ADVERTISEMENT

Teacher's Day | ಕಲಿತು ಕಲಿಸುವವರೇ ಉತ್ತಮ ಗುರು ಆಗಬಲ್ಲರು: ಶಿಕ್ಷಕಿಯ ಮನದಾಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಸೆಪ್ಟೆಂಬರ್ 2025, 5:25 IST
Last Updated 5 ಸೆಪ್ಟೆಂಬರ್ 2025, 5:25 IST
   

ಸೆಪ್ಟೆಂಬರ್ 5ರಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಆದರ್ಶ ಶಿಕ್ಷಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರನ್ನು ಸ್ಮರಿಸುವ ದಿನ. ಜೊತೆಗೆ ದೇಶದಲ್ಲಿರೋ ಎಲ್ಲ ಶಿಕ್ಷಕರಿಗೂ ವಿದ್ಯಾರ್ಥಿಗಳು ಶುಭಾಶಯ ತಿಳಿಸುವ ಶುಭ ಗಳಿಗೆ. ವಿದ್ಯಾರ್ಥಿಗಳ ಬೆಳವಣಿಗೆಗೆ, ಭವಿಷ್ಯ, ಯಶಸ್ಸಿಗೆ ಹೀಗೆ ಸಾಲು ಸಾಲು ವಿಚಾರಗಳನ್ನು ತಿಳಿ ಹೇಳುವುದಕ್ಕೆ ಶಿಕ್ಷಕರು ತುಂಬಾ ಮುಖ್ಯ ಅಂತಾರೆ ಶಿಕ್ಷಕಿ ರಾಜೇಶ್ರೀ ಕೆ. ಅಲ್ಲೂರಕರ್.

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿರುವ, ಓದುತ್ತಿರುವ ಸಾವಿರಾರೂ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ ರಾಜೇಶ್ರೀ ಟೀಚರ್‌. ಸತತ 17 ವರ್ಷಗಳಿಂದ ಇಂಗ್ಲಿಷ್ ಶಿಕ್ಷಕಿಯಾಗಿ ಅದೆಷ್ಟೋ ವಿದ್ಯಾರ್ಥಿಗಳಿಗೆ ತಿದ್ದಿ, ಬುದ್ಧಿ ಹೇಳಿ ಒಳ್ಳೆ ದಾರಿಗೆ ತಂದಿರುವ ಗುರುಗಳು ಇವರು. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಟ್ಟಿರುವ ಶಿಕ್ಷಕರನ್ನು ಇಂದು ಸಂಭ್ರಮಿಸುವ ದಿನವಾಗಿದೆ.

‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ನಾಣ್ಣುಡಿಯೊಂದಿಗೆ ಮಾತನ್ನು ಶುರು ಮಾಡಿದ ಶಿಕ್ಷಕಿ ರಾಜೇಶ್ರೀ.. ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಹೇಗಿರಬೇಕು? ಶಿಕ್ಷಣ ಜರ್ನಿಯಲ್ಲಿ ಆದ ಅನುಭವ, ಮಕ್ಕಳಿಂದ ಕಲಿತ ಪಾಠಗಳೇನು, ಶಿಕ್ಷಣ ವೃತ್ತಿಯಲ್ಲಿ ಎದುರಾದ ಸವಾಲುಗಳೇನು? ಹೀಗೆ ಸಾಲು ಸಾಲು ವಿಚಾರಗಳ ಕುರಿತು ಪ್ರಜಾವಾಣಿಯೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ.

ADVERTISEMENT

ಶಿಕ್ಷಣ ಎಲ್ಲರಿಗೂ ಮುಖ್ಯ. ಇಲ್ಲಿ ಇಂಥವರೇ, ಅಂಥವರೇ ಕಲಿಬೇಕು ಅನ್ನೋದಿಲ್ಲ. ಕಲಿಕೆ ಎಂಬುವುದು‌ ನಿಂತ ನೀರಲ್ಲ, ನಿರಂತರವಾಗಿ ಹರಿಯುವ ನೀರಿನಂತೆ ಇರಬೇಕು. ಯಾರು ಬೇಕಾದರೂ ಓದಬಹುದು. ಆದರೆ ಕಲಿಯುವ ಹಂಬಲ ಇರಬೇಕಷ್ಟೇ. ಬಹಳ ಮುಖ್ಯವಾಗಿ ಶಿಕ್ಷಕರಿಗೆ ಬೇಕಾಗಿರುವುದು ತಾಳ್ಮೆ ಹಾಗೂ ಸಹನೆ. ನಾವು ಹೇಗೆ ವರ್ತಿಸುತ್ತಿವೋ ಮಕ್ಕಳು ಅದನ್ನೇ ಕಲಿಯುತ್ತಾರೆ. ಇದನ್ನೇ ನನ್ನ ಜೀವನದ ಅರ್ಧ ಭಾಗದಲ್ಲಿ ಅಳವಡಿಸಿಕೊಂಡಿದ್ದೇನೆ. ಮಕ್ಕಳ ಜೊತೆಗೆ ಅತಿ ಹೆಚ್ಚು ಸಮಯ ಕಳೆಯುವುದು ನನಗಿಷ್ಟ. ನಾನು ಮಕ್ಕಳ ಜೊತೆಗೆ ನಡೆದುಕೊಳ್ಳುವ ಪರಿಯೇ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ ಅಂತಾರೆ ರಾಜೇಶ್ರೀ ಮಿಸ್ಸು.

