ADVERTISEMENT

Fee Regulation Committee | ಶುಲ್ಕ ಸಮಸ್ಯೆಯೇ: ದೂರು ಕೊಡಿ

ಉಮೇಶ ಭಟ್ಟ ಪಿ.ಎಚ್.
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
   

ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳು ಮತ್ತು ಕಾಲೇಜು ಆಡಳಿತ ಮಂಡಳಿಗಳ ನಡುವೆ ಶುಲ್ಕ ನೀಡಿಕೆಗೆ ಸಂಬಂಧಿಸಿದಂತೆ ಉದ್ಭವವಾಗುವ ಸಮಸ್ಯೆಗಳನ್ನು ‘ಶುಲ್ಕ ನಿಯಂತ್ರಣ ಸಮಿತಿ’ಯ ಮಧ್ಯಸ್ಥಿಕೆಯಲ್ಲಿ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದ್ದಾರೆ ಉಮೇಶ ಭಟ್ಟ ಪಿ.ಎಚ್‌.

ಬೆಂಗಳೂರಿನ ಕಾಲೇಜೊಂದರಲ್ಲಿ ಎಂಬಿಎಗೆಂದು ಮ್ಯಾನೇಜ್‌ಮೆಂಟ್‌ ಕೋಟಾದಡಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿ ₹ 4.50 ಲಕ್ಷವನ್ನು ಕಾಲೇಜು ಅಭಿವೃದ್ದಿಗೆಂದು ಪಾವತಿಸಿದ್ದ. ಆರು ತಿಂಗಳ ಮೊದಲೇ ಬೇರೆ ಕೋರ್ಸ್‌ಗೆ ಅವಕಾಶ ಬಂದಿದ್ದರಿಂದ ಇಲ್ಲಿ ಬಿಡುವ ಸನ್ನಿವೇಶ ಎದುರಾಯಿತು. ಕಾಲೇಜಿನವರು ‘ನಿಮ್ಮ ಕಾರಣಕ್ಕೆ ಬೇರೆ ಕಡೆಗೆ ಹೋಗುತ್ತಿದ್ದೀರಿ. ನಾವು ಹಣ ವಾಪಸ್‌ ಕೊಡಲು ಆಗುವುದಿಲ್ಲ’ ಎಂದು ಹೇಳಿದರು. ಶುಲ್ಕ ನಿಯಂತ್ರಣ ಸಮಿತಿಯು ವಿದ್ಯಾರ್ಥಿಯ ದೂರು ಸ್ವೀಕರಿಸಿ ಇಬ್ಬರಿಂದಲೂ ಹೇಳಿಕೆ ಪಡೆಯಿತು. ಕಾಲೇಜಿನವರ ಲೋಪ ಇಲ್ಲದೇ ಇದ್ದರೂ ವಿದ್ಯಾರ್ಥಿಯ ಆರ್ಥಿಕ ಸ್ಥಿತಿಯ ದೃಷ್ಟಿಯಿಂದ ₹ 2.25 ಲಕ್ಷ  ಹಿಂದಿರುಗಿಸಲು ಆದೇಶಿಸಿತು. ಆಡಳಿತ ಮಂಡಳಿಯೂ ಒಪ್ಪಿ ಅರ್ಧ ಹಣ ಹಿಂದಿರುಗಿಸಿತು.

