ADVERTISEMENT

ಮಕ್ಕಳ ಆಸಕ್ತಿಗಿರಲಿ ಆದ್ಯತೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 0:30 IST
Last Updated 4 ಜೂನ್ 2022, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಿಖಿತಾಗೆ ಆಟ ಆಡೋದು ತುಂಬಾ ಇಷ್ಟ. ಆದರೆ ಶಾಲೆ ಮುಗಿಸಿ ಬಂದು ಆಟ ಆಡಲು ಹೋದರೆ ಓದಿನಲ್ಲಿ ಹಿಂದೆ ಬೀಳ್ತೀಯಾ. ಮೊದಲು ಓದು ಆಮೇಲೆ ಆಟ ಅಂತಾರೆ ಪೋಷಕರು.

‘ನಿಮ್ಮ ಮಕ್ಕಳು 10 ನೇ ತರಗತಿಗೆ ಬಂದಿದ್ದಾರೆ ಅಂತ ಸಂಗೀತದ ಕ್ಲಾಸನ್ನ ಯಾಕೆ ತಪ್ಪಿಸುತ್ತಿದ್ದೀರಿ. ಹಾಗಾದ್ರೆ ಇಷ್ಟು ವರ್ಷ, ಅವರನ್ನು ಕ್ಲಾಸ್‌ಗೆ ಕಳಿಸಿದ್ದು ಯಾಕೆ? 10ನೇ ತರಗತಿ ಪರೀಕ್ಷೆ ಅಷ್ಟೇ ಸಂಗೀತ ಕೂಡ ಮುಖ್ಯ ಅಂತ ನಿಮಗೆ ಯಾಕೆ ಅರ್ಥ ಆಗಲ್ಲ? ಸಂಗೀತ ತರಬೇತಿಯನ್ನು ಯಾಕೆ ಎರಡನೇ ದರ್ಜೆಯ ಕಲಿಕೆ ಅಂತ ನೋಡ್ತೀರಿ?‘ ಅಂತ ಪೋಷಕರೊಬ್ಬರನ್ನು ಪ್ರಶ್ನೆ ಮಾಡುತ್ತಾರೆ ಸಂಗೀತದ ಟೀಚರ್ ಪದ್ಮಾ.

ಮಕ್ಕಳ ಆಸಕ್ತಿ ವಿಷಯದಲ್ಲಿ ಪೋಷಕರೇಕೆ ಹೀಗೆ ನಡೆದುಕೊಳ್ಳುತ್ತಾರೆ‌? ಅವರ ಆಸಕ್ತಿಗಳಿಗೆ ಏಕೆ ಆದ್ಯತೆ ನೀಡುವುದಿಲ್ಲ? ಅಂಕಗಳಿಕೆಯಷ್ಟೇ ಮಕ್ಕಳ ಯಶಸ್ಸಿನ ಮಾನದಂಡವಾಗಬೇಕೆ? ಅವರಿಗಿಷ್ಟವಾದದ್ದನ್ನು ಕಲಿತು ಅದರಲ್ಲೂ ಯಶಸ್ಸುಗಳಿಸ ಬಹುದಲ್ಲವೇ?

ADVERTISEMENT

–‌ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದಾಗ ಹೆಚ್ಚು ಮತ್ತು ಕಡಿಮೆ ಅಂಕ ಪಡೆದ ಮಕ್ಕಳ ಪೋಷಕರ ವರ್ತನೆ ಗಮನಿಸಿದಾಗ, ಇಂಥ ಪ್ರಶ್ನೆಗಳು ಮನದಲ್ಲಿ ಸಾಲಿಟ್ಟವು. ಇದೇ ವೇಳೆ, ಓದಿನಲ್ಲಿ ಫೇಲಾಗಿ ತಮ್ಮ ಆಸಕ್ತಿ ಕ್ಷೇತ್ರದಲ್ಲೇ ಯಶಸ್ಸು ಸಾಧಿಸಿ ಅನೇಕರಿಗೆ ಸ್ಪೂರ್ತಿಯಾದ ವ್ಯಕ್ತಿಗಳೂ ನೆನಪಾದರು !

ಇವೆಲ್ಲ ನೋಡಿದಾಗ, ನನಗನ್ನಿಸಿದ್ದು, ಮಕ್ಕಳ ಯಶಸ್ಸಿಗೆ ಅಂಕಗಳೇ ಮಾನದಂಡವಾಗಬೇಕಿಲ್ಲ. ಅವರಲ್ಲಿರುವ ಆಸಕ್ತಿಯನ್ನು ಗುರುತಿಸಿ, ಅದಕ್ಕೆ ನೀರೆರೆದರೆ ಸಾಕು, ಅಂತ ಎನ್ನಿಸುತ್ತದೆ.

