ADVERTISEMENT

ಬ್ಯಾಂಕ್‌ ಕೆಲಸ ಬೇಕಾ? ಪರೀಕ್ಷೆಗೆ ತಯಾರಾಗಿ

ಐಬಿಪಿಎಸ್‌ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 3:11 IST
Last Updated 7 ಜುಲೈ 2022, 3:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಬೇಕು ಎಂಬ ಕನಸು ಹೊತ್ತವರಿಗೆ, ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ಸಿಹಿ ಸುದ್ದಿ ನೀಡಿದ್ದು, ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 6035 ಕ್ಲರ್ಕ್‌ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಕರ್ನಾಟಕದ ವಿವಿಧ ಬ್ಯಾಂಕ್‌ಗಳ 358 ಹುದ್ದೆಗಳು ಸೇರಿವೆ. ಈ ಹುದ್ದೆಗಳ ಭರ್ತಿಗಾಗಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ಸಂಸ್ಥೆ ಮುಂದಾಗಿದೆ.ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು ಮೂರು ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಆನ್‌ಲೈನ್ ಮೂಲಕ ನಡೆಯಲಿದೆ.

ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

ಕೆನರಾ ಬ್ಯಾಂಕ್ 140, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 156, ಯೂಕೊ ಬ್ಯಾಂಕ್ 13, ಪಂಜಾಬ್ ಆ್ಯಂಡ್‌ ಸಿಂಧ್‌ ಬ್ಯಾಂಕ್ 2, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 36, ಬ್ಯಾಂಕ್ ಆಫ್ ಇಂಡಿಯಾ 6, ಪಂಜಾಬ್ ನ್ಯಾಷನಲ್ ಬ್ಯಾಂಕ್ 5, ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ. ಹೀಗೆ ಒಟ್ಟಾರೆ ಕರ್ನಾಟಕದಲ್ಲಿ 358 ಹುದ್ದೆಗಳಿವೆ. ಯಾವ ವರ್ಗಕ್ಕೆ ಎಷ್ಟು ಹುದ್ದೆಗಳು ಮೀಸಲಿವೆ ಎಂಬ ಮಾಹಿತಿ ಯನ್ನು ಈ ಕೆಳಗೆ ನೀಡಿರುವ ಕೋಷ್ಠಕದಲ್ಲಿ ತಿಳಿಸಲಾಗಿದೆ.

ADVERTISEMENT

ಶೈಕ್ಷಣಿಕ ಅರ್ಹತೆ

ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ, ಕಂಪ್ಯೂಟರ್‌ ಜ್ಞಾನ ಹೊಂದಿರುವುದು ಕಡ್ಡಾಯ. ಈ ಸಂಬಂಧ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಹೊಂದಿರಬೇಕು. ಅಂದರೆ, ಕಂಪ್ಯೂಟರ್ ಕಲಿಕೆಯಲ್ಲಿ ಡಿಪ್ಲೊಮಾ/ಸರ್ಟಿಫಿಕೆಟ್‌ ಕೋರ್ಸ್‌/ಡಿಗ್ರಿ/ ಶಾಲಾ–ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಮಾಹಿತಿ ತಂತ್ರಜ್ಞಾನ (Information Technology)ವನ್ನುಒಂದು ವಿಷಯವಾಗಿ ಓದಿರುವ ಪ್ರಮಾಣಪತ್ರವಿರಬೇಕು. ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯವಿರಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಜುಲೈ 21 ಕೊನೆದಿನ. ಆನ್‌ಲೈನ್ ಅರ್ಜಿ ನಮೂನೆಯಲ್ಲಿಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಾದ ಬ್ಯಾಂಕ್‌ಗಳ ಪಟ್ಟಿ ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ಆದ್ಯತೆಯ ಬ್ಯಾಂಕ್‌ ಅನ್ನು ಅಗತ್ಯವಾಗಿ ಸೂಚಿಸಬೇಕು.

ಗಮನಿಸಿ; ಯಾವ್ಯಾವ ಬ್ಯಾಂಕ್‌ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಆ ಬ್ಯಾಂಕ್‌ಗಳ ಶಾಖೆಗಳಿವೆಯೇ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ್‌ ಬದಲಾವಣೆಗೆ/ಸ್ಥಳ ಬದಲಾವಣೆಗೆ ಅವಕಾಶ ವಿರುವುದಿಲ್ಲ.

