ADVERTISEMENT

ಪಿಯುಸಿ–ಮುಂದೇನು? ಅನ್ವಯಿಕ ಮನೋವಿಜ್ಞಾನ; ಮನೋಬಲವೇ ಮಹಾಬಲ!

ಭಾಗ 4

ಪ್ರದೀಪ್ ಎಸ್ ವೆಂಕಟರಾಮ್
Published 1 ಮಾರ್ಚ್ 2026, 23:36 IST
Last Updated 1 ಮಾರ್ಚ್ 2026, 23:36 IST
<div class="paragraphs"><p>ಪಿಯುಸಿ–ಮುಂದೇನು? ಅನ್ವಯಿಕ ಮನೋವಿಜ್ಞಾನ; ಮನೋಬಲವೇ ಮಹಾಬಲ!</p></div>

ಪಿಯುಸಿ–ಮುಂದೇನು? ಅನ್ವಯಿಕ ಮನೋವಿಜ್ಞಾನ; ಮನೋಬಲವೇ ಮಹಾಬಲ!

   

ಅರ್ಜುನ್ ಐ.ಟಿ ಕಂಪನಿಯೊಂದರಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ನಂತರ ಕೆಲಸ ಕಳೆದುಕೊಂಡ. ಕುಟುಂಬ ನಿರ್ವಹಣೆಯ ಹೊಣೆ, ಸಾಲದ ಕಂತುಗಳು, ಭವಿಷ್ಯದ ಅನಿಶ್ಚಿತತೆಯಿಂದ ಖಿನ್ನತೆ, ನಿದ್ರಾಹೀನತೆ ಎದುರಿಸಬೇಕಾಯಿತು. ಆದರೆ, ಕೌನ್ಸೆಲಿಂಗ್‌ ಮೂಲಕ ಆತ್ಮಸ್ಥೈರ್ಯವನ್ನು ಮರಳಿ ಪಡೆದು, ನೂತನ ಕೌಶಲಗಳೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸಿದ. ಎಲ್ಲರೂ ಅರ್ಜುನ್‍ನಷ್ಟು ಅದೃಷ್ಟವಂತರಲ್ಲ; ಇಂತಹ ಪರಿಸ್ಥಿತಿಗಳಲ್ಲಿ ಹಲವರು ದುಡುಕಿನ ನಿರ್ಧಾರಗಳನ್ನು ಮಾಡಿಬಿಡುತ್ತಾರೆ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭೌತಿಕ ಯುದ್ಧಗಳು, ಸುಂಕ-ತೆರಿಗೆಯ ಯುದ್ಧಗಳು, ಆರ್ಥಿಕ ಅಸ್ಥಿರತೆ, ಉದ್ಯೋಗ ನಷ್ಟ ಎಲ್ಲವೂ ಮಾನವನ ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿವೆ. ಜೊತೆಗೆ ಕೆಲಸದ ಒತ್ತಡ, ವೃತ್ತಿ-ವೈಯಕ್ತಿಕ ಜೀವನದಲ್ಲಿನ ಅಸಮತೋಲನ, ಜಡತ್ವ, ಕೌಟುಂಬಿಕ ಕಲಹದಂತಹ ಸಮಸ್ಯೆಗಳು ಬದುಕಿನ ಯಾಂತ್ರಿಕತೆ ಮತ್ತು ಅಸಂತೃಪ್ತಿಯನ್ನು ಎತ್ತಿ ತೋರಿಸುತ್ತವೆ. ಇಂತಹ ಸಮಸ್ಯೆಗಳಿಗೆ ಸಮಗ್ರವಾದ ಪರಿಹಾರವನ್ನು ನೀಡಿ ಪುನರುಜ್ಜೀವನಗೊಳಿಸುವ ಕ್ಷೇತ್ರವೇ ಅನ್ವಯಿಕ ಮನೋವಿಜ್ಞಾನ.

