ADVERTISEMENT

ದೆಹಲಿ ವಿಶ್ವವಿದ್ಯಾಲಯ | ಮಕ್ಕಳಾಟವಲ್ಲೋ ಅಣ್ಣಾ... ಯುವ ನೇತಾರರ ಕಣ

ಮಂಜುನಾಥ್ ಹೆಬ್ಬಾರ್‌
Published 21 ಸೆಪ್ಟೆಂಬರ್ 2025, 23:30 IST
Last Updated 21 ಸೆಪ್ಟೆಂಬರ್ 2025, 23:30 IST
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನದಲ್ಲಿ ಜಯ ಗಳಿಸಿದ ಎಬಿವಿಪಿಯ ದೀಪಿಕಾ ಝಾ ವಿಜಯೋತ್ಸವ.
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನದಲ್ಲಿ ಜಯ ಗಳಿಸಿದ ಎಬಿವಿಪಿಯ ದೀಪಿಕಾ ಝಾ ವಿಜಯೋತ್ಸವ.   

‘ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಇದಕ್ಕಿಂತ ಕೆಟ್ಟ ಪ್ರಚಾರ ಇರಲು ಸಾಧ್ಯವೇ? ಜೆಸಿಬಿಗಳು, ದೊಡ್ಡ ಮತ್ತು ಐಷಾರಾಮಿ ಕಾರುಗಳ ಬಳಕೆಯನ್ನು ನಾವು ಇದುವರೆಗೆ ನೋಡಿಯೇ ಇಲ್ಲ. ಇವರಿಗೆ ಬೆಂಟ್ಲಿ, ರೋಲ್ಸ್‌ ರಾಯ್ಸ್ ಮತ್ತು ಫೆರಾರಿಯಂತಹ ದೊಡ್ಡ ದೊಡ್ಡ ಹಾಗೂ ಐಷಾರಾಮಿ ಕಾರುಗಳು ಸಿಕ್ಕಿದ್ದಾದರೂ ಎಲ್ಲಿಂದ? ನಾವು ವಿದ್ಯಾರ್ಥಿಗಳಾಗಿದ್ದಾಗ ಈ ಕಾರುಗಳ ಹೆಸರನ್ನು ಕೂಡ ಕೇಳಿರಲಿಲ್ಲ’. 

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯ ತಕರಾರು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತುಷಾರ್ ರಾವ್‌ ಗೆಡೆಲಾ ಅವರ ಕಳವಳದ ಹಾಗೂ ಕಟು ನುಡಿಗಳಿವು. ಈ ಮಾತುಗಳು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯ ಆಳ– ಅಗಲಕ್ಕೆ ಪ್ರತ್ಯಕ್ಷ ನಿದರ್ಶನಗಳಾಗಿವೆ.

ಈ ಚುನಾವಣೆಯನ್ನು ಮೊದಲಿನಿಂದಲೂ ರಾಷ್ಟ್ರೀಯ ರಾಜಕಾರಣದ ಸೂಕ್ಷ್ಮ ರೂಪವಾಗಿಯೇ ನೋಡಲಾಗುತ್ತದೆ. ದೇಶದ ಬಹುದೊಡ್ಡ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಸೈದ್ಧಾಂತಿಕ ಹೋರಾಟವನ್ನು ಈ ಚುನಾವಣೆ ಪ್ರತಿಬಿಂಬಿಸುತ್ತದೆ.  ರಾಜಕೀಯ ರಂಗಕ್ಕೆ ನಾಯಕರನ್ನು ಸಜ್ಜುಗೊಳಿಸುವ ಕಣವಾಗಿದೆ. ದೇಶದಲ್ಲಿ ವಿದ್ಯಾರ್ಥಿ ರಾಜಕಾರಣದ ತೀವ್ರತೆಯು ದಶಕಗಳಿಂದ ಏರಿಳಿತ ಕಂಡಿದ್ದರೂ, ದೆಹಲಿಯ ಕಾಲೇಜುರಂಗದಲ್ಲಿ ಮಾತ್ರ ಚುನಾವಣಾ ಕಾವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳ ವೈಖರಿಯಲ್ಲೇ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿದೆ. 2 ಲಕ್ಷದಷ್ಟಿರುವ ವಿದ್ಯಾರ್ಥಿ ಮತದಾರರನ್ನು ಸೆಳೆಯಲು ಯುವ ನಾಯಕರು ಒಡ್ಡುವ ಆಮಿಷಗಳು ಒಂದೆರಡಲ್ಲ.  

