ADVERTISEMENT

ಸರ್ಕಾರಿ ನೌಕರರಿಗೆ ‘ಕಂಪ್ಯೂಟರ್’ ಕಡ್ಡಾಯ

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ : ಎದುರಿಸುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2016, 19:30 IST
Last Updated 11 ಡಿಸೆಂಬರ್ 2016, 19:30 IST
ಸರ್ಕಾರಿ ನೌಕರರಿಗೆ ‘ಕಂಪ್ಯೂಟರ್’ ಕಡ್ಡಾಯ
ಸರ್ಕಾರಿ ನೌಕರರಿಗೆ ‘ಕಂಪ್ಯೂಟರ್’ ಕಡ್ಡಾಯ   

ಶ್ರೀನಿವಾಸ ಆರ್. ಟಿ. ಎಸ್.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯವಾಗಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಲೇ ಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಿ ನೌಕರರಿಗೆ ಬಂದೊದಗಿದೆ. ಈ ಪರೀಕ್ಷೆ ಪಾಸು ಮಾಡದೇ ಇದ್ದಲ್ಲಿ ದಿನಾಂಕ  7.3.2018ರ ನಂತರ ವಾರ್ಷಿಕ ವೇತನ ಬಡ್ತಿಗೆ ಅರ್ಹರಿರುವುದಿಲ್ಲವೆಂದು ಐದು ವರ್ಷಗಳ ಹಿಂದೆಯೇ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಯಾರೆಲ್ಲ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಯಾರಿಗೆ ವಿನಾಯಿತಿ ಇದೆ, ಪರೀಕ್ಷೆ ಎಲ್ಲಿ ಹೇಗೆ ಬರೆಯಬೇಕೆಂಬ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಈ ಲೇಖನ. 

ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳನ್ನು 7.3.2012ರಲ್ಲಿಯೇ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರಂತೆ ಈ ನಿಯಮಗಳ ಅನ್ವಯ ದಿನಾಂಕ 7.3.2012ರ ನಂತರ ನೇರ ನೇಮಕಾತಿ ಹೊಂದಿದ ಸರ್ಕಾರಿ ನೌಕರರು ಐದು ವರ್ಷಗಳೊಳಗೆ (7.3.2017ರೊಳಗೆ) ಹಾಗೂ ಮುಂದಿನ ವಾರ್ಷಿಕ ವೇತನ ಬಡ್ತಿಗೆ ಆರು ವರ್ಷದ ಅವಧಿಯೊಳಗೆ ಅಂದರೆ (7.3.2018ರವರೆಗೆ)  ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೇರ್ಗಡೆ ಹೊಂದಲು ಅವಕಾಶ ನೀಡಲಾಗಿದೆ.

ಅದರಂತೆ ಈ ಅಧಿಸೂಚನೆ ಹೊರಡಿಸಿದ ನಂತರ (ಅಂದರೆ 7.3.2012ರ ನಂತರ) ನೇಮಕಾತಿ ಹೊಂದಿದ  ಅಧಿಕಾರಿಗಳು, ನೌಕರರು ಶೇ. 60ರಷ್ಟು, ಅಂದರೆ 48 ಅಂಕಗಳನ್ನು ಹಾಗೂ 7.3.2012ಕ್ಕೂ ಮೊದಲೇ ಸೇವೆಯಲ್ಲಿರುವ ಅಧಿಕಾರಿಗಳು, ನೌಕರರು ಶೇ. 35ರಷ್ಟು, ಅಂದರೆ 28 ಅಂಕಗಳಿಗೆ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಎಲ್ಲ ಅಧಿಕಾರಿಗಳು ನೌಕರರು ಸದರಿ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಯಾವುದೇ ಮುಂಬಡ್ತಿ ಅಥವಾ ವಾರ್ಷಿಕ ಬಡ್ತಿ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ.

ಯಾರಿಗೆ ಈ ಪರೀಕ್ಷೆಯಿಂದ ವಿನಾಯಿತಿ? 
ವಾಹನಚಾಲಕರು, ಪ್ರಾಥಮಿಕ ಶಾಲಾಶಿಕ್ಷಕರು, ಪೊಲೀಸ್ ಕಾನ್‌ಸ್ಟೆಬಲ್‌ಗಳು, ನರ್ಸ್‌ಗಳು, ರೇಷ್ಮೆಪ್ರದರ್ಶಕರು, ಅರಣ್ಯ ರಕ್ಷಕರು, ಅಬಕಾರಿರಕ್ಷಕರು, ಆರೋಗ್ಯಕಾರ್ಯಕರ್ತರು, ಅರಣ್ಯವೀಕ್ಷಕರು, ಬೆಲೀಫ್‌ಗಳು ಮತ್ತು ಪ್ರೊಸೆಸರ್‌ಗಳು ಸರ್ವರ್‌ಗಳು ಮತ್ತು ಡಿ ಗುಂಪಿನ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

