ಪ್ರಾತಿನಿಧಿಕ ಚಿತ್ರ
ನಾನು16 ವರ್ಷದ ಹುಡುಗಿ. ಓದುವಾಗ ಬಹಳ ಕಷ್ಟವಾಗುತ್ತದೆ. ಒಂದು ಪುಟವನ್ನು ಓದಿ ಮುಗಿಸುವಷ್ಟರಲ್ಲಿ ಮೊದಲ ಪ್ಯಾರಾದಲ್ಲಿ ಓದಿದ್ದು ಮರೆತುಹೋಗುತ್ತದೆ. ಏನೇನೋ ನೆನಪುಗಳು ಹಾಗೂ ಯಾವ್ಯಾವುದೋ ಸನ್ನಿವೇಶಗಳು ಮನಸ್ಸಿನ ತುಂಬಾ ಓಡುತ್ತವೆ. ಏಕಾಗ್ರತೆಯಿಂದ ಓದಲಿಕ್ಕೆ ಸಾಧ್ಯವಾಗುತ್ತಿಲ್ಲ. ಫೇಲಾಗುತ್ತೇನೆ ಅಂತ ಆತಂಕವಾಗುತ್ತದೆ. ಯಾರೋ ನನ್ನನ್ನು ಗಮನಿಸುತ್ತಿರುವಂತೆ, ಜೋರಾಗಿ ಬೈಯ್ದಂತೆ ಅನ್ನಿಸುತ್ತದೆ. ಬಹಳ ಭಯವಾಗುತ್ತದೆ. ಇದರಿಂದ ಪಾರಾಗುವ ಬಗೆ ಹೇಗೆ?
ನಿಜಕ್ಕೂ ಇದೊಂದು ಗಂಭೀರವಾದ ಸಮಸ್ಯೆ. ಯಾರಲ್ಲಾದರೂ ಇದರ ಬಗ್ಗೆ ಹೇಳಿಕೊಂಡರೆ, ಹುಚ್ಚು ಹುಚ್ಚಾಗಿ ಏನೇನೋ ಆಲೋಚನೆ ಮಾಡುವುದನ್ನು ನಿಲ್ಲಿಸಿ ಮತ್ತೆ ಮತ್ತೆ ಓದು. ಎಲ್ಲಾ ನೆನಪಿರುತ್ತದೆ ಎನ್ನುತ್ತಾರೆ. ಬಹಳ ವಿಚಲಿತಗೊಂಡ ಮನಸ್ಸು ಅಷ್ಟು ಸುಲಭದಲ್ಲಿ ಸರಿಯಾಗುವುದಿಲ್ಲ. ಮನಸ್ಸು ಚಂಚಲ. ಎಲ್ಲರ ಮನಸ್ಸೂ ಅಷ್ಟೇ. ನಿಮ್ಮ ವಯಸ್ಸಿನಲ್ಲಿ ಅದು ಸ್ವಲ್ಪ ಹೆಚ್ಚು.
ಈಗ ನಿಮ್ಮ ಮನಸ್ಸಿನ ಚಂಚಲತೆಗೆ ಕಾರಣಗಳನ್ನು ಹುಡುಕಬೇಕು. ಹಾರ್ಮೋನಿಗಳಿಂದಾಗಿ ದೈಹಿಕ ಹಾಗೂ ಮಾನಸಿಕವಾಗಿ ಏರು ಪೇರಾಗುತ್ತಿದೆಯೆ ಎನ್ನುವುದನ್ನು ಗಮನಿಸಿ. ದೈಹಿಕವಾಗಿ ತೊಂದರೆ ಇರುವಾಗ ಮನಸ್ಸು ಸಮಾಧಾನದಿಂದ ಇರಲಾರದು. ಮಾನಸಿಕವಾಗಿ ಆತಂಕವಾದಾಗಲೂ ದೈಹಿಕವಾಗಿ ಆರೋಗ್ಯದಿಂದ ಇರಲಿಕ್ಕಾಗದು. ವ್ಯಕ್ತಿಯ ಯಶಸ್ವಿ ಬದುಕಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬಹಳ ಮುಖ್ಯ.
ನೀವು ಮೊದಲಿನಿಂದ ಓದುವ ಅಭ್ಯಾಸವನ್ನು ಹೇಗೆ ರೂಢಿಸಿಕೊಂಡಿದ್ದೀರಿ? ಅವತ್ತಿನ ಕೆಲಸ ಅವತ್ತೇ ಮಾಡಿ ಮುಗಿಸುವುದಾಗಿದ್ದರೆ ಚೆನ್ನಾಗಿತ್ತು. ನಾಳೆ ಮಾಡಿದರಾಯಿತು ಎನ್ನುವ ಮನಸ್ಥಿತಿಯಿಂದ ಸುಳ್ಳು ಹೇಳುವುದು ರೂಢಿಯಾಗಿರುತ್ತದೆ. ಓದುವ ವಿಷಯದಲ್ಲಿ (ಬೇರೆ ವಿಷಯದಲ್ಲಿಯೂ ಸಹ) ನಿಮಗೆ ನೀವೇ ಸುಳ್ಳು ಹೇಳಿಕೊಂಡು ಸಮಾಧಾನಿಸುವುದು ರೂಢಿಯಾಗಿರುತ್ತದೆ. ನಿದ್ದೆ ಕಡಿಮೆಯಾಗಿರುತ್ತದೆ. ಅದರಿಂದಾಗಿ ನಿರಾಸಕ್ತಿ, ಅಶಕ್ತತೆ, ಉದಾಸೀನತೆ ಮುಂತಾದ ಎಲ್ಲವೂ ಒಂದೊಂದಾಗಿ ನಿಮ್ಮನ್ನು ಆವರಿಸಿಕೊಂಡಿರುತ್ತವೆ. ಸರಿಯಾದ ಸಮಯಕ್ಕೆ, ಸಮತೋಲನದ ಆಹಾರವನ್ನು ಸೇವಿಸುವುದು ಅಗತ್ಯ.