ADVERTISEMENT

ಮನೋವಿಜ್ಞಾನದ ಸಿದ್ಧಾಂತಗಳನ್ನು ಬರೀ ಸಿದ್ದಾಂತ, ಸಂಶೋಧನೆಗೆ ಸೀಮಿತಗೊಳಿಸದೆ, ದೈನಂದಿನ ಬದುಕಿನ ಜಟಿಲ ಸಂದರ್ಭಗಳನ್ನು ಬಗೆಹರಿಸಲು ಅನುವಾಗುವುದೇ ಅನ್ವಯಿಕ ಮನೋವಿಜ್ಞಾನ. ಮಾನವ ಸಂಬಂಧಿತ ಹಲವಾರು ಸಮಸ್ಯೆಗಳಿಗೆ ಇಲ್ಲಿ ಪ್ರಾಯೋಗಿಕ ಪರಿಹಾರಗಳಿದ್ದು, ವ್ಯಕ್ತಿ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಅತ್ಯಗತ್ಯವಾದ ಕ್ಷೇತ್ರವಾಗಿ ಇದು ಹೊರಹೊಮ್ಮಿದೆ.

ಅನ್ವಯಿಕ ಮನೋವಿಜ್ಞಾನದಲ್ಲಿ ವೈವಿಧ್ಯ ಇದೆ, ನೊಂದವರ ಸಮಸ್ಯೆಗಳನ್ನು ಬಗೆಹರಿಸುವ ಅಗಾಧ ಶಕ್ತಿಯಿದೆ. ಸಮಸ್ಯೆಗಳಿಗೆ ಜ್ಞಾನ, ಅನುಭೂತಿ, ಸಂವಹನದಿಂದಲೇ ಪರಿಹಾರವನ್ನು ನೀಡಬಹುದು. ತರಬೇತಿಯ ನಂತರ ಖುದ್ದಾಗಿ ಪ್ರ್ಯಾಕ್ಟೀಸ್ ಮಾಡಬಹುದು. ಮುಖ್ಯವಾಗಿ, ಬೇರೆಯವರ ಸಮಸ್ಯೆಗಳು, ಧೋರಣೆಗಳು ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕು.

ಇಲ್ಲಿ ಕೌಶಲಗಳೇ ಬಂಡವಾಳ. ಆಸಕ್ತಿ, ಅಭಿರುಚಿಯ ಜೊತೆಗೆ ಸೂಕ್ಷ್ಮ ಅವಲೋಕನ, ಅನುಭೂತಿ, ಆಲಿಸುವ ಕಲೆ, ಮನವರಿಕೆ, ತಾಳ್ಮೆ, ನೈತಿಕತೆ, ಗೋಪ್ಯತೆ, ಡೇಟಾ ವಿಶ್ಲೇಷಣೆಯ ಕೌಶಲಗಳಿರಬೇಕು.

ಉದ್ಯೋಗಕ್ಕಾಗಿ ಕ್ಯಾಂಪಸ್ ನೇಮಕಾತಿ ಜೊತೆಗೆ ಇಂಟರ್ನ್‍ಷಿಪ್ ಅವಕಾಶಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕು. ಆಸಕ್ತಿಯಿರುವ ವಿಭಾಗದ ಸಂಸ್ಥೆಗಳು ಹಾಗೂ ವೃತ್ತಿಪರರೊಡನೆ ಲಿಂಕ್ಡ್‌ಇನ್ ಮೂಲಕ ನೆಟ್‍ವರ್ಕಿಂಗ್ ಮಾಡುವುದು ಸೂಕ್ತ. ಉದ್ಯೋಗಾವಕಾಶಗಳ ವೈವಿಧ್ಯದ ಕಾರಣದಿಂದ, ಪ್ರಾರಂಭಿಕ ವೇತನದ ಬಗ್ಗೆ ನಿಖರವಾಗಿ ಹೇಳಲಾಗದಿದ್ದರೂ ವೇತನ ಸುಮಾರು ₹ 3 ಲಕ್ಷದಿಂದ ₹ 5 ಲಕ್ಷದವರೆಗೆ ಇರಬಹುದು.

ಮಾನಸಿಕ ಆರೋಗ್ಯ, ವೃತ್ತಿಜೀವನ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಸಮಗ್ರ ಪರಿಹಾರ ನೀಡುವ ಕ್ಷೇತ್ರವಿದು. ಇದು ಬರೀ ಉದ್ಯೋಗವಲ್ಲ, ಸಮಾಜಕ್ಕೆ ನೀಡುವ ಅಮೂಲ್ಯ ಕೊಡುಗೆ. ಹಾಗಾಗಿ, ಈ ಕ್ಷೇತ್ರವು ವೃತ್ತಿಯ ಜೊತೆಗೆ ಆತ್ಮತೃಪ್ತಿಯನ್ನೂ ನೀಡುತ್ತದೆ.

