
ಗುಜರಾತ್‌ನ ಪುಟ್ಟ ಊರಿನ ಸರ್ಕಾರಿ ಶಾಲೆಯೊಂದು ಚೆಸ್ ಆಟದಲ್ಲಿ ದೇಶದ ಗಮನ ಸೆಳೆದಿದೆ
‘ಒಂದು ಮಗು, ಒಬ್ಬ ಶಿಕ್ಷಕ/ಶಿಕ್ಷಕಿ, ಒಂದು ಪುಸ್ತಕ ಮತ್ತು ಒಂದು ಲೇಖನಿ ಇಡೀ ಜಗತ್ತನ್ನೇ ಬದಲಾಯಿಸಬಹುದು’– ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಪಾಕಿಸ್ತಾನ ಮೂಲದ ಮಲಾಲಾ ಯೂಸುಫ್‌ಜೈ ಅವರ ಮಾತಿದು.
ಗುಜರಾತ್‌ನ ಸೌಲಭ್ಯವಂಚಿತ ರತುಸಿನ್ಹ ನಾ ಮುವಾದ ಎಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ವಿಚಾರದಲ್ಲಿ ಈ ಹೇಳಿಕೆ ನಿಜವಾಗುತ್ತಿದೆ. ಶಿಕ್ಷಕರೊಬ್ಬರ ಪ್ರಯತ್ನವು ಅಲ್ಲಿನ ಬಡ ಮಕ್ಕಳ ಜಗತ್ತನ್ನೇ ಬದಲಾಯಿಸುತ್ತಿದೆ. ಈ ಚಿಣ್ಣರು ಚದುರಂಗ (ಚೆಸ್) ಆಟದಲ್ಲಿ ದೊಡ್ಡ ಕನಸಿನ ಬೆನ್ನಟ್ಟಿ ಹೋಗುತ್ತಿದ್ದಾರೆ. ಇದೀಗ ಗುಜರಾತ್‌ನ ‘ಚೆಸ್ ಮಾದರಿ ಶಾಲೆ’ಯಾಗಿ ಇದು ಗುರುತಿಸಿಕೊಂಡಿದೆ. ಮಕ್ಕಳ ಚದುರಂಗ ಆಟದ ‘ನಡೆ’ಗಳು ರಾಜ್ಯ ಮಾತ್ರವಲ್ಲ ದೇಶವೇ ಆ ಊರಿನತ್ತ ತಿರುಗಿ ನೋಡುವಂತೆ ಮಾಡಿದೆ. ಇಲ್ಲಿನ ಹಲವು ಚಿಣ್ಣರು ರಾಜ್ಯ ಮಟ್ಟದ ಚೆಸ್ ಚಾಂಪಿಯನ್‌ಗಳು. ಅವರ ‘ಚೆಸ್’ ಸಾಧನೆ ಇಷ್ಟಕ್ಕೇ ನಿಂತಿಲ್ಲ. ಆರು ಮಕ್ಕಳು ‘ಫಿಡೆ’ ರ್‍ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಈ ಸಾಧನೆಯ ಹಿಂದಿರುವುದು ಅಲ್ಲಿನ ಗಣಿತ ಶಿಕ್ಷಕ ಸಂದೀಪ್ ಉಪಾಧ್ಯಾಯ. ಚದುರಂಗ ಆಟದ ಮೇಲೆ ಅವರಿಗಿರುವ ವಿಪರೀತ ಪ್ರೀತಿ, ಶಾಲೆಯ ಮಕ್ಕಳ ಚೆಸ್ ಕನಸಿಗೆ ರೆಕ್ಕೆ ಮೂಡುವಂತೆ ಮಾಡಿದೆ.
