ಹಿರಿಯೂರಿನಲ್ಲಿ ವಾಸವಾಗಿರುವ ಎರಡು ವರ್ಷದ ಪುಟಾಣಿ ಹೇಮಂತನಿಗೆ ಅವನ ಅಜ್ಜನ ಕೋಲನ್ನು ಕುದುರೆ ಮಾಡಿಕೊಂಡು ಮನೆಯೊಳಗೆ ಓಡುತ್ತಾ ಆಡುವುದೆಂದರೆ ಇನ್ನಿಲ್ಲದ ಖುಷಿ. ಅಜ್ಜ ಒಂದಿಷ್ಟೂ ರೇಗದೇ, ‘ಮಹಾ ತರಲೆ ಕಣೋ ನೀನು’ ಅಂಥ ಹುಸಿಮುನಿಸು ತೋರಿದಷ್ಟೂ ಅವನಿಗೆ ಇನ್ನಷ್ಟು ಆಟದ ಹುರುಪು. ಬೆಳಿಗ್ಗೆಯಿಂದ ಸಂಜೆಯವರೆಗೆ ಹತ್ತಾರು ಸಲ ಇದೇ ಆಟ ಆಡಿದರೂ ಅವನಿಗೂ ಬೇಜಾರಿಲ್ಲ, ಅಜ್ಜನಿಗೂ ಬೇಜಾರಿಲ್ಲ. ಅವರಿಬ್ಬರೂ ತಮ್ಮದೇ ಆದ ಆಟದ ಲೋಕದೊಳಗೆ ಮುಳುಗಿರುತ್ತಾರೆ.
ಚಿಕ್ಕಂದಿನಲ್ಲಿ ನಮ್ಮಲ್ಲಿ ಬಹುತೇಕರು ಅಜ್ಜನ ನಡೆಯುವ ಕೋಲನ್ನೇ ಕುದುರೆ ಮಾಡಿಕೊಂಡು ‘ಅಜ್ಜನ ಕೋಲಿದು ನನ್ನಯ ಕುದುರೆ, ಹೆಜ್ಜೆ ಹೆಜ್ಜೆಗೆ ಕುಣಿಯುವ ಕುದುರೆ’ ಎನ್ನುತ್ತ ಮನೆಯ ಸುತ್ತಮುತ್ತ ಕುದುರೆ ಸವಾರಿ ಮಾಡುತ್ತಿದ್ದೆವು. ಮಕ್ಕಳ ಕಲ್ಪನೆಯಲ್ಲಿ ಅಜ್ಜನ ಕೋಲು ಕುಣಿಯುವ ಕುದುರೆಯಾಗುತ್ತದೆ. ಮನೆಯಲ್ಲಿರುವ ಕೋಲಿನಂತಹ ಒಂದು ಸಾಮಾನ್ಯ ವಸ್ತು ಸುತ್ತಲಿನ ಜಗತ್ತಿನ ಬಗ್ಗೆ ಮಕ್ಕಳ ತಿಳಿವಳಿಕೆಯನ್ನು ಹೇಗೆ ಹೆಚ್ಚಿಸಬಲ್ಲದು ಎಂಬುದಕ್ಕೆ ಇದೊಂದು ಉದಾಹರಣೆ. ಪದ್ಯದ ಕೊನೆಯಲ್ಲಿ ‘ಅರಸು ಮಕ್ಕಳಿಗೂ ಸಿಕ್ಕದ ಕುದುರೆ, ನನಗೇ ಸಿಕ್ಕಿದೆ ನನ್ನಯ ಕುದುರೆ’ ಎಂದು ಮಕ್ಕಳು ಕೋಲನ್ನು ಕುದುರೆಯಾಗಿಸಿಕೊಂಡು ಹಾಡುತ್ತ ಆಡುವಾಗ ಈ ಕೋಲು ಒಂದು ಅಪೂರ್ವ ಕುದುರೆಯಾಗಿ ತಮ್ಮ ಬಳಿ ಇದೆ ಎಂದು ಮುದಗೊಳ್ಳುತ್ತಾರೆ.
