ADVERTISEMENT

ಪಿಯುಸಿಯಿಂದಲೇ ಇರಲಿ ತಯಾರಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 19:30 IST
Last Updated 23 ಜೂನ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಒಂದು ರೀತಿಯ ಸವಾಲು. ಐಎಎಸ್‌, ಕೆಎಎಸ್‌, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಮೊದಲು ರೀಸನಿಂಗ್ ಎಬಿಲಿಟಿ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್‌, ಜನರಲ್‌ ಇಂಗ್ಲಿಷ್‌– ಇವುಗಳನ್ನು ತಿಳಿದುಕೊಂಡಿರಬೇಕು.

ಎಫ್‌ಡಿಎ–ಎಸ್‌ಡಿಎ, ಐಬಿಪಿಎಸ್‌, ಪಿಡಿಒ.. ಹೀಗೆ ಯಾವುದೇ ಪರೀಕ್ಷೆ ಇರಲಿ ಸುಮಾರು ಆರು ತಿಂಗಳ ಮೊದಲೇ ಪರೀಕ್ಷೆ ತಯಾರಿ ನಡೆಸಬೇಕಾಗುತ್ತದೆ. ಅದರೊಂದಿಗೆ ಮೇಲೆ ತಿಳಿಸಿದ ವಿಷಯಗಳನ್ನು ಗಮನದಲ್ಲಿರಿಸಿಕೊಂಡೇ ಅಧ್ಯಯನ ಮಾಡಬೇಕು.

ಸಮಯ ನಿಗದಿ

ADVERTISEMENT

ಓದಿಗೆ ಮೊದಲು ಸಮಯ ನಿಗದಿ ಮಾಡಿಕೊಂಡು ಓದಬೇಕು. ಪ್ರಶ್ನೆಪತ್ರಿಕೆ ಬಿಡಿಸುವಾಗಲೂ ಸಮಯ ನಿಗದಿ ಮಾಡಿಕೊಳ್ಳಬೇಕು. ನಂತರ ಬಿಡಿಸಿದ ಪ್ರಶ್ನೆಗಳಿಗೆ ನೀವೇ ಅಂಕ ನೀಡಿಕೊಳ್ಳಬೇಕು. ಈಗ ಪ್ರತಿ ಪರೀಕ್ಷೆಯಲ್ಲೂ ನೆಗೆಟಿವ್ ಅಂಕಗಳು ಇರುವುದರಿಂದ ಆದಷ್ಟು ತಪ್ಪು ಉತ್ತರ ನೀಡುವುದನ್ನು ಕಡಿಮೆ ಮಾಡಬೇಕು. ಯಾವ ಪರೀಕ್ಷೆ ಬರೆಯುತ್ತಿದ್ದೀರಿ ಆ ಪರೀಕ್ಷೆಗೆ ಸಂಬಂಧಿಸಿ ಅಣಕು ಪರೀಕ್ಷೆ ಮಾಡಬೇಕು.

ಆರ್‌ಆರ್‌ಆರ್ ನಿಯಮ

‘ರೀಡ್‌, ರೀಕಾಲ್‌ ಹಾಗೂ ರೀರೈಟ್ (ಆರ್‌ಆರ್‌ಆರ್‌) ನಿಯಮವನ್ನು ಪಾಲಿಸಬೇಕು. ಪದೇ ಪದೇ ಓದುವುದು, ಓದಿದ್ದನ್ನು ‍ಪುನರ್‌ಮನನ ಮಾಡಿಕೊಳ್ಳುವುದು ಹಾಗೂ ಬರೆದು ಅಭ್ಯಾಸ ಮಾಡುವುದು ಮಾಡಬೇಕು. ಹೆಚ್ಚಿನ ಸ್ಪರ್ಧಾರ್ಥಿಗಳು ಓದುತ್ತಾ ಓದುತ್ತಾ ಮುಂದೆ ಸಾಗುತ್ತಾರೆ. ಹೀಗೆ ಮಾಡಿದರೆ ಹಿಂದಿನದ್ದು ಮರೆತು ಹೋಗುತ್ತದೆ. ಇದು ಸರಿಯಾದ ಮಾರ್ಗವಲ್ಲ. ಹಾಗಾಗಿ ಪುನರ್‌ಮನನಕ್ಕೆ ನಿಮ್ಮದೇ ಆದ ಪದ್ಧತಿಯನ್ನು ಬಳಸಿಕೊಳ್ಳಬಹುದು.

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ

ಒಮ್ಮೆ ಕಾನ್‌ಸ್ಟೇಬಲ್ ಪರೀಕ್ಷೆ ಬರೆದರೆ, ಪಿಎಸ್‌ಐ, ಎಫ್‌ಡಿಎ ಹೀಗೆ ಬೇರೆ ಬೇರೆ ಪರೀಕ್ಷೆಗಳನ್ನು ಬರೆಯುತ್ತಾ ಹೋಗುತ್ತೀರಿ. ನೀವು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಷ್ಟೂ ನಿಮ್ಮಲ್ಲಿ ಆತ್ಮವಿಶ್ವಾಸದ ಮಟ್ಟ ಹೆಚ್ಚುತ್ತಾ ಹೋಗುತ್ತದೆ. ಆಗ ನಿಮ್ಮಲ್ಲಿ ‘ನಾನು ಈಗ ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದು’ ಎಂಬ ವಿಶ್ವಾಸ ಬೆಳೆಯುತ್ತಾ ಹೋಗುತ್ತದೆ. ಇದು ನಿಮ್ಮಲ್ಲಿ ಆತ್ಮವಿಶ್ವಾಸನ್ನೂ ಹೆಚ್ಚಿಸುತ್ತದೆ.