ಗುಜರಾತ್‌ನ ಮಹೀಸಾಗರ ಜಿಲ್ಲೆಯ ಬಾಲಸಿನೊರ್ ತಾಲ್ಲೂಕಿನಲ್ಲಿದೆ 100 ಮನೆಗಳಿರುವ ಈ ಪುಟ್ಟ ಗ್ರಾಮ. ಬಡ ಕಾರ್ಮಿಕ ಕುಟುಂಬಗಳೇ ವಾಸಿಸುವ ಈ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯದ ಭಾಗ್ಯ ಇನ್ನೂ ಸಿಕ್ಕಿಲ್ಲ. ಪೋಷಕರಿಗೆ ಚೆಸ್ ಎಂದರೆ ಏನು ಎಂಬುದೇ ಗೊತ್ತಿಲ್ಲ. ಆದರೆ ನಾಲ್ಕು ವರ್ಷಗಳಿಂದೀಚೆಗೆ ಅವರ ಮನೆಯ ಮಕ್ಕಳು ಚದುರಂಗ ಆಟದಲ್ಲಿ ಪಳಗಿದ್ದಾರೆ. ಶಾಲೆಯಲ್ಲಿ ಪಾಠ ಕೇಳುವುದರ ಜೊತೆಗೆ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ನಡೆಯುವ ಚೆಸ್ ಟೂರ್ನಿಗಳಲ್ಲಿ ಭಾಗವಹಿಸುತ್ತಾ ಬಹುಮಾನ, ಟ್ರೋಫಿ, ಪದಕಗಳನ್ನು ಗೆದ್ದು ತರುತ್ತಿದ್ದಾರೆ.
2000ನೇ ಇಸವಿಯಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಸಂದೀಪ್, ಮಕ್ಕಳಿಗೆ ಚೆಸ್ ತರಬೇತಿ ನೀಡಲು ಆರಂಭಿಸಿದ್ದು 2021ರ ನಂತರ. 2018ರಲ್ಲಿ ಶಿವ ಖೇರಾ ಅವರ ‘ನೀವೂ ಗೆಲ್ಲಬಹುದು’ (ಯೂ ಕ್ಯಾನ್ ವಿನ್) ಎಂಬ ಪುಸ್ತಕದಿಂದ ಪ್ರೇರಿತರಾದ ಅವರಿಗೆ, ಬರೀ ಪಾಠವಲ್ಲದೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಅನುಕೂಲವಾಗುವಂತೆ ಏನನ್ನಾದರೂ ಮಾಡಬೇಕು ಎಂಬ ಯೋಚನೆ ಬಂತು. ಬುದ್ಧಿಮತ್ತೆಗೆ ಸವಾಲು ಒಡ್ಡುವ ಚೆಸ್ ಅನ್ನೇ ಯಾಕೆ ಕಲಿಸಬಾರದು ಎಂದುಕೊಂಡರು. ಆದರೆ, ಅವರ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ಕೋವಿಡ್ ಸಾಂಕ್ರಾಮಿಕ ಕಾಡಬೇಕಾಯಿತು. ಲಾಕ್‌ಡೌನ್ ಅವಧಿಯಲ್ಲಿ ಶಾಲೆಗಳು ಮುಚ್ಚಿದ್ದಾಗ, ಸುಮ್ಮನೆ ಮನೆಯಲ್ಲಿ ಇರುತ್ತಿದ್ದ ಮಕ್ಕಳಿಗೆ ಚೆಸ್ ತರಬೇತಿ ನೀಡಲು ಆರಂಭಿಸಿದರು. 2022ರ ಹೊತ್ತಿಗೆ ಹಲವು ಮಕ್ಕಳು ಆಟದಲ್ಲಿ ಪರಿಣತಿ ಸಾಧಿಸಿದರು. ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ನಾಲ್ಕು ವರ್ಷಗಳಲ್ಲಿ ಸಂದೀಪ್ 200 ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 138 ಮಕ್ಕಳಿದ್ದು, ಪೂರ್ವ ಪ್ರಾಥಮಿಕದಿಂದ ಹಿಡಿದು ಎಂಟನೇ ತರಗತಿವರೆಗಿನ 100 ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಂದೀಪ್, ‘ಶಾಲೆ ಅವಧಿಯಲ್ಲಿ ಮಕ್ಕಳಿಗೆ ಚೆಸ್ ಹೇಳಿಕೊಡುತ್ತಿಲ್ಲ. ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿ, ತರಗತಿ ಮುಗಿದ ನಂತರ, ಬೇಸಿಗೆ ರಜಾ ಸಮಯದಲ್ಲಿ ತರಬೇತಿ ನೀಡುತ್ತಿದ್ದೇನೆ. ನಮ್ಮ ಶಾಲೆಯಲ್ಲಿ ಈಗ ಚೆಸ್ ಕೂಡ ಶಿಕ್ಷಣದ ಭಾಗವೇ ಆಗಿದೆ’ ಎಂದು ಹೇಳಿದರು.