ADVERTISEMENT

ವಿದ್ಯಾರ್ಥಿ ಸಂಘಟನೆಗಳ ನಡುವೆ ಸಂಘರ್ಷ, ಮಾರಾಮಾರಿಯಂತಹ ಪ್ರಕರಣಗಳು ವ್ಯಾಪಕವಾಗಿ ನಡೆದ ಕಾರಣಕ್ಕೆ ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಚುನಾವಣೆಗೆ ನಿರ್ಬಂಧ ಹೇರಿ ದಶಕಗಳೇ ಕಳೆದಿವೆ. ವಿದ್ಯಾರ್ಥಿ ಸಂಘಟನೆಗಳಿಗೆ ಚುನಾವಣೆ ನಡೆಸಲು ಅನುಮತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದೇ ಹೊತ್ತಿನಲ್ಲಿ, ದೆಹಲಿ ವಿಶ್ವವಿದ್ಯಾಲಯದ ಚುನಾವಣೆಯ ವಿದ್ಯಮಾನಗಳು ಮುನ್ನೆಲೆಗೆ ಬಂದಿವೆ. 

ವಿ.ವಿ.ಯ ಈ ಹಿಂದಿನ ಚುನಾವಣೆಗಳಲ್ಲಿನ ಅಕ್ರಮ, ಗಲಾಟೆ ಹಾಗೂ ವಿವಾದಗಳ ಕಾರಣಕ್ಕೆ ಈ ಸಲ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಬಹಳ ವರ್ಷಗಳ ನಂತರ, ಜೋರಾದ ರ‍್ಯಾಲಿಗಳು, ಕರಪತ್ರಗಳು ಹಾಗೂ ಯುವ ನಾಯಕರ ಅಬ್ಬರದ ಭಾಷಣಗಳು ಮಾಯವಾಗಿದ್ದವು. ಎದುರಾಳಿಗಳ ದೂಷಣೆ ಹಾಗೂ ಆಕ್ರಮಣಕಾರಿ ಘೋಷಣೆಗಳ ಬದಲು ಅಭ್ಯರ್ಥಿಗಳು ಎನ್‌ಇಪಿಯಂತಹ ವಿಷಯಗಳಿಗೆ ಒತ್ತು ನೀಡಿದ್ದರು. ಹೀಗಾಗಿ, ಈ ಬಾರಿಯದು ಒಂದು ರೀತಿ ಸ್ವಚ್ಛ ಹಾಗೂ ಹಸಿರು ಚುನಾವಣೆ!

ಆದರೆ, ಕಳ್ಳಾಟಗಳಿಗೇನೂ ಕಡಿಮೆ ಇರಲಿಲ್ಲ. ಅಭ್ಯರ್ಥಿಗಳು ಯುವ ಮತದಾರರನ್ನು ಸೆಳೆಯಲು ಹಲವು ಬಗೆಯ ಆಮಿಷಗಳನ್ನು ಒಡ್ಡಿದ್ದರು. ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕೈಗೊಂಡ ಕಟ್ಟುನಿಟ್ಟಿನ ಕಣ್ಗಾವಲು ಹಾಗೂ ಸರ್ಪಗಾವಲಿನ ನಡುವೆಯೂ ವಿದ್ಯಾರ್ಥಿಗಳನ್ನು ಗುಟ್ಟಾಗಿ ಪ‍್ರವಾಸಗಳಿಗೆ ಕರೆದೊಯ್ಯಲಾಗಿತ್ತು. ಮತದಾನದ ದಿನ ‘ಝೆನ್‌ ಜೀ’ ಮತದಾರರಿಗೆ ವಡಾ ಪಾವ್‌ ಕೂಪನ್‌ಗಳು ಹಾಗೂ ಉಡುಗೊರೆಯ ಕೂಪನ್‌ಗಳನ್ನು ವಿತರಿಸಲಾಗಿತ್ತು. ವಿ.ವಿ.ಯ ಉತ್ತರ ಕ್ಯಾಂಪಸ್‌ನ ಸಮೀಪದಲ್ಲಿ ₹ 500ರ ನೋಟುಗಳನ್ನು ಯುವಜನರ ಮೇಲೆ ಸುರಿಯಲಾಗಿತ್ತು. ಈ ನೋಟುಗಳನ್ನು ಪಡೆಯಲು ಜನ ಮುಗಿಬಿದ್ದಿದ್ದರು. ಆದರೆ ಅವು ನಕಲಿ ನೋಟುಗಳು ಎಂದು ತಿಳಿದ ಬಳಿಕ ಬೇಸ್ತುಬಿದ್ದಿದ್ದರು. 