ಪಿಯುಸಿಯಿಂದಲೇ ತಯಾರಿ

ಪಿಯುಸಿ ವಿದ್ಯಾರ್ಥಿಗಳ ಮನದಲ್ಲಿ ನಾವು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎಂಬ ಆಲೋಚನೆ ಹುಟ್ಟುವುದೇ ಬಹಳ ಉತ್ತಮ ವಿಷಯ. ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮನ್ನು ತಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಾನು ಯಾವ ಹಂತದಲ್ಲಿದ್ದೇನೆ ಎನ್ನುವುದು ನೋಡಬೇಕು. ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬಾರದು. ಇದರೊಂದಿಗೆ ಪ್ರತಿನಿತ್ಯ ಓದುವುದು, ಪ್ರಶ್ನೆಪತ್ರಿಕೆ ಬಿಡಿಸುವುದು ಮುಂತಾದುವನ್ನು ತಪ್ಪದೇ ಮಾಡಬೇಕು.

ಗಣಿತ ಕಷ್ಟವಲ್ಲ

ಬಹಳಷ್ಟು ಸ್ಪರ್ಧಾರ್ಥಿಗಳಿಗೆ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಅಥವಾ ಗಣಿತ ಕಷ್ಟ ಎನ್ನುವುದು ಮನಸ್ಸಿನಲ್ಲಿರುತ್ತದೆ. ಆದರೆ ಯಾವ ವಿಷಯವೂ ಕಷ್ಟವಲ್ಲ. ಅದನ್ನು ಸ್ವತಃ ಮನಸ್ಸು ಮಾಡಿ ಆ ವಿಷಯದೊಂದಿಗೆ ಗೆಳೆತನ ಬೆಳೆಸಿಕೊಳ್ಳಬೇಕು. ಗಣಿತದ ಮೂಲದಿಂದ ಕಲಿಯಲು ಆರಂಭಿಸಬೇಕು. ಆಗ ಇನ್ನೊಂದು ಆರು ತಿಂಗಳಿಗೆ ಒಂದು ಹಂತಕ್ಕೆ ಬರಲು ಸಾಧ್ಯ. ಗಣಿತದಲ್ಲಿ ಹೆಚ್ಚು ವೇಗವಾಗಿರಬೇಕು.

ಪ್ರಶ್ನೆಯನ್ನು ಅರ್ಥ ಮಾಡಿಕೊಂಡು, ಆ ಪ್ರಶ್ನೆಗೆ ಹೇಗೆ ಉತ್ತರಿಸುತ್ತೀರಿ ಎಂಬುದು ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಬಹಳ ಮುಖ್ಯವಾಗುತ್ತದೆಯೇ ಹೊರತು ತುಂಬಾ ಓದಿದ್ದೀರಿ ಎನ್ನುವುದು ಎಲ್ಲಿಯೂ ಮುಖ್ಯವಾಗುವುದಿಲ್ಲ. ಪ್ರಶ್ನೆಪತ್ರಿಕೆಯಲ್ಲಿ ಉತ್ತರವನ್ನು ಹೇಗೆ ನಿರೂಪಿಸಿದ್ದೀರಿ ಎಂಬುದು ಮುಖ್ಯವಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ, ಯಾವ ರೀತಿ ತಯಾರಿ ನಡೆಸಬೇಕು, ಯಾವೆಲ್ಲಾ ವಿಷಯಗಳನ್ನು ಓದಬೇಕು ಎಂಬ ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳಲು ಕೋಚಿಂಗ್ ಹೋಗುವುದು ಉತ್ತಮ. ಅಲ್ಲಿ ನುರಿತ ತರಬೇತುದಾರರಿರುತ್ತಾರೆ. ಒಮ್ಮೆ ಪರೀಕ್ಷೆ ಹೇಗೆ ಬರೆಯಬೇಕು ಎಂಬುದು ನಿಮ್ಮ ತಲೆಯಲ್ಲಿ ಬಂದರೆ ಸ್ವ–ಮಾರ್ಗದರ್ಶನದೊಂದಿಗೆ ಮುಂದಿನ ತಯಾರಿ ನಡೆಸಬಹುದು. ಇದರೊಂದಿಗೆ ಪತ್ರಿಕೆಗಳನ್ನು ಓದಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವುದು ಅಗತ್ಯವಾಗುತ್ತದೆ.

(ಲೇಖಕ: ಅಧ್ಯಯನ ನಿರ್ದೇಶಕರು, ಐಐಸಿಇ ಕರೀಯರ್‌ ಕನ್ಸಲ್ಟಂಟ್ಸ್‌, ಧಾರವಾಡ)

ನಿರೂಪಣೆ: ರೇಷ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.