ADVERTISEMENT

ಕಾನೂನು ಕಲಿಕೆಗೆ ‘ಕ್ಲಾಟ್’

ಮಹೇಶ ನಾಯ್ಕ
Published 6 ಫೆಬ್ರುವರಿ 2022, 19:30 IST
Last Updated 6 ಫೆಬ್ರುವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿರುವಂತೆಯೇ ದೇಶದ ಪ್ರತಿಷ್ಠಿತ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ 'ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ–ಸಿಎಲ್‌ಎಟಿ(ಕ್ಲಾಟ್–Common Law Admission Test) ನಡೆಸಲಾಗುತ್ತದೆ. ಲೀಗಲ್ ಇಂಡಿಯಾ ಡಾಟ್ ಕಾಮ್ ವರದಿ ಪ್ರಕಾರ ಈ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಪದವಿ ಪೊರೈಸಿದ ಶೇ 90 ರಿಂದ 100ರಷ್ಟು ಅಭ್ಯರ್ಥಿಗಳಿಗೆ ಕ್ಯಾಂಪಸ್ಆಯ್ಕೆಯಲ್ಲಿ ಉದ್ಯೋಗ ಅವಕಾಶ ದೊರೆಯುತ್ತಿದೆ.

ಈಗಾಗಲೇ ಪ್ರಸಕ್ತ ಸಾಲಿನ (2022–23) ಪ್ರವೇಶಕ್ಕೆ ನೋಂದಣಿ ಆರಂಭವಾಗಿದೆ. ಮಾ.31ರವರೆಗೂ ನೋಂದಣಿಗೆ ಅವಕಾಶವಿದೆ. ಆಸಕ್ತರು www.clatcansortiumofntu.ac.in ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಓದುತ್ತಿರುವ ಹಾಗೂ ಪೂರ್ಣಗೊಳಿಸಿರುವ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪಿಯುಸಿಯಲ್ಲಿ ಶೇ 45ರಷ್ಟು ಅಂಕ ಪಡೆದಿರುವ ಸಾಮಾನ್ಯ ಅಭ್ಯರ್ಥಿಗಳು ಹಾಗೂ ಶೇ 40ರಷ್ಟು ಅಂಕಗಳಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.

ADVERTISEMENT

ಪ್ರವೇಶ ಪರೀಕ್ಷೆ

ಪ್ರವೇಶ ಪರೀಕ್ಷೆಯಲ್ಲಿ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ. ಪ್ರತಿ ಪ್ರಶ್ನೆಗೆ 1 ಅಂಕದಂತೆ 150 ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕವನ್ನು(ನೆಗೆಟಿವ್) ಕಳೆಯಲಾಗುತ್ತದೆ. ಇದು ಆಫ್ ಲೈನ್ ಆಧಾರಿತ ಬಹುಆಯ್ಕೆ ಮಾದರಿ ಪರೀಕ್ಷೆಯಾಗಿದೆ.

ಪರೀಕ್ಷಾ ಸಿದ್ದತೆ ಹೇಗಿರಬೇಕು

ಜೆಇಇ, ನೀಟ್‌, ಎನ್‌ಡಿಎ, ಎನ್‌ಎಟಿಎ ಸೇರಿದಂತೆ ವಿವಿಧ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವಂತೆ ಈ ಕ್ಲಾಟ್‌ ಪರೀಕ್ಷೆಗೂ ತಯಾರಿ ನಡೆಸಬೇಕು. ನಿಗದಿತ ಪಠ್ಯಕ್ರಮಕ್ಕೆ ಅನುಗುಣವಾಗಿ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಿಸಬೇಕು. ಮಾದರಿ ಪ್ರಶ್ನೆ ಪತ್ರಿಕೆಗಳೊಂದಿಗೆ ಆನ್‌ಲೈನ್ ಹಾಗೂ ಅಫ್‌ಲೈನ್ ಪರೀಕ್ಷೆ ಅಭ್ಯಾಸ ಮಾಡಬೇಕು. ಕ್ಲಾಟ್‌ಗೆ ಸಂಬಂಧಿಸಿದ ಹಳೆಯ ಪ್ರಶ್ನೆಪತ್ರಿಕೆ, ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಅಧ್ಯಯನ ಸಾಮಗ್ರಿಗಳುclatcoansortiumofntu.ac.in ಜಾಲತಾಣ ದಲ್ಲಿ ಲಭ್ಯವಿವೆ.