ಮಕ್ಕಳಿಗೆ ನಾವಷ್ಟೇ ಕಲಿಸೋದಿಲ್ಲ. ಕೆಲವೊಂದು ವಿಚಾರಗಳು ಮಕ್ಕಳಿಂದ ನಾವು ಕಲಿತಿದ್ದೇವೆ. ಹಂತ ಹಂತವಾಗಿ ಮಕ್ಕಳೊಂದಿಗೆ ನಾವು ಬೆರೆತಾಗ ಮನಸ್ಸು ಹಗುರಾಗಿ ಬಿಡುತ್ತದೆ. ಮಕ್ಕಳಿಗೆ ತಾಯಿಯೇ ಮೊದಲ ಗುರು ಅಂತಾರೇ. ಆದರೆ, ಇಲ್ಲಿ ಮಕ್ಕಳೇ ನಮಗೆ ದೇವರಾಗಿದ್ದಾರೆ. ಇಡೀ ದಿನ ಅವರ ಜತೆಗೆ ಬೆರೆತಾಗ ಮಾತ್ರ ನಾವು ಪರಿಪೂರ್ಣ ಶಿಕ್ಷಕರೆಂದು ಅನಿಸಿಕೊಳ್ಳುತ್ತೇವೆ.

ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಹೇಗಿರಬೇಕು?

‘ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು’ ಹಿರಿಯರ ಮಾತು ಇಲ್ಲಿ ಅನ್ವಯಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರಿ ತುಂಬಾನೇ ಮುಖ್ಯ. ಗುರಿ ಇಟ್ಟುಕೊಂಡವರು ಸಾಧಿಸದೇ ಇರಲಾರರ. ವಿದ್ಯಾರ್ಥಿ ಗುರಿಯ ಕಡೆ ಗಮನಹರಿಸಿದರೆ ಅದೇ ಗುರುವಿಗೆ ದೊಡ್ಡ ಯಶಸ್ಸು. ಯಾವ ವಿದ್ಯಾರ್ಥಿ ಗುರುವಿನ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಾನೋ ಆತ ಜೀವನದಲ್ಲಿ ಎಂದು ಸೋಲು ಕಾಣೋದಿಲ್ಲ ಅನ್ನೋದು ನನ್ನ ಅಭಿಪ್ರಾಯ. ಪ್ರತಿ ವಿದ್ಯಾರ್ಥಿಯ ಜೀವನದ ಹಂತ ಹಂತದಲ್ಲೂ ನಾವುಗಳು (ಶಿಕ್ಷಕರು) ಮುಖ್ಯ ಪಾತ್ರ ವಹಿಸುತ್ತೇವೆ. ಮಕ್ಕಳು ಏನೇ ಮಾಡಿದರು ಅದು ನಮ್ಮ ಮೇಲೆ ಪರಿಣಾಮ ಬಿರುತ್ತದೆ. ಹೀಗಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ವಿದ್ಯಾರ್ಥಿಗಳಿಂದ ಕಲಿತ ಪಾಠಗಳೇನು..?

ಈ ಪ್ರಶ್ನೆಯನ್ನು ಕೇಳುತ್ತಿದ್ದಂತೆ ನಕ್ಕ ಟೀಚರ್‌, ಅಬ್ಬಾ.. ಈಗಂತೂ ಮಕ್ಕಳೇ ನಮಗೆ ಕಲಿಸಿ ಕೊಡ್ತಾ ಇದ್ದಾರೆ. ಈಗ AI (ಕೃತಕ ಬುದ್ಧಿಮತ್ತೆ), ಅದೇನೋ ಚಾಟ್ ಜಿಪಿಟಿ ಅಂತೇ.. ಟೀಚರ್‌, ಟೀಚರ್‌ ನಾನು ಇವತ್ತು ಚಾಟ್‌ ಜಿಪಿಟಿಯಲ್ಲೇ ಪ್ರಾಜೆಕ್ಟ್ ಮಾಡಿದ್ದೀನಿ ಅಂತಾರೆ. ಏನೋ ಅದು ಅಂತ ಪ್ರಶ್ನೆ ಮಾಡಿದ್ರೆ ಟೀಚರ್‌ ನಿಮಗೆ ಗೊತ್ತಿಲ್ವ ಎಂದು ಜೋರಾಗಿ ನಕ್ಕು ಬಿಡ್ತಾರೆ. ಹೀಗಾಗಿ ನಾವು ಕೂಡ ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಂಡು ಹೋಗಬೇಕಾಗಿದೆ. ಮಕ್ಕಳು ಯಾವಾಗ ಎಂಥಹ ಪ್ರಶ್ನೆಗಳನ್ನು ಹೇಳುತ್ತಾರೆ ಅಂತ ಹೇಳೋದಕ್ಕೆ ಆಗೋದಿಲ್ಲ. ಅದಕ್ಕಾಗಿ ಈಗ ಚಾಲ್ತಿಯಲ್ಲಿರುವ ಎಐ, ಚಾಟ್‌ ಜಿಪಿಟಿಯನ್ನು ಮಕ್ಕಳಿಂದಲೇ ನಾನು ಕಲಿತುಕೊಂಡಿದ್ದೇನೆ.