ಎರಡು ಕಾಲೇಜುಗಳಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರಗಳಲ್ಲಿ (ಇವಿಎಂ) ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿ ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ವಿದ್ಯಾರ್ಥಿ ಚುನಾವಣೆಯಲ್ಲೂ ಮತಚೋರಿಯಾಗಿದೆ ಎಂದು ಎನ್‌ಎಸ್‌ಯುಐ ಮುಖಂಡರು ಆರೋಪಿಸಿದ್ದರು. ಕ್ಯಾಂಪಸ್‌ನ ಈ ಚುನಾವಣೆ ‘ಮಿನಿ ಭಾರತ’ದ ಚುನಾವಣೆಯಂತಿತ್ತು!

ಅಧ್ಯಕ್ಷ ಗಾದಿ ಸೇರಿದಂತೆ ಮೂರು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿ ಹಾಗೂ ಒಂದು ಸ್ಥಾನದಲ್ಲಿ ಕಾಂಗ್ರೆಸ್‌ ಬೆಂಬಲಿತ ಎನ್‌ಎಸ್‌ಯುಐ ಜಯ ಸಾಧಿಸಿವೆ.

ಕ್ಯಾಂಪಸ್‌ನಿಂದ ಕ್ಯಾಬಿನೆಟ್‌ಗೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು ರಾಷ್ಟ್ರೀಯ ರಾಜಕಾರಣಕ್ಕೆ ನಾಯಕರನ್ನು ತಯಾರಿಸುವ ಕಾರ್ಖಾನೆ ಇದ್ದಂತೆ. ಇಲ್ಲಿ ವಿದ್ಯಾರ್ಥಿ ನಾಯಕರಾಗಿದ್ದವರು ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. 

  • ಅರುಣ್‌ ಜೇಟ್ಲಿ: ಅವರು 1974–75ರಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. 

  • ರೇಖಾ ಗುಪ್ತಾ: 1996–97ರಲ್ಲಿ ಅಧ್ಯಕ್ಷರಾಗಿದ್ದರು. ಈಗ ದೆಹಲಿ ಮುಖ್ಯಮಂತ್ರಿ

  • ವಿಜಯ್‌ ಗೋಯಲ್‌: 1997ರಲ್ಲಿ ಸಂಘದ ಅಧ್ಯಕ್ಷ. ಕೇಂದ್ರ ಸರ್ಕಾರದಲ್ಲಿ ಮಂತ್ರಿ. 

  • ಅಜಯ್‌ ಮಾಕೆನ್‌: 1981ರಲ್ಲಿ ಸಂಘದ ಅಧ್ಯಕ್ಷ. ನಂತರ ದೆಹಲಿ ಸರ್ಕಾರ ಹಾಗೂ ಕೇಂದ್ರದಲ್ಲಿ ಸಚಿವ. 

  • ವಿಜೇಂದರ್‌ ಗುಪ್ತಾ: 1984ರಲ್ಲಿ ಸಂಘದ ಉಪಾಧ್ಯಕ್ಷ. ಪ್ರಸ್ತುತ ದೆಹಲಿ ವಿಧಾನಸಭಾಧ್ಯಕ್ಷ. 

  • ಅಶೀಶ್ ಸೂದ್‌: 1987ರಲ್ಲಿ ಸಂಘದ ಜಂಟಿ ಕಾರ್ಯದರ್ಶಿ, 1988ರಲ್ಲಿ ಅಧ್ಯಕ್ಷ. ಈಗ ದೆಹಲಿ ಸರ್ಕಾರದಲ್ಲಿ ಮಂತ್ರಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.