ನವದೆಹಲಿ: ವಿವಿಧ ಪಡೆಗಳಲ್ಲಿ ನೇಮಕಾತಿಗೆ ಇತ್ತೀಚೆಗೆ ನಡೆಸಲಾಗಿದ್ದ ಪರೀಕ್ಷೆಗೆ ಮರುಪರೀಕ್ಷೆ ನಡೆಸಲು ಕೇಂದ್ರ ಸಿಬ್ಬಂದಿ ಆಯ್ಕೆ ಸಮಿತಿ (ಎಸ್‌ಎಸ್‌ಸಿ) ನಿರ್ಧರಿಸಿದೆ. ಆದರೆ ಎಲ್ಲಾ ಅಭ್ಯರ್ಥಿಗಳಿಗೂ ಮರುಪರೀಕ್ಷೆ ನಡೆಸುತ್ತಿಲ್ಲ. ಕಳೆದ ಫೆ.20 ಮತ್ತು ಮಾ.7 ರಂದು ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ ಪೈಕಿ 16,185 ಅಭ್ಯರ್ಥಿಗಳಿಗೆ ಮಾತ್ರವೇ ಮರುಪರೀಕ್ಷೆ ನಡೆಸುವುದಾಗಿ ತಿಳಿಸಿದೆ.
ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ಪಟನಾ, ಗಯಾ, ಲಖನೌ, ನವದೆಹಲಿ, ಗಾಜಿಯಾಬಾದ್, ಅಹಮದಾಬಾದ್, ಖಾನ್ಪುರ, ಮೀರತ್ ಮತ್ತು ವಾರಾಣಸಿ ಸೇರಿದಂತೆ ಇತರ ಪರೀಕ್ಷಾ ಕೇಂದ್ರಗಳ ಅಭ್ಯರ್ಥಿಗಳಿಗಷ್ಟೇ ಮಾ.30 ರಂದು ಮರುಪರೀಕ್ಷೆ ನಿಗದಿ ಮಾಡಲಾಗಿದೆ.
ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಪೊಲೀಸ್ ಪೇದೆ, ಸೆಕ್ರೆಟರಿಯೆಟ್ ಭದ್ರತಾ ಪಡೆ, ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ ರೈಫಲ್‌ಮೆನ್ ನೇಮಕಾತಿಗಳಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಆಯೋಗವು ನಡೆಸಿತ್ತು.
ಆದರೆ ಪರೀಕ್ಷಾ ಪರಿಶೀಲನೆಯಲ್ಲಿ ಕೆಲವೆಡೆ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿರುವುದರಿಂದ ನಿರ್ದಿಷ್ಟ ಸ್ಥಳ, ಶಿಫ್ಟ್ ಮತ್ತು ದಿನಾಂಕಗಳಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ಎಸ್‌ಎಸ್‌ಸಿ ತಿಳಿಸಿದೆ. ಮರು ಪರೀಕ್ಷೆ ನಡೆಯಲಿರುವ ಸ್ಥಳ ಮತ್ತು ಅಭ್ಯರ್ಥಿಗಳ ಮಾಹಿತಿಯನ್ನೂ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.