ಪ್ರೋತ್ಸಾಹಧನ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಿ ಅನುಮೋದಿತ ಎಜೆನ್ಸಿಯಿಂದ ನೀಡುವ ಪ್ರಮಾಣಪತ್ರವನ್ನು ಹಾಜರು ಪಡಿಸಿದ ಪ್ರತಿಯೊಬ್ಬ ನೌಕರನಿಗೂ ಐದು ಸಾವಿರ ರೂಪಾಯಿಗಳ ಪ್ರೋತ್ಸಾಹಧನವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಬ್ಬ ನೌಕರನು ಒಮ್ಮೆ ಈ ಪರೀಕ್ಷೆಯನ್ನು ಪಾಸು ಮಾಡಿದ ನಂತರ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗುವ ಆವಶ್ಯಕತೆಯಿಲ್ಲ.

ಪರೀಕ್ಷೆಗೆ ಹಾಜರಾಗುವ ವಿಧಾನ:  ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕಿಯೋನಿಕ್ಸ್ ಸಂಸ್ಥೆಗೆ ನೀಡಿದೆ. http://clt.karnataka.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಬೇಕು. (ಗೂಗಲ್‌ನಲ್ಲಿ KEONICS ಎಂದು ಟೈಪಿಸಿದರೂ ಈ ವೆಬ್‌ಸೈಟ್‌ನ ವಿವರಗಳು ಕಾಣಿಸಿಕೊಳ್ಳುತ್ತವೆ.) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅರ್ಹ ವೈಯಕ್ತಿಕ ಇ-ಮೇಲ್ ಮತ್ತು ಮೊಬ್ಯೆಲ್ ಸಂಖ್ಯೆಯನ್ನು ಹೊಂದಿರಬೇಕು ಮತ್ತು ಪರೀಕ್ಷೆ ಹಾಗೂ ಪ್ರಮಾಣೀಕರಣ ಪ್ರಕ್ರಿಯೆ ಪೂರ್ಣವಾಗುವವರೆಗೂ ಅದನ್ನು ಸಕ್ರಿಯವಾಗಿಡಬೇಕು.

ವೆಬ್‌ಪೇಜ್‌ ತೆಗೆದ ನಂತರ ನೋಂದಣಿ ಎಂಬುದರ ಮೇಲೆ ಕ್ಲಿಕ್ ಮಾಡಿ ಅಭ್ಯರ್ಥಿಯ ಕೆ.ಜಿ.ಐ.ಡಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ಎಂಟ್ರಿ ಮಾಡಿ ಸಬ್‌ಮಿಟ್ ಮಾಡಬೇಕು ಮತ್ತು ಅಭ್ಯರ್ಥಿಯು ಪಾಸ್‌ಪೋರ್ಟ್ ಸೈಜಿನ ಭಾವಚಿತ್ರ, (ಗರಿಷ್ಠ ಸೈಜ್: 50 ಕೆ.ಬಿ., ಕನಿಷ್ಠ ಸೈಜ್: 10 ಕೆ.ಬಿ.) ಹಾಗೂ ಆಭ್ಯರ್ಥಿಯ ಸಹಿ (20ಕೆ.ಬಿ)ಯನ್ನು ಅಪ್‌ಲೋಡ್ ಮಾಡಬೇಕು. 

ಅನಂತರ ಮೇಲ್ ಐಡಿಗೆ ಯುಸರ್ ಐ.ಡಿ. ಮತ್ತು ಪಾಸ್ವರ್ಡ್ ಬರುತ್ತದೆ ಇದನ್ನು ಬಳಸಿ ಪರೀಕ್ಷೆಯ ಪ್ರವೇಶಪತ್ರ ವನ್ನು ಪಡೆದುಕೊಳ್ಳಬಹುದು. ಪ್ರತಿ ಶನಿವಾರ ಮತ್ತು ಭಾನುವಾರ ನಿಗದಿ ಪಡಿಸಿದ ಪರೀಕ್ಷಾಕೇಂದ್ರದಲ್ಲಿ 80 ಅಂಕದ 90 ನಿಮಿಷದ ಪರೀಕ್ಷೆ ನಡೆಯುತ್ತದೆ. ಪ್ರತಿ ಶನಿವಾರ ಹಾಗೂ ಭಾನುವಾರ ನಾಲ್ಕು ಬ್ಯಾಚ್‌ಗಳಲ್ಲಿ ಪರೀಕ್ಷೆ ನಡೆಯುತ್ತದೆ. (ಎರಡನೇ ಶನಿವಾರ ಪರೀಕ್ಷೆ ನಡೆಯುವುದಿಲ್ಲ.) ನಿಮಗೆ ಬೇಕಾದ ದಿನಾಂಕ ಹಾಗೂ ಬ್ಯಾಚನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಪರೀಕ್ಷೆ ಬರೆಯಲು ಒ.ಒ.ಡಿ. ಸೌಲಭ್ಯವಿರುತ್ತದೆ. ಮೊದಲ ಬಾರಿಗೆ ಪರೀಕ್ಷಾಶುಲ್ಕ ಇರುವುದಿಲ್ಲ. ನಂತರದ ಪ್ರತಿಯೊಂದು ಪ್ರಯತ್ನಕ್ಕೂ 300 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕು. ಈ ಸಂಬಂಧ ಯಾವುದಾದರೂ ದೂರುಗಳಿದ್ದರೆ ಇದೇ ವೆಬ್ ಸೈಟ್‌ಗೆ ಲಾಗಿನ್ ಆಗಿ ದೂರನ್ನು ದಾಖಲಿಸಬಹುದು. ಪರೀಕ್ಷಾಕೇಂದ್ರದ ದಿನಾಂಕ, ಸಮಯವನ್ನು ಕಾಯ್ದಿರಿಸಿ ಮತ್ತು ನೋಂದಾಯಿಸಿದ ನಂತರ ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡಬೇಕು. ಪರೀಕ್ಷೆಗೆ ಹಾಜರಿರುವ ದಿನದಂದು ಯಾವುದಾದರೂ ಮೂಲ ಗುರುತಿನ ಪತ್ರವನ್ನು ಹಾಜರು ಪಡಿಸಬೇಕು. ಉದಾ: ಆಧಾರ್ ಕಾರ್ಡ್, ವೋಟರ್ ಐ.ಡಿ. ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಪಾನ್ ಕಾರ್ಡ್.