ಆಟವು ಮಕ್ಕಳ ಸೃಜನಶೀಲತೆ, ಕಲ್ಪನೆ ಹಾಗೂ ಹೊಸರೀತಿಯಲ್ಲಿ ಆಲೋಚಿಸುವುದನ್ನು ಉತ್ತೇಜಿಸುತ್ತದೆ. ಜತೆಗೆ ಪರಸ್ಪರ ಹಂಚಿಕೊಳ್ಳುವುದು, ಸಹಕರಿಸುವುದು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದು ಸೇರಿ ಸಾಮಾಜಿಕ ಕೌಶಲಗಳನ್ನು ಮಕ್ಕಳಲ್ಲಿ ಬೆಳೆಸುತ್ತದೆ. ಆಟವು ಹೊರಜಗತ್ತಿನೊಂದಿಗೆ ವ್ಯವಹರಿಸುವ ಆತ್ಮವಿಶ್ವಾಸ, ಸಂವಹನ ಹಾಗೂ ಭಾಷಾ ಕೌಶಲಗಳನ್ನು ಮಗುವಿಗೆ ಒದಗಿಸುತ್ತದೆ. ನಮ್ಮ ಮನೆಯಲ್ಲಿರುವ ಚಿಕ್ಕ ಪುಟ್ಟ ಸಾಮಗ್ರಿಗಳನ್ನು ಆಟಿಕೆಯಾಗಿ ಕಲ್ಪಿಸಿಕೊಂಡು ಆಡುವಂತೆ ಮಕ್ಕಳನ್ನು ಪ್ರೋತ್ಸಾಹಿಸೋಣ. ಆಟದಿಂದಲೇ ಕಲಿಕೆ, ಆಟದಿಂದಲೇ ಪದ್ಯ, ಪದ್ಯದಿಂದಲೇ ಆಟ ಎಂದು ಮಕ್ಕಳನ್ನು ಉತ್ತೇಜಿಸೋಣ. ಇದು ಮಕ್ಕಳಿಗೆ ಸಮಗ್ರ ಬಾಲ್ಯದ ಅನುಭವವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಲವಾರು ಅಧ್ಯಯನಗಳು ಇದೇ ಅಂಶವನ್ನು ಒತ್ತಿ ಹೇಳಿವೆ. ಮಕ್ಕಳಿಗಾಗಿಯೇ ತಯಾರಿಸಿರುವ ಕೆಲವು ಅತ್ಯುತ್ತಮ ಆಟಿಕೆಗಳು ನಿಜವಾಗಿಯೂ ಆಟಿಕೆಗಳಲ್ಲ. ಮಕ್ಕಳು ತನ್ಮಯರಾಗಿ ಆಡುವ ಹೆಚ್ಚಿನ ವಸ್ತುಗಳು ಮತ್ತು ಸ್ಥಳಗಳನ್ನು ಮಕ್ಕಳಿಗಾಗಿ ವಿನ್ಯಾಸಗೊಳಿಸಿಲ್ಲ. ಮಕ್ಕಳಿಗೆ ತಮ್ಮ ಕಲ್ಪನಾಶಕ್ತಿಯಿಂದ ಎಲ್ಲಾ ವಸ್ತುಗಳನ್ನು ಆಟಿಕೆಗಳಾಗಿ ರೂಪಾಂತರಗೊಳಿಸುವ ಸಾಮರ್ಥ್ಯವಿದೆ. ಅವರಿಗೆ ಮನೆಯ ಎಲ್ಲಾ ವಸ್ತುಗಳು ಆಟದ ವಸ್ತುಗಳಾಗುತ್ತವೆ. ಪೋಷಕರ ಆರ್ಥಿಕ ಹಾಗೂ ಸಾಮಾಜಿಕ ಸ್ತರ ಯಾವುದೇ ಇದ್ದರೂ, ಎಲ್ಲಾ ಮಕ್ಕಳಿಗೂ ಸಮೃದ್ಧ ಆಟಿಕೆಗಳು ಮನೆಯಲ್ಲಿಯೇ ಸಿಗುವ ಬೇರೆ ಬೇರೆ ವಸ್ತುಗಳೇ ಆಗಿರುತ್ತವೆ. ಅಲ್ಲದೇ ಅವರದೇ ಆದ ಪುಟ್ಟ ಲೋಕವೊಂದನ್ನು ಮನೆಯಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಮಗು ಹುಟ್ಟಿದಾಗಿನಿಂದ ಮೊದಲ ಎಂಟು ವರ್ಷಗಳ ಅವಧಿಯು ಮಗುವಿನ ಕಲಿಕೆ ಹಾಗೂ ಮುಂದಿನ ಬದುಕಿಗೆ ಗಟ್ಟಿಯಾದ ಅಡಿಪಾಯವನ್ನು ಹಾಕುವ ಅವಕಾಶವನ್ನು ಒದಗಿಸುತ್ತದೆ. ಮಕ್ಕಳು ಆಡುತ್ತ, ನಲಿಯುತ್ತ ಕಲಿತರೆ ಈ ಬುನಾದಿ ಗಟ್ಟಿಯಾಗಿರುತ್ತದೆ.