ಮತ್ತೊಂದು ಅಂಶ ಏನೆಂದ್ರೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ, ಕೈಬರಹದ ಘೋಷಣಾ ಪತ್ರವನ್ನು (Delaration) ಸಲ್ಲಿಸಿರುತ್ತಾರೆ. ಮುಂದೆ ಆಯ್ಕೆ ಪ್ರಕ್ರಿಯೆ ಹಂತದಲ್ಲಿ ಅಥವಾ ನೌಕರಿಗೆ ಸೇರುವಾಗ ಅಭ್ಯರ್ಥಿಗಳ ಕೈಬರಹವನ್ನು ಹಿಂದೆ ಸಲ್ಲಿಸಿದ್ದ ಘೋಷಣಾ ಪತ್ರದ ಬರಹದೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಒಂದೊಮ್ಮೆ ತಜ್ಞರ ವಿಶ್ಲೇಷಣೆಯಲ್ಲಿ ಕೈಬರಹದಲ್ಲಿ ಭಿನ್ನತೆ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುತ್ತದೆ. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಪ್ರಕ್ರಿಯೆಗಳನ್ನು ಅನುಸರಿಸಬೇಕು.

ಪರೀಕ್ಷಾ ಪೂರ್ವ ತರಬೇತಿ

ಐಬಿಪಿಎಸ್ ಎಸ್‌.ಸಿ/ಎಸ್‌.ಟಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು, ಮಾಜಿ ಸೈನಿಕರು, ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು. ತರಬೇತಿ ಸ್ಥಳದ ಖರ್ಚು ವೆಚ್ಚಗಳನ್ನು ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳೇ ಭರಿಸಬೇಕಾಗುತ್ತದೆ.

ಪರೀಕ್ಷಾ ಪ್ರಕ್ರಿಯೆ‌

ಎರಡು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಮೊದಲ ಹಂತ– ಪೂರ್ವಭಾವಿ ಪರೀಕ್ಷೆ. ಇದು ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯುತ್ತದೆ. ಎರಡನೇ ಹಂತ– ಮಖ್ಯಪರೀಕ್ಷೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ನಡೆಯುತ್ತದೆ. ಎರಡೂ ಆನ್‌ಲೈನ್‌ ಮೂಲಕ ನಡೆಯುವ ಪರೀಕ್ಷೆಗಳಾಗಿವೆ.

ವಯೋಮಿತಿ

ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷಗಳು (ಜುಲೈ 1, 2022ರವರೆಗೆ). ಸರ್ಕಾರದ ನಿಯಮದಂತೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ,ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಶುಲ್ಕ ಪಾವತಿ

ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹850 ಹಾಗೂ ಎಸ್‌ಸಿ/ಎಸ್‌ಟಿ/ಅಂಗವಿಕಲರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹175 ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು ಇಂಟಿಮೇಷನ್ ಶುಲ್ಕ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಅರ್ಜಿ ನೋಂದಣಿ ಮತ್ತು ಪರೀಕ್ಷೆ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: www.ibps.in

ಇದು ನೆನಪಿರಲಿ

ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ವರ್ಗ ಎಂದೇ ನಮೂದಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non cremy layer) ಷರತ್ತಿನೊಂದಿಗೆ ಒಬಿಸಿ ಪ್ರಮಾಣಪತ್ರವನ್ನು ಹೊಂದಿರಬೇಕು. ಎಲ್ಲ ಪ್ರಮಾಣ ಪತ್ರಗಳನ್ನು ಐಬಿಪಿಎಸ್ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ನಮೂನೆಯಲ್ಲಿಯೆ ಸಲ್ಲಿಸಬೇಕು.

(ಲೇಖಕರು: ಬ್ಯಾಂಕಿಂಗ್ ಪರೀಕ್ಷೆ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು. ಮಡಿಕೇರಿ) (ಮುಂದಿನ ವಾರ: ಪಠ್ಯಕ್ರಮಗಳು ಹಾಗೂ ಹೊಸದಾಗಿ ಬ್ಯಾಂಕಿಂಗ್ ಪರೀಕ್ಷೆ ಬರೆಯುವವರಿಗೆ ಮಾಹಿತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.