ಮೊದಲಿನಿಂದಲೂ ಸರಿಯಾಗಿ, ಶಿಸ್ತಿನಿಂದ ಓದಲಿಲ್ಲ, ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಓದಲಿಕ್ಕೆ ಶುರುಮಾಡಿದ್ದರಿಂದ ಆತಂಕ ಹೆಚ್ಚಾಗುತ್ತಿದೆ.
ಪರೀಕ್ಷೆಯ ಮಹತ್ವವನ್ನು, ಓದಬೇಕಾದ ಅಗತ್ಯವನ್ನು ನಿಮಗೆ ನೀವೇ ಪದೇ ಪದೇ ಹೇಳಿಕೊಳ್ಳಿ. ನೀವು ಸೋಲಕೂಡದು ಎನ್ನುವುದನ್ನು ನಿರ್ಧರಿಸಿಕೊಳ್ಳಿ. ಓದುವಾಗ ಮತ್ತೆ ಏನೇನು ನೆನಪಾಗುತ್ತದೆ ಎನ್ನುವುದನ್ನು ಗಮನಿಸಿ. ಬರೆದು ಪಟ್ಟಿ ಮಾಡಿ.
ನಿಮಗೆ ಯಾರು, ಹೇಗೆ, ಏನಂತ ಬೈಯ್ದಂತೆ ಕೇಳಿಸುತ್ತದೆ ಎನ್ನುವುದನ್ನು ಗಮನಿಸಿ. ಯಾವಾಗಿನಿಂದ ನಿಮಗೆ ಆ ಧ್ವನಿ ತೊಂದರೆ ಕೊಡುತ್ತದೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಬಹಷ್ಟು ಸಂದರ್ಭಗಳಲ್ಲಿ ಆ ಧ್ವನಿ ನಿಮಗೆ ಪರಿಚಯದ್ದೇ ಆಗಿರುತ್ತದೆ. ಅದು ಯಾರದ್ದು ಎನ್ನುವುದನ್ನು ಗುರುತಿಸಿ. ಗುರುತಿಸಿಕೊಂಡ ನಂತರ ಆ ವ್ಯಕ್ತಿಯ ಬಗೆಗೆ ನಿಮ್ಮ ಮನಸ್ಸಿನೊಳಗಿನ ಕೆಟ್ಟ ಭಾವನೆಯನ್ನು, ಕೆಟ್ಟ ನೆನಪುಗಳನ್ನು ಹೊರಗೆ ಕಳಿಸಿ. ರಿಲಾಕ್ಸ್ ಮಾಡಿ. ಒಂದು ದಿನಚರಿಯನ್ನು ತಯಾರಿಸಿಕೊಳ್ಳಿ. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಕನಿಷ್ಟ ಎರಡು ಸಲ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಿ. ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. ಮನಸ್ಸು ನಿರಾಳವಾಗುವ ತನಕ (ಹತ್ತರಿಂದ ಹದಿನೈದು ನಿಮಿಷಗಳು) ಉಸಿರಾಟದ ಮೇಲೆ ಗಮನವಿರಿಸಿ. ಹಗಲು ಮಲಗಬೇಡಿ. ರಾತ್ರಿ ಬೇಗ ಮಲಗಿ. ಬೇಗ ಏಳುವುದನ್ನು ರೂಢಿಸಿಕೊಳ್ಳಿ. ಒಳ್ಳೆಯ ನಿದ್ರೆಯಿಂದ ಮನಸ್ಸಿಗೆ ಹೆಚ್ಚು ಸಮಾಧಾನ ಸಿಗುತ್ತದೆ. ಓದುವ ಗೆಳೆಯರ ಬಳಿ ವಿಷಯಗಳ ಬಗ್ಗೆ ಚರ್ಚಿಸಿ. ಯಾವುದಕ್ಕೂ ಗಾಬರಿಯಾಗಬೇಡಿ. ಮನಸ್ಸಿನಲ್ಲಿ ಸಮಾಧಾನ ಹೆಚ್ಚಿದಷ್ಟೂ, ಏಕಾಗ್ರತೆ ಹೆಚ್ಚುತ್ತದೆ. ಆತಂಕ ಕಡಿಮೆಯಾಗುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.