ಬೆಂಗಳೂರಿನ ಅಭಿವೃದ್ಧಿಪರ ಸಂಸ್ಥೆಯಾದ ಏಕ್‌ಸ್ಟೆಪ್ ಫೌಂಡೇಷನ್, ‘ಬಾಲ್ಯವನ್ನು ಆನಂದಿಸಿ’ ಕಾರ್ಯಕ್ರಮದ ಮೂಲಕ ಆಟದ ಜೊತೆ ಪ್ರಾಸಬದ್ಧವಾಗಿ ಹಾಡುತ್ತಾ ನಲಿಯುವುದನ್ನು ಕಲಿಸುತ್ತದೆ. ಇದು ಮಕ್ಕಳ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಮಕ್ಕಳಿಗೆ ಬಾಲ್ಯದಲ್ಲಿ ಆಟವಾಡುವ ಅವಕಾಶಗಳನ್ನು ಒದಗಿಸುವುದರ ಮಹತ್ವವನ್ನು ಮನಗಂಡ ಯುನಿಸೆಫ್ ಮೊಟ್ಟಮೊದಲ ಬಾರಿಗೆ 2024ರಲ್ಲಿ ಜೂನ್ 11ರಂದು ‘ಅಂತರರಾಷ್ಟ್ರೀಯ ಅಟದ ದಿನ’ ಎಂದು ಘೋಷಿಸಿದೆ. ಆಟ, ಅದರ ಜತೆ ಹಾಡು, ಅದರಿಂದ ಮಕ್ಕಳಿಗೆ ಸಿಗುವ ನಲಿವು ಇದೆಲ್ಲವೂ ಅತ್ಯಮೂಲ್ಯವಾದದು.
ಕನ್ನಡದಲ್ಲಿ ಮಕ್ಕಳ ಪದ್ಯಗಳ ಶ್ರೀಮಂತ ಇತಿಹಾಸವಿದೆ. ಪ್ರಸಿದ್ಧ ಬರಹಗಾರರಾದ ಜಿ.ಪಿ.ರಾಜರತ್ನಂ, ಡಾ. ಸಿದ್ಧಯ್ಯ ಪುರಾಣಿಕ್, ದಿನಕರ ದೇಸಾಯಿ, ಹೊಯ್ಸಳ, ಶಿವರಾಮ ಕಾರಂತ, ಪಂಜೆ ಮಂಗೇಶರಾಯರು, ಮೇವುಂಡಿ, ಮಲ್ಲಾರಿ ಇನ್ನಿತರರು ಬರೆದಿರುವ ಸುಪ್ರಸಿದ್ಧ ಪ್ರಾಸಪದ್ಯಗಳು ಮಕ್ಕಳು ಬೆಳೆಯುವ ಕಾಲದಲ್ಲಿ ಅವರ ಸೃಜನಶೀಲತೆ ಹಾಗೂ ಕಲ್ಪನೆಯನ್ನು ತೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಪದ್ಯ, ಹಾಡುಗಳಲ್ಲಿ ಬರುವ ವರ್ಣರಂಜಿತ ಪಾತ್ರಗಳು ಮತ್ತು ಪ್ರಾಸಗಳ ಪುನರಾವರ್ತನೆಯು ಅವರ ಮಿದುಳಿನಲ್ಲಿ ಸ್ಮರಣ ಶಕ್ತಿ, ಏಕಾಗ್ರತೆ ಮತ್ತು ಆಲೋಚನಾ ಕೌಶಲವನ್ನು ಸುಧಾರಿಸುತ್ತದೆ.
