ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಜಾವಾ, ಸಿ++: ಯಾವುದು ಉತ್ತಮ?

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 19:31 IST
Last Updated 19 ಡಿಸೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ಬಿಸಿಎ ಮುಗಿದ ಮೇಲೆ ಯಾವುದನ್ನು ಆರಿಸಿಕೊಂಡರೆ ಉತ್ತಮ? ಜಾವಾ ಅಥವಾ ಸಿ++? ಐಟಿ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ.

–ಹೆಸರು, ಊರು ತಿಳಿಸಿಲ್ಲ.

ಐಟಿ ವಿಸ್ತಾರವಾದ ಕ್ಷೇತ್ರ. ಈಗ ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಐಟಿ ಕ್ಷೇತ್ರದಲ್ಲಿರುವ ಅನೇಕ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಹಾಗೆಯೇ, ಈ ಕ್ಷೇತ್ರದಲ್ಲಿರುವ ಆಕರ್ಷಕ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ಸ್ಪಷ್ಟವಾದ ವೃತ್ತಿಯೋಜನೆಯಿರಲೇಬೇಕು. ಆದ್ದರಿಂದ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ ನಿಮಗೆ ಯಾವ ಪ್ರೋಗ್ರಾಮಿಂಗ್ ಭಾಷೆಯ ಪರಿಣತಿ ಬೇಕಾಗಬಹುದು ಎಂದು ಅರಿವಾಗುತ್ತದೆ. ಏಕೆಂದರೆ, ಪ್ರತಿ ಭಾಷೆಗೆ ತನ್ನದೇ ಆದ ಉಪಯುಕ್ತತೆ ಮತ್ತು ಇತಿಮಿತಿಯಿರುತ್ತದೆ.

ADVERTISEMENT

ಪ್ರೋಗ್ರಾಮಿಂಗ್ ಭಾಷೆಗಳಲ್ಲಿ, ಮೇಲ್ನೋಟಕ್ಕೆ ಸಿ++ ಕೋರ್ಸ್ ಉತ್ತಮವೆಂದೆನಿಸಿದರೂ ಜೊತೆಯಲ್ಲಿ ಜಾವಾ ಮತ್ತು ಪೈಥಾನ್ ಕೋರ್ಸ್‌ಗಳನ್ನು ಮಾಡುವುದರಿಂದ ನಿಮ್ಮ ಕೌಶಲಗಳಲ್ಲಿ ವೈವಿಧ್ಯವಿದ್ದು ಹೆಚ್ಚಿನ ಉದ್ಯೋಗಾವಕಾಶಕ್ಕೆ ಅರ್ಹರಾಗಬಲ್ಲಿರಿ. ಈ ಕೋರ್ಸ್‌ಗಳನ್ನು ಮಾಡಿದ ನಂತರ ಐಟಿ ಕ್ಷೇತ್ರದಲ್ಲಿ ಪ್ರೋಗ್ರಾಮರ್, ಸಾಫ್ಟ್‌ವೇರ್‌ ಡೆವಲಪರ್, ಕ್ವಾಲಿಟಿ ಅನಾಲಿಸ್ಟ್ ಮುಂತಾದ ಹುದ್ದೆಗಳನ್ನು ಹುಡುಕಿಕೊಂಡು ನಿಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://hackr.io/blog/best-programming-languages-to-learn-2022-jobs-future

2. ನಾನು ಬಿಎಸ್‌ಸಿ (ಫಿಸಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್) ಪದವಿ ಮುಗಿಸಿದ್ದೇನೆ. ಎಂಎಸ್‌ಸಿ(ಕಂಪ್ಯೂಟರ್ ಸೈನ್ಸ್) ಮುಗಿಸಿದ್ದೇನೆ. ಮುಂದೆ ಬಿಇಡ್ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ, ಡಿಗ್ರಿಯಲ್ಲಿ ಗಣಿತ ಓದಿಲ್ಲದ ಕಾರಣ ಬಿಇಡಿ ಮಾಡಲಾಗುವುದಿಲ್ಲ ಎನ್ನುತ್ತಿದ್ದಾರೆ. ದಯವಿಟ್ಟು ಮಾರ್ಗದರ್ಶನ ಮಾಡಿ.

–ಮಂಜುನಾಥ್ ಎಸ್.ಕೆ., ಊರು ತಿಳಿಸಿಲ್ಲ.

ಬಿಎಸ್‌ಸಿ ಸೇರಿದಂತೆ ಯಾವುದೇ ಪದವಿ ಪರೀಕ್ಷೆಯಲ್ಲಿ ಶೇ 50 ಅಂಕಗಳಿದ್ದಲ್ಲಿ ಬಿಇಡಿ ಮಾಡಲು ಅರ್ಹತೆಯಿದೆ ಎನ್ನುವುದು ನನ್ನ ಅಭಿಪ್ರಾಯ.