ಆಸಕ್ತಿ ಗುರುತಿಸಬೇಕು

ಮಕ್ಕಳಲ್ಲಿ ಅಗಾಧವಾದ ಸೃಜನಶೀಲ ಶಕ್ತಿ ಇದೆ. ಇದರ ಪ್ರದರ್ಶನಕ್ಕೆ ಒಂದಷ್ಟು ಅವಕಾಶ ನೀಡಬೇಕು. ಮಕ್ಕಳಲ್ಲಿರುವ ಈ ಜ್ಞಾನದ ಶಕ್ತಿಯನ್ನು ಅರ್ಥ ಮಾಡಿಕೊಳ್ಳುವ ಕೆಲಸ ಪೋಷಕರದ್ದು.

ಅದು ಬಹಳ ಸುಲಭ. ಮಗುವಿನ ಆಸೆ, ಆಸಕ್ತಿಗಳನ್ನು ಗಮನಿಸುತ್ತಾ ಹೋದರೆ ಖಂಡಿತ ಅರ್ಥವಾಗುತ್ತಾ ಹೋಗುತ್ತದೆ. ನೋಡಿ, ಮಗುವೊಂದು ಸಿಕ್ಕ ಸಿಕ್ಕ ವಸ್ತುಗಳನ್ನು ಹಿಡಿದು ತಾಳ ಹಾಕುತ್ತಾ ಸಂಗೀತದ ನಾದ ಆಲಿಸುತ್ತಿದೆ ಎಂದರೆ, ಅದಕ್ಕೆ ಮೂಲಭೂತವಾಗಿ ಸಂಗೀತದಲ್ಲಿ ಆಸಕ್ತಿ ಇದೆ ಎಂದುಕೊಳ್ಳಬಹುದು.

ಸಿಕ್ಕಸಿಕ್ಕ ಹಲಗೆ ತುಂಡುಗಳನ್ನು ಬ್ಯಾಟ್ ಮಾಡಿಕೊಂಡು ಬಾಲ್ ಹಿಡಿದುಕೊಂಡು ಆಟ ಆಡುತ್ತಾ ಮೈಕೈ ಧೂಳು ಮಾಡಿಕೊಳ್ಳುತ್ತಾ ಸದಾ ಹೊರಗೆ ಇರುತ್ತಿದ್ದರೆ ಆ ಮಗುವನ್ನು ಕ್ರೀಡೆಗೆ ಕಳುಹಿಸಲು ಅನುಮಾನಿಸಬೇಕಿಲ್ಲ.

ಪೇಪರು ಪೆನ್ನು ಹಿಡಿದು ಗೀಚುತ್ತಾ ‘ನಾನು ಬರೆಯುತ್ತೇನೆ, ಅಮ್ಮನ ಹಾಗೆ ಲೆಕ್ಕ ಮಾಡುತ್ತೇನೆ ಅಪ್ಪನ ಹಾಗೆ ಅಕ್ಷರ ಬರೆಯುತ್ತೇನೆ, ಆಫೀಸಿಗೆ ಹೋಗುತ್ತೇನೆ’ ಎಂದು ಅನುಕರಿಸುವ ಮಗು ಓದು ಬರಹದಲ್ಲಿ ಹೆಚ್ಚು ಆಸಕ್ತಿ ತೋರಿಸಬಹುದು. ಅಕ್ಷರಗಳನ್ನು ಬೇಗನೆ ಕಲಿಯಬಹುದು, ಪೆನ್ಸಿಲ್ ಹಿಡಿತ ಇಂತಹ ಮಕ್ಕಳಿಗೆ ಬೇಗನೆ ಬಂದುಬಿಡುತ್ತದೆ.

ಹೀಗೆ ಆಸಕ್ತಿಗಳನ್ನು ಅರಿಯುತ್ತಾ ಮಕ್ಕಳನ್ನು ಮುನ್ನಡೆಸಲು ಸಾಧ್ಯವಿದೆ. ಹಾಗಾಗಿ, ಪರೀಕ್ಷೆ ಎಲ್ಲದಕ್ಕೂ ಮಾನದಂಡ ಅಲ್ಲ. ಅಂಕಗಳೂ ಮಕ್ಕಳ ‘ಕ್ರಿಯಾಶೀಲತೆ’ ಅಳೆಯುವ ಪರಿಕರಗಳೂ ಅಲ್ಲ.