ಶಿಕ್ಷಣ ವೃತ್ತಿಯಲ್ಲಿ ಎದುರಾದ ಸವಾಲುಗಳೇನು?

ನನ್ನ ಶಿಕ್ಷಣ ವೃತ್ತಿಯಲ್ಲಿ ದಿನನಿತ್ಯ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ವಿದ್ಯಾರ್ಥಿಗಳು ಓದುವ ವಿಚಾರಕ್ಕೆ ದಿನ ಒಂದಲ್ಲಾ ಒಂದು ಸಂದೇಹಗಳನ್ನು ಕೇಳುತ್ತಲೇ ಇರುತ್ತಾರೆ. ಅವರು ಕೇಳಿದ ಪ್ರಶ್ನೆಗಳಿಗೆ ನಾವು ಆಗಲೇ ಉತ್ತರ ಕೊಟ್ಟರೆ ಅವರಿಗೊಂದು ಖುಷಿ. ಆದರೆ, ಅದೇ ನಮಗೆ ಗೊತ್ತಿಲ್ಲ ಅಂದರೆ ಮಕ್ಕಳು ಬೇಜಾರಾಗುತ್ತಾರೆ. ಮತ್ತೆ ನಮ್ಮ ಬಳಿ ಪ್ರಶ್ನೆ ಕೇಳೋದಕ್ಕೆ ಹಿಂದೆ ಮುಂದೆ ಯೋಚನೆ ಮಾಡುತ್ತಾರೆ. ಹೀಗೆ ಆಗಬಾರದು ಅಂತ ನಾವು ತರಗತಿಗೆ ಹೋಗುವು ಮೊದಲು ಮನೆಯಲ್ಲೇ ಸಾಕಷ್ಟು ಅಭ್ಯಾಸ ಮಾಡಿಕೊಂಡಿರುತ್ತೇವೆ. ಬರೀ ನಮ್ಮ ವಿಷಯ ಅಲ್ಲದೇ ಬೇರೆ ಬೇರೆ ವಿಚಾರಗಳ ಬಗ್ಗೆಯೂ ತಿಳಿದುಕೊಂಡರೇ ಉತ್ತಮ ಅಲ್ವಾ ಎಂದರು.

ವಿದ್ಯಾರ್ಥಿಗಳಿಂದ ನೀವು ಬಯಸುವುದೇನು..?

ಹಾ..! ನಮ್ಮದು ಒಂದೇ ಕೆಲಸ.. ಮಕ್ಕಳಿಗೆ ಚೆನ್ನಾಗಿ ಪಾಠ ಹೇಳಿ ಕೊಡಬೇಕು. ನಾವು ಹೇಳಿದ್ದು ಅವರಿಗೆ ಅರ್ಥವಾಗಬೇಕು. ಅವರು ಅದನ್ನೂ ಮನನ ಮಾಡಿಕೊಂಡು ನಮಗೆ ಪ್ರಶ್ನೆ ಕೇಳಬೇಕು. ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ಆದರೆ ಈಗಿನ ಮಕ್ಕಳು ಅತಿ ಹೆಚ್ಚಾಗಿ ಫೋನ್‌ ಗೀಳಿಗೆ ಬಲಿಯಾಗುತ್ತಿದ್ದಾರೆ. ಅತಿಯಾದ ಮೊಬೈಲ್‌ ಬಳಸುವುದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆ ಆಗುತ್ತಾ ಹೋಗುತ್ತಿದೆ. ಹೆಚ್ಚಿನ ಮಕ್ಕಳು ಮಾತಾಡೋದು ಕಡಿಮೆ, ಚಟುವಟಿಕೆಯಲ್ಲಿ ಭಾಗಿಯಾಗುವುದು ಇನ್ನೂ ಕಡಿಮೆಯಾಗಿ ಬಿಟ್ಟಿದೆ. ಅಲ್ಲದೇ ಓದುವುದರಲ್ಲಿ ಹೆಚ್ಚಾಗಿ ಆಸಕ್ತಿ ತೋರಿಸದೇ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದು ಉಂಟು. ಇದೆಲ್ಲಾ ನೇರವಾಗಿ ಶಿಕ್ಷಕರ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ಮನೆಯಲ್ಲಿ ಮಕ್ಕಳಿಗೆ ಫೋನ್‌ ಕೊಡುವುದನ್ನು ಕಡಿಮೆ ಮಾಡಲಿ ಎಂದು ಪ್ರಜಾವಾಣಿ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.