ಶಿವಮೊಗ್ಗದ ವಿದ್ಯಾರ್ಥಿನಿಯೊಬ್ಬಳು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದಳು. ವೈದ್ಯ ಕೋರ್ಸ್ ಆಕೆಗೆ ಇಷ್ಟವಿರದೇ ಮನೋ ಸಮಸ್ಯೆಯಿಂದ ಬಳಲತೊಡಗಿದಳು. ಪೋಷಕರು ಕಾಲೇಜಿಗೆ ತೆರಳಿ, ಮೊದಲ ವರ್ಷಕ್ಕೆ ಕಟ್ಟಿದ್ದ ₹ 12 ಲಕ್ಷ ಶುಲ್ಕ ವಾಪಸ್‌ ನೀಡುವಂತೆ ಕೋರಿದರು. ಆದರೆ ಆಡಳಿತ ಮಂಡಳಿ, ಮಧ್ಯದಲ್ಲಿ ಬಿಟ್ಟುಹೋದರೆ ಮುಂದಿನ ನಾಲ್ಕು ವರ್ಷಗಳಿಗೆ ತೊಂದರೆಯಾಗುತ್ತದೆ. ಉಳಿದ ನಾಲ್ಕು ವರ್ಷದ ₹ 48 ಲಕ್ಷ ಪಾವತಿಸಿದರೆ ಆಕೆಯ ದಾಖಲೆ ನೀಡುವುದಾಗಿ ಹೇಳಿತು. ಕೊನೆಗೆ ಪೋಷಕರು ಶುಲ್ಕ ನಿಯಂತ್ರಣ ಸಮಿತಿಯ ಮೊರೆ ಹೋದರು. ಸಮಿತಿ ವಿಚಾರಣೆ ನಡೆಸಿ, ಆಕೆಗೆ ಕೋರ್ಸ್‌ ಇಷ್ಟವಿಲ್ಲ, ಜೊತೆಗೆ ಪ್ರವೇಶ ಪಡೆದು ಅರ್ಧ ವರ್ಷವೂ ಮುಗಿದಿಲ್ಲವಾದ್ದರಿಂದ ಒಂದು ವರ್ಷದ ಶುಲ್ಕದಲ್ಲಿ ಇಂತಿಷ್ಟು ಕಡಿತ ಮಾಡಿಕೊಂಡು ಉಳಿದ ಹಣದ ಜೊತೆಗೆ ದಾಖಲೆಯನ್ನೂ ನೀಡಬೇಕೆಂದು ಸೂಚಿಸಿತು. ಆಡಳಿತ ಮಂಡಳಿಯ ವಿವರಣೆಗೆ ಸಮಿತಿ ಬಗ್ಗದಾದಾಗ, ಸಂಸ್ಥೆಯು ಒಪ್ಪಿ ಹಣ ಪಾವತಿಸಿತು. ವಿದ್ಯಾರ್ಥಿನಿ ಈಗ ತನ್ನಿಚ್ಛೆಯಂತೆ ಮೈಸೂರಿನಲ್ಲಿ ಸಂಗೀತ ಶಿಕ್ಷಣ ಪಡೆಯುತ್ತಿದ್ದಾಳೆ.

ADVERTISEMENT

ಇವು ಒಂದೆರಡು ಉದಾಹರಣೆಗಳು ಮಾತ್ರ. ರಾಜ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟಕ್ಕೆ ಸಿಲುಕಿದ ಇಂತಹ ನೂರಾರು ಪ್ರಕರಣಗಳಿವೆ. ಅವುಗಳಲ್ಲಿ ಹೆಚ್ಚಿನವರು ನ್ಯಾಯ ಪಡೆದುಕೊಂಡು ವೃತ್ತಿಶಿಕ್ಷಣವನ್ನು ಮುಗಿಸಿದ್ದಾರೆ.

ನೀವು ಬಯಸಿದ ಇಲ್ಲವೇ ನಿಮಗೆ ಹಂಚಿಕೆಯಾದ ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ  ಸೇರಲು ಸರ್ಕಾರ ನಿಗದಿಪಡಿಸಿದ ಶುಲ್ಕವಲ್ಲದೇ ಹೆಚ್ಚುವರಿ ಹಣಕ್ಕೆ ಕಾಲೇಜುಗಳಲ್ಲಿ ಬೇಡಿಕೆ ಇಡುವುದು, ರಸೀದಿ ನೀಡದೇ ಹಣ ಪಡೆಯುವುದು, ಕೋರ್ಸ್‌ ಅವಧಿಗೆ ಮುನ್ನವೇ ಸಂಪೂರ್ಣ ಶುಲ್ಕದ ಬೇಡಿಕೆ ಇಟ್ಟು, ಸಂಸ್ಥೆಯನ್ನು ಬಿಡುವಂತಹ ಸನ್ನಿವೇಶ ನಿರ್ಮಾಣವಾದರೆ, ಪಾವತಿಸಿದ ಹಣ ವಾಪಸ್‌ ನೀಡದೇ ಇರುವ ಸನ್ನಿವೇಶವಿದ್ದರೆ ಕಾಲೇಜುಗಳ ವಿರುದ್ಧ ವಿದ್ಯಾರ್ಥಿಗಳು ದೂರು ಸಲ್ಲಿಸಬಹುದು.

