ADVERTISEMENT

ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ಕೋಚಿಂಗ್: ಗೆಟ್‌-ಸೆಟ್‌ ಗೋ ತರಬೇತಿಗೆ ಚಾಲನೆ‌

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 18:48 IST
Last Updated 22 ಮಾರ್ಚ್ 2021, 18:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಈ ಬಾರಿ ಕೂಡಾ ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವಿಶೇಷ ತರಬೇತಿ ನೀಡುವ ‘ಗೆಟ್‌-ಸೆಟ್‌ ಗೋ’ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ಸಿಇಟಿ ಮತ್ತು ನೀಟ್‌ಗೆ ಮಾತ್ರ ತರಬೇತಿ ನೀಡುತ್ತಿದ್ದ ಆನ್‌ಲೈನ್‌ ತರಬೇತಿಯನ್ನು ಈ ವರ್ಷದಿಂದ ಜೆಇಇ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಇದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ‘ಗೆಟ್‌ ಸೆಟ್‌ ಗೋ‘ ತರಬೇತಿ ವರ್ಷಪೂರ್ತಿ ನಡೆಯಲಿದೆ’ ಎಂದರು.

ADVERTISEMENT

‘ಕಲಿಕೆ, ಪರಿಷ್ಕರಣೆ ಹಾಗೂ ಪರೀಕ್ಷೆ ಪರಿಕಲ್ಪನೆಯಲ್ಲಿ ‘ಗೆಟ್‌ ಸೆಟ್‌ ಗೋʼ ತರಬೇತಿ ವ್ಯವಸ್ಥೆ ರೂಪಿಸಲಾಗಿದೆ. ಇದರಲ್ಲಿ ನೀಟ್‌, ಜೆಇಇ, ಸಿಇಟಿ ಪರೀಕ್ಷಾರ್ಥಿಗಳಿಗೆ ಅಗತ್ಯವಾದ ಅಧ್ಯಯನ ಸಾಮಗ್ರಿಯ ಜತೆಗೆ ವಿಡಿಯೊಗಳು, ಪಠ್ಯ ಸಾರಾಂಶ, ಸಂವಾದಾತ್ಮಕ ಪರೀಕ್ಷೆಗಳು ಇರುತ್ತವೆ. ಐಐಟಿಗಳಲ್ಲಿ ರಾಜ್ಯದ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಿಸುವ ಗುರಿಯಿಂದ ಈ ಹೆಜ್ಜೆ ಇಡಲಾಗುತ್ತಿದೆ’ ಎಂದರು.

‘ವೆಬ್‌ಸೈಟ್‌, ಯುಟ್ಯೂಬ್‌ ಅಥವಾ ಗೆಟ್‌ ಸೆಟ್‌ ಗೋ ಆ್ಯಪ್‌ ಮೂಲಕ ಕೋಚಿಂಗ್‌ ಪಡೆಯಬಹುದು. ಈ ಆ್ಯಪ್‌ ಆಂಡ್ರಾಯಿಡ್‌, ಐಓಎಸ್‌ನಲ್ಲೂ ಲಭ್ಯ. ಇದಕ್ಕೆ ಗೂಗಲ್‌ ಆ್ಯಪ್ ಸ್ಟೋರ್‌ನಲ್ಲಿ 4.3 ರೇಟಿಂಗ್‌ ಇದೆ‌. ವಿದ್ಯಾರ್ಥಿಗಳು getcetgo.in ವೆಬ್ ಪೋರ್ಟ್, ಗೂಗಲ್ ಪ್ಲೇಸ್ಟೋರ್ ಆಂಡ್ರಾಯ್ಡ್ ಆ್ಯಪ್ GetCETGO ಮೂಲಕ ಮಾಹಿತಿ ಪಡೆಯಬಹುದು. ತಮ್ಮ ವಿವರಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬಹುದು’ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

‘ಕಳೆದ ವರ್ಷ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದ ದೀಕ್ಷಾ ಸಂಸ್ಥೆ ಈ ವರ್ಷ ಕೂಡಾ ತರಬೇತಿ ನೀಡಲಿದೆ. ಕೋವಿಡ್‌ ಕಾರಣದಿಂದ ವಿದ್ಯಾರ್ಥಿ ಮತ್ತು ಪೋಷಕರು ಇನ್ನೂ ಹೊರಬಾರದ ಕಾರಣ ಸರ್ಕಾರ ಈ ಕಾರ್ಯಕ್ರಮ ಮುಂದುವರಿಸಲು ನಿರ್ಧರಿಸಿದೆ. ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆಗೂ ತಯಾರಿ ನಡೆಸುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಅತ್ಯುತ್ತಮ ತರಬೇತಿ ನೀಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.