ಸಂದೀಪ್ ಅವರ ಶ್ರಮ ಬಹುಬೇಗ ಫಲ ನೀಡಲು ಆರಂಭಿಸಿದೆ. ಗುಜರಾತ್‌ನ ಕ್ರೀಡಾ ಪ್ರಾಧಿಕಾರ ನಿರ್ವಹಿಸುವ ಜಿಲ್ಲಾ ಮಟ್ಟದ ಕ್ರೀಡಾ ಶಾಲೆಗೆ (ಡಿಎಲ್‌ಎಸ್‌ಎಸ್) 21 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ನಗರ ಪ್ರದೇಶದ ಕ್ರೀಡಾ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಿ ಈ ಶಾಲೆಯ ಮಕ್ಕಳು ಪ್ರವೇಶ ಪಡೆದಿರುವುದು ಇಡೀ ಊರಿಗೆ ಹೆಮ್ಮೆ ಉಂಟು ಮಾಡಿದೆ. ಡಿಎಲ್‌ಎಸ್‌ಎಸ್‌ಗೆ ದಾಖಲಾದರೆ ದ್ವಿತೀಯ ಪಿಯುಸಿವರೆಗೆ ಶಿಕ್ಷಣದ ಜೊತೆಗೆ ಹೆಚ್ಚುವರಿ ಕ್ರೀಡಾ ತರಬೇತಿಯನ್ನೂ ಉಚಿತವಾಗಿ ನೀಡಲಾಗುತ್ತದೆ.
ನಾಲ್ಕು ವರ್ಷಗಳಲ್ಲಿ ಈ ಶಾಲೆಯ ಮಕ್ಕಳು ರಾಜ್ಯಮಟ್ಟದ 25 ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಖೇಲ್ ಮಹಾಕುಂಭ ಸೇರಿದಂತೆ 20 ಪಂದ್ಯಾವಳಿಗಳಲ್ಲಿ ಮೊದಲ ಮೂವರು ವಿಜೇತರಲ್ಲಿ ಒಬ್ಬರಾಗಿದ್ದಾರೆ.
ಹಿಂದಿನ ವರ್ಷ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಂಟು ವಿದ್ಯಾರ್ಥಿಗಳ ಪೈಕಿ ಏಳು ಮಕ್ಕಳು ಈ ಶಾಲೆಯವರು. ಈ ವರ್ಷದ ಮಾರ್ಚ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಟೂರ್ನಿಯಲ್ಲಿ 9ರಿಂದ 15 ವರ್ಷದೊಳಗಿನವರ ಪಂದ್ಯಾವಳಿಗಳಲ್ಲಿ ಈ ಶಾಲೆಯ ಹೆಚ್ಚಿನ ಹೆಣ್ಣುಮಕ್ಕಳು ಪದಕಗಳಿಗೆ ಕೊರಳೊಡ್ಡಿದ್ದಾರೆ.
ಮಕ್ಕಳ ಸಾಧನೆ ಹಲವರ ಗಮನ ಸೆಳೆದಿದೆ. ಚೆಸ್ ಕ್ರೀಡಾ ಕ್ಷೇತ್ರದ ಹಲವರು ಶಾಲೆಗೆ ಭೇಟಿ ನೀಡಿದ್ದಾರೆ. ಕಂಪನಿಯೊಂದು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯಿಂದ 30 ಚೆಸ್‌ಬೋರ್ಡ್ ಮತ್ತು ಅಷ್ಟೇ ಸಂಖ್ಯೆಯ ಚೆಸ್ ಕ್ಲಾಕ್‌ಗಳನ್ನು ಕೊಡುಗೆಯಾಗಿ ನೀಡಿದೆ. ಲಯನ್ಸ್ ಕ್ಲಬ್‌ನಂತಹ ಸ್ಥಳೀಯ ಸಂಸ್ಥೆಗಳು ಚೆಸ್ ಟೂರ್ನಿಗಳನ್ನು ಆಯೋಜಿಸಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿವೆ.