ಇಂತಹ ಪ್ರಕರಣಗಳ ವಿಚಾರಣೆ ನಡೆಸಿ, ಪೋಷಕರು ಹಾಗೂ ಮಕ್ಕಳ ಮೇಲಿನ ಹೊರೆ ತಪ್ಪಿಸುವುದರ ಜತೆಗೆ ಶಾಲಾ ಶಿಕ್ಷಣ ಮಂಡಳಿಗಳಿಗೆ ಮೂಗುದಾರ ಹಾಕಲೆಂದೇ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಶುಲ್ಕ ನಿಗದಿ ಅಧಿನಿಯಮ 2006ರ ಅಡಿಯಲ್ಲಿ ಶುಲ್ಕ ನಿಯಂತ್ರಣ ಸಮಿತಿಯನ್ನು (ಎಫ್‌ಆರ್‌ಸಿ) ರಚಿಸಲಾಗಿದೆ. 19 ವರ್ಷದಿಂದಲೂ ಈ ಸಮಿತಿ ಇದೆಯಾದರೂ ಮೂರ್ನಾಲ್ಕು ವರ್ಷಗಳಿಂದ ಸಕ್ರಿಯವಾಗಿದೆ. ಕೋವಿಡ್ ಬಳಿಕ ಉನ್ನತ ಶಿಕ್ಷಣ ಸಹಜ ಸ್ಥಿತಿಗೆ ಮರಳಿದೆ. ಎಂಜಿನಿಯರಿಂಗ್‌, ವೈದ್ಯಕೀಯ ಮಾತ್ರವಲ್ಲದೆ ನರ್ಸಿಂಗ್‌, ಫಾರ್ಮಸಿಯಂತಹ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಹೊರ ರಾಜ್ಯದವರೂ ಉನ್ನತ ಶಿಕ್ಷಣ ಅರಸಿ ಕರ್ನಾಟಕಕ್ಕೆ ಬರುತ್ತಿದ್ಧಾರೆ. ವೃತ್ತಿಶಿಕ್ಷಣದಲ್ಲಿ ಕೆಲ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದಂತೆ, ಸರ್ಕಾರ ನಿಗದಿಪಡಿಸಿದ ಶುಲ್ಕವಲ್ಲದೆ ಇತರ ವೆಚ್ಚಗಳ ಹೊರೆಯೂ ಹೆಚ್ಚಿದೆ.

ಇದನ್ನು ನಿಯಂತ್ರಿಸಲೆಂದೇ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯು ವರ್ಷಕ್ಕೆ 400ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸುತ್ತಿದೆ. ಆನ್‌ಲೈನ್‌ನಲ್ಲೂ ದೂರು ದಾಖಲಿಸಲು ಅವಕಾಶವಿದೆ. ಈ ವರ್ಷ ಈವರೆಗೆ 400ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿ, ಈಗಾಗಲೇ 200ರಷ್ಟು ಪ್ರಕರಣಗಳು ಇತ್ಯರ್ಥವಾಗಿವೆ.

ಸಮಸ್ಯೆ ಎದುರಿಸುತ್ತಿರುವವರು ತಮ್ಮ ಪ್ರವೇಶ, ನೀಡಿದ ಶುಲ್ಕ, ರಸೀದಿಯನ್ನು ಒಳಗೊಂಡ ದಾಖಲೆಗಳೊಂದಿಗೆ ದೂರು ನೀಡಬೇಕು. ಮೊದಲು ಎರಡು ಕಡೆಯವರಿಗೂ ನೊಟೀಸ್‌ ನೀಡಿ ಹೇಳಿಕೆ ದಾಖಲಿಸಲಾಗುತ್ತದೆ. ಇಡೀ ದೂರಿನ ವಸ್ತುಸ್ಥಿತಿ ಅರಿತ ನಂತರ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ವಿಚಾರಣೆ ನಡೆಸಿ ನಿರ್ದೇಶನ ನೀಡಲಾಗುತ್ತದೆ. ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ತಾಂತ್ರಿಕ ಶಿಕ್ಷಣ ಇಲ್ಲವೇ ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೂ ರವಾನಿಸಲಾಗುತ್ತದೆ. ಸಮಿತಿ ನೀಡಿದ ಸೂಚನೆಯನ್ನು ನಿಗದಿತ ಸಮಯದೊಳಗೆ ಪಾಲಿಸದೇ ಇದ್ದರೆ ಮಾನ್ಯತೆ ರದ್ದುಪಡಿಸುವಂತಹ ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಕೆಲವರು ಮೇಲ್ಮನವಿಗೆ ಮೊರೆ ಹೋದರೆ, ಹೆಚ್ಚು ಸಂಸ್ಥೆಗಳು ಹಾಗೂ ಪೋಷಕರು ಸಮಿತಿ ನೀಡುವ ಆದೇಶವನ್ನು ಪಾಲಿಸುವುದು ಉಂಟು.

