರಿಂದ ಪುನಃ ಕೆಲಸಕ್ಕೆಂದುಕಚೇರಿಗೆಪ್ರಯಾಣ ಮಾಡುವಾಗ ಭಯ ಕಡಿಮೆಯಾಗುತ್ತದೆ. ಜೊತೆಗೆ ಸಹೋದ್ಯೋಗಿಗಳು ಹೇಗೆಕಚೇರಿಗೆಬರುತ್ತಾರೆ ಎಂಬುದನ್ನೂ ತಿಳಿದುಕೊಳ್ಳಿ ಎಂಬುದು ಅವರ ಸಲಹೆ.

ಮೇಲ್‌ ಬಾಕಿ ಉಳಿಸಬೇಡಿ

ನಿಧಾನವಾಗಿ ಕಚೇರಿಯ ಕೆಲಸಕ್ಕೆ ಹೊಂದಿಕೊಳ್ಳಬೇಕಾದರೆ ಮೊದಲು ಇಮೇಲ್‌ ಬಗ್ಗೆ ಗಮನಹರಿಸಿ. ಹಳೆಯ ಮೇಲ್‌ಗಳನ್ನು ಓದಿರದಿದ್ದರೆ ಓದಿ ಉತ್ತರಿಸಿ. ಎಲ್ಲಾ ಮೇಲ್‌ಗಳಿಗೂ ಉತ್ತರಿಸಬೇಕಾದ ಅವಶ್ಯಕತೆಯೂ ಬರುವುದಿಲ್ಲ. ಆದರೂ ಯಾವುದೂ ಬಾಕಿ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಒಮ್ಮೆಲೇ ಜಾಸ್ತಿ ಮೇಲ್‌ಗಳಿದ್ದರೆ ಆತಂಕಪಡುವ ಅಗತ್ಯವಿಲ್ಲ. ಸಹೋದ್ಯೋಗಿಗಳ ನೆರವು ಕೋರಬಹುದು.

ಇದು ಮೊದಲ ಹಂತವಾದರೆ ಉಳಿದ ಎಲ್ಲ ಕೆಲಸಗಳನ್ನೂ ಇದೇ ರೀತಿ ಮಾಡಬಹುದು. ಮನೆಯಿಂದಲೇ ಕೆಲಸ ಮಾಡುವಾಗ ಕೆಲವರು ಸಮಯ ನಿಗದಿಪಡಿಸಿಕೊಂಡಿರುವುದಿಲ್ಲ. ಹಾಗೆಯೇ ಯಾವ ಕೆಲಸವಾದ ಮೇಲೆ ಯಾವುದನ್ನು ಮಾಡಬೇಕು ಎಂಬುದರ ಬಗ್ಗೆಯೂ ಅಷ್ಟೊಂದು ತಲೆ ಕೆಡಿಸಿಕೊಂಡಿರುವುದಿಲ್ಲ.ಕಚೇರಿಗೆಹೋದಾಗ ಇದನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಕೆಲಸ ಮುಗಿಸಲು ಸಮಯವನ್ನು ನಿಗದಿಪಡಿಸಿಕೊಂಡು ಅಷ್ಟನ್ನೂ ಪೂರೈಸಲು ಯತ್ನಿಸಿ. ಆರಂಭದಲ್ಲಿ ಒಂದಿಷ್ಟು ಏರುಪೇರಾಗಬಹುದು. ದಿನ ಕಳೆದಂತೆ ನಿಮ್ಮ ಮೊದಲಿನ ವೇಗಕ್ಕೆ ಮರಳಬಹುದು. ಹಾಗೆಯೇ ಇಂದು ಯಾವ ಕೆಲಸಕ್ಕೆ ಮಹತ್ವ ನೀಡಬೇಕು, ಯಾವುದನ್ನು ನಾಳೆ ಬೇಕಾದರೂ ಮಾಡಬಹುದು ಎಂಬುದರ ಪಟ್ಟಿ ತಯಾರಿಸಿಕೊಳ್ಳಿ. ಕ್ರಮೇಣ ಈ ವಿಭಾಗದಲ್ಲೂ ಮೊದಲಿನ ಚಾಕಚಕ್ಯತೆ ಗಳಿಸಬಹುದು.

ಕಂಪ್ಯೂಟರ್‌ ತಂತ್ರಜ್ಞಾನದಲ್ಲಿ ಬದಲಾವಣೆ ಯಾಗಿರಬಹುದು, ಹೇಗೆ ಕಲಿಯುವುದು ಎಂಬುದು ಕೆಲವರ ಆತಂಕ. ಆತಂಕ ಪಡುವುದಕ್ಕಿಂತ ಹೊಸ ಕೌಶಲಗಳನ್ನು ಕಲಿಯಲು, ಅಳವಡಿಸಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.