ಚೆಸ್ ತರಬೇತಿಯು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಅವರ ಆತ್ಮವಿಶ್ವಾಸ ವೃದ್ಧಿಯಾಗಿದೆ. ಅವರ ಸಮಗ್ರ ಬೆಳವಣಿಗೆಗೂ ಇದು ಕಾರಣವಾಗಿದೆ. ಬೇರೆಯವರ ಮುಂದೆ ಮಾತನಾಡುವುದಕ್ಕೂ ಹೆದರುತ್ತಿದ್ದ ಮಕ್ಕಳು, ಈಗ ಧೈರ್ಯವಾಗಿ ಮಾತನಾಡುತ್ತಾರೆ. ಚೆಸ್ ಟೂರ್ನಿಗಳಲ್ಲಿ ಎದುರಾಳಿಗಳ ಮುಂದೆ ಧೈರ್ಯವಾಗಿ ಕುಳಿತು ಆಡುತ್ತಿದ್ದಾರೆ.
ತಾಲ್ಲೂಕು, ಜಿಲ್ಲೆ, ಮತ್ತು ರಾಜ್ಯಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿರುವ ಇಲ್ಲಿನ ಮಕ್ಕಳು ಇನ್ನೂ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡಿಲ್ಲ. ಶೀಘ್ರದಲ್ಲಿ ಆ ಮಟ್ಟಕ್ಕೂ ಹೋಗುವ ವಿಶ್ವಾಸ ಸಂದೀಪ್ ಅವರದ್ದು.
ಸ್ವಂತ ಹಣದಿಂದ ಖರೀದಿ
ತರಬೇತಿಗೆ ಬೇಕಾದ ಚೆಸ್ ಕಿಟ್ ಖರೀದಿಗೆ ಹಣ ಕೊಡಲು ಪೋಷಕರಿಂದ ಸಾಧ್ಯವಿರಲಿಲ್ಲ. ಹಾಗಾಗಿ, ಸಂದೀಪ್ ಅವರೇ ಸ್ವಂತ ಹಣದಿಂದ ಚೆಸ್ ಬೋರ್ಡ್, ಕ್ಲಾಕ್, ಚೆಸ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿ ಮಾಡಿ ಮಕ್ಕಳಿಗೆ ಹಂಚಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳ ಪ್ರಯಾಣ, ಸ್ಪರ್ಧೆಯ ನೋಂದಣಿ ವೆಚ್ಚವನ್ನೂ ಹಲವು ಬಾರಿ ತಾವೇ ಭರಿಸಿದ್ದಾರೆ. ಹಣದ ಕೊರತೆ ಬಿದ್ದಾಗ ಸಹೋದ್ಯೋಗಿಗಳು, ಸ್ನೇಹಿತರು, ಗ್ರಾಮಸ್ಥರಿಂದ ಹಣ ಸಂಗ್ರಹಿಸಿದ್ದಾರೆ.
ಉತ್ತರಪ್ರದೇಶದ ಜೌನ್‌ಪುರ ಜಿಲ್ಲೆಯ ಮಾಧೋಪಟ್ಟಿ ಎಂಬ ಗ್ರಾಮದಿಂದ 45ಕ್ಕೂ ಹೆಚ್ಚು ಐಎಎಸ್ ಐಪಿಎಸ್ ಇನ್ನಿತರ ಅಧಿಕಾರಿಗಳಾಗಿದ್ದಾರೆ. ಒಂದು ಗ್ರಾಮಕ್ಕೆ ಉನ್ನತ ಅಧಿಕಾರಿಗಳನ್ನು ಸೃಷ್ಟಿಸಲು ಆಗುವುದಾದರೆ ನಮಗ್ಯಾಕೆ ಗ್ರ್ಯಾಂಡ್ ಮಾಸ್ಟರ್‌ಗಳು ಚೆಸ್ ಚಾಂಪಿಯನ್‌ಗಳನ್ನು ಹುಟ್ಟುಹಾಕಲು ಸಾಧ್ಯವಿಲ್ಲ? 50 ಗ್ರ್ಯಾಂಡ್ ಮಾಸ್ಟರ್‌ಗಳು ಮತ್ತು 10 ವಿಶ್ವ ಚಾಂಪಿಯನ್‌ಗಳನ್ನು ರೂಪಿಸಬೇಕು ಎಂಬುದು ನನ್ನ ಗುರಿ. ಇದು ದೊಡ್ಡ ಮಹತ್ವಾಕಾಂಕ್ಷೆ ಎಂದೆನಿಸಬಹುದು. ಆದರೆ ಸಾಧಿಸಲು ಖಂಡಿತ ಸಾಧ್ಯವಿದೆ.ಸಂದೀಪ್ ಉಪಾಧ್ಯಾಯ ಶಿಕ್ಷಕ ಮತ್ತು ಚೆಸ್ ತರಬೇತುದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.