‘ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ಗಳ ಜತೆಯಲ್ಲಿಯೇ ಬಿಎಸ್ಸಿ ನರ್ಸಿಂಗ್‌, ಫಾರ್ಮ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಈ ಕೋರ್ಸ್‌ಗಳ ಮೇಲೆ ನಿಯಂತ್ರಣ ಬೇಕಿದೆ. ಕೆಲವರು ಭಯದಿಂದ ಹೆಚ್ಚುವರಿ ಶುಲ್ಕ ಭರಿಸುತ್ತಾರೆ. ದೂರು ನೀಡಿದರೆ, ಮುಂದೆ ಅಲ್ಲಿಯೇ ವ್ಯಾಸಂಗ ಮಾಡಬೇಕಾಗಿರುವುದರಿಂದ ಭವಿಷ್ಯಕ್ಕೆ ಅಡ್ಡಿಯಾಗಬಹುದು ಎನ್ನುವ ಭಯವೂ  ಇರುತ್ತದೆ. ಆದರೆ ಕೋರ್ಸ್‌ಗೆ ಸೇರಿದಾಗ ಮಾತ್ರವಲ್ಲ ಮುಗಿದ ಮೇಲೂ ಸೂಕ್ತ ದಾಖಲೆಗಳೊಂದಿಗೆ ಸಮಿತಿಗೆ ದೂರು ನೀಡಬಹುದು’ ಎಂದು ಸಮಿತಿಯ ಅಧ್ಯಕ್ಷ ಬಿ.ಶ್ರೀನಿವಾಸ ಗೌಡ ಹೇಳುತ್ತಾರೆ.

ಶ್ರೀನಿವಾಸ ಗೌಡ

ಕಾಲೇಜುಗಳಿಂದಲೇ ಜಾಗೃತಿಗೆ ಶಿಫಾರಸು

ಸ್ಥಳೀಯರು ಮಾತ್ರವಲ್ಲದೆ ವೃತ್ತಿಪರ ಶಿಕ್ಷಣ ಪಡೆಯಲು ಕರ್ನಾಟಕಕ್ಕೆ ಬರುವ ಕೇರಳ, ತಮಿಳುನಾಡು, ರಾಜಸ್ಥಾನ, ಬಿಹಾರದವರೂ ಕಾಲೇಜುಗಳ ಶುಲ್ಕದ ಜಾಲದಲ್ಲಿ ಸಿಲುಕಿದ್ದಿದೆ. ಸಮಿತಿಯು ಇಂತಹ ಹಲವಾರು ಪ್ರಕರಣಗಳನ್ನು ಬಗೆಹರಿಸಿ ಹೆಚ್ಚುವರಿ ಶುಲ್ಕವನ್ನು ಹಿಂದಿರುಗಿಸುವಂತೆ ಮಾಡಿದೆ. ಕೆಲವು ಆಡಳಿತ ಮಂಡಳಿಗಳು ಆದೇಶ ನೀಡುವ ಮುನ್ನವೇ ಸಮಿತಿಯ ಸೂಚನೆಗೆ ಸಮ್ಮತಿಸಿ ಹೆಚ್ಚುವರಿ ಶುಲ್ಕವನ್ನು ಹಿಂದಿರುಗಿಸಿದ ಉದಾಹರಣೆಗಳಿವೆ. ಆದರೆ ಇನ್ನು ಕೆಲವು ಪ್ರಕರಣಗಳಲ್ಲಿ ಆದೇಶವನ್ನು ಜಾರಿ ಮಾಡಲೇಬೇಕಾಗುತ್ತದೆ.ಎಂಜಿನಿಯರಿಂಗ್, ವೈದ್ಯಕೀಯ ಸಂಬಂಧಿತ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಒಮ್ಮತದ ಒಪ್ಪಂದದ ವಿವರವನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಹೆಚ್ಚುವರಿ ಶುಲ್ಕ ಸಂಗ್ರಹದ ಬಗ್ಗೆ ದೂರು ಹೊಂದಿರುವ ವಿದ್ಯಾರ್ಥಿಗಳು ಪರಿಹಾರಕ್ಕಾಗಿ ಸಮಿತಿಯನ್ನು ಸಂಪರ್ಕಿಸಬಹುದು ಎನ್ನುವ ಒಪ್ಪಂದವನ್ನು ಪ್ರವೇಶದ ವೇಳೆಯೇ ಮಾಡಿಕೊಳ್ಳುವಂತೆ ಶಿಫಾರಸು ಮಾಡಲಾಗಿದೆ.

-ಬಿ.ಶ್ರೀನಿವಾಸ ಗೌಡ, ಅಧ್ಯಕ್ಷ, ವೃತ್ತಿಶಿಕ್ಷಣ ‘ಶುಲ್ಕ ನಿಯಂತ್ರಣ ಸಮಿತಿ’

ಇಲ್ಲಿದೆ ಕಚೇರಿ

ಅಧ್ಯಕ್ಷರು ಶುಲ್ಕ ನಿಯಂತ್ರಣ ಸಮಿತಿ ಕೆಇಎ ಕಟ್ಟಡ 2ನೇ ಮಹಡಿ 18ನೇ ಅಡ್ಡರಸ್ತೆ ಮಲ್ಲೇಶ್ವರಂ

ಬೆಂಗಳೂರು– 560012ಇ– ಮೇಲ್‌: frc.kea@gmail.comಕಚೇರಿ ದೂರವಾಣಿ ಸಂಖ್ಯೆ: 080 23442599

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.