ಎನ್‌ಎಲ್‌ಎಸ್‌ಐನಲ್ಲಿ ಕನ್ನಡಿಗರಿಗೆ ಮೀಸಲು

ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯ ಪ್ರಕಟಿಸಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ರ‍್ಯಾಂಕಿಂಗ್‌ ಫ್ರೇಮ್‌ವರ್ಕ್‌ನ (ಎನ್‌ಐಆರ್‌ಎಫ್‌) ದೇಶದ ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (National Law School of India University) ಪ್ರಥಮ ಸ್ಥಾನದಲ್ಲಿದೆ. ಈ ವಿವಿಯಲ್ಲಿ ಪ್ರತಿ ವರ್ಷಪದವಿ ಕೋರ್ಸ್‌ಗೆ 180 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದೆ. ಇದರಲ್ಲಿ ಶೇ 25 ರಷ್ಟು ಸ್ಥಾನವನ್ನು ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಉಳಿದ ಶೇ 75 ರಷ್ಟು ಸ್ಥಾನಗಳನ್ನು ರಾಷ್ಟ್ರೀಯ ಆಯ್ಕೆ ಕೋಟಾದಡಿ ಭರ್ತಿ ಮಾಡಲಾಗುತ್ತದೆ. ಸ್ನಾತಕೋತ್ತರ ಪದವಿಯಲ್ಲೂ ಕನ್ನಡಿಗರಿಗೆ ಶೇ 25 ರಷ್ಟು ಸ್ಥಾನ ಮೀಸಲಿಡಲಾಗಿದೆ.

ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆ

ದೇಶದ ಪ್ರಮುಖ 60 ಕಾನೂನು ಕಾಲೇಜುಗಳ ಪ್ರವೇಶಕ್ಕಾಗಿ ಪ್ರತಿ ವರ್ಷ ಲಾ ಸ್ಕೂಲ್ ಎಂಟ್ರೆನ್ಸ್‌ ಟೆಸ್ಟ್ (LSAT) ನಡೆಸಲಾ ಗುತ್ತದೆ. ಬೆಂಗಳೂರಿನ ಕ್ರೈಸ್ಟ್‌ ಯುನಿವರ್ಸಿಟಿ, ಸ್ಯಾಂಬಸೀಸ್, ಲಾಯ್ಡ್‌ ಕಾನೂನು ಕಾಲೇಜುಗಳು ಪ್ರವೇಶ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ. ಸಾಮಾನ್ಯವಾಗಿ ಜನವರಿ-ಫೆಬ್ರವರಿ ತಿಂಗಳಲ್ಲಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸುತ್ತವೆ. ಏಪ್ರಿಲ್- ಮೇ ತಿಂಗಳಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ದೆಹಲಿ ಕಾನೂನು ಕಾಲೇಜು

ದೇಶದ ಅತ್ಯುತ್ತಮ ಕಾನೂನು ವಿವಿಗಳ ಪಟ್ಟಿಯಲ್ಲಿ ದೆಹಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಎರಡನೇ ಸ್ಥಾನದಲ್ಲಿದೆ. ಈ ವಿವಿಯ ಪ್ರವೇಶಕ್ಕಾಗಿ ಪ್ರತ್ಯೇಕ ಆಲ್ ಇಂಡಿಯಾ ಲಾ ಎಟ್ರೆನ್ಸ್‌ ಟೆಸ್ಟ್‌(AILT) ಪರೀಕ್ಷೆ ನಡೆಸಲಾಗುತ್ತದೆ. ವಿವಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಏ.7 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಬಹುದು; nationallawuniversitydelhi.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.