ನಮ್ಮ ಮಕ್ಕಳ ನೆಚ್ಚಿನ ಹಾಡು ಯಾವುದು ಎಂದು ಗುರುತಿಸಿ, ಪದೇ ಪದೇ ಹಾಡುವುದನ್ನು ಪ್ರೋತ್ಸಾಹಿಸುವುದು ಪೋಷಕರಾಗಿ ನಮ್ಮ ಜವಾಬ್ದಾರಿಯಾಗಿದೆ. ನೀವು ನಿಮ್ಮ ಮಕ್ಕಳೊಂದಿಗೆ ಹಾಡಿದರೆ, ಅಥವಾ ಅವರು ಹಾಡುವಾಗ ಚಪ್ಪಾಳೆ ತಟ್ಟಿದರೆ, ಆ ಹಾಡಿಗೆ ತಕ್ಕಂತೆ ಕಾಲಿನಿಂದ ಮೆಲ್ಲಗೆ ತಟ್ಟಿದರೆ ಅಥವಾ ಮೇಜನ್ನು ತಬಲದಂತೆ ತಟ್ಟಿದರೆ, ಮಗುವಿನ ಆನಂದವು ಇಮ್ಮಡಿಗೊಳ್ಳುತ್ತದೆ.ಪರೋಕ್ಷವಾಗಿ ಮಗು ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಉತ್ತೇಜಿಸಿದಂತಾಗುತ್ತದೆ. ಆಗಾಗ್ಗೆ ಹೊಸ ಪದ್ಯವನ್ನು ಮಕ್ಕಳಿಗೆ ಪರಿಚಯಿಸಿ. ಆಗ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡುವುದು. ಜತೆಗೆ ಇಂಥ ಮುಗ್ಧತೆ, ಸಹಜ ಕುತೂಹಲವು ಅವರ ಬದುಕಿನ ಹೆಜ್ಜೆಗಳೊಂದಿಗೆ ಬೆಸುಗೆಯಾಗುತ್ತವೆ. ಕನ್ನಡ ಪ್ರಾಸಪದ್ಯಗಳನ್ನು ನಿತ್ಯದ ಆಟಗಳಲ್ಲಿ ಬಳಸಿಕೊಂಡು, ನಲಿಯುತ್ತಲೇ ಭಾಷಾ ಕೌಶಲ ಗಳಿಸುವುದರ ಜತೆಗೆ ಹೊಸ ಸಂಗತಿಗಳಿಗೆ ತೆರೆದುಕೊಳ್ಳುವಂತೆ ಮಾಡಬಹುದು.
ಅಚ್ಚರಿ, ಸಂತಸ ಮತ್ತು ಸೃಜನಶೀಲತೆಯೇ ತುಂಬಿರುವ ಈ ಮಕ್ಕಳ ಲೋಕವು ವಯಸ್ಕರ ಪ್ರಪಂಚಕ್ಕಿಂತ ಭಿನ್ನವಾಗಿದೆ. ಮಕ್ಕಳ ಮನಸ್ಸನ್ನು ಮುದಗೊಳಿಸಿ, ಅರಳಿಸುವ ಆರೋಗ್ಯಕರ ಬಾಲ್ಯವನ್ನು ಯಾವುದೇ ರೀತಿಯ ಖರ್ಚು, ವೆಚ್ಚವಿಲ್ಲದೆ ಒದಗಿಸಬಹುದು. ಮಕ್ಕಳು ಎಲೆಕ್ಟ್ರಾನಿಕ್ ಗ್ಯಾಡ್ಜೆಟ್‌ಗಳಲ್ಲಿ ಕಳೆದುಹೋಗದೇ, ಸಹಜವಾಗಿ ಬಾಲ್ಯವನ್ನು ಆಸ್ವಾದಿಸುವಂತೆ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.