ವೈವಿಧ್ಯಮಯ ಶಾಖೆಗಳಿವೆ
• ಕ್ಲಿನಿಕಲ್ ಸೈಕಾಲಜಿ: ಮಾನಸಿಕ ಅಸ್ವಾಸ್ಥ್ಯ, ಖಿನ್ನತೆ, ಒತ್ತಡ ನಿರ್ವಹಣೆ, ನಕಾರಾತ್ಮಕ ಧೋರಣೆ, ವ್ಯಸನ ಪುನರ್ವಸತಿ– ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ವ್ಯಸನ ನಿವಾರಣಾ ಕೇಂದ್ರಗಳು.
• ಎಜುಕೇಷನಲ್ ಸೈಕಾಲಜಿ: ಅಧ್ಯಾಪನ, ಕಲಿಕೆಯ ಸಮಸ್ಯೆಗಳು, ನ್ಯೂನತೆ– (ಶಾಲೆಗಳು, ವಸತಿಶಾಲೆಗಳು, ಕಾಲೇಜುಗಳು.
• ಇಂಡಸ್ಟ್ರಿಯಲ್/ಆರ್ಗನೈಸೇಷನಲ್ ಸೈಕಾಲಜಿ: ಉದ್ಯೋಗಿಗಳ ಉತ್ಪಾದಕತೆ, ಮಾನವ ಸಂಪನ್ಮೂಲದ ಸಮಸ್ಯೆ– ಉದ್ಯಮಗಳು, ನವೋದ್ಯಮಗಳು.
• ಹೆಲ್ತ್ ಸೈಕಾಲಜಿ: ಸ್ವಾಸ್ಥ್ಯ, ಜೀವನಶೈಲಿ, ಸ್ಥೂಲಕಾಯ– ಆರೋಗ್ಯಧಾಮ, ಯೋಗ ಕೇಂದ್ರಗಳು.
• ಫೊರೆನ್ಸಿಕ್ ಸೈಕಾಲಜಿ: ಅಪರಾಧ ತನಿಖೆ, ಅಪರಾಧಿ ನಡವಳಿಕೆಯ ಅಧ್ಯಯನ, ಸುಧಾರಣೆ– ಪೊಲೀಸ್, ತನಿಖಾ ಸಂಸ್ಥೆಗಳು, ಸ್ವತಂತ್ರ ತನಿಖಾದಾರರು.
• ಕನ್‌ಸ್ಯೂಮರ್ ಸೈಕಾಲಜಿ: ಗ್ರಾಹಕರ ಕೊಳ್ಳುವಿಕೆಯ ನಡವಳಿಕೆ– ಕನ್‌ಸ್ಯೂಮರ್ ಕಂಪನಿಗಳು, ಸಂಶೋಧನಾ ಸಂಸ್ಥೆಗಳು.
• ಸ್ಪೋರ್ಟ್ಸ್ ಸೈಕಾಲಜಿ: ಸಾಮರ್ಥ್ಯ ಸುಧಾರಣೆ, ಒತ್ತಡ-ವೈಫಲ್ಯ ನಿರ್ವಹಣೆ– ಕ್ರೀಡಾ ಸಂಸ್ಥೆಗಳು, ಆಟಗಾರರು...

• ಯುಎಕ್ಸ್ ಸೈಕಾಲಜಿ: ವಿನ್ಯಾಸ, ಬಣ್ಣಗಳ ಆಯ್ಕೆ, ಜಾಹೀರಾತು– ಡಿಜಿಟಲ್ ಕಂಪನಿಗಳು, ಜಾಹೀರಾತು ಸಂಸ್ಥೆಗಳು.

• ವೈಯಕ್ತಿಕ ಸೈಕಾಲಜಿ: ಮದುವೆ, ವಿಚ್ಛೇದನ, ಮಕ್ಕಳ ಸಮಸ್ಯೆ, ಹಿರಿಯ ನಾಗರಿಕರ ಸಮಸ್ಯೆ, ದುಃಖ– ಚಿಕಿತ್ಸಾಲಯಗಳು, ಸ್ವಂತ ಪ್ರ್ಯಾಕ್ಟೀಸ್.