ಪರೀಕ್ಷಾ ಪಠ್ಯಕ್ರಮ
ಎಂ.ಎಸ್. ವರ್ಡ್, ಎಂ.ಎಸ್. ಎಕ್ಸೆಲ್, ಎಂ.ಎಸ್. ಪವರ್ ಪಾಯಿಂಟ್, ನುಡಿ, ಇ-ಮೇಲ್, ಹಾಗೂ ಕಂಪ್ಯೂಟರ್ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಪರೀಕ್ಷೆಯು ಇಂಗ್ಲಿಷ್ ಮತ್ತು ಕನ್ನಡಭಾಷೆಯಲ್ಲಿ ನಡೆಸಲಾಗುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕವಿದ್ದು, ತಪ್ಪು ಉತ್ತರಕ್ಕೆ ಯಾವುದೇ ಅಂಕವನ್ನು ಕಡಿತ ಮಾಡುವುದಿಲ್ಲ.  ಪರೀಕ್ಷೆ ಮುಗಿದ ಬಳಿಕ ನಿಮಗೆ ಲಭಿಸಿರುವ ಅಂಕದ ವಿವರವು ನಿಮಗೆ ತಕ್ಷಣ ತಿಳಿಯುತ್ತದೆ.

ಪರೀಕ್ಷಾ ಕೇಂದ್ರಗಳು
ಬೆಂಗಳೂರು 280, ರಾಮನಗರ 20, ದಾವಣಗೆರೆ 50, ಮೈಸೂರು 125, ಶಿವಮೊಗ್ಗ 50, ಹುಬ್ಬಳ್ಳಿ 50, ಮಂಡ್ಯ 30, ಕಲಬುರ್ಗಿ 40, ಬೆಳಗಾವಿ 60, ಮಂಗಳೂರು 30,  ಯಾದಗಿರಿ 20, ಬೀದರ್ 30 ಹಾಗೂ ರಾಯಚೂರಿನಲ್ಲಿ 30 ಪರೀಕ್ಷಾ ಕೇಂದ್ರಗಳಿವೆ. ನಮಗೆ ಬೇಕಾದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. 

‘ನನಗೆ ಕಂಪ್ಯೂಟರ್ ಜ್ಞಾನವಿಲ್ಲ, ಪರೀಕ್ಷೆಯನ್ನು ಹೇಗೆ ಎದುರಿಸುವುದು’ ಎಂಬ ಆತಂಕದಿಂದ ಹೊರ ಬನ್ನಿ. ಮೊಬೈಲ್ ಬಳಕೆ ತಿಳಿದಿರುವ ನಿಮಗೆ ಕಂಪ್ಯೂಟರ್ ಬಳಕೆ ಕಷ್ಟವೇನಲ್ಲ. ಆಡಳಿತದಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಹಾಗೂ ಪೇಪರ್ ರಹಿತ ಇ - ಆಡಳಿತವು ಎಲ್ಲೆಡೆ ಇರುವಾಗ ನೀವು ಹಿಂದೆ ಬೀಳುವುದು ಸರಿಯಲ್ಲ ತಾನೆ? ಈಗಲೇ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಂಡು ಪರೀಕ್ಷೆಯನ್ನು ಎದುರಿಸಿರಿ. ಯಶಸ್ಸು ನಿಮ್ಮದಾಗಲಿ.
(ಲೇಖಕರು ಶಿಕ್ಷಕರು)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.