3. ನಾನು ಬಿಕಾಂ ಅಂತಿಮ ವರ್ಷದಲ್ಲಿದ್ದೇನೆ, ಎಂಕಾಂ ಮಾಡಬೇಕೆಂದುಕೊಂಡಿದ್ದೇನೆ. ಎಂಕಾಂ ಕೋರ್ಸ್‌ ಅನ್ನು ಪ್ರತ್ಯೇಕ ವಿಷಯಗಳ ಕುರಿತು ಮಾಡಬೇಕಾ ಅಥವಾ ಸಾಮಾನ್ಯವಾದ ಕೋರ್ಸ್ ಇದೆಯೇ? ಎಂಕಾಂನಲ್ಲಿ ವಿಷಯಾಧಾರಿತ ಅಧ್ಯಯನವಿದ್ದರೆ ತಿಳಿಸಿ.

–ದೇವರಾಜ ಸಿಂಗಡದಿನ್ನಿ, ರಾಯಚೂರು.

ಎಂಕಾಂ ಕೋರ್ಸ್‌ನಲ್ಲಿ ಎರಡು ವಿಧಗಳಿರುತ್ತವೆ.

ಎಂಕಾಂ (ಸ್ಪೆಷಲೈಜೇಷನ್-ಅಕೌಂಟಿಂಗ್, ಅಕೌಂಟಿಂಗ್ ಮತ್ತು ಫೈನಾನ್ಸ್, ಟ್ಯಾಕ್ಸೇಷನ್, ಬ್ಯಾಂಕಿಂಗ್ ಮತ್ತು ಇನ್ಶೂರೆನ್ಸ್, ಇಂಟರ್‌ನ್ಯಾಷನಲ್ ಬಿಸಿನೆಸ್, ಮಾರ್ಕೆಟಿಂಗ್, ಇನ್ವೆಸ್ಟ್ಮೆಂಟ್ಸ್, ಎಕನಾಮಿಕ್ಸ್ ಇತ್ಯಾದಿ).

ಈ ಕೋರ್ಸ್‌ಗಳಲ್ಲಿ ಕಡ್ಡಾಯವಾದ ವಿಷಯಗಳ ಜೊತೆಗೆ ಐಚ್ಛಿಕ ವಿಷಯಗಳಿರುತ್ತವೆ. ನಿಮ್ಮ ವೃತ್ತಿಜೀವನದ ಆದ್ಯತೆಯಂತೆ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಗಮನಿಸಿ: https://www.shiksha.com/m-com-chp

4. ನಾನು ನಾಯಕ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದ್ದೇನೆ. ಪೊಲೀಸ್‌ ಕಾನ್ಸ್‌ಸ್ಟೆಬಲ್‌(ಪಿ.ಸಿ) ಆಗಲು ವಯಸ್ಸು ಮೀರಿದೆ. ಈಗ ಸಬ್‌ ಇನ್‌ಸ್ಪೆಕ್ಟರ್‌ ಓದುತ್ತಿದ್ದೇನೆ. ಪಿಎಸ್‌ಐ, ಪಿಡಿಒ, ಎಸ್‌ಡಿಎ ಹಾಗೂ ಕೆಎಎಸ್ ಪರೀಕ್ಷೆಯ ವಯೋಮಿತಿ ಬಗ್ಗೆ ಮಾಹಿತಿ ನೀಡಿ.

–ದುರ್ಗೇಶ್ ಜಿ. ಪಾಟೀಲ್, ಜಿನ್ನಾಪೂರ್.

ನನಗಿರುವ ಮಾಹಿತಿಯಂತೆ ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವ ವಯೋಮಿತಿ ಹೀಗಿರುತ್ತದೆ: ಪಿಎಸ್‌ಐ (32ವರ್ಷ), ಪಿಡಿಒ (40 ವರ್ಷ) ಎಸ್‌ಡಿಎ (40ವರ್ಷ) ಮತ್ತು ಕೆಎಎಸ್ (40ವರ್ಷ).

5. ನಾನು ಪಿಯುಸಿ (ವಿಜ್ಞಾನ) ಓದಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದಕ್ಕಾಗಿ ಬಿಎ ಮಾಡಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು?

–ಈರಯ್ಯ ಹಿರೇಮಠ, ಊರು ತಿಳಿಸಿಲ್ಲ.

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಇದೇ ತಿಂಗಳ 6ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://www.vpradeepkumar.com/how-to-succeed-in-entrance-exams/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.