ಮಕ್ಕಳಿಗೆ ಅಕ್ಷರಗಳ ಅರಿವು ಬೇಕು ನಿಜ. ಆದರೆ ಅದಕ್ಕಾಗಿ ಅಂಕ ಮತ್ತು ರ‍್ಯಾಂಕುಗಳನ್ನು ಪಡೆಯುವ ಗೀಳಾಗಬಾರದು. ಏಕೆಂದರೆ, ಬದಲಾದ ಶೈಕ್ಷಣಿಕ–ಔದ್ಯೋಗಿಕ ವಾತಾವರಣದಲ್ಲಿ ಎಲ್ಲಾ ಕಡೆ ಅಂಕಗಳಿಗಿಂತ ವ್ಯಕ್ತಿತ್ವಕ್ಕೆ ಹೆಚ್ಚು ಮನ್ನಣೆ ಸಿಗುತ್ತಿದೆ ಎಂಬುದನ್ನು ಗಮನಿಸಬೇಕು. ವ್ಯಕ್ತಿತ್ವ, ವರ್ತನೆ(Attitude) ಚೆನ್ನಾಗಿದ್ದರೆ ಸಾಕು ಉತ್ತಮ ವೇತನ ನೀಡಿ ತಾವೇ ತರಬೇತಿ ಕೊಟ್ಟು ಕೆಲಸವನ್ನು ಕೊಡುವ ಕಂಪನಿಗಳಿವೆ. ಹಾಗಾಗಿ, ಉತ್ತಮ ವ್ಯಕ್ತಿತ್ವ ಬೆಳೆಸುವ ನಿಟ್ಟಿನಲ್ಲಿ ತಂದೆ ತಾಯಿಗಳು ಸಾಗಬೇಕು.

ಆಸಕ್ತಿಯನ್ನು ಪ್ರೋತ್ಸಾಹಿಸಿ

ಮಕ್ಕಳಲ್ಲಿ ಹುದುಗಿರುವ ಇಂಥ ಸುಪ್ತ ಆಸಕ್ತಿ, ಪ್ರತಿಭೆಯನ್ನು ಗುರುತಿಸಿದ ಮೇಲೆ, ಅದನ್ನು ಪ್ರೋತ್ಸಾಹಿಸಬೇಕು. ಹಾಡು ಗುನುಗುವ ಮಗುವಿಗೆ ಸಂಗೀತ ಕಲಿಯಲು ಉತ್ತೇಜಿಸಬೇಕು. ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳನ್ನು ನೋಡುತ್ತಾ ಅದನ್ನು ಅನುಕರಿಸುವ ಮಗುವಿಗೆ ಚಿತ್ರಕಲೆ ಅಭ್ಯಾಸ ಮಾಡಿಸಬೇಕು.

‘ಸಂಗೀತ ಕಲಿಯುತ್ತೇನೆ‘ ಎನ್ನುವ ಮಕ್ಕಳಿಗೆ, ‘ಮೊದಲು ಓದು, ನಂತರ ಸಂಗೀತ ಕಲಿ’ ಎಂದು ಗದರಿಸಿ, ಉತ್ಸಾಹ ಕುಂದಿಸಬೇಡಿ. ಹಾಗೆ ಮಾಡಿದರೆ ಓದಿನಲ್ಲೂ ಆಸಕ್ತಿ ಕಳೆದುಕೊಳ್ಳಬಹುದು. ಬದಲಿಗೆ, ‘ನಾಳೆಯಿಂದಲೇ ಸಂಗೀತ ಕಲಿಯಲು ಹೋಗು’ ಎಂದು ಹೇಳಿ ನೋಡಿ. ಆ ಮಗು ತನ್ನಿಷ್ಟದ ಸಂಗೀತದ ಜೊತೆಗೆ, ಓದಿನಲ್ಲೂ ಮುಂದೆ ಬರಬಹುದು.ಹೀಗೆ ಸುಪ್ತ ಶಕ್ತಿ, ಆಸಕ್ತಿಯನ್ನು ಪೋಷಿಸಿದಾಗ ಅದು ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ಕಾರ್ಯ ಕ್ಷಮತೆ, ನೆನಪಿನ ಶಕ್ತಿ ಹೆಚ್ಚುತ್ತದೆ.

ಈಗ ಮಕ್ಕಳು ಪ್ರೌಢಶಾಲೆ ಹಂತಕ್ಕಿಂತ ಮುಂಚೆಯೇ ತಮ್ಮ ಗುರಿ ಹುಡುಕಿಕೊಂಡು ಯಶಸ್ವಿಯಾಗುತ್ತಿರುವ ಉದಾಹರಣೆಗಳಿವೆ. ಹಾಗಾಗಿ, ಮಕ್ಕಳಿಗೆ ಏನು ಬೇಕು ಎನ್ನುವುದನ್ನು ಪೋಷಕರು ಸರಿಯಾಗಿ ಅರಿತುಕೊಳ್ಳಬೇಕು.

ಈಗಿರುವ ‘ಅಂಕ‘ದ ಪರದೆ ಸರಿಸಿ, ‘ಸುಂಕ‘ಗಳ ನಾಟಕಕ್ಕೆ ಬ್ರೇಕ್ ಹಾಕಿ, ಮಕ್ಕಳಲ್ಲಿರುವ ‘ಆಸಕ್ತಿ‘ಗೆ ನೀರೆರೆಯುವ ಕೆಲಸವನ್ನು ಪೋಷಕರು ಮಾಡಬೇಕು. ಈ ನಿಟ್ಟಿನಲ್ಲಿ ಬದಲಾವಣೆಯ ಗಾಳಿ ಬೀಸಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.