ಆಶ್ಚರ್ಯಪಡಬೇಡಿ! ಪೆಟ್ ಸೈಕಾಲಜಿ ಎಂಬ ಶಾಖೆಯೂ ಅಭಿವೃದ್ಧಿಯಾಗುತ್ತಿದೆ.

ವೃತ್ತಿಪರರಾಗಲು...
ಮನೋವಿಜ್ಞಾನದಲ್ಲಿ ಪದವಿ (ಬಿಎ/ಬಿ.ಎಸ್ಸಿ) ಪಡೆದ ನಂತರ ಅನ್ವಯಿಕ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ (ಎಂಎ/ಎಂಎಸ್ಸಿ) ಪಡೆದರೆ ಹೆಚ್ಚಿನ ಮನ್ನಣೆ ಇರುತ್ತದೆ. ಅಥವಾ ಮನೋವಿಜ್ಞಾನ/ ಅನ್ವಯಿಕ ಮನೋವಿಜ್ಞಾನದ ಪದವಿಯ (ಬಿಎ/ಬಿ.ಎಸ್ಸಿ) ನಂತರ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಅಲ್ಪಾವಧಿ ಡಿಪ್ಲೊಮಾ/ಸರ್ಟಿಫಿಕೇಟ್ ಕೋರ್ಸ್ (ಸ್ಪೋರ್ಟ್ಸ್ ಸೈಕಾಲಜಿ, ನ್ಯೂರೊಸೈಕಾಲಜಿ, ಡೇಟಾ ಅನಲಿಟಿಕ್ಸ್) ಮಾಡಿ ವೃತ್ತಿಜೀವನಕ್ಕೆ ತಯಾರಾಗಬಹುದು.

ಪ್ರತಿಷ್ಠಿತ ಸಂಸ್ಥೆಗಳಿವು

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್, ಬೆಂಗಳೂರಿನ ನಿಮ್ಹಾನ್ಸ್, ಕ್ರೈಸ್ಟ್, ಜೈನ್, ಪಾಂಡಿಚೆರಿ, ಅಶೋಕ, ಅಮಿಟಿ ವಿಶ್ವವಿದ್ಯಾಲಯಗಳು.

ಲೇಖಕ: ಶಿಕ್ಷಣ ತಜ್ಞ, ವೃತ್ತಿ ಸಲಹೆಗಾರ

–––

ಶೈಕ್ಷಣಿಕ ಮೇಳ ನಿಮಗಾಗಿ

‘ಪಿಯುಸಿ ನಂತರ ಮುಂದೇನು?’ ಎನ್ನುವ ಪ್ರಶ್ನೆ ಕಾಡುತ್ತಿದೆಯೇ? ಚಿಂತೆ ಬಿಡಿ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಏಪ್ರಿಲ್‌ನಲ್ಲಿ ಆಯೋಜಿಸಲಿರುವ ‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಳ್ಳಿ, ನಿಮ್ಮ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಕೊಂಡು ಉತ್ತಮ ಭವಿಷ್ಯ ನಿಮ್ಮದಾಗಿಸಿಕೊಳ್ಳಿ. ಅಷ್ಟೇ ಅಲ್ಲ, ಸಿಇಟಿ, ಕಾಮೆಡ್‌–ಕೆ, ವೃತ್ತಿಪರ ಕೋರ್ಸ್‌ ಸೇರಿದಂತೆ ವಿವಿಧ ಕೋರ್ಸ್‌ಗಳು, ಉದ್ಯೋಗಾವಕಾಶ, ಕಾಲೇಜುಗಳಲ್ಲಿ ಸಿಗುವ ಬಗೆಬಗೆ ಸೌಲಭ್ಯಗಳ ಮಾಹಿತಿ, ವಿಶೇಷ ಗೋಷ್ಠಿಗಳು, ಸಂವಾದ... ಎಲ್ಲವೂ ನಿಮಗಾಗಿ. ಮೇಳದ ದಿನಾಂಕಕ್ಕಾಗಿ ನಿರೀಕ್ಷಿಸಿ, ಶೈಕ್ಷಣಿಕ ಮಾಹಿತಿಯ ಕಣಜವನ್ನು ಎದುರುಗೊಳ್ಳಲು ಸಿದ್ಧರಾಗಿ.