ADVERTISEMENT

ಸೂಕ್ಷ್ಮಜೀವವಿಜ್ಞಾನ, ಜೈವಿಕ ತಂತ್ರಜ್ಞಾನ ಕೋರ್ಸ್‌ಗೆ ಆದ್ಯತೆ

ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಬಗ್ಗೆಯೂ ವಿಚಾರಿಸುತ್ತಿರುವ ವಿದ್ಯಾರ್ಥಿಗಳು

ಗುರು ಪಿ.ಎಸ್‌
Published 24 ಜುಲೈ 2020, 20:28 IST
Last Updated 24 ಜುಲೈ 2020, 20:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಪದವಿ ಪ್ರವೇಶ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಮುಖ್ಯವಾಗಿ ಜೀವವಿಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ವಿದ್ಯಾರ್ಥಿಗಳು ಉತ್ಸಾಹ ತೋರುತ್ತಿದ್ದಾರೆ.

ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡೂ ವಿಧಾನದಲ್ಲಿ ಪ್ರವೇಶ ಪಡೆದುಕೊಳ್ಳಲಾಗುತ್ತಿದೆ. ಖಾಸಗಿ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳು ಫೇಸ್‌ಬುಕ್‌ ಅಥವಾ ಡಿಜಿಟಲ್‌ ಮಾರ್ಕೆಟಿಂಗ್‌ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಆನ್‌ಲೈನ್‌ನಲ್ಲಿಯೇ ಅರ್ಜಿ ತೆಗೆದುಕೊಂಡು, ಶುಲ್ಕ ತುಂಬಿಸಿಕೊಂಡು, ಆನ್‌ಲೈನ್‌ನಲ್ಲಿಯೇ ರಶೀದಿ ನೀಡುವ ವ್ಯವಸ್ಥೆಯನ್ನೂ ಮಾಡಿಕೊಂಡಿವೆ.

‘ಸಾಮಾನ್ಯವಾಗಿ ವಾಣಿಜ್ಯ ವಿಷಯದ ಕೋರ್ಸ್‌ಗಳಿಗೆ ಹೆಚ್ಚು ವಿಚಾರಣೆ ಬರುತ್ತಿವೆ. ಈ ಬಾರಿ, ಕೊರೊನಾ ಸೋಂಕಿನ ಪರಿಣಾಮ ಪ್ರಯೋಗಾಲಯಗಳು ಹೆಚ್ಚು ಸ್ಥಾಪನೆ ಆಗಿವೆ. ಈ ಕ್ಷೇತ್ರದಲ್ಲಿ ಭವಿಷ್ಯ ಇದೆ ಎಂದುಕೊಂಡವರು ಬಿಎಸ್‌ಸಿಯಲ್ಲಿ ಸೂಕ್ಷ್ಮಜೀವವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕೋರ್ಸ್‌ಗಳ ಬಗ್ಗೆ ಹೆಚ್ಚು ವಿಚಾರಣೆ ನಡೆಸುತ್ತಿದ್ದಾರೆ’ ಎಂದು ಉಳ್ಳಾಲುವಿನಲ್ಲಿರುವ ಆಕ್ಸ್‌ಫರ್ಡ್‌ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಸುಪ್ರೀತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪ್ರತಿ ಬಾರಿ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ಗೆ ಹೆಚ್ಚು ಬೇಡಿಕೆ ಇರುತ್ತಿತ್ತು. ಈಗ, ಮೆಡಿಕಲ್‌ ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ಕೋರ್ಸ್‌ಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ರಕ್ತ ಪರೀಕ್ಷೆ, ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯುವಂತಹ ವಿಷಯಗಳು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಪಟ್ಟಿದ್ದರೆ, ಇಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾದ ವೆಂಟಿಲೇಟರ್, ಆಕ್ಸಿಮೀಟರ್ ಅಥವಾ ಐಸಿಯು ಉಪಕರಣಗಳ ಅಭಿವೃದ್ಧಿ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ಗೆ ಬರುತ್ತದೆ. ಹೀಗಾಗಿ, ಈ ವಿಷಯಗಳಲ್ಲಿ ಪದವಿ ಪಡೆಯಲು ವಿದ್ಯಾರ್ಥಿಗಳು ಮುಂದಾಗುತ್ತಿದ್ದಾರೆ’ ಎಂದು ದಯಾನಂದ ಸಾಗರ್‌ ಕಾಲೇಜಿನ ಪ್ರೊ. ವಿ.ಜಿ. ಸಂಗಂ ಹೇಳುತ್ತಾರೆ.

‘ಬಿಸಿಎ, ಬಿ.ಕಾಂ‌ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚು ಕರೆಗಳು ಬರುತ್ತಿದ್ದು, ದಾಖಲಾತಿ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ಪದವಿ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಟಿ.ಎಂ. ಮಂಜುನಾಥ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.